ಸ್ಥಳೀಯ ಸಂಸ್ಥೆ ಸದಸ್ಯರ ಪಕ್ಷಾಂತರದ ವಿರುದ್ಧ ಅರ್ಜಿ: ಮತದಾರರಿಗೆ ಅವಕಾಶ ನೀಡಲು ಕೇರಳ ಹೈಕೋರ್ಟ್‌ಗೆ ಮನವಿ

ಈ ಸಂಬಂಧ ರಾಜ್ಯ ಸರ್ಕಾರ ಮತ್ತು ರಾಜ್ಯ ಚುನಾವಣಾ ಆಯೋಗಕ್ಕೆ ನ್ಯಾಯಮೂರ್ತಿ ಮೊಹಮ್ಮದ್ ನಿಯಾಸ್ ಸಿ ಪಿ ಅವರು ನೋಟಿಸ್ ಜಾರಿ ಮಾಡಿದ್ದಾರೆ.
Kerala High Court
Kerala High Court
Published on

ಪಕ್ಷಾಂತರಗೊಂಡ ಸ್ಥಳೀಯ ಸಂಸ್ಥೆಗಳ ಚುನಾಯಿತ ಸದಸ್ಯರನ್ನು ಅನರ್ಹಗೊಳಿಸಲು ಮತದಾರರಿಗೆ ಅವಕಾಶ ನೀಡದ ಕೇರಳ ಸ್ಥಳೀಯ ಸಂಸ್ಥೆಗಳ (ಪಕ್ಷಾಂತರ ನಿಷೇಧ) ಕಾಯಿದೆ-1999ರ ಸೆಕ್ಷನ್ 4ನ್ನು ಪ್ರಶ್ನಿಸಿ ಕೇರಳ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ [ಬಾಬುರಾಜ್ ತೊಟ್ಟುಕರ ಮತ್ತು ಕೇರಳ ಸರ್ಕಾರ ಇನ್ನಿತರರ ನಡುವಣ ಪ್ರಕರಣ].

ಈ ಸಂಬಂಧ ರಾಜ್ಯ ಸರ್ಕಾರ ಮತ್ತು ರಾಜ್ಯ ಚುನಾವಣಾ ಆಯೋಗಕ್ಕೆ ನ್ಯಾಯಮೂರ್ತಿ ಮೊಹಮ್ಮದ್ ನಿಯಾಸ್ ಸಿ ಪಿ ಅವರು ನೋಟಿಸ್ ಜಾರಿ ಮಾಡಿದ್ದಾರೆ.

ಕಣ್ಣೂರು ಜಿಲ್ಲೆಯ ಎರುವೆಸ್ಸಿ ಗ್ರಾಮ ಪಂಚಾಯಿತಿಯ ಸದಸ್ಯತ್ವದಿಂದ ಪೌಲಿನ್ ಥಾಮಸ್ ಅವರನ್ನು ಪದಚ್ಯುತಗೊಳಿಸುವಂತೆ ಕೋರಿ ಬಾಬುರಾಜ್ ತೊಟ್ಟುಕರ ಎಂಬವವರು ಅರ್ಜಿ ಸಲ್ಲಿಸಿದ್ದರು.

2020ರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದ್ದ ಪೌಲಿನ್‌ ಅವರು 2021ರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ ಸೇರಿದ್ದರು.  ಹೀಗಾಗಿ ಕೇರಳ ಸ್ಥಳೀಯ ಸಂಸ್ಥೆ (ಪಕ್ಷಾಂತರ ನಿಷೇಧ) ಕಾಯಿದೆ, 1999ರ ಸೆಕ್ಷನ್ 3ರ ಅಡಿಯಲ್ಲಿ  ಪೌಲಿನ್‌ ಅವರನ್ನು ಅನರ್ಹಗೊಳಿಸುವಂತೆ ಬಾಬುರಾಜ್‌ ರಾಜ್ಯ ಚುನಾವಣಾ ಆಯೋಗವನ್ನು ಕೋರಿದ್ದರು.

ಆದರೆ ಸ್ಥಳೀಯ ಪ್ರಾಧಿಕಾರದ ಸದಸ್ಯರು, ಸಂಬಂಧಪಟ್ಟ ರಾಜಕೀಯ ಪಕ್ಷ ಅಥವಾ ರಾಜಕೀಯ ಪಕ್ಷದಿಂದ ಅಧಿಕಾರ ಪಡೆದ ವ್ಯಕ್ತಿ ಮಾತ್ರ ಅಂತಹ ಅನರ್ಹತೆ ಅರ್ಜಿಯನ್ನು ಸಲ್ಲಿಸಬಹುದು ಎನ್ನುವ ಕಾಯಿದೆಯ ಸೆಕ್ಷನ್ 4ನ್ನು ಉಲ್ಲೇಖಿಸಿ ಆಯೋಗ ಅರ್ಜಿ ವಜಾಗೊಳಿಸಿತ್ತು. ಹೀಗಾಗಿ ಅರ್ಜಿದಾರರು ಹೈಕೋರ್ಟ್‌ ಮೊರೆ ಹೋಗಿದ್ದರು.

1999ರ ಕಾಯಿದೆ ಸ್ಥಳೀಯ ಸಂಸ್ಥೆ ಸದಸ್ಯರ ಪಕ್ಷಾಂತರ ತಡೆಯುವ ಜೊತೆಗೆ ರಾಜಕೀಯ ಹೊಣೆಗಾರಿಕೆ ಮತ್ತು ಸ್ಥಿರತೆಯನ್ನು ಖಾತ್ರಿಪಡಿಸುವ ಗುರಿ ಹೊಂದಿದೆ. ಸೆಕ್ಷನ್ 4 ರಿಂದ ಮತದಾರರನ್ನು ಹೊರಗಿಡುವುದು ಕಾಯ್ದೆಯ ಉದ್ದೇಶವನ್ನು ದುರ್ಬಲಗೊಳಿಸುತ್ತದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.

ಮುಂದುವರೆದು, ಒಂದು ವೇಳೆ ಸ್ಥಳೀಯ ಸಂಸ್ಥೆ ಸದಸ್ಯರು ಅಥವಾ ರಾಜಕೀಯ ಪಕ್ಷಗಳು ಪಕ್ಷಾಂತರ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳದೆ ಹೋದರೆ ಮತದಾರರಿಗೆ ಯಾವುದೇ ಪರಿಹಾರ ದೊರೆಯದಂತಾಗುತ್ತದೆ. ಹೀಗೆ ಮತದಾರರಿಗೆ ಅವಕಾಶ ನೀಡದಿರುವುದು ಜನಾದೇಶವನ್ನು ಕಾಯ್ದುಕೊಳ್ಳುವ ವಿಚಾರದಲ್ಲಿ ಕಾನೂನುಬದ್ಧ ಆಸಕ್ತಿ ಹೊಂದಿರುವ ವ್ಯಕ್ತಿಗಳ ನಡುವೆ ಅಸಮಂಜಸ ವರ್ಗೀಕರಣ  ಸೃಷ್ಟಿಸುತ್ತದೆ. ಅಲ್ಲದೆ ಇಂತಹ ವಿಚಾರದಲ್ಲಿ ಮತದಾರರನ್ನು ಹೊರಗಿಡುವುದು ಸಂವಿಧಾನದ 14ನೇ ವಿಧಿಯ (ಸಮಾನತೆಯ ಹಕ್ಕು) ಉಲ್ಲಂಘನೆಯಾಗುತ್ತದೆ ಎಂದು ಅರ್ಜಿಯಲ್ಲಿ ವಾದಿಸಲಾಗಿದೆ.

ಅರ್ಜಿಯನ್ನು ಎರಡು ವಾರದ ಬಳಿಕ ವಿಚಾರಣೆ ನಡೆಸಲು ಹೈಕೋರ್ಟ್‌ ನಿರ್ಧರಿಸಿದೆ.

Kannada Bar & Bench
kannada.barandbench.com