ಹೆಚ್ಚಿನ ಮತದಾರರು ನೋಟಾ ಆಯ್ಕೆ ಮಾಡಿದ ಕ್ಷೇತ್ರದಲ್ಲಿ ಮರು ಮತದಾನ ನಡೆಸಲು ಕೋರಿ ಸಲ್ಲಿಸಲಾದ ಅರ್ಜಿಗೆ ಸುಪ್ರೀಂ ಕೋರ್ಟ್ ಶುಕ್ರವಾರ ಭಾರತೀಯ ಚುನಾವಣಾ ಆಯೋಗಕ್ಕೆ ನೋಟಿಸ್ ಜಾರಿ ಮಾಡಿದೆ.
ಸೂರತ್ ಲೋಕಸಭಾ ಕ್ಷೇತ್ರದಲ್ಲಿ ಒಬ್ಬೇ ಒಬ್ಬ ಅಭ್ಯರ್ಥಿ ಉಳಿದು ಅವರು ಅವಿರೋಧವಾಗಿ ಆಯ್ಕೆಯಾಗಿರುವುದರ ಕುರಿತು ಹಿರಿಯ ವಕೀಲ ಗೋಪಾಲ್ ಶಂಕರನಾರಾಯಣನ್ ಅವರು ಉಲ್ಲೇಖಿಸಿದ್ದನ್ನು ಆಧರಿಸಿ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರು ನೋಟಿಸ್ ಜಾರಿ ಮಾಡಿದ್ದಾರೆ.
“ನಾವು ನೋಟಿಸ್ ಜಾರಿ ಮಾಡುತ್ತೇವೆ. ಇದು ಚುನಾವಣಾ ಪ್ರಕ್ರಿಯೆಗೂ ಸಂಬಂಧಿಸಿದೆ. ಇದಕ್ಕೆ ಚುನಾವಣಾ ಆಯೋಗ ಏನು ಹೇಳುತ್ತದೆ ಎಂಬುದನ್ನು ನೋಡೋಣ” ಎಂದು ಸಿಜೆಐ ಹೇಳಿದ್ದಾರೆ.
ಸೂರತ್ ಲೋಕಸಭಾ ಕ್ಷೇತ್ರದ ಸದಸ್ಯರಾಗಿ ಬಿಜೆಪಿಯ ಮುಖೇಶ್ ದಲಾಲ್ ಅವರನ್ನು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಏಪ್ರಿಲ್ 22ರಂದು ಘೋಷಿಸಲಾಗಿದೆ. ಈ ಕ್ಷೇತ್ರಕ್ಕೆ ಮೇ 7ರಂದು ಚುನಾವಣೆ ನಡೆಯಬೇಕಿತ್ತು. ಏಳು ಅಭ್ಯರ್ಥಿಗಳು ನಾಮಪತ್ರ ಹಿಂಪಡೆದಿದ್ದು, ಕಾಂಗ್ರೆಸ್ ಅಭ್ಯರ್ಥಿ ನೀಲೇಶ್ ಕುಂಭಾನಿ ಅಫಿಡವಿಟ್ ಅನ್ನು ತಿರಸ್ಕರಿಸಿದ ಹಿನ್ನೆಲೆಯಲ್ಲಿ ದಲಾಲ್ ಚುನಾಯಿತರಾಗಿದ್ದಾರೆ ಎಂದು ಘೋಷಿಸಲಾಗಿದೆ.
1999ರ ಮೇ 29ರ ಕಾನೂನು ಆಯೋಗದ ಚುನಾವಣಾ ಕಾನೂನುಗಳ ಸುಧಾರಣೆ ಹೆಸರಿನ 170ನೇ ವರದಿಯ ಕುರಿತು ಶಿವ ಖೇರಾ ಎಂಬವರು ಸರ್ವೋಚ್ಚ ನ್ಯಾಯಾಲಯದಲ್ಲಿ ಸಲ್ಲಿಸಿರುವ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.
ಚಲಾವಣೆಯಾದ ಒಟ್ಟು ಮತದಲ್ಲಿ ಅಭ್ಯರ್ಥಿಯು ಶೇ. 50ರಷ್ಟು ಮತ ಪಡೆಯದಿದ್ದರೆ ಅವರನ್ನು ಚುನಾಯಿತರು ಎಂದು ಘೋಷಿಸಬಾರದು. ಬದಲಿಗೆ ಪರ್ಯಾಯ ವಿಧಾನ ಪಾಲಿಸಬೇಕು ಎಂದು ಕಾನೂನು ಆಯೋಗದ ವರದಿಯಲ್ಲಿ ಹೇಳಲಾಗಿದೆ.
ಕಣದಲ್ಲಿರುವ ಯಾವುದೇ ಅಭ್ಯರ್ಥಿಯನ್ನು ಆಯ್ಕೆ ಮಾಡಲು ಮತದಾರರು ಬಯಸದಿದ್ದರೆ ನಕಾರಾತ್ಮಕ ಮತ ಚಲಾಯಿಸಲು ಪರಿಚಯಿಸಬೇಕು ಎಂದು ಆಯೋಗವು ಹೆಚ್ಚುವರಿಯಾಗಿ ಪ್ರಸ್ತಾಪಿಸಿತ್ತು.
ಶೇ. 50ರಷ್ಟು ಮತ ಲೆಕ್ಕಹಾಕುವ ಉದ್ದೇಶಕ್ಕಾಗಿ ನಕಾರಾತ್ಮಕವಾಗಿ ಚಲಾವಣೆಯಾದ ಮತಗಳನ್ನುಕೂಡ ಚಲಾಯಿಸಲ್ಪಟ್ಟ ಮತ ಎಂದು ಪರಿಗಣಿಸಬೇಕು ಎಂದು ಶಿಫಾರಸ್ಸಿನಲ್ಲಿ ಹೇಳಲಾಗಿದೆ. ಚುನಾವಣೆಯಲ್ಲಿ ಯಾವುದೇ ಅಭ್ಯರ್ಥಿ ಶೇ. 50ರಷ್ಟು ಮತ ಪಡೆಯದಿದ್ದರೆ ಆ ಕ್ಷೇತ್ರದಲ್ಲಿ ಹೊಸದಾಗಿ ಚುನಾವಣೆ ನಡೆಸಬೇಕು ಎಂದು ಹೇಳಲಾಗಿದೆ.
ಹಲವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ನಗರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ನೋಟಾ ಆಯ್ಕೆಯನ್ನು ಕಾಲ್ಪನಿಕ ಮತದಾನ ಅಭ್ಯರ್ಥಿ ಎಂದು ಪರಿಗಣಿಸಲಾಗುತ್ತದೆ. ಅಲ್ಲಿ ಹೆಚ್ಚಿನ ಮತದಾರರು ನೋಟಾ ಆಯ್ಕೆ ಮಾಡಿದರೆ ಮರು ಚುನಾವಣೆ ನಡೆಸಲಾಗುತ್ತದೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.
ರಾಷ್ಟ್ರೀಯ ಮಟ್ಟದಲ್ಲಿ ನೋಟಾವನ್ನು ಕಾಲ್ಪನಿಕ ಅಭ್ಯರ್ಥಿ ಎಂಧು ಪರಿಗಣಿಸಿ ಜಾರಿ ಮಾಡುವಂತೆ ಭಾರತೀಯ ಚುನಾವಣಾ ಆಯೋಗಕ್ಕೆ ಮನವಿ ಮಾಡಿದ ಹೊರತಾಗಿಯೂ ಉತ್ತರ ಬರದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಲಾಗಿದೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.