ಕೋವಿಡ್ ಲಸಿಕೆ, ಆಮ್ಲಜನಕ ಸ್ಥಾವರಗಳಿಗಾಗಿ ಪಿಎಂ ಕೇರ್ಸ್ ನಿಧಿ ಬಳಸಲು ಸೂಚಿಸುವಂತೆ ಕೋರಿ ಸುಪ್ರೀಂಗೆ ಅರ್ಜಿ

ಕೋವಿಡ್ ರೋಗಿಗಳನ್ನು ದಾಖಲಿಸಿಕೊಳ್ಳಲು ಆಸ್ಪತ್ರೆಗಳು ಸಂಪೂರ್ಣ ನಿರಾಕರಿಸುತ್ತಿರುವುದರಿಂದ ಲಸಿಕೆ, ವೈದ್ಯಕೀಯ ಚಿಕಿತ್ಸೆ ಮತ್ತು ಇತರ ಅಗತ್ಯ ವಸ್ತುಗಳ ಕೊರತೆಯಿಂದಾಗಿ ಅನೇಕರು ತತ್ತರಿಸುತ್ತಿದ್ದಾರೆ ಎಂದು ಅರ್ಜಿದಾರರು ಹೇಳಿದ್ದಾರೆ.
Supreme Court and PM cares
Supreme Court and PM cares

ಕೋವಿಡ್‌ ಲಸಿಕೆ, ಆಮ್ಲಜನಕ ಘಟಕ/ಜನರೇಟರ್‌ ಸೌಲಭ್ಯವನ್ನು ಕಲ್ಪಿಸುವ ಸಂಬಂಧ 738 ಜಿಲ್ಲಾ ಆಸ್ಪತ್ರೆಗಳಿಗೆ ಪಿಎಂಕೇರ್ಸ್‌ ನಿಧಿ ಬಳಸಲು ಸೂಚಿಸುವಂತೆ ಕೋರಿ ಸುಪ್ರೀಂಕೋರ್ಟ್‌ನ ವಕೀಲರೊಬ್ಬರು ಸರ್ವೋಚ್ಚ ನ್ಯಾಯಾಲಯಕ್ಕೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ.

ಎಲ್ಲಾ ರಾಜ್ಯಗಳ ಸಂಸದರು ಮತ್ತು ಶಾಸಕಾಂಗ ಸಭೆಗಳ ಸದಸ್ಯರು (ಶಾಸಕರು) ತಮ್ಮ ಕ್ಷೇತ್ರಾಭಿವೃದ್ಧಿ ನಿಧಿಯನ್ನು ಪಾರದರ್ಶಕತೆಯಿಂದ ಹಾಗೂ ಶಿಸ್ತುಬದ್ಧವಾಗಿ ವಿನಿಯೋಗಿಸಲು ನಿರ್ದೇಶಿಸಬೇಕು ಎಂದು ಕೂಡ ಅರ್ಜಿದಾರ, ವಕೀಲ ವಿಪ್ಲವ್ ಶರ್ಮಾ ಮನವಿ ಸಲ್ಲಿಸಿದ್ದಾರೆ.

ಅರ್ಜಿಯಲ್ಲಿರುವ ಪ್ರಮುಖ ಅಂಶಗಳು ಏನು?

  • ಎಲ್ಲಾ ಖಾಸಗಿ / ದತ್ತಿ ಆಸ್ಪತ್ರೆಗಳು ತಮ್ಮ ವ್ಯಾಪ್ತಿಯಲ್ಲಿ ರೋಗಿಗಳಿಗೆ ವೈದ್ಯಕೀಯ ಗುಣಮಟ್ಟದ ಆಮ್ಲಜನಕ ಒದಗಿಸಲು ಸೂಕ್ತ ಸೌಕರ್ಯಗಳ ಅನುಷ್ಠಾನ, ಚಾಲನೆ, ಸಂಗ್ರಹಣೆ ಮುಂತಾದ ಸಿದ್ಧತೆಗಳ ಬಗ್ಗೆ ಖಾತರಿ ಪಡಿಸುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡಬೇಕು.

  • ಕೋವಿಡ್‌ ರೋಗಿಗಳನ್ನು ದಾಖಲಿಸಿಕೊಳ್ಳಲು ಆಸ್ಪತ್ರೆಗಳು ಸಂಪೂರ್ಣ ನಿರಾಕರಿಸುತ್ತಿರುವುದರಿಂದ ಲಸಿಕೆ, ವೈದ್ಯಕೀಯ ಚಿಕಿತ್ಸೆ ಮತ್ತಿತರ ಅಗತ್ಯ ವಸ್ತುಗಳ ಕೊರತೆಯಿಂದಾಗಿ ಅನೇಕರು ತತ್ತರಿಸುತ್ತಿದ್ದಾರೆ. ಹೀಗಾಗಿ 738 ಜಿಲ್ಲಾ ಆಸ್ಪತ್ರೆಗಳಿಗೆ ಕೋವಿಡ್‌ ಲಸಿಕೆ, ಆಮ್ಲಜನಕ ಘಟಕ/ಜನರೇಟರ್‌ ಸೌಲಭ್ಯ ಕಲ್ಪಿಸುವ ಸಂಬಂಧ ಪಿಎಂಕೇರ್ಸ್‌ ನಿಧಿ ಬಳಸಲು ಸೂಚಿಸಬೇಕು.

  • ವೈದ್ಯಕೀಯ ಸಲಕರಣೆಗಳಿಗೆ ವಿಧಿಸಲಾಗುವ ಆಮದು ಸುಂಕದಿಂದ ಕೇಂದ್ರ ಸರ್ಕಾರ ಮೂರು ತಿಂಗಳ ಮಟ್ಟಿಗೆ ವಿನಾಯಿತಿ ನೀಡಿದೆ. ಆದರೆ ದೇಶದ 300 ಕ್ಕೂ ಹೆಚ್ಚು ಪ್ರಮುಖ ಆಸ್ಪತ್ರೆಗಳಿಗೆ ಈ ಸಲಕರಣೆಗಳನ್ನು ಪೂರೈಸಲು ಈ ವಿನಾಯಿತಿಯ ಅವಧಿ ಸಾಕಾಗುವುದಿಲ್ಲ. ಆದ್ದರಿಂದ ಕಾಲಮಿತಿಯನ್ನು ವಿಸ್ತರಿಸಬೇಕು.

  • ಎಲ್ಲಾ ನಗರಗಳಲ್ಲಿ ವಿದ್ಯುತ್ ಮತ್ತಿತರ ಚಿತಾಗಾರಗಳನ್ನು ಸ್ಥಾಪಿಸಲು, ಅಸ್ತಿತ್ವದಲ್ಲಿರುವ ಚಿತಾಗಾರಗಳ ನಿರ್ವಹಣೆ ಮತ್ತು ಸುಧಾರಣೆಗೆ ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡಬೇಕು.

ಪಿಎಂ ಕೇಸ್‌ ನಿಧಿಯನ್ನು ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿಗೆ (ಎನ್‌ಡಿಆರ್‌ಎಫ್) ವರ್ಗಾಯಿಸಲು ನಿರ್ದೇಶನ ಕೋರಿ ಸಲ್ಲಿಸಿದ್ದ ಮನವಿಯನ್ನು 2020ರ ಆಗಸ್ಟ್‌ನಲ್ಲಿ ತಿರಸ್ಕರಿಸಿದ್ದ ಸುಪ್ರೀಂಕೋರ್ಟ್‌, ಪಿಎಂ ಕೇರ್ಸ್‌ ನಿಧಿಗೆ ಅಂಗೀಕಾರದ ಮುದ್ರೆಯೊತ್ತಿತ್ತು.

ತೀರಾ ಇತ್ತೀಚೆಗೆ, ಸಂವಿಧಾನದ 12ನೇ ವಿಧಿಯಂತೆ ಪಿಎಂ ಕೇರ್ಸ್ ನಿಧಿಯನ್ನು ʼದೇಶದ ಸ್ವತ್ತುʼ ಎಂದು ಘೋಷಿಸುವಂತೆ ಕೋರಿ ದೆಹಲಿ ಹೈಕೋರ್ಟ್ ಮುಂದೆ ಅರ್ಜಿ ಸಲ್ಲಿಸಲಾಗಿತ್ತು. ಮಾಹಿತಿ ಹಕ್ಕು ಕಾಯಿದೆಯಡಿ ಪಿಎಂ ಕೇರ್ಸ್‌ ನಿಧಿಯನ್ನು ಸಾರ್ವಜನಿಕ ನಿಧಿ ಎಂದು ಘೋಷಿಸುವಂತೆ ಕೋರಿರುವ ಮತ್ತೊಂದು ಅರ್ಜಿ ಕೂಡ ದೆಹಲಿ ಹೈಕೋರ್ಟ್‌ ಮುಂದೆ ಬಾಕಿ ಇದೆ.

Related Stories

No stories found.
Kannada Bar & Bench
kannada.barandbench.com