ಕೋವಿಡ್‌ ಲಸಿಕೆ ಪ್ರಮಾಣಪತ್ರಗಳಿಂದ ಮೋದಿ ಚಿತ್ರ ತೆಗೆದುಹಾಕಲು ಮನವಿ: ಕೇಂದ್ರದ ಪ್ರತಿಕ್ರಿಯೆ ಕೇಳಿದ ಕೇರಳ ಹೈಕೋರ್ಟ್
Prime Minister Narendra Modi, COVID-19 vaccine certificate

ಕೋವಿಡ್‌ ಲಸಿಕೆ ಪ್ರಮಾಣಪತ್ರಗಳಿಂದ ಮೋದಿ ಚಿತ್ರ ತೆಗೆದುಹಾಕಲು ಮನವಿ: ಕೇಂದ್ರದ ಪ್ರತಿಕ್ರಿಯೆ ಕೇಳಿದ ಕೇರಳ ಹೈಕೋರ್ಟ್

ಕೋವಿಡ್‌ ವಿರುದ್ಧದ ರಾಷ್ಟ್ರೀಯ ಅಭಿಯಾನವನ್ನು ಪಿಎಂ ಮೋದಿಯವರ ಮಾದ್ಯಮ ಅಭಿಯಾನವಾಗಿ ಪರಿವರ್ತಿಸಲಾಗಿದೆ ಎನ್ನುವ ಆಕ್ಷೇಪವನ್ನು ಅರ್ಜಿಯಲ್ಲಿ ಎತ್ತಲಾಗಿದೆ.

ಕೋವಿಡ್‌ ಲಸಿಕೆಯ ಪ್ರಮಾಣಪತ್ರಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಭಾವಚಿತ್ರವಿರುವುದನ್ನು ಆಕ್ಷೇಪಿಸಿ ಕೇರಳ ಹೈಕೋರ್ಟ್‌ನಲ್ಲಿ ಮನವಿಯೊಂದು ಸಲ್ಲಿಕೆಯಾಗಿದ್ದು ಈ ಕುರಿತು ಕೇರಳ ಹೈಕೋರ್ಟ್‌ ಇತ್ತೀಚೆಗೆ ಕೇಂದ್ರ ಹಾಗೂ ಕೇರಳ ಸರ್ಕಾರಗಳ ಪ್ರತಿಕ್ರಿಯೆ ಕೇಳಿದೆ (ಪೀಟರ್‌ ಮ್ಯಾಲಿಪರಂಪಿಲ್ ವರ್ಸಸ್‌ ಕೇಂದ್ರ ಸರ್ಕಾರ).

ಮನವಿಯನ್ನು ಪುರಸ್ಕರಿಸಿರುವ ನ್ಯಾ. ಪಿ ಬಿ ಸುರೇಶ್‌ ಕುಮಾರ್ ಅವರ ಏಕಸದಸ್ಯ ಪೀಠವು ಈ ಸಂಬಂಧ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ಸೂಕ್ತ ಪ್ರತಿಕ್ರಿಯೆ ಪಡೆಯುವಂತೆ ಉಭಯ ವಕೀಲರಿಗೆ ಸೂಚಿಸಿದೆ. ಆರ್‌ಟಿಐ ಕಾರ್ಯಕರ್ತ ಹಾಗೂ ವಕೀಲ ಅಜಿತ್‌ ಜಾಯ್‌ ಅವರು ಅರ್ಜಿ ಸಲ್ಲಿಕೆ ಮಾಡಿದ್ದಾರೆ.

ತಾನು ಖಾಸಗಿ ಆಸ್ಪತ್ರೆಯಲ್ಲಿ ದರ ಪಾವತಿ ಮಾಡಿ ಲಸಿಕೆ ಪಡೆದಿದ್ದು, ಆನಂತರ ಈ ಕುರಿತ ಪ್ರಮಾಣಪತ್ರವನ್ನು ಸ್ವೀಕರಿಸಿದ್ದೇನೆ. ಪ್ರಮಾಣಪತ್ರದಲ್ಲಿ ಪ್ರದಾನಿ ಮೋದಿಯವರ ವರ್ಣಚಿತ್ರವಿದ್ದು ಅದರೊಟ್ಟಿಗೆ “ ಔಷಧ ಮತ್ತು ಕಠಿಣ ನಿಯಂತ್ರಣ” ಎಂದು ಮಲಯಾಳಂನಲ್ಲಿಯೂ, ‘ಭಾರತವು ಒಗ್ಗೂಡಿ ಕೋವಿಡ್‌ ಅನ್ನು ಸೋಲಿಸಲಿದೆ’ ಎಂದು ಇಂಗ್ಲಿಷ್‌ನಲ್ಲಿಯೂ ಬರೆದಿದ್ದು, ಇದನ್ನು ಪ್ರಧಾನಿ ನರೇಂದ್ರ ಮೋದಿಯವರ ಹೇಳಿಕೆಗಳೆಂದು ಸೂಚಿಸಲಾಗಿದೆ.

ಇದೆಲ್ಲವೂ ಕೋವಿಡ್‌ ವಿರುದ್ಧದ ಅಭಿಯಾನವನ್ನು ಪ್ರಧಾನಿ ಮೋದಿಯವರ ಕುರಿತಾದ ಪ್ರಚಾರ ಅಭಿಯಾನವನ್ನಾಗಿ ಪರಿವರ್ತಿಸಲಾಗಿರುವ ತಮ್ಮಶಂಕೆಗೆ ಬಲ ನೀಡಿದೆ ಎಂದು ಅರ್ಜಿದಾರರು ತಮ್ಮ ಮನವಿಯಲ್ಲಿ ಹೇಳಿದ್ದಾರೆ. ಅರ್ಜಿದಾರರು ಪ್ರಧಾನಿ ಮೋದಿಯವರ ಭಾವಚಿತ್ರ ರಹಿತವಾದ ಲಸಿಕೆಯ ಪ್ರಮಾಣ ಪತ್ರವನ್ನು ಒದಗಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿಯನ್ನು ಸಹ ಸಲ್ಲಿಸಿದ್ದು ಈವರೆಗೆ ಈ ಕುರಿತು ಯಾವುದೇ ಪ್ರತಿಕ್ರಿಯೆ ದೊರೆತಿಲ್ಲ ಎಂದಿದ್ದಾರೆ. ಹೀಗಾಗಿ, ತಾವು ನ್ಯಾಯಾಲಯದ ಮೊರೆ ಹೋಗುವುದು ಅನಿವಾರ್ಯವಾಯಿತು ಎಂದು ಅರ್ಜಿಯಲ್ಲಿ ವಿವರಿಸಿದ್ದಾರೆ. ತಮ್ಮ ಪ್ರಮಾಣಪತ್ರದಲ್ಲಿ ಪ್ರಧಾನಿ ಮೋದಿಯವರ ಭಾವಚಿತ್ರವನ್ನು ಹಾಕಿರುವುದು ತಮ್ಮ ಮೂಲಭೂತ ಹಕ್ಕಿನ ಉಲ್ಲಂಘನೆ ಎಂದು ಅವರು ಹೇಳಿದ್ದಾರೆ.

ಅರ್ಜಿದಾರರು ಎತ್ತಿರುವ ಪ್ರಮುಖ ಆಕ್ಷೇಪಣೆಗಳು ಹೀಗಿವೆ:

ಇದಾಗಲೇ ಪರಿವರ್ತನೆಯಾಗಿರುವವರಿಗೆ ಉಪದೇಶ ನೀಡಿದಂತೆ

ಪ್ರಮಾಣಪತ್ರದಲ್ಲಿ ಪ್ರಧಾನಿ ಭಾವಚಿತ್ರವಿರುವುದು ಯಾವುದೇ ಉದ್ದೇಶವನ್ನೂ ಈಡೇರಿಸುವುದಿಲ್ಲ. ಇದಾಗಲೇ ಸ್ವಇಚ್ಛೆಯಿಂದ ಲಸಿಕೆ ಪಡೆದಿರುವವರಿಗೆ ಮತ್ತಾವುದೇ ಪ್ರೇರಣೆಯಾಗಲಿ, ಸಂದೇಶದ ಅಗತ್ಯವಾಗಲಿ ಇರುವುದಿಲ್ಲ. ಭಾವಚಿತ್ರವನ್ನು ತೆಗೆದು ಹಾಕುವುದರಿಂದ ಅಭಿಯಾನಕ್ಕೆ ಯಾವುದೇ ತೊಂದರೆಯಾಗುವುದಿಲ್ಲ. “ಇದಾಗಲೇ ಪರಿವರ್ತನೆ ಹೊಂದಿರುವವರಿಗೆ ಉಪದೇಶ ನೀಡುವಂತೆ” ಈ ನಡೆಯಿದೆ ಎಂದಿದ್ದಾರೆ.

ಪಾವತಿ ಲಸಿಕೆಗೇಕೆ ಪ್ರಧಾನಿ ಭಾವಚಿತ್ರ?

ಲಸಿಕೆಗೆ ದರ ಪಾವತಿಸಿರುವುದರಿಂದ ತಮಗೆ ಪ್ರಧಾನಿಯವರ ಭಾವಚಿತ್ರ ರಹಿತ ಪ್ರಮಾಣಪತ್ರವನ್ನು ಕೇಳುವ ಹಕ್ಕಿದೆ ಎಂದು ಅರ್ಜಿದಾರರು ವಾದಿಸಿದ್ದಾರೆ. ಪ್ರಧಾನಿಯಾಗಲಿ, ಕೇಂದ್ರ ಸರ್ಕಾರವಾಗಲಿ ತಮ್ಮ ಕರ್ತವ್ಯವನ್ನಷ್ಟೇ ಮಾಡಿದ್ದು ಇದಕ್ಕಾಗಿ ಭಾವಚಿತ್ರವನ್ನು ಹಾಕಿಕೊಳ್ಳುವ ಮೂಲಕ ವಿಶೇಷ ಹಕ್ಕುಸಾಧನೆಯನ್ನು ಮಾಡುವಂತಿಲ್ಲ ಎಂದಿದ್ದಾರೆ.

ತಮ್ಮ ಪಾಡಿಗೆ ಬಿಡುವುದು ಸಾಂವಿಧಾನಿಕ ಹಕ್ಕು

ತಮ್ಮ ಹೆಸರು, ತಮ್ಮ ವೈದ್ಯಕೀಯ ದಾಖಲೆಗಳಿರುವ ಮಾಹಿತಿಯು ತಮ್ಮ ಖಾಸಗಿ ವಿಷಯವಾಗಿದೆ. ತಮ್ಮ ಈ ಖಾಸಗಿ ವ್ಯಾಪ್ತಿಗೆ ಅದೂ ತಮ್ಮ ಇಚ್ಛೆಯ ವಿರುದ್ಧವಾಗಿ ಪ್ರವೇಶಿಸುವ ಹಕ್ಕು ಸರ್ಕಾರಕ್ಕಿಲ್ಲ ಎಂದಿದ್ದಾರೆ.

ಕೋವಿಡ್‌ ಅಭಿಯಾನವನ್ನು ವ್ಯಕ್ತಿಯೊಬ್ಬರ ಪ್ರಚಾರದ ಅಭಿಯಾನ ಮಾಡಲಾಗಿದೆ

ಕೋವಿಡ್‌ ವಿರುದ್ಧದ ಅಭಿಯಾನವನ್ನು ಏಕವ್ಯಕ್ತಿಯ ಪ್ರಚಾರವನ್ನಾಗಿಸುವ ಪ್ರಯತ್ನ ಕಂಡುಬರುತ್ತಿದೆ. ಸರ್ಕಾರದ ಬೊಕ್ಕಸದಿಂದ ಪ್ರಧಾನಿಯವರ ಬ್ಯಾನರ್‌, ಪೋಸ್ಟರ್‌ಗಳನ್ನು ಸರ್ಕಾರಿ ವೆಬ್‌ಸೈಟ್‌ಗಳಲ್ಲಿ, ಕೋವಿನ್‌ ಮತ್ತು ಆರೋಗ್ಯ ಸೇತು ಆಪ್‌ಗಳಲ್ಲಿ ಪ್ರಚಾರ ಮಾಡಲಾಗಿದೆ; ಇದೀಗ ಲಸಿಕೆಯ ಪ್ರಮಾಣಪತ್ರಗಳಲ್ಲೂ ಇದನ್ನು ಮುಂದುವರೆಸಲಾಗಿದೆ ಎಂದು ಅರ್ಜಿದಾರರು ಆಕ್ಷೇಪಿಸಿದ್ದಾರೆ.

Related Stories

No stories found.