PM CARES Fund
PM CARES Fund

ಪಿಎಂ ಕೇರ್ಸ್ ನಿಧಿ ವೆಬ್‌ತಾಣದಿಂದ ಪ್ರಧಾನಿ ಮೋದಿಯವರ ಹೆಸರು, ಭಾವಚಿತ್ರ ಕೈಬಿಡುವಂತೆ ಬಾಂಬೆ ಹೈಕೋರ್ಟ್‌ನಲ್ಲಿ ಪಿಐಎಲ್

ಕಾಂಗ್ರೆಸ್‌ ಪಕ್ಷದ ಸದಸ್ಯರೊಬ್ಬರು ಸಲ್ಲಿಸಿರುವ ಪಿಐಎಲ್‌ನಲ್ಲಿ ಪಿಎಂ ಕೇರ್ಸ್‌ ನಿಧಿಯ ವೆಬ್‌ತಾಣದಿಂದ ರಾಷ್ಟ್ರ ಚಿಹ್ನೆ ಮತ್ತು ರಾಷ್ಟ್ರ ಧ್ವಜದ ಚಿತ್ರವನ್ನು ಕೈಬಿಡುವಂತೆಯೂ ಕೋರಲಾಗಿದೆ.

ಪಿಎಂ ಕೇರ್ಸ್‌ ನಿಧಿಯ ವೆಬ್‌ತಾಣದಿಂದ ಪ್ರಧಾನಿ ಮೋದಿಯವರ ಹೆಸರು ಮತ್ತು ಭಾವಚಿತ್ರವನ್ನು ಕೈಬಿಡುವಂತೆ ಕೋರಿ ಪಿಐಎಲ್‌ ಸಲ್ಲಿಕೆಯಾಗಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರಕ್ಕೆ ಪ್ರತಿಕ್ರಿಯೆ ಸಲ್ಲಿಸುವಂತೆ ಬಾಂಬೆ ಹೈಕೋರ್ಟ್‌ ಮಂಗಳವಾರ ಸೂಚಿಸಿದೆ.

ಕಾಂಗ್ರೆಸ್‌ ಸದಸ್ಯ ವಿಕ್ರಾಂತ್‌ ಚವ್ಹಾಣ್‌ ಎಂಬುವರು ಸಲ್ಲಿಸಿರುವ ಪಿಐಎಲ್‌ನಲ್ಲಿ ಪಿಎಂ ಕೇರ್ಸ್ ನಿಧಿ ಟ್ರಸ್ಟ್‌ನ ವೆಬ್‌ತಾಣದಿಂದ ಪ್ರಧಾನಿಯವರ ಹೆಸರು, ಭಾವಚಿತ್ರ ಮಾತ್ರವೇ ಅಲ್ಲದೆ, ರಾಷ್ಟ್ರ ಲಾಂಛನ, ರಾಷ್ಟ್ರಧ್ವಜದ ಚಿತ್ರಗಳನ್ನೂ ಸಹ ತೆಗೆದುಹಾಕುವಂತೆ ಕೋರಲಾಗಿದೆ. ಈ ಚಿಹ್ನೆಗಳನ್ನು ಬಳಸುವುದು ಸಂವಿಧಾನದ ನಿಬಂಧನೆಗಳ ಹಾಗೂ ರಾಷ್ಟ್ರ ಲಾಂಛನ ಮತ್ತು ಹೆಸರುಗಳ ಅಸಮರ್ಪಕ ಬಳಕೆಯ ನಿಯಂತ್ರಣ ಕಾಯಿದೆಯ ಉಲ್ಲಂಘನೆಯಾಗಿದೆ ಎಂದು ಹೇಳಲಾಗಿದೆ.

ಅರ್ಜಿಯು ನಿರ್ದಿಷ್ಟವಾಗಿ, ‘ಪ್ರೈಮ್‌ ಮಿನಿಸ್ಟರ್ಸ್‌ ಸಿಟಿಜನ್‌ ಅಸಿಸ್ಟೆನ್ಸ್‌ ಅಂಡ್ ರಿಲೀಫ್‌ ಇನ್‌ ಎಮೆರ್ಜೆನ್ಸಿ ಸಿಚುಯೇಷನ್ಸ್ (ಪಿಎಂ ಕೇರ್ಸ್‌) ಫಂಡ್‌’ ಹೆಸರಿನಲ್ಲಿನ ‘ಪ್ರೈಮ್‌ ಮಿನಿಸ್ಟರ್‌’ ಎನ್ನುವುದನ್ನು ಕೈಬಿಡುವಂತೆ ಕೋರಿದೆ.

ಅರ್ಜಿದಾರರು ತಮ್ಮ ಕೋರಿಕೆಯನ್ನು ಸಮರ್ಥಿಸಲು ನೀಡಿರುವ ಕಾರಣಗಳು ಹೀಗಿವೆ:

  • ಪಿಎಂ ಕೇರ್ಸ್ ನಿಧಿಯು ತುರ್ತುಪರಿಸ್ಥಿತಿಯ ಸಂದರ್ಭ, ವಿಪತ್ತಿನ ಸನ್ನಿವೇಶಗಳಲ್ಲಿ ಪರಿಹಾರ ನೀಡುವ ಸಲುವಾಗಿ ಖಾಸಗಿ ಸಂಸ್ಥೆಗಳು ಸ್ವಯಂಸ್ಪೂರ್ತಿಯಿಂದ ನೀಡುವ ದೇಣಿಗೆಯನ್ನು ಸ್ವೀಕರಿಸುತ್ತದೆ. ಸರ್ಕಾರದಿಂದ ಯಾವುದೇ ಪಾಲನ್ನು ಸ್ವೀಕರಿಸುವುದಿಲ್ಲ.

  • ಪಿಎಂ ಕೇರ್ಸ್‌ ನಿಧಿಯ ಟ್ರಸ್ಟ್ ಯಾವುದೇ ಸಾರ್ವಭೌಮ ಕಾರ್ಯಗಳನ್ನು (ನ್ಯಾಯಾಲಯಕ್ಕೆ ಉತ್ತರದಾಯಿಯಾಗುವ ಅಗತ್ಯವಿಲ್ಲದ ಕಾರ್ಯಗಳು) ನಿರ್ವಹಿಸುವುದಿಲ್ಲ. ‌

  • ಸರ್ಕಾರದ ಸಮ್ಮತ ನಿಲುವಿನಂತೆ, ಪಿಎಂ ಕೇರ್ಸ್‌ ನಿಧಿಯು ಕೇಂದ್ರ ಸರ್ಕಾರದ ನಿಧಿಯಲ್ಲ ಅಥವಾ ಅದರಿಂದ ಸಂಗ್ರಹಿಸಲ್ಪಟ್ಟ ನಿಧಿಯು ಭಾರತ ಸರ್ಕಾರದ ಸಂಚಿತ ನಿಧಿಗೆ ಹೋಗುವುದಿಲ್ಲ.

  • ಈ ಕಾರಣಗಳಿಂದಾಗಿ ಪ್ರಧಾನಿಯವರ ಹೆಸರು ಅಥವಾ ಭಾವಚಿತ್ರವನ್ನಾಗಲಿ, ರಾಷ್ಟ್ರ ಲಾಂಛನ, ಧ್ವಜವನ್ನಾಗಲಿ ಬಳಸುವುದು ಸಂವಿಧಾನ ಹಾಗೂ ಲಾಂಛನಗಳ ಕಾಯಿದೆಯ ಉಲ್ಲಂಘನೆಯಾಗಿದೆ.

Also Read
'ಪಿಎಂ ಕೇರ್ಸ್‌ ಸರ್ಕಾರದ ನಿಧಿಯಲ್ಲ ಎಂದು ಯಾರಾದರೂ ವಾದಿಸಲಾಗುತ್ತದೆಯೇ?' ದೆಹಲಿ ಹೈಕೋರ್ಟ್‌ನಲ್ಲಿ ದಿವಾನ್ ವಾದಮಂಡನೆ

ಪ್ರಕರಣವನ್ನು ಆಲಿಸಿದ ನ್ಯಾ. ಎ ಎ ಸಯೀದ್ ಮತ್ತು ನ್ಯಾ. ಎಸ್‌ ಜಿ ದಿಗೆ ಅವರ ಪೀಠವು ಅರ್ಜಿಯ ಸಂಬಂಧ ಪ್ರತಿಕ್ರಿಯೆ ಸಲ್ಲಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿ ಪ್ರಕರಣದ ವಿಚಾರಣೆಯನ್ನು ಅಕ್ಟೋಬರ್ 25ಕ್ಕೆ ಮುಂದೂಡಿತು.

Related Stories

No stories found.
Kannada Bar & Bench
kannada.barandbench.com