ಪಶ್ಚಿಮ ಬಂಗಾಳದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಲು ಕೇಂದ್ರಕ್ಕೆ ನಿರ್ದೇಶಿಸುವಂತೆ ಕೋರಿ ಸುಪ್ರೀಂನಲ್ಲಿ ಮನವಿ

ಬಿಜೆಪಿಯ ಹದಿನಾರು ಬೆಂಬಲಿಗರು, ಸಹಾನುಭೂತಿ ಹೊಂದಿರುವವರ ಕೊಲೆಗೆ ಸಂಬಂಧಿಸಿದಂತೆ ತನಿಖೆ ನಡೆಸಲು ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸುವಂತೆಯೂ ವಕೀಲ ಘನಶ್ಯಾಮ್‌ ಉಪಾಧ್ಯಾಯ ಸಲ್ಲಿಸಿರುವ ಮನವಿಯಲ್ಲಿ ಕೋರಲಾಗಿದೆ.
ಪಶ್ಚಿಮ ಬಂಗಾಳದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಲು ಕೇಂದ್ರಕ್ಕೆ ನಿರ್ದೇಶಿಸುವಂತೆ ಕೋರಿ ಸುಪ್ರೀಂನಲ್ಲಿ ಮನವಿ
West Bengal Post Poll Violence, Supreme Court

ಪಶ್ಚಿಮ ಬಂಗಾಳದಲ್ಲಿ ವಿಧಾನಸಭೆ ಚುನಾವಣೆಯ ನಂತರ ಸಂಭವಿಸಿದ ಹಿಂಸಾಚಾರದ ಹಿನ್ನೆಲೆಯಲ್ಲಿ ಸಂವಿಧಾನದ 356ನೇ ವಿಧಿಯಡಿ ರಾಷ್ಟ್ರಪತಿ ಆಳ್ವಿಕೆ ಜಾರಿಗೊಳಿಸಲು ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ಸುಪ್ರೀಂ ಕೋರ್ಟ್‌ನಲ್ಲಿ ಮನವಿ ಸಲ್ಲಿಸಲಾಗಿದೆ.

ಬಿಜೆಪಿಯ ಹದಿನಾರು ಬೆಂಬಲಿಗರು, ಸಹಾನುಭೂತಿ ಹೊಂದಿರುವವರ ಕೊಲೆಗೆ ಸಂಬಂಧಿಸಿದಂತೆ ತನಿಖೆ ನಡೆಸಲು ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸುವಂತೆಯೂ ವಕೀಲ ಘನಶ್ಯಾಮ್‌ ಉಪಾಧ್ಯಾಯ ಸಲ್ಲಿಸಿರುವ ಮನವಿಯಲ್ಲಿ ಕೋರಲಾಗಿದೆ.

“ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದು ಬಿದ್ದಿದ್ದು, ಸಾಂವಿಧಾನಿಕ ಯಂತ್ರ ವಿಫಲವಾಗಿದೆ,” ಈ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕುರಿತು ವರದಿ ಸಲ್ಲಿಸುವಂತೆ ರಾಜ್ಯಪಾಲರಿಗೆ ಸೂಚಿಸುವಂತೆ ನ್ಯಾಯಾಲಯಕ್ಕೆ ಅರ್ಜಿದಾರರು ಕೋರಿದ್ದಾರೆ.

“ಪತ್ರಿಕೆಗಳು, ಸುದ್ದಿ ವಾಹಿನಿಗಳಲ್ಲಿ ವರದಿಯಾಗಿರುವುದು ಮತ್ತು ಸಾರ್ವಜನಿಕ ವಲಯದಲ್ಲಿರುವ ಪುರಾವೆಗಳಿಂದ ತಿಳಿದುಬರುವುದೇನೆಂದರೆ ಹದಿನಾರು ಬಿಜೆಪಿ ಕಾರ್ಯಕರ್ತರು, ಬೆಂಬಲಿಗರು, ಸಹಾನುಭೂತಿ ಹೊಂದಿದವರನ್ನು ಟಿಎಂಸಿ ಗೂಂಡಾಗಳಲ್ಲದೆ ಬೇರಾರು ಕೊಲೆ ಮಾಡಿಲ್ಲ. ಮೂರನೇ ಪ್ರತಿವಾದಿ (ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ) ಸೇರಿದಂತೆ ಅಧಿಕಾರದಲ್ಲಿರುವವರ ಒತ್ತಾಸೆಯಿಂದ ಆ ಕೊಲೆಗಳು ನಡೆದಿವೆ” ಎಂದು ಮನವಿಯಲ್ಲಿ ವಿವರಿಸಲಾಗಿದೆ.

ಜನರ ಜೀವ, ಸ್ವಾತಂತ್ರ್ಯ ಮತ್ತು ಅವರ ಆಸ್ತಿಯನ್ನು ರಕ್ಷಿಸಲು ಅದರಲ್ಲೂ ವಿಶೇಷವಾಗಿ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಎದುರಾಳಿ ಪಕ್ಷವಾದ ಬಿಜೆಪಿಗೆ ಮತ ಚಲಾಯಿಸಿದವರಿಗೆ ರಕ್ಷಣೆ ನೀಡುವಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್‌ ಸರ್ಕಾರವು ತನ್ನ ಅಧಿಕಾರ ಮತ್ತು ಜವಾಬ್ದಾರಿಯಿಂದ ವಿಮುಖವಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

Also Read
ಪಶ್ಚಿಮ ಬಂಗಾಳ ಚುನಾವಣೋತ್ತರ ಹಿಂಸಾಚಾರ: ಸಿಬಿಐ ತನಿಖೆ ಕೋರಿ ಸುಪ್ರೀಂ ಮೊರೆ ಹೋದ ಬಿಜೆಪಿ ವಕ್ತಾರ

ಚುನಾವಣೆಯಲ್ಲಿ ಎದುರಾಳಿ ಪಕ್ಷದ ಪರವಾಗಿ ನಿಂತ ಜನರನ್ನು ತುಳಿಯುವ ಉದ್ದೇಶದಿಂದ ಕೆಲವು ಪಕ್ಷಗಳು ಸರ್ವಾಧಿಕಾರ ಜಾರಿಗೊಳಿಸುವ ಪ್ರವೃತ್ತಿ ವ್ಯಾಪಕವಾಗುತ್ತಿದ್ದು, ಇದನ್ನು ತಕ್ಷಣ ತಹಬಂದಿಗೆ ತರುವ ಮೂಲಕ ದೇಶ ತಾಲಿಬಾನ್‌ ರೀತಿಯಾಗುವುದರಿಂದ ತಪ್ಪಿಸಬೇಕಿದೆ ಎಂದು ಅರ್ಜಿದಾರರು ಹೇಳಿದ್ದಾರೆ.

“ಭಾರತ ಸಂವಿಧಾನದ 356(1) ನೇ ವಿಧಿಯಡಿ ಪಶ್ಚಿಮ ಬಂಗಾಳದಲ್ಲಿ ರಾಷ್ಟ್ರಪತಿ ಆಡಳಿತ ಘೋಷಣೆ ಮಾಡಲು ರಾಷ್ಟ್ರಪತಿಯವರಿಗೆ ಸಲಹೆ ನೀಡಲು ಸಂವಿಧಾನದ 355ನೇ ವಿಧಿಯಲ್ಲಿ ಉಲ್ಲೇಖಿಸಿರುವಂತೆ ಕಾರ್ಯನಿರ್ವಹಿಸಲು ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸುವಂತೆ ಈ ಗೌರವಾನ್ವಿತ ನ್ಯಾಯಾಲಯವನ್ನು ಕೋರುತ್ತೇವೆ” ಎಂದು ಅರ್ಜಿದಾರರು ನ್ಯಾಯಾಲಯಕ್ಕೆ ಮೊರೆ ಇಟ್ಟಿದ್ದಾರೆ.

No stories found.
Kannada Bar & Bench
kannada.barandbench.com