ಸರ್ಕಾರಿ ಉದ್ಯೋಗದಲ್ಲಿ ತೃತೀಯ ಲಿಂಗಿಗಳಿಗೆ 4% ಮೀಸಲಾತಿ ಕೋರಿ ಆಂಧ್ರಪ್ರದೇಶ ಹೈಕೋರ್ಟ್‌ಗೆ ಮನವಿ

ತಮಿಳುನಾಡು ಸರ್ಕಾರದಲ್ಲಿ ಈಗಾಗಲೇ ತೃತೀಯ ಲಿಂಗಿಗಳಿಗೆ ಶೇ 4ರಷ್ಟು ಮೀಸಲಾತಿ ಒದಗಿಸಲಾಗಿದೆ ಎಂದು ಅರ್ಜಿಯಲ್ಲಿ ಕೋರಲಾಗಿದೆ.
ಸರ್ಕಾರಿ ಉದ್ಯೋಗದಲ್ಲಿ ತೃತೀಯ ಲಿಂಗಿಗಳಿಗೆ 4% ಮೀಸಲಾತಿ ಕೋರಿ ಆಂಧ್ರಪ್ರದೇಶ ಹೈಕೋರ್ಟ್‌ಗೆ ಮನವಿ

ತೃತೀಯ ಲಿಂಗಿಗಳಿಗೆ ಸಾರ್ವಜನಿಕ ಉದ್ಯೋಗ ಕ್ಷೇತ್ರದಲ್ಲಿ ಶೇ 4ರಷ್ಟು ಮೀಸಲಾತಿಯನ್ನು ತಕ್ಷಣವೇ ಜಾರಿಗೆ ತರುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಕೋರಿ ಆಂಧ್ರಪ್ರದೇಶದ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಲಾಗಿದೆ.

ಮಾತಂ ಗಂಗಾಭವಾನಿ ಎಂಬ ಲಿಂಗ ಪರಿವರ್ತಿತ ಮಹಿಳೆಯು ವೈದ್ಯಕೀಯ ಶುಶ್ರೂಷಕಿ ಉದ್ಯೋಗ ನೀಡಲು ತಮಗೆ ನಿರಾಕರಿಸಿದ ಬಳಿಕ ಕೋರ್ಟ್ ಮೊರೆ ಹೋಗಿದ್ದಾರೆ.

ಅಂತಿಮ ಅರ್ಹತಾ ಪಟ್ಟಿಯಲ್ಲಿ ತಮ್ಮ ಹೆಸರಿರುವುದನ್ನು ಗಂಗಾಭವಾನಿ ಕೋರ್ಟಿಗೆ ಖಚಿತಪಡಿಸಿದ್ದಾರೆ. ಅಲ್ಲದೆ ತಮ್ಮ ವಿದ್ಯಾರ್ಹತೆ ಕುರಿತ ದಾಖಲೆಗಳನ್ನೂ ಒದಗಿಸಿದ್ದಾರೆ. ತಾನು ತೃತೀಯ ಲಿಂಗಿಯಾಗಿದ್ದರಿಂದ ಯಾವುದೇ ಮೀಸಲಾತಿ ಇಲ್ಲದೆ ಹುದ್ದೆಗೆ ನೇಮಿಸಿಕೊಳ್ಳಲು ನಿರಾಕರಿಸಲಾಯಿತು ಎಂದು ಅವರು ದುಃಖ ತೋಡಿಕೊಂಡಿದ್ದಾರೆ.

"… ಈ ಎಲ್ಲಾ ಶೈಕ್ಷಣಿಕ ಅರ್ಹತೆಗಳು ಉದ್ಯೋಗ ವಿಚಾರದಲ್ಲಿ ನನ್ನ ನೆರವಿಗೆ ಬಂದಿಲ್ಲ. ತೃತೀಯ ಲಿಂಗಿಗಳಿಗೆ ಮೀಸಲಾತಿ ಒದಗಿಸುವಂತೆ ನೀಡಲಾದ 2014ರ ಎನ್ಎಎಲ್ಎಸ್ಎ ತೀರ್ಪಿನ ಹೊರತಾಗಿಯೂ, ನನ್ನಂತಹ ತೃತೀಯ ಲಿಂಗಿಯರಿಗೆ ಉದ್ಯೋಗ ಒದಗಿಸಲು ರಾಜ್ಯ ಸರ್ಕಾರ ಮುಂದೆ ಬಂದಿಲ್ಲ’ ಎಂದು ಅವರು ಹೇಳಿದ್ದಾರೆ.

ವೈದ್ಯಕೀಯ ಶುಶ್ರೂಷಕಿಯರ ನೇಮಕಾತಿಗೆ ಸಂಬಂಧಿಸಿದಂತೆ, ಅರ್ಜಿದಾರರು ಮಾಹಿತಿ ನೀಡಿದ್ದಾರೆ. "ಎಸ್‌ಸಿ, ಎಸ್‌ಟಿ ಮತ್ತು ಒಬಿಸಿಗಳಿಗೆ ಮೀಸಲಾತಿ ನೀತಿಯನ್ನು ಒದಗಿಸಿರುವುದು ಫಲಿತಾಂಶಗಳಿಂದ ತಿಳಿದುಬರುತ್ತದೆ, ಆದರೆ ತೃತೀಯ ಲಿಂಗಿಗಳಿಗೆ ಸಂಬಂಧಿಸಿದಂತೆ ಯಾವುದೇ ಮೀಸಲಾತಿ ಸೌಲಭ್ಯ ಇಲ್ಲ ಮತ್ತು ಎನ್ಎಎಲ್ಎಸ್ಎ ಪ್ರಕರಣದಲ್ಲಿ ಮಾನ್ಯ ಸುಪ್ರೀಂಕೋರ್ಟ್ ನೀಡಿದ ತೀರ್ಪನ್ನು ಜಾರಿಗೆ ತಂದಿಲ್ಲ. ಸ್ಟಾಫ್ ನರ್ಸ್ ಹುದ್ದೆಗೆ ನನ್ನನ್ನು ಆಯ್ಕೆ ಮಾಡದಿರುವುದು ಅನ್ಯಾಯ ಮತ್ತು ಕಾನೂನುಬಾಹಿರ” ಎಂದು ಅರ್ಜಿಯಲ್ಲಿ ಅವರು ತಿಳಿಸಿದ್ದಾರೆ.

ಪ್ರಕರಣದ ಕುರಿತಂತೆ ಸರ್ಕಾರದ ವಿವಿಧ ಆಡಳಿತಾಂಗಗಳಿಗೆ ಮನವಿ ಮಾಡಿ ಅದು ಫಲಪ್ರದವಾಗದೆ ಇದ್ದುದರಿಂದ ಗಂಗಭವಾನಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ತಮಿಳುನಾಡು ಸರ್ಕಾರದಲ್ಲಿ ಈಗಾಗಲೇ ತೃತೀಯ ಲಿಂಗಿಗಳಿಗೆ ಶೇ 4ರಷ್ಟು ಮೀಸಲಾತಿ ಒದಗಿಸಲಾಗಿದೆ ಎಂದು ಕೂಡ ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.

ಪೊಲೀಸ್ ಇಲಾಖೆಯಲ್ಲಿ ಮೀಸಲಾತಿ ಒದಗಿಸಬೇಕೆಂದು ಕೋರಿದ್ದ ಮಾತಂ ಗಂಗಾಭವಾನಿ ವರ್ಸಸ್ ಆಂಧ್ರಪ್ರದೇಶ ಸರ್ಕಾರ ಪ್ರಕರಣದಲ್ಲಿ ಆಂಧ್ರಪ್ರದೇಶ ಹೈಕೋರ್ಟ್ ತೃತೀಯ ಲಿಂಗಿಗಳಿಗೆ ಒಂದು ಹುದ್ದೆ ಮೀಸಲಿಡುವಂತೆ ಈಗಾಗಲೇ ಮಧ್ಯಂತರ ನಿರ್ದೇಶನ ನೀಡಿದೆ.

Related Stories

No stories found.
Kannada Bar & Bench
kannada.barandbench.com