ಸುಪ್ರೀಂ ಕೋರ್ಟ್ 2016ರಲ್ಲಿ ನಿರ್ದೇಶಿಸಿದರೂ ರಾಷ್ಟ್ರೀಯ ವಿಪತ್ತು ಉಪಶಮನ ನಿಧಿ (ಎನ್‌ಡಿಎಂಎಫ್) ರೂಪಿಸಿಲ್ಲ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಮತ್ತು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ವಿರುದ್ಧ ಸರ್ವೋಚ್ಚ ನ್ಯಾಯಾಲಯದಲ್ಲಿ ನ್ಯಾಯಾಂಗ ನಿಂದನಾ ಮನವಿ ಸಲ್ಲಿಸಲಾಗಿದೆ.
ಸ್ವರಾಜ್ಯ ಅಭಿಯಾನ್ ವರ್ಸಸ್ ಭಾರತ ಸರ್ಕಾರದ ಪ್ರಕರಣದ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ನಿರ್ದೇಶನಗಳಿಗೆ ಪ್ರತಿವಾದಿಗಳು ಉದ್ದೇಶಪೂರ್ವಕವಾಗಿ ಅಸಹಕಾರ ತೋರಿದ್ದಾರೆ ಎಂದು ಆರೋಪಿಸಿ ಮಹಾರಾಷ್ಟ್ರದ ಕಾಂಗ್ರೆಸ್ ವಕ್ತಾರ ಡಾ. ಸಂಜಯ್ ನೀಲಕಂಠರಾವ್ ಲಖೆ ಪಾಟೀಲ್ ಅರ್ಜಿಯಲ್ಲಿ ಆರೋಪಿಸಿದ್ದಾರೆ.
ಸಂಸತ್ತಿನಲ್ಲಿ ವಿಪತ್ತು ನಿರ್ವಹಣಾ ಕಾಯಿದೆ ಜಾರಿಯಾಗಿ ಹತ್ತು ವರ್ಷಗಳಾದರೂ ರಾಷ್ಟ್ರೀಯ ವಿಪತ್ತು ಉಪಶಮನ ನಿಧಿ ಸೃಷ್ಟಿಸಲಾಗಿಲ್ಲ. ಈ ಕಾರಣಕ್ಕಾಗಿ ಮೂರು ತಿಂಗಳ ಒಳಗಾಗಿ ನಿಧಿ ರೂಪಿಸಲು ನಿರ್ದೇಶನ ನೀಡಲಾಗಿದೆ.
ಪಿಎಂ ಕೇರ್ಸ್ ನಿಧಿಗೆ ದೇಣಿಗೆ ನೀಡುವ ಸಂಬಂಧ ತನಗೆ ಇಮೇಲ್ ಕಳುಹಿಸಲಾಗಿದೆ. ಆದರೆ, ಪಿಎಂಸಿಎಫ್‌ನ ಎಲ್ಲಾ ಉದ್ದೇಶಗಳು ಎನ್‌ಡಿಎಂಎಫ್ ಉದ್ದೇಶಗಳಾಗಿವೆ ಎಂದು ಪಾಟೀಲ್ ತಮ್ಮ ಮನವಿಯಲ್ಲಿ ವಾದಿಸಿದ್ದಾರೆ.
ಪಿಎಂ ಕೇರ್ಸ್ ನಿಧಿಯು ಎನ್‌ಡಿಎಂಎಫ್ ಅನ್ನು ಹೋಲುವುದರಿಂದ, ವಿಪತ್ತು ನಿರ್ವಹಣಾ ಕಾಯಿದೆ – 2005ರ ಅನುಸಾರ ಪಿಎಂ ಕೇರ್ಸ್ ನಿಧಿಯನ್ನು ಸಂಯೋಜಿಸಬೇಕು. ಅದನ್ನು, "ಪಿಎಂ ಕೇರ್ಸ್ ಫಂಡ್‌ನ ಮಂಡಳಿಯ ಟ್ರಸ್ಟಿಗಳ ಕೃಪೆಗೆ ಬಿಡಲಾಗುದು," ಎಂದು ಅರ್ಜಿಯಲ್ಲಿ ಹೇಳಲಾಗಿದೆ.