ಅನರ್ಹ ಅಭ್ಯರ್ಥಿಗಳ ಉಪಚುನಾವಣೆ ಸ್ಪರ್ಧೆ ನಿಷೇಧ ಪ್ರಕರಣ: ಕೇಂದ್ರ, ಆಯೋಗದ ಪ್ರತಿಕ್ರಿಯೆ ಕೇಳಿದ ಸುಪ್ರೀಂ ಕೋರ್ಟ್‌

ಸದನದ ಸದಸ್ಯ ಸ್ವಚ್ಛೆಯಿಂದ ರಾಜಕೀಯ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದರೂ ಅವರು 10ನೇ ಷೆಡ್ಯೂಲ್‌ ವ್ಯಾಪ್ತಿಗೆ ಬರುವುದರಿಂದ ಅನರ್ಹತೆಗೆ ತುತ್ತಾಗುತ್ತಾರೆ ಎಂದು ಅರ್ಜಿಯಲ್ಲಿ ಹೇಳಲಾಗಿತ್ತು.
Election Commission
Election Commission

ಸಂವಿಧಾನದ 10ನೇ ಷೆಡ್ಯೂಲ್‌ ಅನ್ವಯ ಸದನದ ಸದಸ್ಯತ್ವದಿಂದ ಅನರ್ಹಗೊಂಡ ಅಭ್ಯರ್ಥಿಗಳು ಮತ್ತೆ ತಾವು ಆಯ್ಕೆಗೊಂಡಿದ್ದ ಸದನದ ಅವಧಿಗೆ ಉಪಚುನಾವಣೆಯಲ್ಲಿ ಸ್ಪರ್ಧಿಸದ ಹಾಗೆ ನಿಷೇಧಿಸುವಂತೆ ಕೋರಿ ಸಲ್ಲಿಸಲಾಗಿದ್ದ ಮನವಿಗೆ ಸಂಬಂಧಿಸಿದಂತೆ ಗುರುವಾರ ಕೇಂದ್ರ ಸರ್ಕಾರ ಮತ್ತು ಭಾರತೀಯ ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್‌ ನೋಟಿಸ್‌ ಜಾರಿಗೊಳಿಸಿದ್ದು, ಪ್ರತಿಕ್ರಿಯಿಸುವಂತೆ ಸೂಚಿಸಿದೆ.

ಸಂವಿಧಾನದ 10ನೇ ಷೆಡ್ಯೂಲ್‌ನ 2ನೇ ಪ್ಯಾರಾವನ್ನು ಸಂವಿಧಾನದ 191(1) (ಇ) ವಿಧಿಯ ಜೊತೆಗಿರಿಸಿ ಗಮನಿಸುವ ಮುಖೇನ ಜಾರಿಗೊಳಿಸುವಂತೆ ಮಧ್ಯಪ್ರದೇಶದ ಕಾಂಗ್ರೆಸ್‌ ನಾಯಕ ಜಯ ಠಾಕೂರ್‌ ಮನವಿ ಮಾಡಿದ್ದಾರೆ.

“10ನೇ ಷೆಡ್ಯೂಲ್‌ ಅನ್ವಯ ಸದಸ್ಯರೊಬ್ಬರು ಅನರ್ಹತೆಗೆ ಒಳಗಾದರೆ ಅವರು ಆಯ್ಕೆಯಾದ ಸದನದ ಅವಧಿಗೇ ಮತ್ತೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಬಾರದು. ಕೆಲವೊಂದು ಸನ್ನಿವೇಶಗಳನ್ನು ಹೊರತುಪಡಿಸಿದಂತೆ ಸಂವಿಧಾನದ ೧೭೨ನೇ ವಿಧಿಯು ಶಾಸನಸಭೆಯ ಸದಸ್ಯತ್ವದ ಅವಧಿಯನ್ನು ಶಾಸನಸಭೆಯ ಐದು ವರ್ಷದ ಅವಧಿಯ ಜೊತೆಗೇ ಸಮೀಕರಿಸಿದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

ಬಹುಮುಖ್ಯವಾಗಿ, ಸದನದ ಸದಸ್ಯ ಸ್ವಯಂಪ್ರೇರಿತವಾಗಿ ರಾಜಕೀಯ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದರೂ ಅವರು 10ನೇ ಷೆಡ್ಯೂಲ್‌ ವ್ಯಾಪ್ತಿಗೆ ಒಳಪಡುತ್ತಾರೆ. ಹೀಗಾಗಿ ಸಂವಿಧಾನದ 191(1) (ಇ) ವಿಧಿಯಡಿ ಅನರ್ಹತೆಗೆ ಒಳಗಾಗುತ್ತಾರೆ ಎಂದು ಠಾಕೂರ್‌ ವಾದಿಸಿದ್ದಾರೆ.

ದೇಶಾದ್ಯಂತ ರಾಜಕೀಯ ಪಕ್ಷಗಳು 10ನೇ ಷೆಡ್ಯೂಲ್‌ ನಿಬಂಧನೆಗಳನ್ನು ನಿರೂಪಿಸಿ, ಆ ಮೂಲಕ ಆಡಳಿತ ಪಕ್ಷದ ಶಾಸಕರುಗಳು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಮಾಡಿ ಸರ್ಕಾರ ಉರುಳುವಂತೆ ಮಾಡುತ್ತವೆ. ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದವರಿಗೆ ಹೊಸ ಸರ್ಕಾರದಲ್ಲಿ ಸಚಿವ ಸ್ಥಾನ ಕಲ್ಪಿಸುವುದರ ಜೊತೆಗೆ ಉಪಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್‌ ನೀಡಲಾಗುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ಮಣಿಪುರ, ಕರ್ನಾಟಕ ಮತ್ತು ಮಧ್ಯಪ್ರದೇಶದಲ್ಲಾದ ಬೆಳವಣಿಗೆಗಳನ್ನು ಅರ್ಜಿದಾರರು ಉದಾಹರಣೆ ಸಹಿತ ವಿವರಿಸಿದ್ದಾರೆ.

“ಕರ್ನಾಟಕದಲ್ಲಿ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ 17 ಶಾಸಕರನ್ನು ಸ್ಪೀಕರ್‌ ಪಕ್ಷ ವಿರೋಧಿ ಚಟುವಟಿಕೆ ಅಡಿ ಅನರ್ಹಗೊಳಿಸಿದ್ದರು. ಈ ಪೈಕಿ ಬಹುತೇಕರು ಉಪಚುನಾವಣೆಯಲ್ಲಿ ಸ್ಪರ್ಧಿಸಿದ್ದು, 11 ಮಂದಿ ಪುನರಾಯ್ಕೆಯಾಗಿದ್ದಾರೆ. ಹಿಂದಿನ ಸರ್ಕಾರ ಉರುಳಿದ ಬಳಿಕ ರಚನೆಯಾದ ಹೊಸ ಸರ್ಕಾರದಲ್ಲಿ ಈ ಪೈಕಿ ಹತ್ತು ಮಂದಿ ಸಚಿವರಾಗಿದ್ದಾರೆ. ಈಚೆಗೆ ಮಧ್ಯಪ್ರದೇಶದಲ್ಲಿ ಒಂದು ಪಕ್ಷದಿಂದ ವಿಧಾನಸಭೆಗೆ ಆಯ್ಕೆಯಾಗಿದ್ದ ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ, ಮತ್ತೊಂದು ಪಕ್ಷಕ್ಕೆ ಸೇರ್ಪಡೆಯಾದರು. ಶಾಸಕರಾಗಿ ಆಯ್ಕೆಯಾಗುವುದಕ್ಕೂ ಮುನ್ನವೇ ಅವರನ್ನು ಸಚಿವರನ್ನಾಗಿ ನೇಮಕ ಮಾಡಲಾಗಿದೆ,” ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

10ನೇ ಷೆಡ್ಯೂಲ್‌ ಜಾರಿಗೆ ಬಂದು ಆ ಸದಸ್ಯ ಅನರ್ಹಗೊಂಡು ಆ ಸ್ಥಾನ ಖಾಲಿಯಾದರೆ, ಆ ನಿರ್ದಿಷ್ಟ ಸದನದ ಸದಸ್ಯ 191(1) (ಇ) ವಿಧಿಯಡಿ ಅನರ್ಹತೆಗೆ ಒಳಗಾಗುತ್ತಾರೆ. ಆ ಬಳಿಕ ಆತ/ಆಕೆಯು ಸದನದ ಆ ಅವಧಿಯಲ್ಲಿ ಆಯ್ಕೆಯಾಗದಂತೆ ಬಹಿಷ್ಕರಿಸಬೇಕು ಎಂದು ಠಾಕೂರ್‌ ಮನವಿ ಮಾಡಿದ್ದಾರೆ.

Also Read
ಮತದಾನಕ್ಕಾಗಿ ಹಿರಿಯ ನಾಗರಿಕರಿಗೆ ಸರತಿ ಸಾಲಿನಿಂದ ವಿನಾಯತಿ ನೀಡಲು ಕ್ರಮಕ್ಕೆ ಸೂಚಿಸಿದ ಕೇಂದ್ರ ಚುನಾವಣಾ ಆಯೋಗ

“10ನೇ ಷೆಡ್ಯೂಲ್‌ನ 2ನೇ ಪ್ಯಾರಾದಲ್ಲಿ “ಸದನದ ಸದಸ್ಯರಾಗಲು ಅನರ್ಹಗೊಳಿಸಲಾಗಿದೆ” ಎಂಬುದನ್ನು ಸ್ಪಷ್ಟವಾದ ಪದಗಳನ್ನು ಬಳಸಿ ಹೇಳಲಾಗಿದೆ. ಸದನದ (ಸಂಸತ್ತು ಅಥವಾ ವಿಧಾನಸಭೆ) ಅವಧಿಯು ಐದು ವರ್ಷಗಳಾಗಿರುತ್ತವೆ. ಇಲ್ಲಿ 'ಸದನ' ಎಂದರೆ ಪ್ರಶ್ನೆಗೆ ಒಳಗಾಗಿರುವ, ಸಾಮಾನ್ಯ ಸಂದರ್ಭದಲ್ಲಿ ಐದು ವರ್ಷಗಳ ಅವಧಿ ಹೊಂದಿರುವ ನಿರ್ದಿಷ್ಟ ಸದನವಾಗಿರುತ್ತದೆ” ಎಂದು ಮನವಿಯಲ್ಲಿ ವಿವರಿಸಲಾಗಿದೆ.

ಮುಖ್ಯ ನ್ಯಾಯಮೂರ್ತಿ ಎಸ್‌ ಎ ಬೊಬ್ಡೆ, ನ್ಯಾಯಮೂರ್ತಿಗಳಾದ ಎ ಎಸ್‌ ಬೋಪಣ್ಣ ಮತ್ತು ವಿ ರಾಮಸುಬ್ರಮಣಿಯನ್‌ ಅವರಿದ್ದ ಪೀಠವು ನೋಟಿಸ್‌ ಜಾರಿಗೊಳಿಸಿದ್ದು, ನಾಲ್ಕು ವಾರಗಳಲ್ಲಿ ಪ್ರತಿಕ್ರಿಯಿಸುವಂತೆ ಸೂಚಿಸಿದೆ.

Related Stories

No stories found.
Kannada Bar & Bench
kannada.barandbench.com