Karnataka High Court
Karnataka High Court

ಬೋರನಕಣಿವೆ ಜಲಾಶಯದ ನೀರು ಬೇರೆ ಕಡೆ ಹರಿಸುವುದನ್ನು ಸ್ಥಗಿತಗೊಳಿಸಲು ಮನವಿ: ಸರ್ಕಾರಕ್ಕೆ ಹೈಕೋರ್ಟ್‌ ನೋಟಿಸ್‌

ಮಳೆಯ ಕೊರತೆಯಿಂದ ಕಳೆದ 20 ವರ್ಷಗಳಿಂದ ಜಲಾಶಯ ಭರ್ತಿಯಾಗಿಲ್ಲ. ಸ್ಥಳೀಯ ಜನ‌, ಜಾನುವಾರು ಕುಡಿಯುವ ನೀರಿಗೆ ಈ ಜಲಾಶಯವು ಏಕಮಾತ್ರ ಮೂಲ. ಜಲಾಶಯದಿಂದ ಬೇರೆ ಕಡೆಗೆ ನೀರು ಹರಿಸಲಾಗುತ್ತಿದ್ದು ಸ್ಥಳೀಯರಿಗೆ ತೊಂದರೆ ಉಂಟಾಗಿದೆ ಎಂದು ಆಕ್ಷೇಪ.
Published on

ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿಯ ಬೋರನಕಣಿವೆ ಜಲಾಶಯದ ನೀರನ್ನು ಬೇರೆ ಕಡೆ ಹರಿಸುವುದನ್ನು ತಕ್ಷಣ ಸ್ಥಗಿತಗೊಳಿಸುವಂತೆ ಸಂಬಂಧಪಟ್ಟ ಇಲಾಖೆಗೆ ನಿರ್ದೇಶನ ನೀಡಬೇಕು ಎಂದು ಕೋರಿ ಸಲ್ಲಿಸಿರುವ ಅರ್ಜಿ ಸಂಬಂಧ ಕರ್ನಾಟಕ ಹೈಕೋರ್ಟ್ ಸೋಮವಾರ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿದೆ.

ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ತಿಮ್ಮನಹಳ್ಳಿ ಗ್ರಾಮದ ಎಲ್‌ ರಮೇಶ್‌ ಸೇರಿ 8 ಮಂದಿ ಗ್ರಾಮಸ್ಥರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎನ್‌ ವಿ ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆ ವಿ ಅರವಿಂದ್‌ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ಅರ್ಜಿದಾರರ ಪರ ವಕೀಲರ ವಾದ ಆಲಿಸಿದ ಪೀಠವು ಪ್ರತಿವಾದಿಗಳಾಗಿರುವ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಸಣ್ಣ ನೀರಾವರಿ ಮತ್ತು ಅಂತರ್ಜಲ ನೀರು ಅಭಿವೃದ್ಧಿ ಇಲಾಖೆ ಮತ್ತದರ ಸಹಾಯಕ ಕಾರ್ಯಕಾರಿ ಎಂಜಿನಿಯರ್‌, ತುಮಕೂರು ಜಿಲ್ಲಾಧಿಕಾರಿ, ತಿಪಟೂರು ಉಪ ವಿಭಾಗಾಧಿಕಾರಿ ಮತ್ತು ಚಿಕ್ಕನಾಯಕನಹಳ್ಳಿ ತಹಸೀಲ್ದಾರ್‌ಗೆ ನೋಟಿಸ್‌ ಜಾರಿ ಮಾಡಿತು.

ಅರ್ಜಿದಾರ ಪರ ವಕೀಲ ಎಸ್‌ ತ್ಯಾಗರಾಜ ಅವರು “ಚಿಕ್ಕನಾಯಕನಹಳ್ಳಿಯಲ್ಲಿ ಬೋರನಕಣಿವೆ ಎಂಬ ಜಲಾಶಯವಿದೆ. ಇದನ್ನು 1892ರಲ್ಲಿ ಮೈಸೂರು ಮಹಾರಾಜರು ಕಟ್ಟಿಸಿದ್ದರು. ರಾಜ್ಯದ ಮೊದಲ ಜಲಾಶಯ ಎಂಬ ಹೆಗ್ಗಳಿಕೆ ಪಡೆದಿದೆ. 2,269 ದಶ ಲಕ್ಷ ಘನ ಅಡಿ ನೀರಿನ ಸಂಗ್ರಹ ಸಾರ್ಮಥ್ಯವಿರುವ ಈ ಜಲಾಶಯವು, 330 ಚದರ ಮೈಲಿ ಜಲಾಯನ ಪ್ರದೇಶವನ್ನು ಹೊಂದಿದೆ” ಎಂದು ವಿವರಿಸಿದರು.

“ಜಲಾಶಯ ಮುಂಗಾರು ಮಳೆ ಆಧರಿಸಿದೆ. ಮಳೆಯ ಕೊರತೆಯಿಂದ ಕಳೆದ 20 ವರ್ಷಗಳಿಂದ ಈ ಜಲಾಶಯವು ಭರ್ತಿಯಾಗಿಲ್ಲ. ಸ್ಥಳೀಯ ಜನ‌ ಹಾಗೂ ಜಾನುವಾರು ಕುಡಿಯುವ ನೀರಿಗೆ ಈ ಜಲಾಶಯವು ಏಕಮಾತ್ರ ಮೂಲವಾಗಿದೆ. ಜಲಾಶಯದಿಂದ ಬೇರೆ ಕಡೆಗೆ ನೀರು ಹರಿಸಲಾಗುತ್ತಿದೆ. ಇದರಿಂದ ಸ್ಥಳೀಯ ಜನ‌ ಜಾನುವಾರುಗಳಿಗೆ ತೊಂದರೆ ಉಂಟಾಗಲಿದೆ. ಜಲಾಶಯದಿಂದ ಹೊರಗಡೆಗೆ ನೀರು ಹರಿಸದಂತೆ ಸಂಬಂಧಪಟ್ಟ ಸರ್ಕಾರಿ ಪ್ರಾಧಿಕಾರಗಳಿಗೆ ಸ್ಥಳೀಯರು ಮನವಿ ನೀಡಿದ್ದು, ಅದನ್ನು ಪರಿಗಣಿಸಿಲ್ಲ. ಆದ್ದರಿಂದ ಜಲಾಶಯದ ನೀರನ್ನು ಬೇರೆ ಕಡೆಗೆ ಹರಿಸುವುದಕ್ಕೆ ತಕ್ಷಣ ಸ್ಥಗಿತಗೊಳಿಸಲು ಸರ್ಕಾರ ಮತ್ತು ಸಂಬಂಧಪಟ್ಟ ಇಲಾಖೆಗೆ ನಿರ್ದೇಶಿಸಬೇಕು” ಎಂದು ಕೋರಿದರು.

Kannada Bar & Bench
kannada.barandbench.com