ಸರ್ಕಾರದ ಕಾರ್ಯಕ್ರಮದಲ್ಲಿ ವಂದೇ ಮಾತರಂ ಗೀತೆಯ ಎರಡು ಚರಣ ಕಡ್ಡಾಯ ಆದೇಶ ಪ್ರಶ್ನಿಸಿ ಹೈಕೋರ್ಟ್‌ಗೆ ಪಿಐಎಲ್‌ ಸಲ್ಲಿಕೆ

ಯಾವುದೇ ಕಾನೂನು ಸಲಹೆ ಅಥವಾ ಆಡಳಿತಾತ್ಮಕ ಇಲಾಖೆಯ ಸಂಪುಟದ ಪ್ರಸ್ತಾವ ಇಲ್ಲದೇ ಅನೌಪಚಾರಿಕ ಚರ್ಚೆಯ ಬಳಿಕ ರಾಜ್ಯ ಸರ್ಕಾರವು ಆದೇಶ ಮಾಡಿದೆ ಎಂದು ಅರ್ಜಿದಾರರು ಆಕ್ಷೇಪಿಸಿದ್ದಾರೆ.
ಸರ್ಕಾರದ ಕಾರ್ಯಕ್ರಮದಲ್ಲಿ ವಂದೇ ಮಾತರಂ ಗೀತೆಯ ಎರಡು ಚರಣ ಕಡ್ಡಾಯ ಆದೇಶ ಪ್ರಶ್ನಿಸಿ ಹೈಕೋರ್ಟ್‌ಗೆ ಪಿಐಎಲ್‌ ಸಲ್ಲಿಕೆ
Published on

ರಾಷ್ಟ್ರಪತಿ, ಉಪ ರಾಷ್ಟ್ರಪತಿ, ಪ್ರಧಾನ ಮಂತ್ರಿ ಮತ್ತು ರಾಜ್ಯಪಾಲರು ಭಾಗವಹಿಸುವ ಕಾರ್ಯಕ್ರಮ ಹೊರತುಪಡಿಸಿ ರಾಜ್ಯ ಸರ್ಕಾರದ ಕಾರ್ಯಕ್ರಮಗಳಲ್ಲಿ ವಂದೇ ಮಾತರಂ ಗೀತೆಯ ಎರಡು ಚರಣಗಳನ್ನು ಮಾತ್ರ ಹಾಡಬೇಕು ಎಂದು ಕಡ್ಡಾಯಗೊಳಿಸಿ ಸೆಪ್ಟೆಂಬರ್‌ 8ರಂದು ರಾಜ್ಯ ಸರ್ಕಾರ ಸರ್ಕಾರ ಹೊರಡಿಸಿರುವ ಆದೇಶ ಪ್ರಶ್ನಿಸಿ ವಕೀಲ ಗಿರೀಶ್‌ ಭಾರದ್ವಾಜ್‌ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ.

ರಾಜ್ಯ ಸರ್ಕಾರ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹಾಗೂ ಕೇಂದ್ರ ಗೃಹ ಇಲಾಖೆಯನ್ನು ಪ್ರತಿವಾದಿಗಳನ್ನಾಗಿಸಲಾಗಿದೆ. ವಕೀಲ ಅನಗದ್‌ ಕಾಮತ್‌ ಮೂಲಕ ಅರ್ಜಿ ಸಲ್ಲಿಸಿಲಾಗಿದ್ದು, ಅದು ಇನ್ನಷ್ಟೇ ವಿಚಾರಣೆಗೆ ನಿಗದಿಯಾಗಬೇಕಿದೆ.

'ರಾಷ್ಟ್ರೀಯ ಗೌರವಕ್ಕೆ ಅವಮಾನ ತಡೆಯುವ (ತಿದ್ದುಪಡಿ) ಕಾಯಿದೆ ರೂಪಿಸಿ ವಂದೇ ಮಾತರಂ ಗೀತೆಯನ್ನು ಅದಕ್ಕೆ ಸೇರಿಸಲಾಗಿದ್ದು, ಅದಕ್ಕೂ ರಾಷ್ಟ್ರಗೀತೆಯ ಸ್ಥಾನಮಾನ ಕಲ್ಪಿಸಲಾಗಿದೆ. ವಂದೇ ಮಾತರಂ ಸಂಪೂರ್ಣ ಗೀತೆಯನ್ನು ರಕ್ಷಿಸುವ ಸಂಸತ್‌ನ ಉದ್ದೇಶವನ್ನು ಸರ್ಕಾರದ ಆದೇಶ ಕ್ಷುಲ್ಲಕಗೊಳಿಸಿದೆ ಎಂದು ಪಿಐಎಲ್‌ನಲ್ಲಿ ಆಕ್ಷೇಪಿಸಲಾಗಿದೆ.

ಯಾವುದೇ ಕಾನೂನು ಸಲಹೆ ಅಥವಾ ಆಡಳಿತಾತ್ಮಕ ಇಲಾಖೆಯ ಸಂಪುಟದ ಪ್ರಸ್ತಾವ ಇಲ್ಲದೇ ಅನೌಪಚಾರಿಕ ಚರ್ಚೆಯ ಬಳಿಕ ಆದೇಶ ಮಾಡಲಾಗಿದೆ. ಸಂವಿಧಾನದ 19(1)(a) ನೇ ವಿಧಿಯಲ್ಲಿ ಕಲ್ಪಿಸಲಾಗಿರುವ ವಾಕ್‌ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನಿಯಂತ್ರಿಸುವಂಥ ಆದೇಶವನ್ನು ರಾಜ್ಯ ಸರ್ಕಾರ ಹೊರಡಿಸಿದೆ. ರಾಷ್ಟ್ರೀಯ ಲಾಂಛನಗಳಾದ ರಾಷ್ಟ್ರಗೀತೆಯನ್ನು ಸಂಸತ್‌ ಮಾತ್ರ ಕಾಯಿದೆಯ ಮೂಲಕ ರೂಪಿಸಬಹುದಾಗಿದೆ ಎಂದು ಹೇಳಲಾಗಿದೆ.

ಸಂವಿಧಾನದ 256ನೇ ವಿಧಿಯ ಪ್ರಕಾರ ಸಂಸತ್‌ ರೂಪಿಸಿದ ಕಾಯಿದೆಗಳನ್ನು ರಾಜ್ಯಗಳು ಪಾಲಿಸಬೇಕು. ಆದರೆ, ಸರ್ಕಾರದ ಆದೇಶವು ಅದಕ್ಕೆ ವಿರುದ್ಧವಾಗಿದೆ ಎಂದು ದೂರಲಾಗಿದೆ.

Kannada Bar & Bench
kannada.barandbench.com