ಅಂತರ್ಜಾಲದಲ್ಲಿ ಲಭಿಸುವ ಅನಿಷ್ಟ ಸಂಗತಿಗಳು ಮಕ್ಕಳನ್ನು ಪ್ರಭಾವಿಸುವ ಭೀತಿ ಇದ್ದು ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ನಡೆಸಲಾಗುವ ಆನ್‌ಲೈನ್ ವರ್ಚುವಲ್ ತರಗತಿಗಳಿಗೆ ಸಂಬಂಧಿಸಿದಂತೆ ಸಮಗ್ರ ಮಾರ್ಗಸೂಚಿ ಬಿಡುಗಡೆ ಮಾಡಲು ಕೇಂದ್ರಕ್ಕೆ ನಿರ್ದೇಶನ ನೀಡಬೇಕೆಂದು ಕೋರಿ ಸುಪ್ರೀಂಕೋರ್ಟಿಗೆ ಅರ್ಜಿ ಸಲ್ಲಿಸಲಾಗಿದೆ.
ಡಾ. ನಂದ್ ಕಿಶೋರ್ ಗರ್ಗ್ ಎಂಬುವವರು ವಕೀಲ ಶಶಾಂಕ್ ದಿಯೋ ಸುಧಿ ಅವರ ಮೂಲಕ ಸಲ್ಲಿಸಿರುವ ಅರ್ಜಿಯಲ್ಲಿ ಸಂಪೂರ್ಣವಾಗಿ ಎನ್‌ಕ್ರಿಪ್ಟ್ ಮಾಡಿದ ಸುರಕ್ಷಿತ ವಿಧಾನದಲ್ಲಿ ಆನ್‌ಲೈನ್ ತರಗತಿಗಳನ್ನು ನಡೆಸಲು ಸರ್ಕಾರ ಸಮಗ್ರ ಮಾರ್ಗಸೂಚಿಗಳನ್ನು ರೂಪಿಸುವವರೆಗೆ ವರ್ಚುವಲ್ ತರಗತಿಗಳನ್ನು ರದ್ದುಗೊಳಿಸಬೇಕು ಎಂದು ಮನವಿ ಮಾಡಲಾಗಿದೆ.
ಲಾಕ್‌ಡೌನ್ ಅವಧಿಯಲ್ಲಿ ಉಂಟಾದ ಕಲಿಕೆಯ ನಷ್ಟ ತುಂಬಿಕೊಳ್ಳಲು ಎಲ್ಲಾ ಮಕ್ಕಳು ವೀಡಿಯೊ ತರಗತಿಗಳ ಫಲಾನುಭವಿಗಳಾಗುವ ನಿಟ್ಟಿನಲ್ಲಿ ಅವಕಾಶ ವಂಚಿತರು ಹಾಗೂ ಸಮಾಜದಂಚಿನಲ್ಲಿರುವ ಮಕ್ಕಳಿಗೆ ಆನ್‌ಲೈನ್ ತರಗತಿಗಳಿಗೆ ಪರ್ಯಾಯವಾದ ವ್ಯವಸ್ಥೆ ರೂಪಿಸಲು ಮತ್ತು ಕಂಪ್ಯೂಟರ್ ಚಾಲಿತ ಸಾಧನಗಳ ಬಳಕೆ ಸಾಧ್ಯತೆಯನ್ನು ಖಚಿತಪಡಿಸಿಕೊಳ್ಳಲು ವಿಶಾಲ ಕಾರ್ಯವಿಧಾನ ಅಭಿವೃದ್ಧಿಪಡಿಸಬೇಕು.
ಸುಪ್ರೀಂಕೋರ್ಟಿಗೆ ಸಲ್ಲಿಸಲಾದ ಅರ್ಜಿ
ಅರ್ಜಿಯಲ್ಲಿ ಉಲ್ಲೇಖಿಸಿರುವ ಮುಖ್ಯಾಂಶಗಳು ಹೀಗಿವೆ:
ಸೈಬರ್ ಆಕ್ರಮಣಕಾರರಿಗೆ ಮಕ್ಕಳು ಬಲಿಯಾಗುವ ಅಪಾಯ ಹೆಚ್ಚು. ಲಾಕ್‌ಡೌನ್ ಪ್ರೇರಿತ ಆನ್‌ಲೈನ್ ತರಗತಿಗಳಿಂದಾಗಿ ಮಕ್ಕಳು ಅಶ್ಲೀಲ ಸಂಗತಿಗಳು ಅಥವಾ ಸೈಬರ್ ಹ್ಯಾಕರ್ ದಾಳಿಗೆ ತುತ್ತಾಗಬಹುದು.
ನಿರ್ದಿಷ್ಟ ಸಾಫ್ಟ್ ವೇರ್ ಬಳಸಿ ವಿವಿಧ ಸಂಸ್ಥೆಗಳು ಆನ್‌ಲೈನ್ ಪರೀಕ್ಷೆ ನಡೆಸುವಾಗ ಬೇರಾವುದೇ ವಿಂಡೋದಲ್ಲಿ ಪಾಪ್ಅಪ್ ಅಥವಾ ಇನ್ನಾವುದೇ ಅಪ್ಲಿಕೇಷನ್ನುಗಳು ಮೂಡಲು ಅವಕಾಶ ನೀಡದಂತಹ ಸದೃಢ ಸೈಬರ್ ಆಪ್ ಅಭಿವೃದ್ಧಿಪಡಿಸಬೇಕಿದ್ದು ಈ ಸಂಬಂಧ ಕೇಂದ್ರ ಸರ್ಕಾರ, ಮಾನವ ಸಂಪನ್ಮೂಲ ಸಚಿವಾಲಯ, ಸಿಬಿಎಸ್ಇಗೆ ನಿರ್ದೇಶನ ನೀಡಬೇಕು.
ಕಂಪ್ಯೂಟರ್ ಸಾಧನಗಳನ್ನು ಒದಗಿಸಿ ಆ ಮೂಲಕ ಆರ್ಥಿಕವಾಗಿ ದುರ್ಬಲ ವರ್ಗಕ್ಕೆ ಸೇರಿದ ಮಕ್ಕಳು ಕೂಡ ತರಗತಿಗಳಿಗೆ ಪ್ರವೇಶ ಪಡೆಯುತ್ತಿದ್ದಾರೆ ಎಂದು ಖಚಿತಪಡಿಸಿಕೊಳ್ಳಲು ಸೂಕ್ತ ವ್ಯವಸ್ಥೆ ರೂಪಿಸಬೇಕಿದ್ದು ಕೇಂದ್ರ ಸೇರಿದಂತೆ ಪ್ರತಿವಾದಿಗಳಿಗೆ ಈ ಕುರಿತು ನಿರ್ದೇಶನ ನೀಡಬೇಕು.
ತಾತ್ಕಾಲಿಕ ತೀರ್ಪುಗಳು, ನ್ಯಾಯಾಲಯದ ನಿರ್ದೇಶನಗಳು ಮತ್ತಿತರ ಸರ್ಕಾರಿ ಸೂಚನೆಗಳನ್ನು ಹೊರತುಪಡಿಸಿದರೆ ಮಕ್ಕಳ ಆನ್‌ಲೈನ್ ಗೌಪ್ಯತೆ ಸಂರಕ್ಷಣಾ ಕಾಯ್ದೆ (COPPA) ಗೆ ಸಮಾನವಾದ ಕಾನೂನು ಭಾರತದಲ್ಲಿ ಇಲ್ಲದಿರುವುದರಿಂದ, ಆನ್‌ಲೈನ್ ಶಿಕ್ಷಣ ಎಂಬುದು "ಅನಗತ್ಯವಾದ ಮತ್ತು ಲೈಂಗಿಕ ವಿಚಾರಗಳ ಋಣಾತ್ಮಕ ಪರಿಣಾಮಗಳಿಗೆ ಮಕ್ಕಳು ಹೆಚ್ಚು ಒಡ್ಡಿಕೊಂಡಂತೆ ಅದು ಕೂಡ ಹೆಚ್ಚು ಅನಿಶ್ಚಿತ ಮತ್ತು ದುರ್ಬಲವಾಗುತ್ತಿದೆ".
ವೀಡಿಯೊ ಕಾನ್ಫರೆನ್ಸಿಂಗ್ ಮತ್ತಿತರ ಅಪ್ಲಿಕೇಶನ್‌ಗಳ ಮೂಲಕ ಹಠಾತ್ತಾಗಿ ಆನ್‌ಲೈನ್ ತರಗತಿಗಳನ್ನು ಆರಂಭಿಸಿದ್ದರಿಂದ ಆರ್ಥಿಕವಾಗಿ ದುರ್ಬಲವಾದ ವರ್ಗಗಳಿಗೆ ಸೇರಿದ ಮಕ್ಕಳಿಗೆ ತಾರತಮ್ಯ ಎಸಗಿದಂತಾಗಿದೆ.
ಆನ್‌ಲೈನ್ ತರಗತಿಗಳು ಅಸಮತೋಲನದಿಂದ ಕೂಡಿದ್ದು ಶ್ರೀಮಂತ ವರ್ಗದ ಮಕ್ಕಳಿಗೆ ಸೀಮಿತವಾಗಿವೆ. ದುರ್ಬಲ ವರ್ಗದ ಮಕ್ಕಳು ಆನ್‌ಲೈನ್ ತರಗತಿಗಳ ಪ್ರಯೋಜನಗಳಿಂದ ವಂಚಿತರಾಗಿದ್ದಾರೆ.