ಮುಸ್ಲಿಮರು, ಕ್ರೈಸ್ತ ಸಮುದಾಯದ ಅಲ್ಪಸಂಖ್ಯಾತ ಸ್ಥಾನಮಾನ ಮರುನಿಗದಿ ಕೋರಿ ಕೇರಳ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಕೆ

ಅಲ್ಪಸಂಖ್ಯಾತರು ಅಸಮಾಧಾನಗೊಳ್ಳುವ ಭೀತಿಯಿಂದ ರಾಜ್ಯ ಸರ್ಕಾರ ಅವರ ಸ್ಥಾನಮಾನವನ್ನು ಮರುಪರಿಶೀಲನೆ ಮಾಡುವ ಧೈರ್ಯ ಮಾಡಿಲ್ಲ ಎಂದು ಮನವಿಯಲ್ಲಿ ಆರೋಪಿಸಲಾಗಿದೆ.
Christianity and Islam, Kerala HC
Christianity and Islam, Kerala HC
Published on

ಕೇರಳದಲ್ಲಿ ಮುಸ್ಲಿಮರು ಮತ್ತು ಕ್ರೈಸ್ತರ ಅಲ್ಪಸಂಖ್ಯಾತ ವರ್ಗದ ಸ್ಥಾನಮಾನ ಪರಾಮರ್ಶಿಸಿ ಮರುನಿಗದಿಪಡಿಸಲು ಮತ್ತು ಅಲ್ಪಸಂಖ್ಯಾತರ ಪಟ್ಟಿಯನ್ನು ಮರುನಿರ್ಧರಣ ಮಾಡಲು ಕೇಂದ್ರ ಸರ್ಕಾರ ಮತ್ತು ರಾಷ್ಟ್ರೀಯ ಅಲ್ಪಸಂಖ್ಯಾತ ಆಯೋಗಕ್ಕೆ ನಿರ್ದೇಶನಗಳನ್ನು ನೀಡುವಂತೆ ಕೋರಿ ಕೇರಳ ಹೈಕೋರ್ಟ್‌ಗೆ ಅರ್ಜಿಯೊಂದು ಸಲ್ಲಿಕೆಯಾಗಿದೆ.

ಸಿಟಿಜನ್ಸ್‌ ಅಸೋಸಿಯೇಷನ್‌ ಫಾರ್‌ ಡೆಮಾಕ್ರಸಿ, ಈಕ್ವಾಲಿಟಿ, ಟ್ರಾಂಕ್ವಿಲಿಟಿ, ಅಂಡ್‌ ಸೆಕ್ಯುಲರಿಸಂ (ಸಿಎಡಿಇಟಿಎಸ್‌- ಕೆಡೆಟ್ಸ್‌ ) ಸಂಸ್ಥೆ ಸಲ್ಲಿಸಿರುವ ಈ ಅರ್ಜಿ ಸಂಬಂಧ ಮುಖ್ಯ ನ್ಯಾಯಮೂರ್ತಿ ಎಸ್.ಮಣಿಕುಮಾರ್ ಮತ್ತು ನ್ಯಾಯಮೂರ್ತಿ ಶಾಜಿ ಪಿ ಚಾಲಿ ಅವರ ವಿಭಾಗೀಯ ಪೀಠ ಆದೇಶ ಕಾಯ್ದಿರಿಸಿದೆ.

ಧರ್ಮ, ಜಾತಿ, ಲಿಂಗ ಇತ್ಯಾದಿಗಳ ಆಧಾರದ ಮೇಲೆ ತಾರತಮ್ಯದ ವಿರುದ್ಧ ಹೋರಾಡುವುದು ಮತ್ತು ಜಾತ್ಯತೀತತೆಯ ತತ್ವಗಳನ್ನು ಎತ್ತಿಹಿಡಿಯುವುದು ತಮ್ಮ ಉದ್ದೇಶವಾಗಿದೆ ಎಂದು ಅರ್ಜಿದಾರರು ಪ್ರತಿಪಾದಿಸಿದ್ದು ಪ್ರಕರಣದಲ್ಲಿ ತಮಗೆ ಯಾವುದೇ ವೈಯಕ್ತಿಕ ಅಥವಾ ಖಾಸಗಿ ಹಿತಾಸಕ್ತಿ ಇಲ್ಲ ಎಂದಿದ್ದಾರೆ.

Also Read
ತೃತೀಯ ಲಿಂಗಿ ವ್ಯಕ್ತಿಯ ಎನ್‌ಸಿಸಿ ಸೇರ್ಪಡೆ ಕೋರಿಕೆಗೆ ಅನುಮತಿ ನೀಡಿದ ಕೇರಳ ಹೈಕೋರ್ಟ್‌

ಅರ್ಜಿಯ ಪ್ರಮುಖಾಂಶಗಳು

  • ಕೇರಳದ ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರು ಸಾಮಾಜಿಕವಾಗಿ ಅಥವಾ ಶೈಕ್ಷಣಿಕವಾಗಿ ಹಿಂದುಳಿದವರಲ್ಲದ ಕಾರಣ ಅವರ ಅಲ್ಪಸಂಖ್ಯಾತ ಸ್ಥಾನಮಾನವನ್ನು ಮರುನಿರ್ಣಯಿಸಬೇಕಿದೆ.

  • ಅಲ್ಪಸಂಖ್ಯಾತರು ಅಸಮಾಧಾನಗೊಳ್ಳುವ ಭೀತಿಯಿಂದ ರಾಜ್ಯ ಸರ್ಕಾರ ಅವರ ಸ್ಥಾನಮಾನ ಮರುನಿಗದಿಪಡಿಸುವ ಧೈರ್ಯ ಮಾಡಿಲ್ಲ

  • ಆರ್ಥಿಕ, ಔದ್ಯೋಗಿಕ, ವೃತ್ತಿಪರ, ಶೈಕ್ಷಣಿಕ ಕ್ಷೇತ್ರಗಳಲ್ಲಿ ಕ್ರೈಸ್ತ ಮತ್ತು ಮುಸ್ಲಿಂ ಸಮುದಾಯಗಳಿಗೆ ಆದ್ಯತೆ ನೀಡುವುದು ಸಾಂವಿಧಾನಿಕ ಪ್ರಜಾಪ್ರಭುತ್ವದ ಜಾತ್ಯತೀತ ರಚನೆಗೆ ಗಂಭೀರ ಹೊಡೆತವಾಗಿದ್ದು ಬಹುರಾಷ್ಟ್ರೀಯವಾದಕ್ಕೆ ಕಾರಣವಾಗಬಹುದು.

  • ಮುಖ್ಯವಾಗಿ ಸಂವಿಧಾನದ 15 (4)ನೇ ವಿಧಿಯನ್ವಯ, ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳಿಗೆ ಮಾತ್ರ ವಿಶೇಷ ನಿಬಂಧನೆಗಳು ಅನ್ವಯಿಸುತ್ತವೆ.

  • ಪ್ರಸಕ್ತ ಸಾಲಿನ ಒಟ್ಟಾರೆ ಸಂಖ್ಯೆಗಳನ್ನು ಪರಿಗಣಿಸಿದರೂ ಕೂಡ 2011ರ ಜನಗಣತಿಯ ಪ್ರಕಾರ ಎರಡು ಸಮುದಾಯಗಳು ಸೇರಿ ಇಂದಿಗೂ ಶೇ 50ರಷ್ಟು ಜನಸಂಖ್ಯೆ ಹೊಂದಿವೆ.

  • ಅದರಲ್ಲಿಯೂ ಕೇರಳದಲ್ಲಿ ಮುಸ್ಲಿಮರು ಮತ್ತು ಕ್ರೈಸ್ತರು ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದವರಲ್ಲ. ಇತ್ತೀಚಿನ ವರ್ಷಗಳಲ್ಲಿ ಅವರು ಶಿಕ್ಞಣ, ಸಾಮಾಜಿಕ ಆರ್ಥಿಕ ಕ್ಷೇತ್ರಗಳಲ್ಲಿ ಹಿಂದೂಗಳಿಗಿಂತಲೂ ಹೆಚ್ಚು ಪ್ರಗತಿ ಸಾಧಿಸಿದ್ದು ಅವರ ಸ್ಥಿತಿಯನ್ನು ಮರು ನಿರ್ಧರಿಸಬೇಕು.

ಧಾರ್ಮಿಕ ಬಹುಸಂಖ್ಯಾತ ಅಥವಾ ಅಲ್ಪಸಂಖ್ಯಾತ ಸ್ಥಾನಮಾನವನ್ನು ನಿರ್ಧರಿಸಬೇಕಾಗಿರುವುದು ಸರ್ಕಾರ ಎಂದು ಟಿ ಎಂ ಎ ಪೈ ಮತ್ತು ಕರ್ನಾಟಕ ಸರ್ಕಾರ ನಡುವಣ ಪ್ರಕರಣದಲ್ಲಿ ಸುಪ್ರೀಂಕೋರ್ಟ್‌ ನೀಡಿರುವ ತೀರ್ಪನ್ನು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. ಅಲ್ಲದೆ ಬಾಲ್‌ ಪಾಟೀಲ್‌ ಮತ್ತಿತರರು ಹಾಗೂ ಕೇಂದ್ರ ಸರ್ಕಾರ ಇನ್ನಿತರರ ನಡುವಣ ಪ್ರಕರಣದ ತೀರ್ಪು, ಪಳೋಳಿ ಮುಹಮ್ಮದ್‌ ಸಮಿತಿಯ ಶಿಫಾರಸುಗಳನ್ನು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. ಅರ್ಜಿದಾರರ ಪರವಾಗಿ ವಕೀಲ ಸಿ ರಾಜೇಂದ್ರನ್ ವಾದ ಮಂಡಿಸಿದರು.

Kannada Bar & Bench
kannada.barandbench.com