
ಹಿಂದಿ ಭಾಷಿಕರ ವಿರುದ್ಧ ದ್ವೇಷ ಹರಡುವ ಮೂಲಕ ಸಮುದಾಯಗಳ ನಡುವೆ ದ್ವೇಷವನ್ನು ಉತ್ತೇಜಿಸಲು ಕಾರಣವಾಗಿರುವ ಮಹಾರಾಷ್ಟ್ರ ನವನಿರ್ಮಾಣ ಸೇನೆಯ ನೋಂದಣಿಯನ್ನು ರದ್ದುಪಡಿಸಲು ಹಾಗೂ ಎಂಎನ್‌ಎಸ್ ಮುಖ್ಯಸ್ಥ ರಾಜ್ ಠಾಕ್ರೆ ವಿರುದ್ಧ ಎಫ್‌ಐಆರ್ ದಾಖಲಿಸಲು ನಿರ್ದೇಶನ ನೀಡುವಂತೆ ಕೋರಿ ಉತ್ತರ ಭಾರತೀಯ ವಿಕಾಸ ಸೇನೆಯ ಅಧ್ಯಕ್ಷ ಸುನಿಲ್ ಶುಕ್ಲಾ ಅವರು ಬಾಂಬೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ [ಸುನಿಲ್ ಶುಕ್ಲಾ ವಿರುದ್ಧ ಮಹಾರಾಷ್ಟ್ರ ರಾಜ್ಯ].
ರಾಜ್ ಠಾಕ್ರೆ ಮತ್ತು ಅವರ ಪಕ್ಷದ ಸದಸ್ಯರು ಮಹಾರಾಷ್ಟ್ರದಲ್ಲಿ ಉತ್ತರ ಭಾರತ ಮೂಲದ-ಹಿಂದಿ ಮಾತನಾಡುವ ಸಮುದಾಯದ ವಿರುದ್ಧ ಹಾಗೂ ಶುಕ್ಲಾ ವಿರುದ್ಧ ವೈಯಕ್ತಿಕವಾಗಿ ಹಿಂಸಾಚಾರವನ್ನು ಪ್ರಚೋದಿಸುತ್ತಿದ್ದಾರೆ ಮತ್ತು ನಿರಂತರವಾಗಿ ಬೆದರಿಕೆ ಹಾಕುತ್ತಿದ್ದಾರೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ.
ರಾಜ್ ಠಾಕ್ರೆ ಮತ್ತು ತಮಗೆ ಬೆದರಿಕೆ ಹಾಕಿದ ಇತರರ ವಿರುದ್ಧ ಎಫ್‌ಐಆರ್‌ಗಳನ್ನು ನೋಂದಾಯಿಸುವುದರ ಜೊತೆಗೆ, ಶುಕ್ಲಾ ಅವರು ತನಗೆ ಮತ್ತು ತನ್ನ ಕುಟುಂಬಕ್ಕೆ ತಕ್ಷಣದ ಪೊಲೀಸ್ ರಕ್ಷಣೆಯನ್ನು ನೀಡುವಂತೆ ಅರ್ಜಿಯಲ್ಲಿ ಕೋರಿದ್ದಾರೆ.
ಅಲ್ಲದೆ, ಚುನಾವಣಾ ಕಾನೂನುಗಳನ್ನು ಉಲ್ಲಂಘಿಸಿದ್ದು, ಸಮುದಾಯಗಳ ನಡುವೆ ದ್ವೇಷವನ್ನು ಉತ್ತೇಜಿಸಿದ್ದಾರೆ ಎಂಬ ಆರೋಪದ ಮೇಲೆ ಎಂಎನ್‌ಎಸ್‌ನ ನೋಂದಣಿಯನ್ನು ರದ್ದುಗೊಳಿಸುವುದನ್ನು ಪರಿಗಣಿಸಲು ಭಾರತೀಯ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡುವಂತೆ ಅವರು ನ್ಯಾಯಾಲಯವನ್ನು ಕೋರಿದ್ದಾರೆ.
ಇದಲ್ಲದೆ, ಹಿಂದಿ ಭಾಷಿಕರ ವಿರುದ್ಧದ ಬೆದರಿಕೆಗಳು ಮತ್ತು ದಾಳಿಗಳ ವಿರುದ್ಧದ ತನಿಖೆಯನ್ನು ಸ್ವತಂತ್ರ ಸಂಸ್ಥೆ ಅಥವಾ ವಿಶೇಷ ತನಿಖಾ ತಂಡಕ್ಕೆ (ಎಸ್‌ಐಟಿ) ವಹಿಸಬೇಕೆಂದು ಅವರು ಒತ್ತಾಯಿಸಿದ್ದಾರೆ. ಇದರಿಂದ ನಿಷ್ಪಕ್ಷಪಾತ ತನಿಖೆ ಮತ್ತು ರಾಜಕೀಯ ಹಸ್ತಕ್ಷೇಪ ತಡೆಯಲು ಸಾಧ್ಯ ಎಂದು ಅರ್ಜಿಯಲ್ಲಿ ಹೇಳಲಾಗಿದೆ.
ಹಿಂದಿ ಮಾತನಾಡುವ ನಾಗರಿಕರನ್ನು ಗುರಿಯಾಗಿಸಿಕೊಂಡು ದ್ವೇಷ ಭಾಷಣ ಮಾಡಿದ್ದಾರೆ ಎಂಬ ಆರೋಪದ ಮೇಲೆ ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್‌ಎಸ್) ಮುಖ್ಯಸ್ಥ ರಾಜ್ ಠಾಕ್ರೆ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದ ಕೆಲವು ದಿನಗಳ ಅಂತರದಲ್ಲಿಯೇ ಶುಕ್ಲಾ ಅವರು ಈ ಅರ್ಜಿಯನ್ನು ದಾಖಲಿಸಿದ್ದಾರೆ.
ತಮ್ಮ ರಾಜಕೀಯ ಅಸ್ಮಿತೆ ಮತ್ತು ರಾಜ್ಯದಲ್ಲಿ ಉತ್ತರ ಭಾರತೀಯ ವಲಸಿಗರ ಪರವಾಗಿ ತಾವು ವಕಾಲತ್ತು ವಹಿಸುವ ಕಾರಣಕ್ಕಾಗಿ ಕಳೆದ ಒಂದು ವರ್ಷದಿಂದ ತಮಗೆ ಕಿರುಕುಳ ಮತ್ತು ದೈಹಿಕ ಹಲ್ಲೆಯ ಬೆದರಿಕೆಗಳು ಬರುತ್ತಿವೆ ಎಂದು ಶುಕ್ಲಾ ಅರ್ಜಿಯಲ್ಲಿ ಆರೋಪಿಸಿದ್ದಾರೆ. ಕಳೆದ ಹತ್ತು ತಿಂಗಳುಗಳಲ್ಲಿ ಕನಿಷ್ಠ ಒಂಬತ್ತು ಲಿಖಿತ ದೂರುಗಳ ಹೊರತಾಗಿಯೂ ಪೊಲೀಸರು ಮತ್ತು ರಾಜ್ಯದ ಅಧಿಕಾರಿಗಳು ಸಂಪೂರ್ಣ ನಿಷ್ಕ್ರಿಯತೆಯನ್ನು ತೋರಿಸಿದ್ದಾರೆ ಎಂದು ಅವರು ಅರ್ಜಿಯಲ್ಲಿ ಆರೋಪಿಸಿದ್ದಾರೆ.
ಕಳೆದ ಅಕ್ಟೋಬರ್ 2024 ರಲ್ಲಿ ಎಂಎನ್‌ಎಸ್‌ನೊಂದಿಗೆ ಸಂಬಂಧ ಹೊಂದಿರುವ ಸುಮಾರು 30 ವ್ಯಕ್ತಿಗಳ ಗುಂಪು ತಮ್ಮ ರಾಜಕೀಯ ಪಕ್ಷದ ಕಚೇರಿಗೆ ನುಗ್ಗಿ ವಿಧ್ವಂಸ ಕೈಗೊಂಡಿರುವ ಬಗ್ಗೆ ಶುಕ್ಲಾ ಪ್ರಸ್ತಾಪಿಸಿದ್ದಾರೆ. ಘಟನೆಯನ್ನು ಓರ್ವ ಪೊಲೀಸ್ ಅಧಿಕಾರಿಯು ಗಂಟೆಗಳ ಕಾಲ ವೀಕ್ಷಿಸಿದರೂ ಸಹ ಯಾವುದೇ ಹೇಳಿಕೆಯನ್ನು ದಾಖಲಿಸಲು ಅಥವಾ ಗಲಭೆಕೋರರನ್ನು ಬಂಧಿಸಲು ವಿಫಲರಾದರು ಎಂದು ಆರೋಪಿಸಿದ್ದಾರೆ.
ಹಿರಿಯ ಪೊಲೀಸ್ ಅಧಿಕಾರಿಗಳು ಮತ್ತು ರಾಜಕೀಯ ಅಧಿಕಾರಿಗಳೊಂದಿಗೆ ಈ ವಿಷಯವನ್ನು ಚರ್ಚಿಸಲು ಮಾಡಿದ ನಿರಂತರ ಪ್ರಯತ್ನಗಳನ್ನು ನಿರ್ಲಕ್ಷಿಸಲಾಗಿದೆ ಎಂದು ಅರ್ಜಿಯಲ್ಲಿ ಅವರುತಿಳಿಸಿದ್ದಾರೆ.
ಈ ವರ್ಷದ ಮಾರ್ಚ್ 30 ರಂದು ನಡೆದ ಗುಡಿ ಪಾಡ್ವಾ ಸಮಾವೇಶದಲ್ಲಿ ರಾಜ್ ಠಾಕ್ರೆ ಮಾಡಿದ ಭಾಷಣವು ವ್ಯಾಪಕವಾಗಿ ಪ್ರಸಾರವಾಗಿದೆ. ಮಾಲ್‌ಗಳು ಮತ್ತು ಬ್ಯಾಂಕ್‌ಗಳಲ್ಲಿ ಹಿಂದಿ ಮಾತನಾಡುವ ಉದ್ಯೋಗಿಗಳು ಮರಾಠಿ ಮಾತನಾಡದ ಕಾರಣ ಹಿಂಸಾಚಾರಕ್ಕೆ ಕರೆ ನೀಡಲಾಗಿತ್ತು ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ.
ಈ ಭಾಷಣವು ಮುಂಬೈನಾದ್ಯಂತ ಹಿಂದಿ ಮಾತನಾಡುವ ಸಿಬ್ಬಂದಿಯ ಮೇಲೆ ನೇರವಾಗಿ ಅನೇಕ ದಾಳಿಗಳಿಗೆ ಕಾರಣವಾಯಿತು. ಇದಲ್ಲದೆ, ಕಳೆದ ತಿಂಗಳ ಆರಂಭದಲ್ಲಿ ಠಾಕ್ರೆ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ ನಂತರ, ತಮಗೆ ಫೋನ್ ಮತ್ತು ವಾಟ್ಸಾಪ್ ಮೂಲಕ ಅನೇಕ ಕೊಲೆ ಬೆದರಿಕೆಗಳು ಬಂದಿವೆ ಎಂದು ಅವರು ಆರೋಪಿಸಿದ್ದಾರೆ.
ತಮ್ಮ ಫೋನ್ ಸಂಖ್ಯೆಯನ್ನು ಎಂಎನ್‌ಎಸ್ ಬೆಂಬಲಿಗರು ಪ್ರಸಾರ ಮಾಡಿದ್ದು, ಇದರ ಪರಿಣಾಮವಾಗಿ ಬೆದರಿಕೆ ಸಂದೇಶಗಳ ಪ್ರವಾಹವೇ ಬಂದಿದೆ. ಪೊಲೀಸರು ಮತ್ತು ರಾಜ್ಯದ ಉನ್ನತ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರೂ, ಇಲ್ಲಿಯವರೆಗೆ ಯಾವುದೇ ರಕ್ಷಣಾತ್ಮಕ ಕ್ರಮ ತೆಗೆದುಕೊಳ್ಳಲಾಗಿಲ್ಲ ಎಂದು ಅವರು ದೂರಿದ್ದಾರೆ.
ವಕೀಲ ಶ್ರೀರಾಮ್ ಪರಾಕ್ಕಟ್ ಅವರ ಮೂಲಕ ಅರ್ಜಿಯನ್ನು ಸಲ್ಲಿಸಲಾಗಿದೆ.