ಪ್ರಧಾನಿ ಮೋದಿ ಪದವಿ ವಿವಾದ: ಅರವಿಂದ್ ಕೇಜ್ರಿವಾಲ್, ಸಂಜಯ್ ಸಿಂಗ್ ಸಮನ್ಸ್ ರದ್ದತಿಗೆ ಗುಜರಾತ್ ನ್ಯಾಯಾಲಯ ನಕಾರ

ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ಜಯೇಶ್‌ಭಾಯ್‌ ಚೋವಾಟಿಯಾ ಅವರು ಕಳೆದ ಏಪ್ರಿಲ್ 17ರಂದು ಸಮನ್ಸ್ ಜಾರಿಗೊಳಿಸಿದ್ದು, ಕೇಜ್ರಿವಾಲ್ ಮತ್ತು ಸಿಂಗ್ ನೀಡಿದ ಹೇಳಿಕೆಗಳು ಮೇಲ್ನೋಟಕ್ಕೆ ಮಾನಹಾನಿಕರವಾಗಿವೆ ಎಂದಿದ್ದರು.
Arvind Kejriwal, Sanjay Singh
Arvind Kejriwal, Sanjay Singh
Published on

ಪ್ರಧಾನಿ ನರೇಂದ್ರ ಮೋದಿಯವರ ಶೈಕ್ಷಣಿಕ ಪದವಿಗೆ ಸಂಬಂಧಿಸಿದಂತೆ ಮಾನಹಾನಿಕರ ಹೇಳಿಕೆಗಳನ್ನು ನೀಡಿದ್ದಕ್ಕಾಗಿ ತಮ್ಮ ಖುದ್ದು ಹಾಜರಿಗೆ ಸೂಚಿಸಿ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯ ಹೊರಡಿಸಿದ್ದ ಸಮನ್ಸ್‌ ಆದೇಶ ಪ್ರಶ್ನಿಸಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಸಂಸದ ಸಂಜಯ್‌ ಸಿಂಗ್‌ ಸಲ್ಲಿಸಿದ್ದ ಮರುಪರಿಶೀಲನಾ ಅರ್ಜಿಯನ್ನು ಅಹಮದಾಬಾದ್‌ನ ಸೆಷನ್ಸ್ ನ್ಯಾಯಾಲಯ ಗುರುವಾರ ತಿರಸ್ಕರಿಸಿದೆ  [ಅರವಿಂದ್‌ ಕೇಜ್ರಿವಾಲ್‌ ಮತ್ತು ಗುಜರಾತ್‌ ಸರ್ಕಾರ ಇನ್ನಿತರರ ನಡುವಣ ಪ್ರಕರಣ].

ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಸಮನ್ಸ್ ನೀಡುವ ಮೊದಲು ಎಲ್ಲಾ ಸಂದರ್ಭ ಮತ್ತು ಸನ್ನಿವೇಶಗಳನ್ನು ಪರಿಗಣಿಸಿದೆ ಎಂದು ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಜೆ ಎಂ ಬ್ರಹ್ಮಭಟ್ ಅವರು 21 ಪುಟಗಳ ಆದೇಶದಲ್ಲಿ ತಿಳಿಸಿದ್ದಾರೆ.

ಮ್ಯಾಜಿಸ್ಟ್ರೇಟ್ ಆದೇಶದಲ್ಲಿ ಕಾನೂನುಬಾಹಿರ ಅಥವಾ ದುರಾಗ್ರಹದ ಅಂಶಗಳೇನೂ ಕಂಡುಬಂದಿಲ್ಲ. ಹಾಗಾಗಿ, ಅಧಿಕಾರ ವ್ಯಾಪ್ತಿ ಮೀರಿ ಸಮನ್ಸ್‌ ಆದೇಶ ರವಾನಿಸಲಾಗಿದೆ ಎನ್ನಲಾಗದು ಎಂದು ಸೆಷನ್ಸ್‌ ನ್ಯಾಯಾಲಯ ತಿಳಿಸಿದೆ.

"ಮ್ಯಾಜಿಸ್ಟ್ರೇಟ್ ಅವರು ಆಡಿಯೋ-ವಿಡಿಯೋ ರೆಕಾರ್ಡಿಂಗ್ ಮತ್ತು ದಾಖಲೆಯಲ್ಲಿರುವ ಸಾಕ್ಷ್ಯಗಳನ್ನು ವೀಕ್ಷಿಸಿದ್ದಾರೆ. ಜೊತೆಗೆ ಅರ್ಜಿದಾರರು ಗುಜರಾತ್ ವಿಶ್ವವಿದ್ಯಾಲಯದ ಪ್ರತಿಷ್ಠೆಗೆ ಧಕ್ಕೆ ತರುವಂತಹ ಪದಗಳನ್ನು ಬಳಸಿದ್ದಾರೆ ಎಂಬ ತೀರ್ಮಾನಕ್ಕೆ ಬಂದಿದ್ದಾರೆ. ಈ ಕಾರಣಕ್ಕೆ ಅರ್ಜಿದಾರರ ವಿರುದ್ಧ ಪ್ರಾಥಮಿಕ ಪ್ರಕರಣ ಇರುವುದನ್ನು ಮ್ಯಾಜಿಸ್ಟ್ರೇಟ್ ಕಂಡುಕೊಂಡಿದ್ದಾರೆ" ಎಂದು ಸೆಷನ್ಸ್ ನ್ಯಾಯಾಲಯ ವಿವರಿಸಿದೆ.

Kannada Bar & Bench
kannada.barandbench.com