ಕೇರಳ ಸಿಎಂ ಪಿಣರಾಯಿ ವಿಜಯನ್ ಹಾಗೂ ಪುತ್ರಿ ವಿರುದ್ಧ ಲಂಚ ಆರೋಪ: ತನಿಖೆ ಕೋರಿ ವಿಚಕ್ಷಣಾ ನ್ಯಾಯಾಲಯಕ್ಕೆ ಅರ್ಜಿ

ಕೇರಳ ಮುಖ್ಯಮಂತ್ರಿ ಪುತ್ರಿ ವೀಣಾ ಥೈಕಂಡಿಯಿಲ್ ಒಡೆತನದ ಕಂಪೆನಿ ಸಿಎಂಆರ್‌ಎಲ್‌ನಿಂದ ₹ 1.72 ಕೋಟಿ ಹಣವನ್ನು ಅಕ್ರಮವಾಗಿ ಪಡೆದಿರುವುದನ್ನು ಪತ್ತೆ ಹಚ್ಚಿರುವುದಾಗಿ ಆದಾಯ ತೆರಿಗೆ ಅಧಿಕಾರಿಗಳು ಇತ್ತೀಚೆಗೆ ತಿಳಿಸಿದ್ದರು.
Chief Minister of Kerala, Pinarayi Vijayan
Chief Minister of Kerala, Pinarayi Vijayan

ಕೊಚ್ಚಿನ್‌ನ ಗಣಿಗಾರಿಕೆ ಮತ್ತು ರುಟೈಲ್‌ ಲಿಮಿಟೆಡ್‌ನೊಂದಿಗೆ (ಸಿಎಂಆರ್‌ಎಲ್‌) ಗಣಿಗಾರಿಕೆ ಹಾಗೂ ಇತರ ವ್ಯವಹಾರಗಳಿಗೆ ಸಂಬಂಧಿಸಿದಂತೆ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸೇರಿದಂತೆ ಉನ್ನತ ಹುದ್ದೆಯಲ್ಲಿರುವವರು ಲಂಚ ಪಡೆದಿದ್ದು ಅಧಿಕಾರ ದುರುಪಯೋಗಪಡಿಸಿಕೊಂಡಿದ್ದಾರೆ ಎಂಬ ಆರೋಪಗಳ ಕುರಿತಾಗಿ ತನಿಖೆ ನಡೆಸುವಂತೆ ಕೋರಿ ಕೇರಳ ವಿಚಕ್ಷಣಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗಿದೆ.  

ಪಿಣರಾಯಿ ಅವರ ಪುತ್ರಿ ವೀಣಾ ಥೈಕಂಡಿಯಿಲ್ ಒಡೆತನದ ಮಾಹಿತಿ ತಂತ್ರಜ್ಞಾನ ಸಂಸ್ಥೆಯಾದ ಎಕ್ಸಾಲಾಜಿಕ್ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್‌ಗೆ ಸಿಎಂಆರ್‌ಎಲ್‌ ₹ 1.72 ಕೋಟಿಗಳಷ್ಟು ಹಣವನ್ನು ಅಕ್ರಮವಾಗಿ ಪಾವತಿ ಮಾಡಿದೆ ಎಂದು ಆದಾಯ ತೆರಿಗೆ ಅಧಿಕಾರಿಗಳು ಇತ್ತೀಚೆಗೆ ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಮುವಾಟ್ಟುಪುಳದ ವಿಚಕ್ಷಣಾ ವಿಶೇಷ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗಿದೆ.

ವೀಣಾ ಅವರು ಅನಧಿಕೃತ ಲಾಭಕ್ಕಾಗಿ ಹಣ ಪಡೆದಿದ್ದಾರೆ ಎಂದು ಅರ್ಜಿದಾರರಾದ ಗಿರೀಶ್ ಬಾಬು ಅವರು ಆರೋಪಿಸಿದ್ದಾರೆ.

ಪಿಣರಾಯಿ ಅವರಲ್ಲದೆ ವಿರೋಧ ಪಕ್ಷದ ನಾಯಕ ಮತ್ತು ಕಾಂಗ್ರೆಸ್ ನಾಯಕ ರಮೇಶ್‌ ಚೆನ್ನಿತ್ತಲ, ರಾಜಕಾರಣಿಗಳಾದ ಕುಂಜಾಲಿ ಕುಟ್ಟಿ, ವಿ ಕೆ ಇಬ್ರಾಹಿಂ ಕುಂಜು ಮತ್ತು ಎ ಗೋವಿಂದನ್ ಸೇರಿದಂತೆ ಉನ್ನತ ಹುದ್ದೆಯಲ್ಲಿರುವವರು ಲಂಚ ಪಡೆದಿದ್ದಾರೆ ಎಂದು ಬಾಬು ಆರೋಪಿಸಿದ್ದಾರೆ.

ಈ ಎಲ್ಲರನ್ನೂ ಬಾಬು ಅವರ ಅರ್ಜಿ ಆರೋಪಿಗಳೆಂದು ಗುರುತಿಸಿದೆ. ತಾನು ವಿಚಕ್ಷಣಾ ದಳ ಹಾಗೂ ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರು ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅವರು ಹೇಳಿದ್ದಾರೆ.

Kannada Bar & Bench
kannada.barandbench.com