ಪ್ರಧಾನಿ ನರೇಂದ್ರ ಮೋದಿ ಅವರ ಕುರಿತು ಸಾಕ್ಷ್ಯಚಿತ್ರ ತಯಾರಿಸಿದ್ದ ಬ್ರಿಟಿಷ್ ಬ್ರಾಡ್‌ಕಾಸ್ಟಿಂಗ್ ಕಾರ್ಪೊರೇಷನ್ (ಬಿಬಿಸಿ) ವಿರುದ್ಧ ₹10,000 ಕೋಟಿ ಮೊತ್ತದ ಮಾನನಷ್ಟ ಮೊಕದ್ದಮೆ ಹೂಡಿದ್ದ ಪ್ರಕರಣದ ವಿಚಾರಣೆಯಿಂದ ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ ಅನುಪ್ ಜೈರಾಮ್ ಭಂಭಾನಿ ಹಿಂದೆ ಸರಿದಿದ್ದಾರೆ [ಜಸ್ಟಿಸ್ ಆನ್ ಟ್ರಯಲ್ ಮತ್ತು ಬ್ರಿಟಿಷ್ ಬ್ರಾಡ್‌ಕಾಸ್ಟಿಂಗ್ ಕಾರ್ಪೊರೇಷನ್ ಇನ್ನಿತರರ ನಡುವಣ ಪ್ರಕರಣ].
ಶುಕ್ರವಾರ, (ಮೇ 17) ನ್ಯಾಯಮೂರ್ತಿ ಭಂಭಾನಿ ಅವರೆದುರು ಪ್ರಕರಣ ಬಂದಾಗ ಮತ್ತೊಬ್ಬ ನ್ಯಾಯಮೂರ್ತಿಗಳೆದುರು ಅದನ್ನು ಪಟ್ಟಿ ಮಾಡುವಂತೆ ನ್ಯಾ. ಭಂಭಾನಿ ತಿಳಿಸಿದರು.
'ಇಂಡಿಯಾ: ದಿ ಮೋದಿ ಕ್ವಶ್ಚನ್' ಹೆಸರಿನ ಎರಡು ಭಾಗಗಳಿರುವ ಸಾಕ್ಷ್ಯಚಿತ್ರವು ಭಾರತ, ಅದರ ನ್ಯಾಯಾಂಗ ಹಾಗೂ ಪ್ರಧಾನಿಯವರ ಪ್ರತಿಷ್ಠೆಗೆ ಮಸಿ ಬಳಿದಿದೆ ಎಂದು ಆಕ್ಷೇಪಿಸಿ ಗುಜರಾತ್ ಮೂಲದ ಸರ್ಕಾರೇತರ ಸಂಸ್ಥೆ ಜಸ್ಟೀಸ್ ಆನ್ ಟ್ರಯಲ್ ಹೈಕೋರ್ಟ್‌ನಲ್ಲಿ ಬಿಬಿಸಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿತ್ತು. ನಷ್ಟ ಪರಿಹಾರವಾಗಿ ₹ 10,000 ಕೋಟಿ ಮೊತ್ತ ನೀಡಬೇಕು ಎಂದು ಅದು ಕೋರಿತ್ತು. ಸಂಸ್ಥೆಯು ನಿರ್ಗತಿಕ ವ್ಯಕ್ತಿಗಳ ಅರ್ಜಿ (ಐಪಿಎ) ಅಡಿ ದಾವೆಯನ್ನು ಹೂಡಿದೆ.
ನಿರ್ಗತಿಕ ವ್ಯಕ್ತಿಗಳು ದಾವೆ ಸಲ್ಲಿಸುವ ಕುರಿತಂತೆ ಸಿವಿಲ್ ಪ್ರಕ್ರಿಯಾ ಸಂಹಿತೆ (ಸಿಪಿಸಿ) XXXIII ಆದೇಶ ವ್ಯವಹರಿಸುತ್ತದೆ. ಮೊಕದ್ದಮೆಯಲ್ಲಿ ಫಿರ್ಯಾದಿಗಾಗಿ ಕಾನೂನಿನ ಪ್ರಕಾರ ನಿಗದಿಪಡಿಸಲಾದ ಶುಲ್ಕ ಪಾವತಿಸಲು ದಾವೆದಾರನಿಗೆ ಸಾಧ್ಯವಾಗದಿದ್ದರೂ ಆತ ಮೊಕದ್ದಮೆ ಹೂಡಬಹುದು ಎಂದು ಅದು ಹೇಳುತ್ತದೆ.
ಮೇ 22, 2023 ರಂದು ಹೈಕೋರ್ಟ್ ಐಪಿಎ ಅಡಿ ಪ್ರತಿವಾದಿಗಳಿಗೆ ನೋಟಿಸ್ ನೀಡಿತ್ತು.