ಪಶ್ಚಿಮ ಘಟ್ಟಗಳ ಕುರಿತಾದ ಕರಡು ಅಧಿಸೂಚನೆ: ಗಾಡ್ಗೀಳ್‌, ರಂಗನ್‌ ಸಮಿತಿ ವರದಿ ಪ್ರಶ್ನಿಸಿ ಸುಪ್ರೀಂನಲ್ಲಿ ಅರ್ಜಿ

ಪ್ರಶ್ನಾರ್ಹವಾದ ಶಿಫಾರಸ್ಸುಗಳಿಂದ ಕೃಷಿಗೆ ಹೊಡೆತ ಬೀಳಲಿದ್ದು, ಇದರಿಂದ ಲಕ್ಷಾಂತರ ಕೇರಳದ ನಿವಾಸಿಗಳ ಬದುಕಿಗೆ ತೊಂದರೆಯಾಗುತ್ತದೆ. ಅದರಲ್ಲೂ ನಿರ್ದಿಷ್ಟ ಸಂರಕ್ಷಿತ ಪ್ರದೇಶಗಳಲ್ಲಿ ವಾಸಿಸುವವರಿಗೆ ತೀವ್ರ ತರಹದ ಸಮಸ್ಯೆಯಾಗಲಿದೆ.
ಪಶ್ಚಿಮ ಘಟ್ಟಗಳ ಕುರಿತಾದ ಕರಡು ಅಧಿಸೂಚನೆ: ಗಾಡ್ಗೀಳ್‌, ರಂಗನ್‌ ಸಮಿತಿ ವರದಿ ಪ್ರಶ್ನಿಸಿ ಸುಪ್ರೀಂನಲ್ಲಿ ಅರ್ಜಿ
Western Ghats and Supreme Court

ಪಶ್ಚಿಮ ಘಟ್ಟಗಳ ಪರಿಸರ ಸೂಕ್ಷ್ಮ ಪ್ರದೇಶ (ಇಎಸ್‌ಎ) ಎಂದು 56,825 ಚದರ ಕಿಲೋಮೀಟರ್‌ ಪ್ರದೇಶವನ್ನು ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಇಲಾಖೆಯು (ಎಂಒಇಎಫ್‌ಸಿಸಿ) ಗುರುತಿಸಿ ಕರಡು ಅಧಿಸೂಚನೆ ಹೊರಡಿಸಿರುವುದರ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಮನವಿ ಸಲ್ಲಿಸಲಾಗಿದೆ.

ಪರಿಸರ ಸೂಕ್ಷ್ಮ ವಲಯದ ಕುರಿತು ಸಚಿವಾಲಯವು 2018ರ ಅಕ್ಟೋಬರ್‌ನಲ್ಲಿ ಹೊರಡಿಸಿರುವ ಅಧಿಸೂಚನೆಯನ್ನು ವಕೀಲ ಸುವಿದತ್‌ ಎಂ ಎಸ್‌ ಅವರ ಮೂಲಕ ಸರ್ಕಾರೇತರ ಸಂಸ್ಥೆಯಾದ ಕರ್ಷಕ ಶಬ್ದಂ ಸಲ್ಲಿಸಿರುವ ಮನವಿಯಲ್ಲಿ ಪ್ರಶ್ನಿಸಲಾಗಿದೆ. ಗುಜರಾತ್‌, ಮಹಾರಾಷ್ಟ್ರ, ಗೋವಾ, ಕರ್ನಾಟಕ, ಕೇರಳ ಮತ್ತು ತಮಿಳುನಾಡಿನ ಮೂಲಕ ಹಾಯ್ದು ಹೋಗಿರುವ 50,000 ಚದರ ಕಿಲೋ ಮೀಟರ್‌ ಪ್ರದೇಶವನ್ನು ಪಶ್ಚಿಮ ಘಟ್ಟಗಳ ಪರಿಸರ ಸೂಕ್ಷ್ಮ ಪ್ರದೇಶ ಎಂದು ಗಡಿ ಗುರುತು ಮಾಡಲಾಗಲಿದೆ.

Also Read
ವಿಧಿವಿಜ್ಞಾನ ವರದಿ ಪ್ರಾಸಿಕ್ಯೂಷನ್‌ಗೆ ಪೂರಕವಾಗಿಲ್ಲ: ಗಲಭೆ ಆರೋಪಿಗೆ ಜಾಮೀನು ನೀಡಿದ ದೆಹಲಿ ಹೈಕೋರ್ಟ್

ಕರ್ಷಕ ಶಬ್ದಂ ಸಲ್ಲಿಸಿರುವ ಮನವಿಯಲ್ಲಿನ ಪ್ರಮುಖ ಅಂಶಗಳು ಇಂತಿವೆ:

 • ಅಧಿಸೂಚನೆಯು ಸಂವಿಧಾನದ 21ನೇ ವಿಧಿಯ ಸ್ಪಷ್ಟ ಉಲ್ಲಂಘನೆಯಾಗಿದ್ದು, ಗಾಡ್ಗೀಳ್‌ ವರದಿ ಎಂದು ಹೆಸರಾಗಿರುವ ಪಶ್ಚಿಮ ಘಟ್ಟಗಳ ಪರಿಸರ ತಜ್ಞರ ಸಮಿತಿಯ (ಡಬ್ಲುಜಿಇಇಪಿ) ವರದಿಯ ಶಿಫಾರಸ್ಸುಗಳನ್ನು ಜಾರಿಗೊಳಿಸದಂತೆ ಕೇರಳ ರಾಜ್ಯಕ್ಕೆ ನಿರ್ದೇಶನ ನೀಡಬೇಕು.

 • ಉನ್ನತಮಟ್ಟದ ಕಾರ್ಯಪಡೆ (ಎಚ್‌ಎಲ್‌ಡಬ್ಲುಜಿ) ಅಥವಾ ಕಸ್ತೂರಿ ರಂಗನ್‌ ವರದಿಯ ಶಿಫಾರಸ್ಸುಗಳನ್ನು ಜಾರಿಗೊಳಿಸದಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಬೇಕು. ಇದಕ್ಕೆ ಬದಲಾಗಿದೆ ಕೇರಳಕ್ಕೆ ಅನುಕೂಲಕರವಾಗಿರುವ ಒಮ್ಮನ್‌ ವಿ ಒಮ್ಮನ್‌ ಸಮಿತಿಯ ಶಿಫಾರಸ್ಸುಗಳನ್ನು ಜಾರಿಗೊಳಿಸಬೇಕು.

 • ಗುಡ್ಡಗಾಡು ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶ (ಇಎಸ್‌ಎ) ಎಂದು ಗಾಡ್ಗೀಳ್‌ ವರದಿ ಸಲಹೆ ನೀಡಿದ್ದು, 142 ತಾಲ್ಲೂಕುಗಳನ್ನು ಪರಿಸರ ಸೂಕ್ಷ್ಮ ವಲಯ 1, 2 ಮತ್ತು 3 ಎಂದು ವಿಭಾಗಿಸಿದೆ.

 • ಒಮ್ಮನ್‌ ವಿ ಒಮ್ಮನ್‌ ಸಮಿತಿ ವರದಿಯು ವ್ಯಕ್ತಿಗಳು, ಸಂಘಟನೆಗಳು, ಶಾಲೆ, ಸಾರ್ವಜನಿಕ ಪ್ರತಿನಿಧಿಗಳು, ರೈತರ ಸಂಘಗಳು ಸಲ್ಲಿಸಿರುವ 9,000 ಮನವಿಗಳನ್ನು ಪರಿಗಣಿಸಿದ್ದು, ಮಾನವ ವಶದಲ್ಲಿರುವ ವನಭೂಮಿಯ (ಫ್ರಾಜೈಲ್ ಲ್ಯಾಂಡ್)‌ ಕಲಂಗಳಲ್ಲಿ ಬದಲಾವಣೆ ಮಾಡುವಂತೆ ಶಿಫಾರಸು ಮಾಡಿದೆ.

 • ಕಸ್ತೂರಿ ರಂಗನ್‌ ವರದಿಯ ಪ್ರಕಾರ ಭೂಮಿ ವಶಪಡಿಸಿಕೊಳ್ಳುವುದಕ್ಕೆ ತಡೆ ನೀಡಿರುವುದು ಹಾಗೂ ಪ್ಲಾಂಟೇಶನ್‌ಗಳು ಮತ್ತು ಎಸ್ಟೇಟ್‌ಗಳ ಸ್ಯಾಟಲೈಟ್‌ ಸರ್ವೆಯನ್ನೂ ಒಳಗೊಂಡಿದೆ.

 • ಹೈಬ್ರೀಡ್‌ ಜಾತಿಯ ಹಾಲು ಕೊಡುವ ಪ್ರಾಣಿಗಳನ್ನು ಸಾಕುವುದಕ್ಕೆ ನಿರ್ಬಂಧ ವಿಧಿಸಬಾರದು. ಅಲ್ಲದೇ ಸಾವಯವ ಕೃಷಿಗೆ ವರ್ಗಾವಣೆಯಾಗಲು 10 ವರ್ಷಗಳ ರಿಯಾಯಿತಿ ನೀಡಬೇಕು ಎಂದು ಶಿಫಾರಸ್ಸು ಮಾಡಿರುವ ಒಮ್ಮನ್‌ ವರದಿಯನ್ನು ಪರಿಗಣಿಸುವಂತೆ ಕೋರಿದೆ.

 • ಎಚ್‌ಎಲ್‌ಡಬ್ಲುಜಿ ಪ್ರತಿಪಾದಿಸಿರುವ ಹಸಿರಿರುವ ಬೆಳವಣಿಗೆ ಕುರಿತು ಅರಿವು ಮೂಡಿಸುವ ವಿಧಾನಗಳನ್ನು ಒಳಗೊಳ್ಳದೇ ಮತ್ತು ಪ್ರಸ್ತಾಪಿತ ರಾಷ್ಟ್ರೀಯ ಕೃಷಿ-ಅರಣ್ಯ ನೀತಿ-2014 ಯು ಪ್ರಶ್ನಾರ್ಹ ಎಂದಿದೆ.

 • ಕರಡು ಅಧಿಸೂಚನೆಯು ಜನ ವಸತಿಯ ಮೇಲಿನ ದಾಳಿ ಮತ್ತು ಕೃಷಿಯಿಂದ ಜನರನ್ನು ವಿಮುಖಗೊಳಿಸುವ ಉದ್ದೇಶ ಹೊಂದಿದೆ ಎಂದು ಹೇಳಲಾಗಿದೆ.

 • ಕೆಂಪು ವಿಭಾಗದ ಕೈಗಾರಿಕೆಗಳು ಎನ್ನಲಾದ ಆಸ್ಪತ್ರೆಗಳು, ಔಷಧಾಲಯಗಳು, ಹೈನೋದ್ಯಮ ಘಟಕಗಳು, ಹೋಟೆಲ್‌ಗಳು, ದಹನಕಾರಕ ಇತ್ಯಾದಿಗಳನ್ನು ನಿಷೇಧಿಸುವುದರಿಂದ ಜನ ವಸತಿಯ ಮೇಲೆ ಅಗಾಧ ಪರಿಣಾಮ ಉಂಟಾಗಲಿದ್ದು, ಇದು ಗ್ರಾಮೀಣ ಪ್ರದೇಶದಲ್ಲಿ ನೆಲೆಸಿರುವ ಜನರ ಬದುಕಿಗೆ ಬರೆ ಎಳೆಯಲಿದೆ ಎಂದು ಉಲ್ಲೇಖಿಸಲಾಗಿದೆ.

 • ಗಾಡ್ಗೀಳ್‌ ಮತ್ತು ಕಸ್ತೂರಿ ರಂಗನ್‌ ಸಮಿತಿ ವರದಿಗಳು ಪ್ರತಿ ಗ್ರಿಡ್‌ಗೆ ಸಂಬಂಧಿಸಿದಂತೆ ಪರಿಸರ ಸೂಕ್ಷ್ಮ ಅಂಶಗಳ ಕುರಿತಾಗಿ ಸಂಶೋಧನೆ ನಡೆಸದೇ ಅಂತಿಮವಾಗಿ ಎಲ್ಲೆ ಗುರುತಿಸಿ ಶಿಫಾರಸ್ಸು ಮಾಡಿವೆ. ಇದರಿಂದ ತಾಲ್ಲೂಕು ಮತ್ತು ಗ್ರಾಮಗಳ ಎಲ್ಲೆಗಳನ್ನು ಇಎಸ್‌ಎ ಗಡಿಗಳಾಗಿ ತೆಗೆದುಕೊಳ್ಳಲಾಗಿದೆ.

 • ಸಮಿತಿಯ ಶಿಫಾರಸ್ಸುಗಳಿಂದಾಗಿ ಕೃಷಿಯ ನಿಷೇಧ ಹೇರಬೇಕಾಗುವ ಸ್ಥಿತಿ ನಿರ್ಮಾಣವಾಗಲಿದ್ದು, ಇದರಿಂದ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಕೇರಳದ ಲಕ್ಷಾಂತರ ನಿವಾಸಿಗಳಿಗೆ ಸಮಸ್ಯೆಯಾಗಲಿದೆ. ವಿಶೇಷವಾಗಿ ತಪ್ಪಾಗಿ ಗುರುತಿಸಲಾಗಿರುವ ಸಂರಕ್ಷಿತ ಪ್ರದೇಶಗಳಲ್ಲಿನ ಜನರಿಗೆ ತೀವ್ರತರದ ಸಮಸ್ಯೆಗಳಾಗಲಿವೆ.

 • ಡಬ್ಲುಜಿಇಇಪಿಯ ಕೆಲವು ಪ್ರಸ್ತಾವನೆಗಳು ಅತ್ಯಂತ ಭಯಾನಕವಾಗಿವೆ. ಉದಾಹರಣೆಗೆ 50 ವರ್ಷಗಳಿಗೂ ಹಳೆಯದಾದ ಜಲಾಶಯಗಳನ್ನು ನಿರ್ಬಂಧಿಸುವುದರಿಂದ ಯಾವುದೇ ಪರ್ಯಾಯ ಯೋಜನೆಗಳನ್ನು ಜಾರಿಗೊಳಿಸದೇ ಇರುವುದರಿಂದ ಇನ್ನು ಕೆಲವೇ ವರ್ಷಗಳಲ್ಲಿ ರಾಜ್ಯಕ್ಕೆ ವಿದ್ಯುತ್‌ ಸಮಸ್ಯೆ ಕಾಡಬಹುದು.

 • ಎಂಇಎಫ್‌ಸಿಸಿಯು ಪರಿಸರ (ಸಂರಕ್ಷಣೆ) ಕಾಯಿದೆ 1986ರ ಸೆಕ್ಷನ್‌ 3ರ ಅನ್ವಯ ಅಧಿಸೂಚನೆಗೆ ಅವಕಾಶ ಮಾಡಿಕೊಡುವ ಮೂಲಕ ತಪ್ಪು ಹೆಜ್ಜೆ ಇಟ್ಟಿದೆ. ಪಶ್ಚಿಮ ಘಟ್ಟಗಳಲ್ಲಿ ನೈಸರ್ಗಿಕ ಭೂಪ್ರದೇಶದ ಕುಸಿತ, ವನ್ಯಜೀವಿ ಧಾಮಗಳು, ಸಂರಕ್ಷಿತ ಪ್ರದೇಶಗಳು, ರಾಷ್ಟ್ರೀಯ ಉದ್ಯಾನಗಳು ಮತ್ತು ಸಂರಕ್ಷಿತ ಅರಣ್ಯಗಳನ್ನು ಪರಿಗಣಿಸುವಲ್ಲಿ ಸಚಿವಾಲಯ ವಿಫಲವಾಗಿದೆ.

 • ಅರಣ್ಯ ಇಲಾಖೆಯಲ್ಲಿನ ವ್ಯಾಪಕ ಭ್ರಷ್ಟಾಚಾರ, ದುರಾಡಳಿತ, ವಿವೇಚನಾರಹಿತವಾಗಿ ಪ್ರಾಚೀನ ಅರಣ್ಯವನ್ನು ತೇಗು/ಅಕೇಶಿಯಾ/ನೀಲಗಿರಿ ತೋಟಗಳನ್ನಾಗಿ ಮಾಡಿರುವುದು, ಮರಗಳ ಕಳ್ಳಸಾಗಣಿಕೆ ಮತ್ತು ಅಗ್ನಿ ಅನಾಹುತ ಇತ್ಯಾದಿಗಳು ಈ ರೋಗದ ಪ್ರಮುಖ ಕಾರಣಗಳಾಗಿವೆ ಎಂದು ಹೇಳಲಾಗಿದೆ.

Related Stories

No stories found.
Kannada Bar & Bench
kannada.barandbench.com