ಪ್ರಧಾನಿ ಮೋದಿ ಪದವಿ ಪ್ರಕರಣ: ಕೇಜ್ರಿವಾಲ್ ಆರ್‌ಟಿಐ ಕಾಯಿದೆಯ ಅಪಹಾಸ್ಯ ಮಾಡಿದ್ದಾರೆ ಎಂದ ಗುಜರಾತ್ ಹೈಕೋರ್ಟ್

ಪ್ರಧಾನಿ ಮೋದಿಯವರ ಶೈಕ್ಷಣಿಕ ಅರ್ಹತೆಗಳು ಈಗಾಗಲೇ ಆನ್‌ಲೈನ್‌ನಲ್ಲಿ ಲಭ್ಯವಿವೆ. ಆರ್‌ಟಿಐ ಮೂಲಕ ಅದನ್ನು ಬಹಿರಂಗಪಡಿಸುವುದು ಸಾರ್ವಜನಿಕ ಹಿತಾಸಕ್ತಿ ಎನಿಸಿಕೊಳ್ಳುವುದಿಲ್ಲ ಎಂಬ ಸಂಗತಿಯನ್ನು ನ್ಯಾಯಾಲಯದ ಗಮನಕ್ಕೆ ತರಲಾಯಿತು.
Gujarat High Court Arvind Kejriwal and Narendra Modi
Gujarat High Court Arvind Kejriwal and Narendra Modi A1

ಒಬ್ಬ ನಾಯಕನ ಶೈಕ್ಷಣಿಕ ಅರ್ಹತೆಗಿಂತ ಆತನ 'ಚಾರಿತ್ರ್ಯ', ಆತನಿಗೆ ಜನರ ಕಲ್ಯಾಣದ ಬಗೆಗೆ ಇರುವ ಕಾಳಜಿ ಮುಖ್ಯ ಎಂದು ಗುಜರಾತ್ ಹೈಕೋರ್ಟ್ ಶುಕ್ರವಾರ ಹೇಳಿದೆ. ಮಾಹಿತಿ ಹಕ್ಕು ಕಾಯಿದೆಯಡಿ ಪ್ರಧಾನಿ ಮೋದಿ ಅವರ ಪದವಿ ಮತ್ತು ಸ್ನಾತಕೋತ್ತರ ಪ್ರಮಾಣಪತ್ರಗಳನ್ನು ಒದಗಿಸುವಂತೆ ಗುಜರಾತ್ ವಿಶ್ವವಿದ್ಯಾಲಯ ಮತ್ತು ದೆಹಲಿ ವಿಶ್ವವಿದ್ಯಾಲಯಕ್ಕೆ ನಿರ್ದೇಶನ ನೀಡಿದ್ದ ಮುಖ್ಯ ಮಾಹಿತಿ ಆಯೋಗದ (ಸಿಐಸಿ) ಆದೇಶವನ್ನು ರದ್ದುಗೊಳಿಸಿದ ಸಂದರ್ಭದಲ್ಲಿ ಅದು ಈ ವಿಚಾರ ತಿಳಿಸಿದೆ.

ನಾಯಕರು ಚುನಾವಣೆಗೆ ಸ್ಪರ್ಧಿಸಲ ಶೈಕ್ಷಣಿಕ ಅರ್ಹತೆ ಕಡ್ಡಾಯವಲ್ಲ ಎಂದಿರುವ ನ್ಯಾ. ಬಿರೇನ್‌ ವೈಷ್ಣವ್‌ ಅವರು ಸಂಸತ್ತಿಗೆ ಅಥವಾ ರಾಜ್ಯ ವಿಧಾನಸಭೆಗಳಿಗೆ ಚುನಾಯಿತರಾದ ಹೆಚ್ಚಿನ ಅಭ್ಯರ್ಥಿಗಳು 'ಪದವಿ ಅಥವಾ ಸ್ನಾತಕೋತ್ತರ ಪದವೀಧರರಲ್ಲದಿದ್ದರೂ ತಕ್ಕಮಟ್ಟಿಗೆ ವಿದ್ಯಾವಂತರಾಗಿದ್ದಾರೆ.' ಎಂದು ತಿಳಿಸಿದ್ದಾರೆ.

Also Read
ಪ್ರಧಾನಿ ಮೋದಿ ಪದವಿ ಪ್ರಮಾಣ ಪತ್ರ ಒದಗಿಸಲು ಸೂಚಿಸಿದ್ದ ಸಿಐಸಿ ಆದೇಶ ವಜಾಗೊಳಿಸಿದ ಗುಜರಾತ್ ಹೈಕೋರ್ಟ್; ಕೇಜ್ರಿಗೆ ದಂಡ

ಈ ಸಂಬಂಧ ನ್ಯಾಯಾಲಯ ಪ್ರತಿವಾದಿಗಳಾದ ಮುಖ್ಯ ಮಾಹಿತಿ ಆಯುಕ್ತ (ಸಿಐಸಿ) ಮತ್ತು ಅರ್ಜಿ ಸಲ್ಲಿಸಿದ್ದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ತರಾಟೆಗೆ ತೆಗೆದುಕೊಂಡಿತು. ಜೊತೆಗೆ ಕೇಜ್ರಿವಾಲ್‌ ಅವರಿಗೆ ರೂ 25,000 ದಂಡವನ್ನೂ ವಿಧಿಸಿತು.

ನ್ಯಾಯಾಲಯ ಹೇಳಿದ್ದೇನು?

  • ಅನಕ್ಷರಸ್ಥ ಅಭ್ಯರ್ಥಿಗಳ ಬಗ್ಗೆ ಕೀಳಾಗಿ ಯೋಚಿಸುವುದು ವಾಸ್ತವಿಕವಾಗಿ ತಪ್ಪು ಊಹೆಯನ್ನಾಧರಿಸಿದೆ. ಶಾಸಕಾಂಗ ಹಾಗೂ ಸಾರ್ವಜನಿಕ ಜೀವನದ ಅನುಭವ, ಘಟನೆಗಳನ್ನು ಗಮನಿಸಿದರೆ ಸುಶಿಕ್ಷಿತ ಶಾಸಕರು ಹಾಗೂ ಕಡಿಮೆ ವಿದ್ಯಾವಂತರ ನಡುವಿನ ವ್ಯತ್ಯಾಸ ತೆಳುವಾದುದಾಗಿದೆ ಎಂಬುದು ತಿಳಿಯುತ್ತದೆ. ಕರ್ತವ್ಯದೆಡೆಗೆ ಬದ್ಧತೆ ಮತ್ತು ಜನರ ಕಲ್ಯಾಣದ ಕಾಳಜಿಯ ಹಿನ್ನೆಲೆಯಲ್ಲಿ ವ್ಯಕ್ತಿಯ ಗುಣಸ್ವಭಾವವು ಹೆಚ್ಚು ಮುಖ್ಯವಾಗಿದ್ದು, ಈ ಗುಣಲಕ್ಷಣಗಳು ಸುಶಿಕ್ಷಿತ ವ್ಯಕ್ತಿಗಳ ಏಕಸ್ವಾಮ್ಯವಲ್ಲ.

  • ಸಿಇಸಿಯು ಕೇಜ್ರಿವಾಲ್‌ ಅವರ 'ಮೌಖಿಕ' ಮನವಿಯ ಮೇಲೆ ವಿವೇಚನಾರಹಿತವಾಗಿ ಆದೇಶ ನೀಡಿದೆ.

  • ಆರ್‌ಟಿಐ ಕಾಯಿದೆಯ ನಿಯಮಾವಳಿಗಳನ್ನು ಕೇಜ್ರಿವಾಲ್‌ ವಿವೇಚನಾರಹಿತವಾಗಿ ದುರ್ಬಳಕೆ ಮಾಡಿಕೊಂಡಿದ್ದಾರೆ, ಉಪೇಕ್ಷೆಯಿಂದ ಅಪಹಾಸ್ಯ ಮಾಡಿದ್ದಾರೆ.

  • ಅಭ್ಯರ್ಥಿಯೊಬ್ಬರ ಶೈಕ್ಷಣಿಕ ಅರ್ಹತೆಯನ್ನು ಅಫಿಡವಿಟ್‌ನಲ್ಲಿ ನಮೂದಿಸುವ ಬಗ್ಗೆ ಮಾತ್ರವೇ ಕಾನೂನು ತಿಳಿಸುತ್ತದೆ. ಆದರೆ, ಎಲ್ಲಿಯೂ ಅದು ಮೊದಲು ಅಭ್ಯರ್ಥಿಯು ಸಂಬಂಧಪಟ್ಟ (ಶೈಕ್ಷಣಿಕ) ದಾಖಲೆಗಳನ್ನು ಲಗತ್ತಿಸಲು ಹಾಗೂ ಆನಂತರ ಅದನ್ನು ಸಾರ್ವಜನಿಕಗೊಳಿಸುವುದು ಅಭ್ಯರ್ಥಿಯ ಶಾಸನಬದ್ಧ ಕರ್ತವ್ಯವೆಂದು ಹೇಳಿಲ್ಲ.

  • ತನ್ನ ಕ್ರಿಮಿನಲ್‌ ಹಿನ್ನೆಲೆ ಮತ್ತು ಆರ್ಥಿಕ ಮಾಹಿತಿಯನ್ನು ಬಹಿರಂಗಪಡಿಸಬೇಕು ಎಂದು ಕಾನೂನು ಬಯಸುತ್ತದೆ.

  • ನರೇಂದ್ರ ಮೋದಿ ಅವರ ಪದವಿಯ ಮಾಹಿತಿಯನ್ನು ಬಹಿರಂಗಪಡಿಸುವುದರಲ್ಲಿ ಯಾವುದೇ ಸಾರ್ವಜನಿಕ ಹಿತಾಸಕ್ತಿ  ಇಲ್ಲ.  

  • ಗುಜರಾತ್‌ ವಿಶ್ವವಿದ್ಯಾಲಯ ಜಾಲತಾಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಪ್ರಮಾಣಪತ್ರಗಳು ಲಭ್ಯ ಇವೆ.

  • ಮಾಹಿತಿ ಆಯಕ್ತರು ತಮ್ಮ ಆದೇಶ ನೀಡಲು ತಮ್ಮ ತಂದೆಯವರ ಸಿದ್ಧಾಂತದ ಉದಾಹರಣೆ ನೀಡಿರುವುದು ಆಶ್ಚರ್ಯಕ್ಕಿಂತಲೂ ಹೆಚ್ಚು ಆಘಾತಕಾರಿ. ಅರೆ ನ್ಯಾಯಿಕ ಪ್ರಾಧಿಕಾರವಾದ, ದ್ವಿತೀಯ ಹಂತದಲ್ಲಿ ಮೇಲ್ಮನವಿಯನ್ನು ಆಲಿಸುವಂತಹ ಕೇಂದ್ರ ಮಾಹಿತಿ ಆಯೋಗವು ಈ ರೀತಿ ಅಧಿಕಾರ ಚಲಾಯಿಸುತ್ತದೆ ಎಂದರೆ ನಂಬಲು ಸಾಧ್ಯವಿಲ್ಲ.

  • ಮಾಹಿತಿ ಆಯುಕ್ತರು ನ್ಯಾಯಾಂಗ ಆಯೋಗ ಮತ್ತು ಸಾರ್ವಜನಿಕ ವೇದಿಕೆಯ ನಡುವೆ ವ್ಯತ್ಯಾಸ ಮರೆತಿದ್ದಾರೆ ಎಂದು ತೋರುತ್ತದೆ. ಮಾಹಿತಿ ಆಯೋಗದ ಅವಲೋಕನ ಮತ್ತು ತಾರ್ಕಿಕತೆಗಳು ಆಯೋಗ ಪಾಲಿಸಬೇಕಿದ್ದ ನ್ಯಾಯಿಕ ಅಂಶಗಳನ್ನು ಮೀರಿದ್ದಾಗಿದೆ.

ಕೇಜ್ರಿವಾಲ್‌ ಪರವಾಗಿ ಹಿರಿಯ ನ್ಯಾಯವಾದಿಗಳಾದ ಪೆರ್ಸಿ ಕವೀನ, ಗುಜರಾತ್‌ ವಿಶ್ವವಿದ್ಯಾಲಯದ ಪರವಾಗಿ ಹಿರಿಯ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ, ಕೇಂದ್ರ ಸರ್ಕಾರದ ಪರವಾಗಿ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ದೇವಾಂಗ್‌ ವ್ಯಾಸ್‌, ಸಿಐಸಿ ಪರವಾಗಿ ವಕೀಲ ಶಿವಾಂಗ್‌ ಶಾ ವಾದ ಮಂಡಿಸಿದರು.

Related Stories

No stories found.
Kannada Bar & Bench
kannada.barandbench.com