ಮಧ್ಯಪ್ರದೇಶದಲ್ಲಿ ಶಾಸಕರಲ್ಲದ 14 ಮಂದಿಗೆ ಸಚಿವ ಸ್ಥಾನ ಪ್ರಶ್ನಿಸಿದ್ದ ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್

ವಿಭಿನ್ನ ವಿಧದ ವೈರಸ್ ನಮ್ಮ ರಾಜಕೀಯ ಕ್ಷೇತ್ರವನ್ನು ಹದಗೆಡಿಸಿದ್ದು, ಅದರಿಂದ ಸಾಂಕ್ರಾಮಿಕತೆ ಉಂಟಾಗುತ್ತಿದೆ. ಇದು ಚುನಾಯಿತ ಸರ್ಕಾರವನ್ನು ರಹಸ್ಯವಾಗಿ ಕೆಡವುತ್ತಿದೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.
Supreme Court
Supreme Court

ಮಧ್ಯ ಪ್ರದೇಶದಲ್ಲಿ 14 ಮಂದಿ ಶಾಸಕರಲ್ಲದವರನ್ನು ಸಚಿವರನ್ನಾಗಿ ನೇಮಿಸಿರುವ ನಿರ್ಧಾರವು ಸಂವಿಧಾನದ ಪರಿಚ್ಛೇದ 164 ಮತ್ತು ಹತ್ತನೇ ಷೆಡ್ಯೂಲ್ ನ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಉಲ್ಲೇಖಿಸಿ ಸಲ್ಲಿಸಲಾಗಿರುವ ಅರ್ಜಿ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ.

ಮುಖ್ಯ ನ್ಯಾಯಮೂರ್ತಿ ಎಸ್‌ ಎ ಬೊಬ್ಡೆ, ನ್ಯಾಯಮೂರ್ತಿಗಳಾದ ಎ ಎಸ್ ಬೋಪಣ್ಣ ಮತ್ತು ವಿ ರಾಮಸುಬ್ರಮಣಿಯನ್ ಅವರನ್ನೊಳಗೊಂಡ ತ್ರಿಸದಸ್ಯ ಪೀಠವು ಅರ್ಜಿ ವಿಚಾರಣೆಗೆ ಅಸಮ್ಮತಿ ಸೂಚಿಸಿತು. ಅತ್ಯಂತ ವಿಶೇಷ ಸನ್ನಿವೇಶದಲ್ಲಿ ಮಾತ್ರ ಪರಿಚ್ಛೇದ 164ರ ಅಡಿ ನೇಮಕಾತಿಗೆ ಅವಕಾಶವಿದೆ ಎಂದು ಅರ್ಜಿದಾರರು ಮನವಿಯಲ್ಲಿ ವಿವರಿಸಿದ್ದಾರೆ.

“ಅಲ್ಲಿ ವಿಶೇಷ ಸನ್ನಿವೇಶ ನಿರ್ಮಾಣವಾಗಿದೆಯೋ, ಇಲ್ಲವೋ ಎಂಬುದನ್ನು ನಿರ್ಧರಿಸುವವರು ಯಾರು” ಎಂದು ಅರ್ಜಿ ವಿಚಾರಣೆಯಲ್ಲಿ ಮಧ್ಯಪ್ರವೇಶಿಸಲು ನಿರಾಕರಿಸಿರುವ ಸುಪ್ರೀಂ ಕೋರ್ಟ್ ಹೇಳಿದೆ. ಅಲ್ಲದೇ ಹೈಕೋರ್ಟ್‌ ನಲ್ಲಿ ವಿಚಾರಣೆ ಕೋರಲು ಅರ್ಜಿದಾರರಿಗೆ ಸ್ವಾತಂತ್ರ್ಯ ಕಲ್ಪಿಸಿದೆ.

ಪ್ರಮಾಣ ವಚನ ಸ್ವೀಕಾರದ ಸಂದರ್ಭದಲ್ಲಿ ಶಾಸಕರಲ್ಲದ 14 ಮಂದಿಯನ್ನು ಸಚಿವರನ್ನಾಗಿ ನೇಮಿಸಿದ ಐತಿಹ್ಯ ಇತಿಹಾಸದ ಯಾವುದೇ ರಾಜ್ಯ ಅಥವಾ ಕೇಂದ್ರ ಸರ್ಕಾರದಲ್ಲಿ ನಡೆದಿಲ್ಲ ಎಂದು ಅಡ್ವೊಕೇಟ್ ಆನ್ ರೆಕಾರ್ಡ್‌ನ ವಿಪಿನ್ ನಾಯರ್ ಅವರ ಮೂಲಕ ಸಲ್ಲಿಸಿರುವ ಮನವಿಯಲ್ಲಿ ಅರ್ಜಿದಾರರಾದ ಆರಾಧನಾ ಭಾರ್ಗವ ವಿವರಿಸಿದ್ದಾರೆ.

“ಮಧ್ಯಪ್ರದೇಶದ 34 ಸಚಿವರ ಪೈಕಿ 14 ಮಂದಿ ಶಾಸಕರಲ್ಲದವರನ್ನು ಸಚಿವರನ್ನಾಗಿ ನೇಮಿಸಲಾಗಿರುವುದು ಪೂರ್ವನಿದರ್ಶನವಿಲ್ಲದ ಅಣಕವಾಗಿದ್ದು, ಅವಿವೇಚನೆಯ ನಡಾವಳಿಯಾಗಿದೆ. ಇದು ಪ್ರಜಾಪ್ರಭುತ್ವದ ಭವ್ಯ ರಚನೆಯ ಅವಹೇಳನವಾಗಿದ್ದು, ಭಾರತೀಯ ಸಂವಿಧಾನದ ಪರಿಚ್ಛೇದ 164(4)ರ ಸ್ಪಷ್ಟ ಉಲ್ಲಂಘನೆಯಾಗಿದೆ.”

ವಿಭಿನ್ನ ವಿಧದ ವೈರಸ್ ನಮ್ಮ ರಾಜಕೀಯ ಕ್ಷೇತ್ರವನ್ನು ಹದಗೆಡಿಸಿದ್ದು, ಅದರಿಂದ ಸಾಂಕ್ರಾಮಿಕತೆ ಉಂಟಾಗುತ್ತಿದೆ. ಇದು ಚುನಾಯಿತ ಸರ್ಕಾರವನ್ನು ರಹಸ್ಯವಾಗಿ ಕೆಡವುತ್ತಿದೆ. “ಪ್ರಭಾವ ಅಥವಾ ಬಾಹ್ಯ ಕಾರಣಗಳಿಗಾಗಿ ನಿರ್ಲಜ್ಜ ಶಾಸಕರು ಆಡಳಿತ ಪಕ್ಷಕ್ಕೆ ರಾಜೀನಾಮೆ ನೀಡಿ ಬಳಿಕ ಪ್ರಮುಖ ವಿರೋಧ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಾರೆ” ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.

Also Read
ಜನಪ್ರತಿನಿಧಿಗಳ ವಿರುದ್ಧದ ಪ್ರಕರಣಗಳ ಶೀಘ್ರ ವಿಲೇವಾರಿ: ಮಧ್ಯಪ್ರದೇಶ ಹೈಕೋರ್ಟ್‌ನಿಂದ ಸ್ವಯಂಪ್ರೇರಿತ ಪ್ರಕರಣ ದಾಖಲು

ಕಳೆದ ಐದು ತಿಂಗಳುಗಳಿಂದ 14 ಮಂದಿಯ ಅನರ್ಹತೆ ಪ್ರಕರಣ ವಿಧಾನಸಭಾ ಸ್ಪೀಕರ್ ಮುಂದಿರುವಾಗಲೇ ಅವರನ್ನು ಸಚಿವರನ್ನಾಗಿ ನೇಮಿಸಲಾಗಿದೆ. “ಭಾರತೀಯ ಸಂವಿಧಾನದಲ್ಲಿ ಹತ್ತನೇ ಷೆಡ್ಯೂಲ್ ವಿಧಿಸಿರುವ ಕಟ್ಟುನಿಟ್ಟಾದ ಸಾಂವಿಧಾನಿಕ ಪರಿಶೀಲನೆಯಿಂದ ವಿಮುಖವಾಗುವ ಏಕೈಕ ಕಾರಣದಿಂದ ಈ ವಿಧಾನ ಅನುಸರಿಸಲಾಗಿದೆ ಎಂದು ಮನವಿಯಲ್ಲಿ ವಿವರಣೆ ನೀಡಲಾಗಿದೆ.

“ಸಂವಿಧಾನದ ಪ್ರಜಾಸತ್ತೀಯ ಯೋಜನೆಗಳನ್ನು ಜಾರಿಗೊಳಿಸುವ ಕರ್ತವ್ಯ ಹೊಂದಿರುವ ಮಧ್ಯಪ್ರದೇಶದಲ್ಲಿ ಸಾಂವಿಧಾನಿಕ ಹುದ್ದೆ ಹೊಂದಿರುವ ಗೌರವಾನ್ವಿತ ಸ್ಪೀಕರ್ ಹಾಗೂ ಇತರೆ ಸಾಂವಿಧಾನಿಕ ಹುದ್ದೆಯಲ್ಲಿರುವವರು ಹಲವು ಲೋಪಗಳನ್ನು ಎಸಗಿದ್ದು, ಇದು ಸಂವಿಧಾನದ ನಿಬಂಧನೆಗಳ ಸ್ಪಷ್ಟ ಉಲ್ಲಂಘನೆಯಾಗಿದೆ. ಅವರ ನಡತೆಯು ಬಹಿರಂಗವಾಗಿ ಕುದುರೆ ವ್ಯಾಪಾರಕ್ಕೆ ಅವಕಾಶ ಕಲ್ಪಿಸುವುದರ ಜೊತೆಗೆ ಸಂವಿಧಾನದ ಹತ್ತನೇ ಷೆಡ್ಯೂಲ್ ಅನ್ನು ಗಾಳಿಗೆ ತೂರುವಂತಿದೆ. ಇದಕ್ಕೆ ಬಲವಾದ ಅಸಮ್ಮತಿ ಸೂಚಿಸಬೇಕಿದೆ.”
ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಿದ್ದ ಮನವಿಯಲ್ಲಿ ಉಲ್ಲೇಖ

ಮಧ್ಯಪ್ರದೇಶ ಸರ್ಕಾರದಲ್ಲಿ ಸಚಿವರಾಗಿರುವ 14 ಮಂದಿ ಅನರ್ಹಗೊಂಡರೆ ತಮ್ಮಿಂದ ತೆರವಾದ ಕ್ಷೇತ್ರಗಳಲ್ಲಿ ಉಪಚುನಾವಣೆ ಎದುರಿಸುವ ಹಕ್ಕು ಕಳೆದುಕೊಳ್ಳಲಿದ್ದಾರೆ. ಈ ಸಚಿವರಿಗೆ ಎದುರಾಗುವ ಸಾಂವಿಧಾನಿಕ ಸಮಸ್ಯೆ ನಿವಾರಿಸುವ ಉದ್ದೇಶದಿಂದ ಸ್ಪೀಕರ್ ಅವರು ಸಚಿವರುಗಳ ಅನರ್ಹತೆ ವಿಚಾರವನ್ನು ಉದ್ದೇಶಪೂರ್ವಕವಾಗಿ ಬದಿಗಿಟ್ಟಿದ್ದಾರೆ. ಸ್ಪೀಕರ್ ಅವರ ಈ ನಡೆಯನ್ನು ನ್ಯಾಯಾಲಯ ಪರಿಶೀಲಿಸಬೇಕಿದೆ ಎಂದು ಮನವಿ ಮಾಡಲಾಗಿದೆ.

Related Stories

No stories found.
Kannada Bar & Bench
kannada.barandbench.com