ಪ್ರಧಾನಿ ಮೋದಿ ಕುರಿತ ಸಾಕ್ಷ್ಯಚಿತ್ರ: ದೆಹಲಿ ನ್ಯಾಯಾಲಯ ಪ್ರಕರಣದ ವಿಚಾರಣೆ ನಡೆಸುವ ವ್ಯಾಪ್ತಿ ಹೊಂದಿಲ್ಲ ಎಂದ ಬಿಬಿಸಿ

ಪ್ರಧಾನಿ ಮೋದಿ ಅವರ ಕುರಿತು ಬಿಬಿಸಿ ರೂಪಿಸಿರುವ ಸಾಕ್ಷ್ಯಚಿತ್ರದಲ್ಲಿ ಬಿಜೆಪಿ, ಆರ್‌ಎಸ್‌ಎಸ್‌ ಮತ್ತು ವಿಎಚ್‌ಪಿಯನ್ನು ಅವಮಾನಿಸಲಾಗಿದೆ ಎಂದು ಬಿಜೆಪಿ ನಾಯಕ ಬಿನಯ್‌ ಕುಮಾರ್‌ ಸಿಂಗ್‌ ಬಿಬಿಸಿ ವಿರುದ್ಧ ದಾವೆ ಹೂಡಿದ್ದಾರೆ.
India : The Modi Question
India : The Modi Question

ಪ್ರಧಾನಿ ನರೇಂದ್ರ ಮೋದಿ ಅವರ ಕುರಿತು ತಾನು ರೂಪಿಸಿರುವ ಸಾಕ್ಷ್ಯಚಿತ್ರಕ್ಕೆ ಆಕ್ಷೇಪಿಸಿ ಬಿಜೆಪಿಯ ನಾಯಕರೊಬ್ಬರು ದಾಖಲಿಸಿರುವ ಮಾನಹಾನಿ ದಾವೆಯ ವಿಚಾರಣೆ ನಡೆಸುವ ವ್ಯಾಪ್ತಿಯನ್ನು ದೆಹಲಿ ನ್ಯಾಯಾಲಯ ಹೊಂದಿಲ್ಲ ಎಂದು ಗುರುವಾರ ಬ್ರಿಟಿಷ್‌ ಬ್ರಾಡ್‌ಕಾಸ್ಟಿಂಗ್‌ ಕಂಪೆನಿ (ಬಿಬಿಸಿ) ವಾದಿಸಿದೆ.

ಬಿಬಿಸಿ ಮತ್ತು ವಿಕಿಪೀಡಿಯಾ ಪರವಾಗಿ ಹಾಜರಾಗಿದ್ದ ವಕೀಲರು ಎರಡೂ ವಿದೇಶಿ ಸಂಸ್ಥೆಗಳಾಗಿದ್ದು, ಸರಿಯಾದ ರೀತಿಯಲ್ಲಿ ಅರ್ಜಿ ತಲುಪಿಸಲಾಗಿಲ್ಲ. ತಾವು ಪ್ರತಿಭಟನೆಯ ಭಾಗವಾಗಿ ವಿಚಾರಣೆಯಲ್ಲಿ ಭಾಗಿಯಾಗಿರುವುದಾಗಿ ಹೇಳಿದರು.

"ಫಿರ್ಯಾದಿ ಬಿನಯ್‌ ಕುಮಾರ್‌ ಸಿಂಗ್‌ ಅವರ ಪರ ವಕೀಲರು ಭೌತಿಕವಾಗಿ ಬಿಬಿಸಿಗೆ ದಾವೆಯ ಅರ್ಜಿ ನೀಡಲು ಸಿದ್ಧವಿರುವುದಾಗಿ ತಿಳಿಸಿದರು. ಇದಕ್ಕೆ ಆಕ್ಷೇಪಿಸಿದ ಬಿಬಿಸಿ ವಕೀಲರು ಈ ನಡೆಯು ಹೇಗ್‌ ಒಪ್ಪಂದದಡಿ ತಮ್ಮ ಹಕ್ಕಿಗೆ ಹಾನಿ ಉಂಟು ಮಾಡಲಿದೆ. ಈ ವಿಚಾರದ ಕುರಿತು ವಾದಿಸಲು ತನಗೆ ಕಾಲಾವಕಾಶಬೇಕು ಎಂದು ಹೇಳಿದ್ದಾರೆ" ಎಂದು ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರಾದ ರುಚಿಕಾ ಸಿಂಗ್ಲಾ ಅವರು ಆದೇಶದಲ್ಲಿ ದಾಖಲಿಸಿದ್ದಾರೆ. ಅಂತಿಮವಾಗಿ ವಿಚಾರಣೆಯನ್ನು ನ್ಯಾಯಾಲಯವು ಮೇ 26ಕ್ಕೆ ಮುಂದೂಡಿತು.

ಈ ಮಧ್ಯೆ, ಅಮೆರಿಕ ಮೂಲದ ಡಿಜಿಟಲ್‌ ಲೈಬ್ರರಿ ಇಂಟರ್ನೆಟ್‌ ಆರ್ಕೈವ್‌ ಪರವಾಗಿ ಹಾಜರಾಗಿದ್ದ ವಕೀಲರು ತನ್ನ ವೇದಿಕೆಯಿಂದ ಸಾಕ್ಷ್ಯಚಿತ್ರವನ್ನು ತೆಗೆದುಹಾಕಿರುವುದಾಗಿ ತಿಳಿಸಿದರು.

ʼಇಂಡಿಯಾ: ದ ಮೋದಿ ಕ್ವೆಶ್ಚನ್‌ʼ ಎಂಬ ಬಿಬಿಸಿ ಸಾಕ್ಷ್ಯಚಿತ್ರದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ, ವಿಶ್ವ ಹಿಂದೂ ಪರಿಷತ್‌ ಮತ್ತು ಬಿಜೆಪಿಗೆ ಅವಮಾನಿಸಲಾಗಿದೆ ಎಂದು ಬಿಜೆಪಿ ನಾಯಕ ಬಿನಯ್‌ ಕುಮಾರ್‌ ಅವರು ದೆಹಲಿಯ ರೋಹಿಣಿ ನ್ಯಾಯಾಲಯದಲ್ಲಿ ಮಾನಹಾನಿ ದಾವೆ ಹೂಡಿದ್ದಾರೆ.

Kannada Bar & Bench
kannada.barandbench.com