
ರೈತ ನಾಯಕ ಜಗಜಿತ್ ಸಿಂಗ್ ಡಲ್ಲೇವಾಲ್ ಅವರನ್ನು ಅಕ್ರಮವಾಗಿ ಬಂಧಿಸಿಡಲಾಗಿದೆ ಎಂದು ಆರೋಪಿಸಿ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಲಾಗಿದೆ.
ಗುರುಮುಖ್ ಸಿಂಗ್ ಎಂಬವವರು ಅರ್ಜಿ ಸಲ್ಲಿಸಿದ್ದು ನ್ಯಾಯಮೂರ್ತಿ ಮನೀಷಾ ಬಾತ್ರಾ ಈ ಸಂಬಂಧ ಶುಕ್ರವಾರ ಪಂಜಾಬ್ ಸರ್ಕಾರ ಮತ್ತು ಪೊಲೀಸರಿಗೆ ನೋಟಿಸ್ ಜಾರಿ ಮಾಡಿದ್ದಾರೆ.
"ಪ್ರತಿವಾದಿಗಳ ಅಕ್ರಮ ಬಂಧನದಲ್ಲಿರುವ ಜಂಟಿ ವೇದಿಕೆ ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯೇತರ) ರೈತ ನಾಯಕ ಜಗಜಿತ್ ಸಿಂಗ್ ಡಲ್ಲೇವಾಲ್ ಅವರ ಬಿಡುಗಡೆಗಾಗಿ ಹೇಬಿಯಸ್ ಕಾರ್ಪಸ್ ಸ್ವರೂಪದಲ್ಲಿ ರಿಟ್ ಹೊರಡಿಸುವಂತೆ ಪ್ರಾರ್ಥಿಸುವ ಈ ಅರ್ಜಿಯನ್ನು ಸಂಜೆ 6:45 ಕ್ಕೆ ಪುರಸ್ಕರಿಸಲಾಗಿದೆ" ಎಂದು ನ್ಯಾಯಾಲಯ ತನ್ನ ಆದೇಶದಲ್ಲಿ ತಿಳಿಸಿದೆ.
ಪಂಜಾಬ್ ಸರ್ಕಾರವನ್ನು ಪ್ರತಿನಿಧಿಸಿದ್ದ ಹಿರಿಯ ಉಪ ಅಡ್ವೊಕೇಟ್ ಜನರಲ್ ರುಚಿಕಾ ಸಭರ್ವಾಲ್ , ಸ್ಥಿತಿಗತಿ ವರದಿ ಸಲ್ಲಿಸಲು ಸಮಯ ಕೋರಿದರು. ಪ್ರಕರಣದ ಮುಂದಿನ ವಿಚಾರಣೆ ಮಾರ್ಚ್ 24ರಂದು ನಡೆಯಲಿದೆ.
ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಒದಗಿಸಲು ಕಾನೂನು ಖಾತರಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಡಲ್ಲೇವಾಲ್, ಮಾರ್ಚ್ 19 ರಂದು ಕೇಂದ್ರ ಸರ್ಕಾರದ ನಿಯೋಗದೊಂದಿಗೆ ಮಾತುಕತೆಯಲ್ಲಿ ಭಾಗವಹಿಸಿದ್ದರು. ಸಭೆಯ ನಂತರ ಅವರನ್ನು ಬಂಧಿಸಲಾಗಿದೆ ಎಂದು ಆರೋಪಿಸಲಾಗಿದೆ.
"ಸಭೆಯ ನಂತರ, (ದೆಹಲಿಯ) ಶಂಬು ಮತ್ತು ಕಹ್ನೌರಿ ಗಡಿಗಳಲ್ಲಿನ ಪ್ರತಿಭಟನಾ ಸ್ಥಳಗಳಿಗೆ ಹಿಂತಿರುಗುತ್ತಿದ್ದಾಗ, ಪಂಜಾಬ್ ಪೊಲೀಸರು ಬಂಧಿತರ ವಾಹನಗಳನ್ನು ಮೊಹಾಲಿಯ ಜಗತ್ಪುರ ಪ್ರದೇಶದ ಬಳಿ ತಡೆದರು. ಶರ್ವಣ್ ಸಿಂಗ್ ಪಂಧೇರ್ ಮತ್ತು ಮಂಜಿತ್ ಸಿಂಗ್ ರೈ ಮತ್ತಿತರ ನಾಯಕರನ್ನು ಡಲ್ಲೇವಾಲ್ ಅವರೊಂದಿಗೆ ಪೂರ್ವ ಸೂಚನೆ ಅಥವಾ ವಿವರಣೆಯಿಲ್ಲದೆ ಬಂಧಿಸಲಾಯಿತು, ಇದು ರೈತರು ಮತ್ತು ಪೊಲೀಸರ ನಡುವೆ ಘರ್ಷಣೆಗೆ ಕಾರಣವಾಯಿತು " ಎಂದು ನ್ಯಾಯಾಲಯಕ್ಕೆ ತಿಳಿಸಲಾಯಿತು.
ಸುಪ್ರೀಂ ಕೋರ್ಟ್‌ನ ಯಥಾಸ್ಥಿತಿ ಆದೇಶವನ್ನು ಉಲ್ಲಂಘಿಸಿ ಪಂಜಾಬ್ ಪೊಲೀಸರು ಪ್ರತಿಭಟನಾ ಸ್ಥಳಗಳನ್ನು ತೆರವುಗೊಳಿಸಿದ್ದಾರೆ ಎಂದೂ ಅರ್ಜಿಯಲ್ಲಿ ತಿಳಿಸಲಾಗಿದೆ. 300 ಕ್ಕೂ ಹೆಚ್ಚು ರೈತರು ಕಾಣೆಯಾಗಿದ್ದಾರೆ ಎಂದು ಕೂಡ ಆರೋಪಿಸಲಾಗಿದೆ. ಆದರೆ ಅರ್ಜಿಯಲ್ಲಿ ಡಲ್ಲೇವಾಲ್ ಅವರನ್ನು ಹಾಜರುಪಡಿಸಿ ಬಿಡುಗಡೆಗೊಳಿಸಬೇಕು ಎಂದಷ್ಟೇ ಕೋರಲಾಗಿದೆ.