ಸೆಪ್ಟೆಂಬರ್ 12, 2021 ರಂದು ನಡೆದ ನೀಟ್ ಪದವಿ ಪ್ರವೇಶ ಪರೀಕ್ಷೆ (NEET UG) ರದ್ದುಗೊಳಿಸುವಂತೆ ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದ್ದು, ಪರೀಕ್ಷೆ ವೇಳೆ ವಂಚನೆ, ಅಕ್ರಮ, ಅಭ್ಯರ್ಥಿಯ ಪರ ಬೇರೊಬ್ಬರು ಉತ್ತರ ಬರೆದಿರುವುದು, ಪ್ರಶ್ನೆಪತ್ರಿಕೆ ಸೋರಿಕೆಯಂತಹ ಘಟನೆಗಳು ನಡೆದಿವೆ ಎಂದು ಆರೋಪಿಸಲಾಗಿದೆ (ವಿಶ್ವನಾಥ್ ಕುಮಾರ್ ಮತ್ತು ಎನ್‌ಟಿಎ ನಡುವಣ ಪ್ರಕರಣ).
ರಾಜಸ್ಥಾನ ಹಾಗೂ ಉತ್ತರ ಪ್ರದೇಶ ಸರ್ಕಾರಗಳು ಪರೀಕ್ಷೆಯಲ್ಲಿ ನಡೆದಿರುವ ಅವ್ಯವಹಾರಗಳ ಕುರಿತು ಸತ್ಯಶೋಧನೆ ವರದಿ ಸಲ್ಲಿಸಲು ಸಿಬಿಐಗೆ ನಿರ್ದೇಶನ ನೀಡಬೇಕು ಎಂದು ಹದಿಮೂರು ನೀಟ್ ಪರೀಕ್ಷಾ ಅಭ್ಯರ್ಥಿಗಳು ಸಲ್ಲಿಸಿರುವ ಅರ್ಜಿಯಲ್ಲಿ ಕೋರಲಾಗಿದೆ. ಅಲ್ಲದೆ ಹೊಸತಾಗಿ ಪರೀಕ್ಷೆ ನಡೆಸುವಂತೆ ಮನವಿ ಮಾಡಲಾಗಿದೆ.
ವಿದ್ಯಾರ್ಥಿಗಳು ಕಾನೂನುಬಾಹಿರವಾಗಿ ಪ್ರಯೋಜನ ಪಡೆದರೂ, ಅದು ಅನ್ಯಾಯ ಉಂಟುಮಾಡುತ್ತದೆ. ಅರ್ಜಿದಾರರು ಪ್ರಮಾಣಿತ ಭದ್ರತಾ ಮಾರ್ಗಸೂಚಿಗಳು ಮತ್ತು ವಿದ್ಯಾರ್ಥಿಗಳ ಬಯೋಮೆಟ್ರಿಕ್ ದೃಢೀಕರಣದಲ್ಲಿ ಸುಧಾರಣೆ ತರಬೇಕು ಎಂದು ವಕೀಲರಾದ ಮಮತಾ ಶರ್ಮಾ ಅವರ ಮೂಲಕ ಸಲ್ಲಿಸಿರುವ ಅರ್ಜಿ ತಿಳಿಸಿದೆ. ಅರ್ಜಿ ವಿಲೇವಾರಿ ಮಾಡುವವರೆಗೆ ನೀಟ್ ಯುಜಿ- 2021ರ ಫಲಿತಾಂಶಗಳ ಘೋಷಣೆಗೆ ತಡೆ ನೀಡುವಂತೆ ಮನವಿಯಲ್ಲಿ ಕೋರಲಾಗಿದೆ.