ಸಿಬ್ಬಂದಿ ನೇಮಕಾತಿ, ಸಂಶೋಧನಾ ಪದವಿ ಪ್ರವೇಶಾತಿಯಲ್ಲಿ ಐಐಟಿಗಳಿಂದ ಮೀಸಲಾತಿ ನಿರ್ದೇಶನ ಉಲ್ಲಂಘನೆ: ಸುಪ್ರೀಂನಲ್ಲಿ ಮನವಿ

ಬೋಧಕರ ನೇಮಕಾತಿಗೆ ಸಂಬಂಧಿಸಿದಂತೆ ಐಐಟಿಗಳು ಪಾರದರ್ಶಕ ಪ್ರಕ್ರಿಯೆ ಅನುಸರಿಸುತ್ತಿಲ್ಲ. ಇದರಿಂದ ತಮಗಿರುವ ಸಂಪರ್ಕಗಳ ಮೂಲಕ ಅನರ್ಹ ಅಭ್ಯರ್ಥಿಗಳು ಐಐಟಿಗಳನ್ನು ಪ್ರವೇಶಿಸುತ್ತಿದ್ದಾರೆ ಎಂದು ಮನವಿಯಲ್ಲಿ ವಿವರಿಸಲಾಗಿದೆ.
IIT
IITletsintern.com

ಸಂಶೋಧನಾ ಪದವಿ ಮತ್ತು ಬೋಧಕರ ನೇಮಕಾತಿಗೆ ಸಂಬಂಧಿಸಿದಂತೆ ಎಲ್ಲಾ ಇಪ್ಪತ್ತಮೂರು ಭಾರತೀಯ ತಾಂತ್ರಿಕ ಸಂಸ್ಥೆಗಳು (ಐಐಟಿ) ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ (ಎಸ್‌ಸಿ‌/ಎಸ್‌ಟಿ) ಸಮುದಾಯಗಳಿಗೆ ಮತ್ತು ಇತರ ಹಿಂದುಳಿದ ಜಾತಿಗಳಿಗೆ (ಒಬಿಸಿ) ನೀಡುವ ಮೀಸಲಾತಿ ನೀತಿಯನ್ನು ಉಲ್ಲಂಘಿಸುತ್ತಿವೆ ಎಂದು ಆರೋಪಿಸಿ ಸುಪ್ರೀಂ ಕೋರ್ಟ್‌ನಲ್ಲಿ ಮನವಿ ಸಲ್ಲಿಕೆಯಾಗಿದೆ.

ಸಂಶೋಧನಾ ಪ್ರವೇಶಾತಿ ವಿಚಾರ ಮತ್ತು ಬೋಧಕರ ನೇಮಕಾತಿಗೆ ಸಂಬಂಧಿಸಿದಂತೆ ಎಲ್ಲಾ ಐಐಟಿಗಳ ನಿರ್ಧಾರಗಳು ಸಂಪೂರ್ಣವಾಗಿ ಅಸಾಂವಿಧಾನಿಕ ಮತ್ತು ಕಾನೂನುಬಾಹಿರ ಮತ್ತು ಸೇಚ್ಛೆಯಿಂದ ಕೂಡಿವೆ ಎಂದು ಹೆಸರಾಂತ ಭೂಶಾಖೋತ್ಪನ್ನ ಶಕ್ತಿ ಸಂಶೋಧಕ ಡಾ. ಸಚ್ಚಿದಾನಂದ ಪಾಂಡೆ ಸಲ್ಲಿಸಿರುವ ಮನವಿಯಲ್ಲಿ ಉಲ್ಲೇಖಿಸಿದ್ದಾರೆ.

“ಸಾಂವಿಧಾನಿಕ ವಿಧಿವಿಧಾನಗಳ ಪ್ರಕಾರ ಅರ್ಜಿಯಲ್ಲಿ ಉಲ್ಲೇಖಿಸಲಾಗಿರುವ ಎಲ್ಲಾ 2 ರಿಂದ 24ರ ವರೆಗಿನ (ಐಐಟಿ) ಪ್ರತಿವಾದಿಗಳು ಮೀಸಲಾತಿ ಮಾರ್ಗದರ್ಶಿಗಳನ್ನು ಅನುಸರಿಸುತ್ತಿಲ್ಲ. ಪ್ರತಿವಾದಿಗಳು ಸಾಮಾಜಿಕವಾಗಿ ಹಿಂದುಳಿದ ಸಮುದಾಯಗಳಾದ ಎಸ್‌ಸಿ (ಶೇ.15), ಎಸ್‌ಟಿ (ಶೇ. 7.5), ಒಬಿಸಿಗೆ (ಶೇ. 27) ನೀಡುವ ಮೀಸಲಾತಿ ನೀತಿಯನ್ನು ಉಲ್ಲಂಘಿಸುತ್ತಿದ್ದಾರೆ” ಎಂದು ವಕೀಲ ಅಶ್ವನಿ ಕುಮಾರ್‌ ದುಬೆ ಅವರ ಮೂಲಕ ಸಲ್ಲಿಸಲಾದ ಮನವಿಯಲ್ಲಿ ತಿಳಿಸಲಾಗಿದೆ.

2008ರ ಜೂನ್‌ನಲ್ಲಿ ಕೇಂದ್ರ ಸರ್ಕಾರವು ಖರಗಪುರ, ಮದ್ರಾಸ್‌, ಬಾಂಬೆ, ಕಾನ್ಪುರ, ರೂರ್ಕಿ ಮತ್ತು ಗುವಾಹಟಿ ಐಐಟಿ ನಿರ್ದೇಶಕರುಗಳಿಗೆ ಪತ್ರ ಬರೆದು ವಿಜ್ಞಾನ, ತಂತ್ರಜ್ಞಾನ ವಿಭಾಗದಲ್ಲಿನ ಸಹಾಯಕ ಪ್ರೊಫೆಸರ್‌ಗಳ ನೇಮಕಾತಿಯಲ್ಲಿ ಹಾಗೂ ಮಾನವಿಕ ಮತ್ತು ನಿರ್ವಹಣಾ ವಿಭಾಗದ ಎಲ್ಲ ಬೋಧಕ ಹುದ್ದೆಗಳ (ಸಹಾಯಕ, ಸಹ ಪ್ರೊಫೆಸರ್ ಮತ್ತು ಪ್ರೊಫೆಸರ್ ಹುದ್ದೆಗಳಲ್ಲಿ) ನೇಮಕಾತಿಯಲ್ಲಿ ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ವರ್ಗಗಳಿಗೆ ಮೀಸಲಾತಿ ಕಲ್ಪಿಸುವಂತೆ ಸೂಚಿಸಿತ್ತು.

2019ರ ನವೆಂಬರ್‌ನಲ್ಲಿ ಭಾರತ ಸರ್ಕಾರವು ಸಹ ಪ್ರೊಫೆಸರ್‌ ಮತ್ತು ಪ್ರೊಫೆಸರ್‌ಗಳು ಹಾಗೂ ತಾಂತ್ರಿಕ ಹುದ್ದೆ ಸೇರಿದಂತೆ ಎಲ್ಲಾ ವಿಭಾಗದ ಹುದ್ದೆಗಳಿಗೆ ಮೀಸಲಾತಿಯನ್ನು ವಿಸ್ತರಿಸಿತ್ತು. ಅದಾಗ್ಯೂ, ಐಐಟಿಗಳು ಮೀಸಲಾತಿ ನೀತಿಯನ್ನು ಸಂಪೂರ್ಣವಾಗಿ ಉಲ್ಲಂಘಿಸುತ್ತಿವೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

ಈಶಾನ್ಯ ಭಾರತ, ಹಿಂದಿ ಭಾಷಿಕ ರಾಜ್ಯಗಳಾದ ಬಿಹಾರ, ಜಾರ್ಖಂಡ, ಛತ್ತೀಸ್‌ಗಢ್, ಮಧ್ಯಪ್ರದೇಶ, ರಾಜಸ್ಥಾನ, ಹರಿಯಾಣ, ಉತ್ತರ ಪ್ರದೇಶ, ಉತ್ತರಾಖಂಡ, ಹಿಮಾಚಲ ಪ್ರದೇಶ, ಪಂಜಾಬ್‌, ಜಮ್ಮು ಮತ್ತು ಕಾಶ್ಮೀರ, ಲಡಾಖ್‌ ಭಾಗದವರಿಗೆ ಸಿಬ್ಬಂದಿಯಲ್ಲಿ ಸೂಕ್ತ ಪ್ರಾತಿನಿಧ್ಯ ದೊರೆತಿಲ್ಲ; ಇದು ಈ ರಾಜ್ಯಗಳ ಜನಸಂಖ್ಯೆಯನ್ನು ರಾಷ್ಟ್ರೀಯ ಜನಸಂಖ್ಯಾ ಪ್ರಮಾಣಕ್ಕೆ ಹೋಲಿಕೆ ಮಾಡಿದರೆ ಅತ್ಯಂತ ಕಡಿಮೆ ಎಂದು ಮನವಿಯಲ್ಲಿ ಹೇಳಲಾಗಿದೆ.

“ಪ್ರತಿವಾದಿಗಳಿಂದ ಅರ್ಜಿದಾರರು ಪಡೆದುಕೊಂಡಿರುವ ಮಾಹಿತಿ ಹಕ್ಕು ದಾಖಲೆಗಳ ಪ್ರಕಾರ ಮೇಲೆ ಉಲ್ಲೇಖಿಸಿದ ರಾಜ್ಯಗಳಲ್ಲಿನ ಸಿಬ್ಬಂದಿಯ ಶೇಕಡಾತಿಯು ಐಐಟಿ ತಿರುಪತಿ ಐಐಟಿ ಮದ್ರಾಸ್‌ ಮತ್ತು ಐಐಟಿ ಗಾಂಧಿನಗರದಲ್ಲಿ ಕ್ರಮವಾಗಿ ಶೇ. 4.91, 7.92 ಮತ್ತು 27.65. ಐಐಟಿ ಖರಗಪುರದಲ್ಲಿ ನೀಡಲಾಗಿರುವ ಅಪೂರ್ಣ ದತ್ತಾಂಶಗಳ ಅನುಸಾರ ಇದು ಸುಮಾರು ಶೇ. 13.77ರಷ್ಟಿದೆ. ಉಳಿದ ಐಐಟಿಗಳು ರಾಜ್ಯ ಮತ್ತು ವಿಭಾಗ ಮಟ್ಟದ ದತ್ತಾಂಶವನ್ನು ನೀಡಿಲ್ಲ” ಎಂದು ಮನವಿದಾರರು ಹೇಳಿದ್ದಾರೆ.

ಬೋಧಕರ ನೇಮಕಾತಿಗೆ ಸಂಬಂಧಿಸಿದಂತೆ ಐಐಟಿಗಳು ಪಾರದರ್ಶಕ ಪ್ರಕ್ರಿಯೆಯನ್ನು ಅನುಸರಿಸುತ್ತಿಲ್ಲ ಎಂದು ಮನವಿಯಲ್ಲಿ ಆರೋಪಿಸಲಾಗಿದೆ. ಇದರಿಂದ ತಮಗಿರುವ ಸಂಪರ್ಕಗಳನ್ನು ಬಳಸಿಕೊಂಡು ಅನರ್ಹ ಅಭ್ಯರ್ಥಿಗಳು ಐಐಟಿಗಳನ್ನು ಪ್ರವೇಶಿಸುತ್ತಿದ್ದಾರೆ ಎಂದು ಮನವಿಯಲ್ಲಿ ವಿವರಿಸಲಾಗಿದೆ.

Also Read
ಕಾನೂನು ಶಿಕ್ಷಣ ಪಡೆಯಲು ಆರ್ಥಿಕ ಸಹಾಯ ಆದಾಯ ತೆರಿಗೆ ಅಡಿ 'ವೃತ್ತಿಗೆ ಮಾಡಿದ ಖರ್ಚು':ಸಾಳ್ವೆ ವಾದಕ್ಕೆ ಐಟಿಎಟಿ ಸಮ್ಮತಿ

ಇದೆಲ್ಲವೂ ಐಐಟಿಗಳಲ್ಲಿ ಭ್ರಷ್ಟಾಚಾರ, ಪಕ್ಷಪಾತ, ತಾರತಮ್ಯ ಹೆಚ್ಚಾಗುವ ಸಾಧ್ಯತೆ ಸೃಷ್ಟಿಸಿದ್ದು, ಇದರಿಂದ ಸ್ವಾತಂತ್ರ್ಯ ಪಡೆದು ಎಪ್ಪತ್ತು ವರ್ಷಗಳ ನಂತರವೂ ಆಂತರಿಕ ರ್ಯಾಂಕಿಂಗ್, ತಾಂತ್ರಿಕ ಬೆಳವಣಿಗೆ ಮುಂತಾದ ವಿಚಾರದಲ್ಲಿ ಹಿಂದುಳಿಯಲಾಗಿದೆ ಎಂದು ಮನವಿಯಲ್ಲಿ ಆರೋಪಿಸಲಾಗಿದೆ.

ಐಐಟಿಗಳು ತನ್ನ ಬೋಧಕ ವರ್ಗದ ಸದಸ್ಯರನ್ನು ನೇಮಕ ಮಾಡಿಕೊಳ್ಳಲು ನಿಗದಿಪಡಿಸಿದ ಮಾನದಂಡಗಳನ್ನು ಎಂದಿಗೂ ಬಹಿರಂಗಪಡಿಸುವುದಿಲ್ಲ ಎಂದು ಮನವಿಯಲ್ಲಿ ತಿಳಿಸಲಾಗಿದೆ. ಅಭ್ಯರ್ಥಿಗಳನ್ನು ಸಹ ಅದರ ಬಗ್ಗೆ ಅಂಧಕಾರದಲ್ಲಿ ಇಡಲಾಗಿದೆ. ಅಧ್ಯಾಪಕರ ನೇಮಕಾತಿಯಲ್ಲದೆ, ಐಐಟಿ ಸಹ ಸಂಶೋಧನಾ ಪದವಿ ಕಾರ್ಯಕ್ರಮಗಳ (ಡಾಕ್ಟರ್ ಆಫ್ ಫಿಲಾಸಫಿ) ಪ್ರವೇಶಾತಿಯಲ್ಲಿಯೂ ಮೀಸಲಾತಿ ಮಾನದಂಡಗಳನ್ನು ಉಲ್ಲಂಘಿಸಲಾಗುತ್ತಿದೆ ಎಂದು ಅರ್ಜಿದಾರರು ವಾದಿಸಿದ್ದಾರೆ.

“ಭಾರತ ಸರ್ಕಾರದ ನಿಯಮಗಳ ಪ್ರಕಾರ ಎಸ್‌ಸಿ (ಶೇ.15), ಎಸ್‌ಟಿ (ಶೇ. 7.5) ಮತ್ತು ಒಬಿಸಿ (ಶೇ. 27) ವಿದ್ಯಾರ್ಥಿಗಳಿಗೆ ಶೇ. 49.5 ಸೀಟುಗಳನ್ನು ಕಾಯ್ದಿರಿಸಬೇಕಾಗುತ್ತದೆ. ಆದರೆ, ಕಳೆದ 5 ವರ್ಷಗಳಲ್ಲಿ ಐಐಟಿಗಳು ಕೇವಲ ಶೇ. 2.1, 9.1 ಮತ್ತು 23.2 ರಷ್ಟ ವಿದ್ಯಾರ್ಥಿಗಳಿಗೆ ಪ್ರವೇಶ ಕಲ್ಪಿಸಿವೆ. 2015 ರಿಂದ 2019 ರವರೆಗೆ ಐಐಟಿ ಬಾಂಬೆ 11 ವಿಭಾಗಗಳಲ್ಲಿ ಮತ್ತು 26ರ ಕೇಂದ್ರಗಳಲ್ಲಿ ಒಬ್ಬೇ ಒಬ್ಬ ಎಸ್‌ಟಿ ವಿದ್ಯಾರ್ಥಿಗೆ ಪಿಎಚ್‌ಡಿ ಮಾಡಲು ಅವಕಾಶ ಕಲ್ಪಿಸಿಲ್ಲ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

ನೇಮಕಾತಿಗೆ ಸಂಬಂಧಿಸಿದ ಸಮಸ್ಯೆಗಳಲ್ಲದೆ, ಪ್ರಾಧ್ಯಾಪಕರು ಮತ್ತು ಮ್ಯಾನೇಜ್‌ಮೆಂಟ್‌ ವಿರುದ್ಧ ವಿದ್ಯಾರ್ಥಿಗಳು ನೀಡಿರುವ ಕಿರುಕುಳ ಸಂಬಂಧಿತ ದೂರುಗಳನ್ನು ಪರಿಹರಿಸಲು ಸರಿಯಾದ ವ್ಯವಸ್ಥೆ ಇಲ್ಲದರ ಬಗ್ಗೆಯೂ ಮನವಿಯಲ್ಲಿ ಕಳವಳ ವ್ಯಕ್ತಪಡಿಸಲಾಗಿದೆ. ಈ ಸಂಬಂಧ ಹೊಸ ವ್ಯವಸ್ಥೆ ಜಾರಿಗೊಳಿಸುವಂತೆ ಕೋರಲಾಗಿದೆ.

Related Stories

No stories found.
Kannada Bar & Bench
kannada.barandbench.com