ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಪದವಿ ಪ್ರಮಾಣಪತ್ರಕ್ಕೆ ಸಂಬಂಧಿಸಿದಂತೆ ಹಿಂದೆ ನೀಡಿದ ಆಕ್ಷೇಪಾರ್ಹ ಹೇಳಿಕೆಗಳ ಕುರಿತು ಗುಜರಾತ್ ವಿಶ್ವವಿದ್ಯಾಲಯವು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರುದ್ಧ ಹೂಡಿರುವ ಮಾನಹಾನಿ ದಾವೆಯ ಪ್ರಕ್ರಿಯೆಗೆ ತಡೆ ನೀಡಲು ಶುಕ್ರವಾರ ಸುಪ್ರೀಂ ಕೋರ್ಟ್ ನಿರಾಕರಿಸಿದೆ [ಅರವಿಂದ್ ಕೇಜ್ರಿವಾಲ್ ವರ್ಸಸ್ ಗುಜರಾತ್ ಸರ್ಕಾರ ಮತ್ತು ಇತರರು].
ಪ್ರಕರಣವು ಗುಜರಾತ್ ಹೈಕೋರ್ಟ್‌ನಲ್ಲಿ ವಿಚಾರಣೆಗೆ ಆಗಸ್ಟ್ 29ಕ್ಕೆ ನಿಗದಿಯಾಗಿದೆ ಎಂದು ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ಎಸ್ ವಿ ಎನ್ ಭಟ್ಟಿ ಅವರ ನೇತೃತ್ವದ ವಿಭಾಗೀಯ ಪೀಠ ಹೇಳಿದೆ. ಹೀಗಾಗಿ, ಯಾವುದೇ ಆದೇಶ ಮಾಡಲು ಸುಪ್ರೀಂ ಕೋರ್ಟ್ ಹಿಂದೆ ಸರಿದಿದ್ದು, ಆಗಸ್ಟ್ 29ರಂದು ಗುಜರಾತ್ ಹೈಕೋರ್ಟ್ ಪ್ರಕರಣ ನಿರ್ಧರಿಸಲಿದೆ ಎಂಬ ನಂಬಿಕೆ ಮತ್ತು ಭರವಸೆ ವ್ಯಕ್ತಪಡಿಸಿದೆ.
ಕೇಜ್ರಿವಾಲ್ ಮತ್ತು ಸಂಜಯ್ ಸಿಂಗ್ ವಿರುದ್ಧದ ಪ್ರಕ್ರಿಯೆಗೆ ತಡೆ ನೀಡಲು ಹೈಕೋರ್ಟ್ ನ್ಯಾಯಮೂರ್ತಿ ಸಮೀರ್ ದವೆ ನಿರಾಕರಿಸಿದ ಹಿನ್ನೆಲೆಯಲ್ಲಿ ಅದನ್ನು ಪ್ರಶ್ನಿಸಿ ಕೇಜ್ರಿವಾಲ್ ಅವರು ಸಲ್ಲಿಸಿರುವ ಮೇಲ್ಮನವಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ನ ಇತ್ತೀಚೆಗೆ ನಡೆಸಿತು.
ಕೇಜ್ರಿವಾಲ್ ಮತ್ತು ಸಂಜಯ್ ಸಿಂಗ್ ಅವರು ನೀಡಿರುವ ಹೇಳಿಕೆಗಳು ಮೇಲ್ನೋಟಕ್ಕೆ ಮಾನಹಾನಿ ಉಂಟು ಮಾಡುವಂತಿವೆ ಎಂದು ಏಪ್ರಿಲ್ 17ರಂದು ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ಹೇಳಿದ್ದರು. ಪೆನ್‌ಡ್ರೈವ್ ಮೂಲಕ ಮೌಖಿಕ ಮತ್ತು ಡಿಜಿಟಲ್ ಸಾಕ್ಷಿ ಸಲ್ಲಿಸಿರುವುದನ್ನು ಪರಿಗಣಿಸಿ ನ್ಯಾಯಾಲಯವು ಆದೇಶಿಸಿತ್ತು.