ಲೋಕಸಭೆ ಚುನಾವಣೆ ಮತದಾನೋತ್ತರ ಸಮೀಕ್ಷೆ ಬಳಿಕ ನಡೆದ ಷೇರು ಮಾರುಕಟ್ಟೆ ಕುಸಿತ ಮತ್ತು ಅದರಿಂದ ಹೂಡಿಕೆದಾರರರಿಗೆ ಉಂಟಾದ ನಷ್ಟದ ಬಗ್ಗೆ ವಿವರವಾದ ವರದಿ ಸಲ್ಲಿಸಲು ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ (ಸೆಬಿ) ಮತ್ತು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ [ವಿಶಾಲ್ ತಿವಾರಿ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ].
ಈಗಾಗಲೇ ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಇರುವ ಅದಾನಿ-ಹಿಂಡೆನ್‌ಬರ್ಗ್ ಪ್ರಕರಣಕ್ಕೆ ಸಂಬಂಧಿಸಿದಂತೆಯೇ ಈ ಅರ್ಜಿ ಸಲ್ಲಿಸಲಾಗಿದೆ.
ಭಾರತೀಯ ಷೇರುಮಾರುಕಟ್ಟೆಯಲ್ಲಿ ಅಲ್ಲೋಲ ಕಲ್ಲೋಲ ಮತ್ತು ಹೂಡಿಕೆದಾರರ ನಷ್ಟಕ್ಕೆ ಕಾರಣವಾಗಿದ್ದ ಅಮೆರಿಕ ಮೂಲದ ಹಿಂಡೆನ್‌ಬರ್ಗ್ ರಿಸರ್ಚ್ ನಡೆಯಲ್ಲಿ ಕಾನೂನು ಉಲ್ಲಂಘನೆಯಾಗಿದೆಯೇ ಎಂಬುದನ್ನು ಪತ್ತೆ ಮಾಡುವಂತೆ ಸುಪ್ರೀಂ ಕೋರ್ಟ್ ಸೆಬಿ ಮತ್ತು ಕೇಂದ್ರ ಸರ್ಕಾರಕ್ಕೆ ಕಳೆದ ಜನವರಿ 3ರಂದು ಸೂಚಿಸಿತ್ತು.
ಅದಾನಿ ಸಮೂಹದ ಕಂಪನಿಗಳ ವಿರುದ್ಧ ಹಿಂಡೆನ್‌ಬರ್ಗ್ ಸಂಶೋಧನೆ ಆರೋಪಿಸಿದ್ದ ಷೇರು ಮಾರುಕಟ್ಟೆ ತಿರುಚುವಿಕೆಗೆ ಸಂಬಂಧಿಸಿದಂತೆ ಯಾವುದೇ ಕ್ರಮ ತೆಗೆದುಕೊಳ್ಳುವ ಅಗತ್ಯವಿಲ್ಲ ಎಂದು ನ್ಯಾಯಾಲಯ ತೀರ್ಮಾನಿಸಿದ ನಂತರ ಈ ಆದೇಶ ನೀಡಲಾಗಿತ್ತು.
ಹೂಡಿಕೆದಾರರ ಹಿತಾಸಕ್ತಿ ರಕ್ಷಿಸಲು ಮತ್ತು ಸೆಬಿಯನ್ನು ಬಲಪಡಿಸುವ ನಿಟ್ಟಿನಲ್ಲಿ ಈ ಹಿಂದೆ ತಾನು ನೇಮಿಸಿದ್ದ (ನ್ಯಾ. ಎ ಎಂ ಸಪ್ರೆ ನೇತೃತ್ವದ) ತಜ್ಞರ ಸಮಿತಿಯ ಶಿಫಾರಸುಗಳನ್ನು ಪರಿಗಣಿಸುವಂತೆ ಸೆಬಿ ಮತ್ತು ಸರ್ಕಾರಕ್ಕೆ ಆಗ ನ್ಯಾಯಾಲಯ ಸೂಚಿಸಿತ್ತು.
ಜೂನ್ 4ರ ಲೋಕಸಭೆ ಮತದಾನೋತ್ತರ ಸಮೀಕ್ಷೆ ಬಳಿಕ ಷೇರುಪೇಟೆ ಕುಸಿತ ಕುರಿತಂತೆ ನ್ಯಾಯವಾದಿ ವಿಶಾಲ್ ತಿವಾರಿ ಅವರು ಸಲ್ಲಿಸಿರುವ ಅರ್ಜಿಯಲ್ಲಿ ನ್ಯಾಯಾಲಯದ ಆದೇಶಕ್ಕನುಗುಣವಾಗಿ ಬಾಕಿ ಉಳಿದ ತನಿಖೆಯನ್ನು ಸೆಬಿ ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ದಾಖಲೆ ಸಲ್ಲಿಸಿದೆಯೇ ಎಂಬುದು ಅಸ್ಪಷ್ಟವಾಗಿ ಉಳಿದಿದೆ. ಅದನ್ನು ಸೆಬಿ ಮರೆ ಮಾಚುವಂತಿಲ್ಲ, ಇಲ್ಲವೆ ನನೆಗುದಿಗೆ ಹಾಕುವಂತಿಲ್ಲ ಎಂದು ತಿಳಿಸಲಾಗಿದೆ.
ತಜ್ಞರ ಸಮಿತಿಯ ಶಿಫಾರಸುಗಳನ್ನು ಸರ್ಕಾರ ಪರಿಗಣಿಸಿದೆಯೇ ಎಂಬುದು ಕೂಡ ಅಸ್ಪಷ್ಟವಾಗಿದೆ ಎಂದು ಅರ್ಜಿ ಇದೇ ವೇಳೆ ದೂರಿದೆ.
ಮತದಾನೋತ್ತರ ಸಮೀಕ್ಷೆಗಳು ಪ್ರಕಟವಾದ ದಿನ ಷೇರು ಮಾರುಕಟ್ಟೆ ಜಿಗಿತ ಕಂಡಿತಾದರೂ ವಾಸ್ತವಿಕ ಫಲಿತಾಂಶ ಪ್ರಕಟವಾದಾಗ ಕುಸಿಯಿತು. 2023ರ ಷೇರು ಮಾರುಕಟ್ಟೆ ಕುಸಿತದ ನಂತರವೂ ಸೆಬಿ ಮತ್ತು ವ್ಯವಸ್ಥೆ ವಿಫಲವಾಗಿದೆಯೇ ಮತ್ತು ಆ ವ್ಯವಸ್ಥೆಯನ್ನು ಈಗಲೂ ಬಲಪಡಿಸಿಲ್ಲವೇ, ಮತದಾನೋತ್ತರ ಸಮೀಕ್ಷೆ ಬಳಿಕ ಮತ್ತೆ ಅಕ್ರಮ ನಡೆದಿದೆಯೇ ಎಂಬ ಪ್ರಶ್ನೆಯನ್ನು ಇದು ಹುಟ್ಟುಹಾಕಿದೆ ಎಂದು ಅರ್ಜಿ ಹೇಳಿದೆ.