ಎಸ್‌ಎಸ್‌ಎಲ್‌ಸಿ ಪರೀಕ್ಷೆ ರದ್ದುಗೊಳಿಸಲು ಕೋರಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲೇನಿದೆ?

ಒಂದೋ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳನ್ನು ರದ್ದುಗೊಳಿಸಬೇಕು ಇಲ್ಲವೇ ಎಲ್ಲ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳನ್ನು ತೇರ್ಗಡೆ ಮಾಡಲು ಸೂಕ್ತ ಪರ್ಯಾಯ ಪರಿಹಾರೋಪಾಯ ಹುಡುಕಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.
Karnataka High Court, SSLC Examination 2021
Karnataka High Court, SSLC Examination 2021
Published on

ಎಸ್‌ಎಸ್ಎಲ್‌ಸಿ ಪರೀಕ್ಷೆಯನ್ನು ಜುಲೈ 19 ಹಾಗೂ 20ರಂದು ನಡೆಸುವ ರಾಜ್ಯ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ಕರ್ನಾಟಕ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ (ಪಿಐಎಲ್‌) ಅರ್ಜಿ ದಾಖಲಾಗಿದ್ದು ಅದರಲ್ಲಿ ಉಲ್ಲೇಖಿಸಲಾಗಿರುವ ಪ್ರಮುಖ ಅಂಶಗಳ ವಿವರ ಇಲ್ಲಿದೆ.

ಸಿಂಗ್ರೇ ಗೌಡ ಎನ್ನುವವರು ಅರ್ಜಿ ಸಲ್ಲಿಸಿದ್ದು ಕೋವಿಡ್‌ ಸಾಂಕ್ರಾಮಿಕತೆಯ ಹಿನ್ನೆಲೆಯಲ್ಲಿ ಮಕ್ಕಳು ಆನ್ಲೈನ್‌ ತರಗತಿಗಳ ಮೂಲಕ ಪಠ್ಯವನ್ನು ಅರ್ಥಮಾಡಿಕೊಳ್ಳುವಲ್ಲಿ ಕಷ್ಟಪಡುತ್ತಿದ್ದಾರೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.

ಅರ್ಜಿಯಲ್ಲಿ ಉಲ್ಲೇಖಿಸಲಾಗಿರುವ ಪ್ರಮುಖ ಅಂಶಗಳು ಹೀಗಿವೆ:

  • ಅನೇಕ ಶಾಲೆಗಳಲ್ಲಿ ಆನ್‌ಲೈನ್‌ ತರಗತಿಗಳನ್ನು ಸೂಕ್ತ ರೀತಿಯಲ್ಲಿ ನಡೆಸಲಾಗಿಲ್ಲ.

  • ಗ್ರಾಮೀಣ ಪ್ರದೇಶಗಳಲ್ಲಿ ವಿಡಿಯೋ ಕಾನ್ಫೆರೆನ್ಸ್‌‌ ಮೂಲಕ ತರಗತಿಗಳನ್ನು ನಡೆಸಲು ಸೂಕ್ತ ಸೌಕರ್ಯವಿಲ್ಲ. ಕೆಲ ಪ್ರದೇಶಗಳಲ್ಲಿಯಂತೂ ಒಂದೇ ಒಂದು ತರಗತಿಯನ್ನೂ ನಡೆಸಲಾಗಿಲ್ಲ.

  • ದ್ವಿತೀಯ ಪಿಯುಸಿ ಪರೀಕ್ಷೆಗಳನ್ನು ಕೋವಿಡ್‌ ಹಿನ್ನೆಲೆಯಲ್ಲಿ ರದ್ದುಪಡಿಸಲಾಗಿದ್ದು ಎಲ್ಲ ವಿದ್ಯಾರ್ಥಿಗಳನ್ನೂ ಹತ್ತನೇ ತರಗತಿ ಮತ್ತು ಪ್ರಥಮ ಪಿಯುಸಿ ಅಂಕಗಳ ಆಧಾರದಲ್ಲಿ ತೇರ್ಗಡೆ ಮಾಡಲಾಗಿದೆ. ಇದೇ ರೀತಿ, ಎಸ್ಎಸ್‌ಎಲ್‌ಸಿ ವಿದ್ಯಾರ್ಥಿಗಳನ್ನೂ ಕೂಡ ಪೂರ್ವಭಾವಿ ಪರೀಕ್ಷೆಯ ಅಂಕಗಳು ಹಾಗೂ ಒಂಭತ್ತನೇ ತರಗತಿಯ ಅಂಕಗಳ ಆಧಾರದಲ್ಲಿ ತೇರ್ಗಡೆ ಮಾಡಲು ಸರ್ಕಾರಕ್ಕೆ ಯಾವುದೇ ಅಡ್ಡಿ ಇಲ್ಲ.

  • 1 ರಿಂದ 18 ವರ್ಷದ ವಯೋಮಾನದವರಿಗೆ ಲಸಿಕೆಯನ್ನು ನೀಡಲಾಗಿಲ್ಲ. ರಾಜ್ಯದಲ್ಲಿ ಇದಾಗಲೇ ಹೊಸ ಮಾದರಿಯ ಕೋವಿಡ್‌ -19 ಡೆಲ್ಟಾ ವೈರಸ್‌ ಪ್ಲಸ್‌ ಪತ್ತೆಯಾಗಿದೆ. ಇಂತಹ ಸನ್ನಿವೇಶದಲ್ಲಿ ಪರೀಕ್ಷೆಯನ್ನು ನಡೆಸುವುದು ಎಂದರೆ ವೈರಸ್‌ಗೆ ಮಕ್ಕಳನ್ನು ಮುಕ್ತವಾಗಿಸಿದಂತಾಗುತ್ತದೆ.

  • ಅನೇಕ ಪೋಷಕರು ಒಂದೇ ಮಗುವನ್ನು ಹೊಂದಿದ್ದು, ಆ ಮಗುವಿಗೆ ಏನಾದರೂ ಆದರೆ ಮಗುವಿನ ಜೀವವನ್ನು ರಾಜ್ಯ ಸರ್ಕಾರವು ಮರಳಿ ತರಬಲ್ಲದೇ? ಈ ಹಿನ್ನೆಲೆಯಲ್ಲಿ ಪರೀಕ್ಷೆಯನ್ನು ರದ್ದುಗೊಳಿಸುವುದು ಅತ್ಯಂತ ಅವಶ್ಯಕವಾಗಿದೆ.

ಮೇಲಿನ ಕಾರಣಗಳ ಹಿನ್ನೆಲೆಯಲ್ಲಿ ಒಂದೋ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳನ್ನು ರದ್ದುಗೊಳಿಸಬೇಕು ಇಲ್ಲವೇ ಎಲ್ಲ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳನ್ನು ತೇರ್ಗಡೆ ಮಾಡಲು ಸೂಕ್ತ ಪರ್ಯಾಯ ಪರಿಹಾರೋಪಾಯ ಹುಡುಕಬೇಕು. ಇದನ್ನೇ ಮರುಪರೀಕ್ಷೆ ಬರೆಯುತ್ತಿರುವವರಿಗೂ ಅನ್ವಯಿಸಬೇಕು ಎಂದು ಕೋರಲಾಗಿದೆ. ಅಂಕಗಳನ್ನು ನೀಡಲು 8, 9 ನೇ ತರಗತಿಯ ಪರೀಕ್ಷಾ ಅಂಕಗಳು ಹಾಗೂ 10ನೇ ತರಗತಿಯ ಪೂರ್ವಭಾವಿ ಪರೀಕ್ಷೆಯ ಅಂಕಗಳನ್ನು ಪರಿಗಣಿಸುವಂತೆಯೂ ಮನವಿ ಮಾಡಲಾಗಿದೆ.

ಇದೂ ಸಾಧ್ಯವಿಲ್ಲವಾದರೆ, ಇತರೆ ರಾಜ್ಯಗಳು ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳನ್ನು ತೇರ್ಗಡೆ ಮಾಡಲು ಅನುಸರಿಸುವ ಮಾನದಂಡವನ್ನು ಅನುಸರಿಸುವಂತೆಯೂ ಕೋರಲಾಗಿದೆ.

ಪ್ರಕರಣದ ವಿಚಾರಣೆಯನ್ನು ಮುಂದಿನ ವಾರ ಕೈಗೊಳ್ಳುವ ನಿರೀಕ್ಷೆ ಇದೆ.

Kannada Bar & Bench
kannada.barandbench.com