ಕೋವಿಡ್ ಲಸಿಕೆಯ ಅಡ್ಡಪರಿಣಾಮದಿಂದ ಸಾವು; ಬಾಂಬೆ ಹೈಕೋರ್ಟ್‌ನಲ್ಲಿ ರೂ.1000 ಕೋಟಿ ಪರಿಹಾರ ಕೋರಿ ಮನವಿ ಸಲ್ಲಿಕೆ

ಅರ್ಜಿದಾರರು ಕೆಂದ್ರ ಸರ್ಕಾರವನ್ನಲ್ಲದೆ, ಭಾರತದ ಸಿರಂ ಇನ್ಸ್‌ಟಿಟ್ಯೂಟ್‌ನ ಸಿಇಒ ಹಾಗೂ ಅದರ ಪಾಲುದಾರರಾದ ಬಿಲ್‌ ಗೇಟ್ಸ್‌ ಮತ್ತು ಭಾರತೀಯ ಔಷಧ ಮಹಾನಿಯಂತ್ರಕರು ಹಾಗೂ ಏಮ್ಸ್‌ಅನ್ನು ಪ್ರತಿವಾದಿಗಳಾಗಿಸಿದ್ದಾರೆ.
Bombay High Court, Covishield

Bombay High Court, Covishield

Published on

ಕೋವಿಡ್‌ ಲಸಿಕೆಯನ್ನು ತೆಗೆದುಕೊಂಡಿದ್ದರಿಂದ ಉಂಟಾದ ಅಡ್ಡಪರಿಣಾಮಗಳಿಂದ ತಮ್ಮ ಮಗಳ ಸಾವು ಸಂಭವಿಸಿದೆ ಎಂದು ಅರೋಪಿಸಿ ವೈದ್ಯಕೀಯ ವಿದ್ಯಾರ್ಥಿನಿಯ ತಂದೆಯೊಬ್ಬರು ರೂ. 1000 ಕೋಟಿ ಪರಿಹಾರ ಕೋರಿ ಬಾಂಬೆ ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ.

ಕೋವಿಡ್ ಲಸಿಕೆಗಳು ಸಂಪೂರ್ಣ ಸುರಕ್ಷಿತ ಅದರಿಂದ ದೇಹಕ್ಕೆ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ ಎಂದು ಹೇಳಿ, ಆರೋಗ್ಯ ಕಾರ್ಯಕರ್ತೆಯಾಗಿದ್ದ ತಮ್ಮ ಮಗಳಿಗೆ ಕೋವಿಡ್‌ ಲಸಿಕೆಯನ್ನು ತೆಗೆದುಕೊಳ್ಳಲು ಒತ್ತಾಯಿಸಲಾಯಿತು. ಆದರೆ, ಆನಂತರ ಉಂಟಾದ ಅಡ್ಡಪರಿಣಾಮಗಳಿಂದ ಆಕೆ ಮೃತಪಟ್ಟಳು ಎಂದು ಮೃತ ವೈದ್ಯಕೀಯ ವಿದ್ಯಾರ್ಥಿನಿ ಸ್ನೇಹಲ್‌ ಲುನಾವತ್ ಅವರ ತಂದೆ ದಿಲೀಪ್ ಲುನಾವತ್‌ ತಮ್ಮ ಮನವಿಯಲ್ಲಿ ತಿಳಿಸಿದ್ದಾರೆ.

ಭಾರತೀಯ ಔಷಧ ಮಹಾನಿಯಂತ್ರಕ (ಡಿಸಿಜಿಐ) ಮತ್ತು ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್‌) ಇವುಗಳು ಲಸಿಕೆಯ ಸುರಕ್ಷಿತ ಎನ್ನುವ ತಪ್ಪು ಸಂಕಥನವನ್ನು ರೂಪಿಸಿವೆ. ಇದನ್ನೇ ಸರ್ಕಾರಿ ಅಧಿಕಾರಿಗಳು ಸಹ ಯಾವುದೇ ಮರುಪರಿಶೀಲನೆ ನಡೆಸದೆ ಬೆಂಬಲಿಸಿದ್ದಾರೆ. ತಮ್ಮ ಮಗಳು ಜನವರಿ 28, 2021ರಂದು ಲಸಿಕೆಯನ್ನು ಪಡೆದರು. ಆದರೆ, ಅದರಿಂದ ಉಂಟಾದ ಅಡ್ಡಪರಿಣಾಮಗಳಿಂದ ಮಾರ್ಚ್‌ 1, 2021ರಂದು ಮೃತಪಟ್ಟರು ಎಂದು ಅವರು ತಮ್ಮ ಮನವಿಯಲ್ಲಿ ಅರೋಪಿಸಿದ್ದಾರೆ.

ಮುಂದುವರೆದು, ಕೇಂದ್ರ ಸರ್ಕಾರದ ಎಇಎಫ್‌ಐ ಸಮಿತಿಯು ಅಕ್ಟೋಬರ್‌ 2, 2021ರಂದು ತಮ್ಮ ಮಗಳ ಸಾವಿಗೆ ಕೋವಿಶೀಲ್ಡ್‌ ಲಸಿಕೆಯ ಅಡ್ಡಪರಿಣಾಮಗಳೇ ಕಾರಣ ಎಂದು ಒಪ್ಪಿದೆ ಎಂದು ಸಹ ಹೇಳಿದ್ದಾರೆ. ನನ್ನ ಮಗಳಂತೆಯೇ ಅನೇಕರು ಇಂತಹ ಕಾನೂನುಬಾಹಿರ ನಡೆಯಿಂದಾಗಿ ಸಾವಿಗೆ ತುತ್ತಾಗಬಾರದು ಎನ್ನುವ ಉದ್ದೇಶದಿಂದ ತಾವು ಮನವಿ ಸಲ್ಲಿಸುತ್ತಿರುವುದಾಗಿ ವಿವರಿಸಿದ್ದಾರೆ.

ಅರ್ಜಿದಾರರು ಕೆಂದ್ರ ಸರ್ಕಾರವನ್ನಲ್ಲದೆ, ಭಾರತದ ಸಿರಂ ಇನ್ಸ್‌ಟಿಟ್ಯೂಟ್‌ನ ಸಿಇಒ ಹಾಗೂ ಅದರ ಪಾಲುದಾರರಾದ ಬಿಲ್‌ ಗೇಟ್ಸ್‌ ಮತ್ತು ಭಾರತೀಯ ಔಷಧ ಮಹಾನಿಯಂತ್ರಕರು ಹಾಗೂ ಏಮ್ಸ್‌ ಅನ್ನು ಪ್ರತಿವಾದಿಗಳಾಗಿಸಿದ್ದಾರೆ.

ಮಧ್ಯಂತರ ಪರಿಹಾರವಾಗಿ ತಮಗೆ ರೂ. 1000 ಕೋಟಿ ಪರಿಹಾರ ನೀಡುವಂತೆ ಅಧಿಕಾರಿಗಳಿಗೆ ನಿರ್ದೇಶಿಸುವಂತೆ ನ್ಯಾಯಾಲಯವನ್ನು ಅರ್ಜಿದಾರರು ಕೋರಿದ್ದಾರೆ. ಈ ಮೊತ್ತವನ್ನು ನಂತರ ಸಿರಂ ಸಂಸ್ಥೆಯಿಂದ ವಸೂಲಿ ಮಾಡಿಕೊಳ್ಳುವಂತೆ ಹೇಳಿದ್ದಾರೆ. ಅಲ್ಲದೆ, ಲಸಿಕೆಯ ಅಡ್ಡಪರಿಣಾಮದಿಂದ ಉಂಟಾದ ಸಾವುನೋವಿನ ನೈಜ ದತ್ತಾಂಶವನ್ನು ಮರೆಮಾಚುವ ಸಂಚಿನಲ್ಲಿ ನೆರವಾಗಿರುವ ಸಾಮಾಜಿಕ ಮಾಧ್ಯಮಗಳಾದ ಗೂಗಲ್, ಯೂಟ್ಯೂಬ್‌, ಮೆಟಾ ಮುಂತಾದವರ ವಿರುದ್ಧ ಸೂಕ್ತ ಕ್ರಮಕ್ಕೆ ಆಗ್ರಹಿಸಿದ್ದಾರೆ.

Kannada Bar & Bench
kannada.barandbench.com