

ಸುಪ್ರೀಂ ಕೋರ್ಟ್‌ನಲ್ಲಿ ಸಿಎಲ್‌ಎಟಿ 2026 ಪ್ರಶ್ನೆಪತ್ರಿಕೆ ಸೋರಿಕೆ ಆರೋಪಗಳ ಕುರಿತು ಸ್ವತಂತ್ರ ಹಾಗೂ ಕಾಲಮಿತಿಯೊಳಗೆ ತನಿಖೆ ನಡೆಸುವಂತೆ ಕೋರಿ ಅರ್ಜಿ ಸಲ್ಲಿಸಲಾಗಿದೆ [ಲಲಿತ್ ಪ್ರತಾಪ್ ಸಿಂಗ್ ಮತ್ತಿತರರು ಹಾಗೂ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯಗಳ ಒಕ್ಕೂಟ ನಡುವಣ ಪ್ರಕರಣ].
ವಾಟ್ಸಾಪ್, ಟೆಲಿಗ್ರಾಂ ಇನ್ನಿತರೆ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ವಿಡಿಯೋಗಳು, ಚಿತ್ರಗಳು ಹಾಗೂ ಇತರೆ ಡಿಜಿಟಲ್ ವಸ್ತುವಿಷಯಗಳು, ಪರೀಕ್ಷೆಗೆ ಮುನ್ನವೇ ಪ್ರಶ್ನೆಪತ್ರಿಕೆ ಮತ್ತು ಉತ್ತರ ಕೀ ಅನ್ನು ಅಕ್ರಮವಾಗಿ ಪಡೆದು ಹಂಚಿಕೊಳ್ಳಲಾಗಿದೆ ಎಂಬುದನ್ನು ಹೇಳುತ್ತಿವೆ ಎಂದು ಅರ್ಜಿ ದೂರಿದೆ.
ಆರೋಪ ಸತ್ಯವೆಂದು ಕಂಡುಬಂದಲ್ಲಿ, ಸ್ವತಂತ್ರ ಸಮಿತಿಯ ನೇತೃತ್ವದಲ್ಲಿ ಹೊಸದಾಗಿ ಸಿಎಲ್‌ಎಟಿ ಪರೀಕ್ಷೆ ನಡೆಸುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡಬೇಕೆಂದು ಮನವಿ ಮಾಡಲಾಗಿದೆ.
ಅನುಸೂಚಿತ ಜಾತಿ, ಇತರೆ ಹಿಂದುಳಿದ ವರ್ಗಗಳು ಹಾಗೂ ಆರ್ಥಿಕವಾಗಿ ಹಿಂದುಳಿದ ಹಿನ್ನೆಲೆಯ ಕಾನೂನು ಅಭ್ಯರ್ಥಿಗಳ ಸಮೂಹವೊಂದು ಅರ್ಜಿ ಸಲ್ಲಿಸಿದ್ದು ಸಾವಿರಾರು ನೈಜ ಅಭ್ಯರ್ಥಿಗಳಿಗೆ ಇದರಿಂದ ಅನ್ಯಾಯವಾಗಿದೆ. ಅವರು ಹಿನ್ನಡೆ ಅನುಭವಿಸಿದ್ದಾರೆ ಎಂದು ಅರ್ಜಿ ಉಲ್ಲೇಖಿಸಿದೆ.
ಅರ್ಜಿಯ ಪ್ರಮುಖಾಂಶಗಳು
ಪರೀಕ್ಷೆಗೆ ಸುಮಾರು 15 ಗಂಟೆಗಳ ಮೊದಲು ಪ್ರಶ್ನೆಪತ್ರಿಕೆ ಸೋರಿಕೆಯಾಗಿದೆ ಎಂಬ ಅನುಮಾನ ಮೂಡಿದೆ.
ಹಣ ಕೊಟ್ಟರೆ ಪ್ರಶ್ನೆಪತ್ರಿಕೆ ನೀಡುವ ಆಫರ್‌ಗಳು ಕೆಲ ಸ್ಕ್ರೀನ್‌ಶಾಟ್‌ಗಳಲ್ಲಿ ಕಂಡುಬಂದಿವೆ.
ಸೋರಿಕೆಗೆ ಸಂಬಂಧಿಸಿದ ದೃಶ್ಯಾವಳಿಗಳು ನೈಜ ಎಂಬುದಕ್ಕೆ ಸಾಕ್ಷಿ ಇದೆ.
ಸೋರಿಕೆಯಿಂದ ಪರೀಕ್ಷೆಯ ಪಾವಿತ್ರ್ಯ ಮತ್ತು ಸಮಾನ ಅವಕಾಶದ ತತ್ವಕ್ಕೆ ಧಕ್ಕೆ ಉಂಟಾಗಿದೆ
ಸಂಬಂಧಪಟ್ಟವರು ತಳೆದಿರುವ ಮೌನದಿಂದಾಗಿ ಪರೀಕ್ಷೆ ಬಗೆಗಿನ ಸಾರ್ವಜನಿಕ ವಿಶ್ವಾಸ ಕುಸಿದಿದೆ.
ಇಂತಹ ಪರೀಕ್ಷೆ ನಡೆಸುವವರು ಪಾರದರ್ಶಕತೆ ಮತ್ತು ನೈತಿಕತೆಯನ್ನು ಕಾಪಾಡುವ ಸಂವಿಧಾನಾತ್ಮಕ ಕರ್ತವ್ಯ ನಿಭಾಯಿಸಬೇಕಾಗುತ್ತದೆ.
ಸೋರಿಕೆ ತನಿಖೆ ಪರಿಶೀಲಿಸಲು ಸ್ವತಂತ್ರ ಸಮಿತಿ ನೇಮಕ ಮಾಡಬೇಕು.
ಆರೋಪಗಳು ಸತ್ಯವೆಂದು ಕಂಡುಬಂದರೆ CLAT 2026 ರದ್ದುಗೊಳಿಸಿ ಮರುಪರೀಕ್ಷೆ ನಡೆಸಬೇಕು.
ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯಡಿ ಮರುಪರೀಕ್ಷೆ ನಡೆಸಬೇಕು.
ಜನವರಿ 7ರಿಂದ ಕೌನ್ಸೆಲಿಂಗ್ ಮತ್ತು ಸೀಟ್ ಹಂಚಿಕೆ ಆರಂಭವಾಗಲಿರುವುದರಿಂದ, ಪ್ರಸ್ತುತ ಫಲಿತಾಂಶ ಮುಂದುವರಿಸಿದರೆ ಸರಿಪಡಿಸಲಾಗದಷ್ಟು ಹಾನಿ ಉಂಟಾಗುತ್ತದೆ.