ಕೇಂದ್ರದ ಕಾನೂನಿನ ಮೂಲಕ 'ಜನಸಂಖ್ಯಾ ಸ್ಫೋಟ' ನಿಯಂತ್ರಣಕ್ಕೆ ಮನವಿ: ಭಾರತ ಸರ್ಕಾರದ ಪ್ರತಿಕ್ರಿಯೆ ಕೇಳಿದ ಸುಪ್ರೀಂ

ತೆರಿಗೆ ಪಾವತಿಸುವ ನಾಗರಿಕರು ಮಾತ್ರ ಪ್ರತಿ ಕುಟುಂಬಕ್ಕೆ ಎರಡು ಮಕ್ಕಳ ಸೂತ್ರ ಪಾಲಿಸುತ್ತಿದ್ದಾರೆ. ಆದರೆ ತೆರಿಗೆದಾರರ ಅನುದಾನದಿಂದ ರೂಪುಗೊಂಡ ಸಬ್ಸಿಡಿಗಳ ಪ್ರಯೋಜನ ಪಡೆಯುತ್ತಿರುವವರು ಆ ನಿಯಮ ಪಾಲಿಸುತ್ತಿಲ್ಲ ಎಂದು ಮನವಿಯಲ್ಲಿ ಆಕ್ಷೇಪ.
ಕೇಂದ್ರದ ಕಾನೂನಿನ ಮೂಲಕ 'ಜನಸಂಖ್ಯಾ ಸ್ಫೋಟ' ನಿಯಂತ್ರಣಕ್ಕೆ ಮನವಿ: ಭಾರತ ಸರ್ಕಾರದ ಪ್ರತಿಕ್ರಿಯೆ ಕೇಳಿದ ಸುಪ್ರೀಂ

ದೇಶದಲ್ಲಿ 'ಜನಸಂಖ್ಯಾ ಸ್ಫೋಟ' ತಡೆಯಲು ಕಾನೂನು ರೂಪಿಸಬೇಕು ಎಂಬ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಸೋಮವಾರ ಕೇಂದ್ರ ಸರ್ಕಾರದ ಪ್ರತಿಕ್ರಿಯೆ ಕೇಳಿದೆ [ದೇವಕಿನಂದನ್ ಠಾಕೂರ್ ಮತ್ತು ಭಾರತ ಒಕ್ಕೂಟ ಇನ್ನಿತರರ ನಡುವಣ ಪ್ರಕರಣ].

ಅರ್ಜಿಗೆ ಸಂಬಂಧಿಸಿದಂತೆ ನೋಟಿಸ್‌ ನೀಡಿದ ನ್ಯಾಯಮೂರ್ತಿಗಳಾದ ಎಸ್ ಅಬ್ದುಲ್ ನಜೀರ್ ಮತ್ತು ಜೆ ಕೆ ಮಹೇಶ್ವರಿ ಅವರನ್ನೊಳಗೊಂಡ ಪೀಠ ಬಿಜೆಪಿ ನಾಯಕ ಮತ್ತು ವಕೀಲ ಅಶ್ವಿನಿ ಉಪಾಧ್ಯಾಯ ಅವರು ಸಲ್ಲಿಸಿದ ಇದೇ ರೀತಿಯ ಮನವಿಯನ್ನು ಈ ಅರ್ಜಿಯೊಂದಿಗೆ ವಿಚಾರಣೆ ನಡೆಸಲು ನಿರ್ಧರಿಸಿತು. ವಕೀಲ ಅಶುತೋಷ್ ದುಬೆ ಮೂಲಕ ಅರ್ಜಿ ಸಲ್ಲಿಸಲಾಗಿದೆ.

ಮನವಿಯ ಪ್ರಮುಖಾಂಶಗಳು ಹೀಗಿವೆ:

  • ಶೇ 50ರಷ್ಟು ಸಮಸ್ಯೆಗಳಿಗೆ ಜನಸಂಖ್ಯಾ ಸ್ಫೋಟ ಕಾರಣ. ಆದರೆ ಕೇಂದ್ರ ಸರ್ಕಾರ ಏನನ್ನೂ ಮಾಡಿಲ್ಲ. ಹೀಗಾಗಿ ಈ ಪಿಐಎಲ್‌ ಸಲ್ಲಿಸಲಾಗುತ್ತಿದೆ.

  • ಸಂವಿಧಾನದ 14, 19, 21, 21ಎ ವಿಧಿಗಳ ಮೂಲಕ ಒದಗಿಸಲಾದ ಮೂಲಭೂತ ಹಕ್ಕುಗಳನ್ನು ಮುಖ್ಯವಾಗಿ ಕಾನೂನಿನ ಆಡಳಿತ, ಗಾಳಿ, ನೀರು, ಆಹಾರದ ಹಕ್ಕುಗಳು, ಆರೋಗ್ಯದ ಹಕ್ಕು, ನಿದ್ದೆಯ ಹಕ್ಕು, ಆಶ್ರಯದ ಹಕ್ಕು, ಜೀವಿಸುವ ಹಕ್ಕು, ನ್ಯಾಯ ಪಡೆಯುವ ಹಕ್ಕು, ಶಿಕ್ಷಣದ ಹಕ್ಕುಗಳನ್ನು ರಕ್ಷಿಸುವ ಸಲುವಾಗಿ ಕಟ್ಟುನಿಟ್ಟಾದ ಜನಸಂಖ್ಯಾ ನಿಯಂತ್ರಣ ಕಾನೂನನ್ನು ಜಾರಿಗೊಳಿಸುವ ಕಾರ್ಯಸಾಧ್ಯತೆಯನ್ನು ಖಚಿತಪಡಿಸಿಕೊಳ್ಳಲು ಕೇಂದ್ರಕ್ಕೆ ನಿರ್ದೇಶಿಸಬೇಕು.

  • ಪರ್ಯಾಯವಾಗಿ, ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಜನಸಂಖ್ಯೆ ನಿಯಂತ್ರಣ ಕಾನೂನುಗಳು ಮತ್ತು ಜನಸಂಖ್ಯೆ ನಿಯಂತ್ರಣ ನೀತಿಗಳನ್ನು ಪರಿಶೀಲಿಸಲು ಮತ್ತು ಮೂಲಭೂತ ಹಕ್ಕುಗಳನ್ನು ಪಡೆಯಬೇಕಾದರೆ ಜನಸಂಖ್ಯೆ ನಿಯಂತ್ರಣಕ್ಕೆ ಮುಂದಾಗಬೇಕು ಎಂದು ಸೂಚಿಸುವಂತೆ ದೇಶದ ಕಾನೂನು ಆಯೋಗಕ್ಕೆ ಸೂಚಿಸಬೇಕು (ಮೇಲಿನೆರಡೂ ಅಂಶಗಳ ಕುರಿತು ಮ್ಯಾಂಡಮಸ್‌ ರಿಟ್‌ ಹೊರಡಿಸುವಂತೆ ನ್ಯಾಯಾಲಯವನ್ನು ಕೋರಲಾಗಿದೆ).

  • ಬಲವಂತದ ಕುಟುಂಬ ಯೋಜನೆಗಳಿಗೆ ತಾನು ವಿರುದ್ಧ ಎಂದು ಕೇಂದ್ರ ಸರ್ಕಾರ ಡಿಸೆಂಬರ್ 2020ರಲ್ಲಿ ಹೇಳಿದ್ದು ಇದರಿಂದ ಸಮಸ್ಯೆಗಳು ಇನ್ನಷ್ಟು ಹೆಚ್ಚಿವೆ.

  • ಅನೇಕ ಬಾರಿ ಗರ್ಭ ಧರಿಸುವುದರಿಂದ ತಾಯಂದಿರು ಮತ್ತು ಶಿಶುಗಳ ಆರೋಗ್ಯದ ಮೇಲೆ ಮಾತ್ರವಲ್ಲದೆ ದೇಶದ ಬಹುತೇಕ ಬಡವರ ಮೇಲೆ ಪರಿಣಾಮ ಬೀರಲಿದೆ.

  • ತೆರಿಗೆ ಪಾವತಿಸುವ ನಾಗರಿಕರು ಮಾತ್ರ ಪ್ರತಿ ಕುಟುಂಬಕ್ಕೆ ಎರಡು ಮಕ್ಕಳ ಸೂತ್ರ ಪಾಲಿಸುತ್ತಿದ್ದಾರೆ. ಆದರೆ ತೆರಿಗೆದಾರರ ಅನುದಾನದಿಂದ ರೂಪುಗೊಂಡ ಸಬ್ಸಿಡಿಗಳ ಪ್ರಯೋಜನ ಪಡೆಯುತ್ತಿರುವವರು ಆ ನಿಯಮ ಪಾಲಿಸುತ್ತಿಲ್ಲ. ಕುಟುಂಬ ಯೋಜನೆ ಮತ್ತು ಗರ್ಭನಿರೋಧಕಗಳ ಬಳಕೆ ಅಂತಹವರಿಗೆ ಐಚ್ಛಿಕವಾಗಿ ಉಳಿಯಬಾರದು.

  • ಕಳ್ಳತನ, ಡಕಾಯಿತಿ, ದೋಚುವಿಕೆ, ಕೌಟುಂಬಿಕ ಹಿಂಸೆ, ಮಹಿಳೆಯರಿಗೆ ದೈಹಿಕ ಮತ್ತು ಮಾನಸಿಕ ಕಿರುಕುಳ, ಪ್ರತ್ಯೇಕತಾವಾದ, ಮತಾಂಧತೆ, ಕಲ್ಲು ತೂರಾಟ ಇತ್ಯಾದಿಗಳಿಗೆ ಜನಸಂಖ್ಯಾ ಸ್ಫೋಟ ಮೂಲ ಕಾರಣವಾಗಿದೆ. ಸುಮಾರು 80% ಅಪರಾಧಿಗಳು ಮತ್ತು ಅವರ ಪೋಷಕರು 'ನಾವಿಬ್ಬರು ನಮಗಿಬ್ಬರು' ಎಂಬ ನೀತಿ ಅನುಸರಿಸಿಲ್ಲ ಎಂಬುದು ಕಳ್ಳರು, ಡಕಾಯಿತರು, ದರೋಡೆಕೋರರು, ಅತ್ಯಾಚಾರಿಗಳು ಹಾಗೂ ಕೂಲಿಗಳ ಬಗ್ಗೆ ನಡೆಸಿದ ಸಮೀಕ್ಷೆಯಿಂದ ತಿಳಿದುಬಂದಿದೆ.

  • ಮೂಲಭೂತಹಕ್ಕುಗಳು ಜಾರಿಯಾಗುವಂತೆ ನೋಡಿಕೊಳ್ಳುವ ಮತ್ತು ನೊಂದವರಿಗೆ ಸಂಪೂರ್ಣ ನ್ಯಾಯ ಒದಗಿಸುವ ಸಲುವಾಗಿ ಹೊಸ ಹೊಣೆಗಾರಿಕೆಯ ತತ್ವಗಳನ್ನು ವಿಕಾಸಗೊಳಿಸಲು ಸುಪ್ರೀಂಕೋರ್ಟ್‌ಗೆ ಅಧಿಕಾರವಿದೆ.

Related Stories

No stories found.
Kannada Bar & Bench
kannada.barandbench.com