ಪಿಎಂ ಕೇರ್ಸ್ ಒಂದು ಸ್ವತಂತ್ರ ಸಾರ್ವಜನಿಕ ಧರ್ಮಾರ್ಥ ಟ್ರಸ್ಟ್‌, ಅದರ ಮೇಲೆ ಸರ್ಕಾರಗಳ ನಿಯಂತ್ರಣವಿಲ್ಲ: ಕೇಂದ್ರ

ಮಾಹಿತಿ ಹಕ್ಕು ಕಾಯಿದೆಯ ಸೆಕ್ಷನ್ 2(ಎಚ್)(ಡಿ)ಯಲ್ಲಿ ತಿಳಿಸಿರುವಂತೆ ನಿಧಿಯು ʼಸಾರ್ವಜನಿಕ ಪ್ರಾಧಿಕಾರʼ ಅಲ್ಲ ಹೀಗಾಗಿ ಆರ್‌ಟಿಐ ಕಾಯಿದೆಯ ನಿಬಂಧನೆಗಳನ್ನು ಕೂಡ ಟ್ರಸ್ಟ್ಗೆ ಅನ್ವಯಿಸಲು ಸಾಧ್ಯವಿಲ್ಲ ಎಂದು ಹೇಳಿದ ಕೇಂದ್ರ ಸರ್ಕಾರ
PM Cares Fund with Delhi HC
PM Cares Fund with Delhi HC
Published on

ನಾಗರಿಕರಿಗೆ ನೆರವು ಮತ್ತು ತುರ್ತು ಪರಿಸ್ಥಿತಿಗಳಲ್ಲಿ ಪರಿಹಾರ ಒದಗಿಸುವ ಪ್ರಧಾನಮಂತ್ರಿಗಳ ಪಿಎಂ ಕೇರ್ಸ್ ನಿಧಿಯನ್ನು ಸಂವಿಧಾನ ಅಥವಾ ಸಂಸದೀಯ ಕಾನೂನಿನ ಅಡಿ ರಚಿಸದೆ ಸ್ವತಂತ್ರ ಸಾರ್ವಜನಿಕ ಧರ್ಮಾರ್ಥ ಟ್ರಸ್ಟ್ ಆಗಿ ಸ್ಥಾಪಿಸಲಾಗಿದೆ ಎಂದು ಕೇಂದ್ರ ಸರ್ಕಾರ ದೆಹಲಿ ಹೈಕೋರ್ಟ್‌ಗೆ ತಿಳಿಸಿದೆ.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸೇರಿದಂತೆ ಯಾವುದೇ ಸರ್ಕಾರಗಳಿಗೆ ನಿಧಿಯ ಕಾರ್ಯನಿರ್ವಹಣೆ ಮೇಲೆ ನೇರ ಅಥವಾ ಪರೋಕ್ಷ ನಿಯಂತ್ರಣವಿಲ್ಲ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಪಿಎಂ ಕೇರ್ಸ್ ನಿಧಿ ಸ್ವಯಂಪ್ರೇರಿತ ದೇಣಿಗೆಗಳನ್ನು ಒಳಗೊಂಡಿದ್ದು ಸರ್ಕಾರದ ಬಜೆಟ್ ಮೂಲಗಳಿಂದ ಅಥವಾ ಸಾರ್ವಜನಿಕ ವಲಯದ ಉದ್ಯಮಗಳ ಆಯವ್ಯಯದಿಂದ ದೊರೆಯುವ ಕೊಡುಗೆಗಳನ್ನು ಅದು  ಸ್ವೀಕರಿಸುವುದಿಲ್ಲ ಎಂಬುದಾಗಿ ತಿಳಿಸಲಾಗಿದೆ.

ಮಾಹಿತಿ ಹಕ್ಕು ಕಾಯಿದೆಯ ಸೆಕ್ಷನ್ 2 (ಎಚ್) (ಡಿ)ಯಲ್ಲಿ ತಿಳಿಸಿರುವಂತೆ ನಿಧಿಯು ʼಸಾರ್ವಜನಿಕ ಪ್ರಾಧಿಕಾರʼ ಅಲ್ಲ ಹೀಗಾಗಿ ಆರ್‌ಟಿಐ ಕಾಯಿದೆಯ ನಿಬಂಧನೆಗಳನ್ನು ಕೂಡ ಟ್ರಸ್ಟ್‌ಗೆ ಅನ್ವಯಿಸಲು ಸಾಧ್ಯವಿಲ್ಲ ಎಂದು ಅದು ಹೇಳಿದೆ.

ಪಿಎಂ ಕೇರ್ಸ್ ನಿಧಿಯನ್ನು 'ಪ್ರಭುತ್ವʼ (ಭಾರತದ ಸರ್ಕಾರದ ಸ್ವಾಮ್ಯಕ್ಕೆ ಒಳಪಟ್ಟದ್ದು) ಎಂದು ಘೋಷಿಸುವಂತೆ ಕೋರಿ ಸಲ್ಲಿಸಲಾದ ಮನವಿಗೆ ಪ್ರತಿಕ್ರಿಯೆಯಾಗಿ  ಈ ಅಫಿಡವಿಟ್ ಸಲ್ಲಿಸಲಾಗಿದೆ. ಈ ಹಿಂದೆ ಕೇಂದ್ರ ಸರ್ಕಾರವು ಪಿಎಂ ಕೇರ್ಸ್‌ ಕುರಿತು ಸಲ್ಲಿಸಿದ್ದ ಒಂದು ಪುಟದ ಪ್ರತಿಕ್ರಿಯೆ ಬಗ್ಗೆ ಜುಲೈ 2022ರಲ್ಲಿ ದೆಹಲಿ ಹೈಕೋರ್ಟ್‌ ಅಸಮಾಧಾನ ವ್ಯಕ್ತಪಡಿಸಿತ್ತು.

ಇಂದು ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಶ್ಯಾಮ್ ದಿವಾನ್, ಉಪರಾಷ್ಟ್ರಪತಿಯಂತಹ ಸರ್ಕಾರದ ಉನ್ನತ ಹುದ್ದೆಯಲ್ಲಿರುವವರು ರಾಜ್ಯಸಭಾ ಸದಸ್ಯರಿಗೆ ದೇಣಿಗೆ ನೀಡುವಂತೆ ಮನವಿ ಮಾಡಿದ್ದಾರೆ ಎಂದು ವಾದಿಸಿದರು. ಕಾರ್ಯಾಂಗದ ಉನ್ನತ ಹುದ್ದೆಯಲ್ಲಿರುವ ಇವರೆಲ್ಲಾ ಅತ್ಯಂತ ಜವಾಬ್ದಾರಿಯುತ ವ್ಯಕ್ತಿಗಳಾಗಿದ್ದು ಪಿಎಂ ಕೇರ್ಸ್ ನಿಧಿಯನ್ನು ಸರ್ಕಾರದ ನಿಧಿ ಎನ್ನುವಂತೆ ಬಿಂಬಿಸಲಾಗಿದೆ ಎಂದು ಅವರು ಹೇಳಿದರು.

Also Read
ಪಿಎಂ ಕೇರ್ಸ್‌ ನಿಧಿ ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿ ಆಲಿಸಲು ನಿರಾಕರಿಸಿದ ಸುಪ್ರೀಂ; ಹೈಕೋರ್ಟ್‌ಗೆ ಎಡತಾಕಲು ಸೂಚನೆ

ಇದಕ್ಕೆ ಪ್ರತಿಕ್ರಿಯಿಸಿದ ಕೇಂದ್ರ ಸರ್ಕಾರವು, ಪಿಎಂ ಕೇರ್ಸ್ ನಿಧಿಯ ಮೇಲೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಯಾವುದೇ ನಿಯಂತ್ರಣವಿಲ್ಲ ಎಂದಿತು. ಆಡಳಿತಾತ್ಮಕ ಉದ್ದೇಶಗಳಿಗಾಗಿ ಮಾತ್ರ ಟ್ರಸ್ಟಿಗಳ ಮಂಡಳಿಯಲ್ಲಿ ಸಾರ್ವಜನಿಕ ಹುದ್ದೆಯಲ್ಲಿರುವವರು ಇದ್ದಾರೆಯೇ ಹೊರತು ಅದು ಸರ್ಕಾರದ ನಿಯಂತ್ರಣ ಅಥವಾ ಪ್ರಭಾವದ ದ್ಯೋತಕವಲ್ಲ ಎಂಬುದಾಗಿ ಸರ್ಕಾರ ಸಮರ್ಥಿಸಿಕೊಂಡಿತು.

ಇದಲ್ಲದೆ, ಸಾರ್ವಜನಿಕ ಧರ್ಮಾರ್ಥ (ಚಾರಿಟಬಲ್) ಟ್ರಸ್ಟ್ ಆಗಿರುವ ನಿಧಿಯು ಪಾರದರ್ಶಕವಾಗಿ ಕಾರ್ಯನಿರ್ವಹಿಸುತ್ತಿದ್ದು ಅದರ ಹಣವನ್ನು ಚಾರ್ಟರ್ಡ್ ಅಕೌಂಟೆಂಟ್‌ ಲೆಕ್ಕಪರಿಶೋಧನೆ ಮಾಡುತ್ತಿದ್ದಾರೆ. ಅವರು ಸಲ್ಲಿಸಿರುವ ವರದಿಗಳು ಪಿಎಂ ಕೇರ್ಸ್‌ ಜಾಲತಾಣ pmcares.gov.inನಲ್ಲಿ ಸಾರ್ವಜನಿಕರಿಗೆ ಲಭ್ಯ ಇವೆ ಎಂದು ತಿಳಿಸಿತು.

ಈ ನಿಧಿಯನ್ನು ಕೂಡ ಪ್ರಧಾನ ಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿಯಂತೆಯೇ ನಿರ್ವಹಣೆ ಮಾಡಲಾಗುತ್ತಿದ್ದು ಇದೇ ಕಾರಣಕ್ಕೆ ಅಂಥದ್ದೇ ಲಾಂಛನ ಮತ್ತು 'gov.in' ಎಂಬ ಡೊಮೇನ್ ಹೆಸರನ್ನು ಬಳಸಲಾಗುತ್ತಿದೆ. ಎರಡಕ್ಕೂ ಪ್ರಧಾನಮಂತ್ರಿಗಳೇ ಅಧ್ಯಕ್ಷರಾಗಿದ್ದಾರೆ ಎಂದು ಅದು ಒತ್ತಿ ಹೇಳಿತು.

ಅರ್ಜಿಯು ಊಹೆಗಳನ್ನು ಆಧರಿಸಿದ್ದು ತಾವು ನಿಧಿಯಿಂದ ವೈಯಕ್ತಿಕವಾಗಿ ಭಾದಿತರಾಗಿದ್ದೇವೆ ಎಂದು ಸಾಬೀತುಪಡಿಸಲು ಅರ್ಜಿದಾರರು ವಿಫಲವಾಗಿರುವುದರಿಂದ ಅವರ ಅರ್ಜಿ ವಜಾಗೊಳಿಸಲು ಸೂಕ್ತವಾಗಿದೆ ಎಂದು ಅದು ಹೇಳಿತು.

Kannada Bar & Bench
kannada.barandbench.com