ಪ್ರಧಾನಿ ಭದ್ರತಾ ಲೋಪ: ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದ ಸಮಿತಿಯಿಂದ ತನಿಖೆ ನಡೆಸಲು ಸುಪ್ರೀಂಕೋರ್ಟ್‌ ನಿರ್ಧಾರ

ಪಂಜಾಬ್‌ನಲ್ಲಿ ಏಳು ಅಧಿಕಾರಿಗಳಿಗೆ ಶೋಕಾಸ್ ನೋಟಿಸ್ ನೀಡಲಾಗಿದ್ದು ಕೇಂದ್ರ ಸರ್ಕಾರ ಸತ್ಯಶೋಧನೆ ನಡೆಸುವ ಅಗತ್ಯವಿದೆಯೇ ಎಂದು ನ್ಯಾಯಾಲಯ ಪ್ರಶ್ನಿಸಿತು.
PM Modi security lapse, Supreme Court

PM Modi security lapse, Supreme Court

ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಇತ್ತೀಚಿನ ಪಂಜಾಬ್ ಭೇಟಿಯ ವೇಳೆ ಉಂಟಾದ ಭದ್ರತಾ ಲೋಪ ಕುರಿತು ತನಿಖೆ ನಡೆಸಲು ಸುಪ್ರೀಂ ಕೋರ್ಟ್ ಸೋಮವಾರ ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಿದೆ [ಲಾಯರ್ಸ್‌ ವಾಯ್ಸ್‌ ಮತ್ತು ಪಂಜಾಬ್‌ ಸರ್ಕಾರ ಇನ್ನಿತರರ ನಡುವಣ ಪ್ರಕರಣ].

ಭದ್ರತಾ ಲೋಪದ ಕುರಿತು ನ್ಯಾಯಾಲಯದ ನೇತೃತ್ವದಲ್ಲಿ ತನಿಖೆ ನಡೆಸುವಂತೆ ಕೋರಿ ʼಲಾಯರ್ಸ್‌ ವಾಯ್ಸ್‌ʼ ಸಂಘಟನೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆ, ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎನ್‌ ವಿ ರಮಣ, ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಹಾಗೂ ಹಿಮಾ ಕೊಹ್ಲಿ ಅವರಿರುವ ಪೀಠದಲ್ಲಿ ನಡೆಯಿತು.

ಪಂಜಾಬ್ ಸರ್ಕಾರದ ಪರ ಹಾಜರಾದ ಅಡ್ವೊಕೇಟ್ ಜನರಲ್ ಡಿ ಎಸ್ ಪಟ್ವಾಲಿಯಾ ಅವರು, ಹೈಕೋರ್ಟ್‌ನ ರಿಜಿಸ್ಟ್ರಾರ್ ಜನರಲ್ ಅವರು ಪ್ರಧಾನಿಯವರ ಪ್ರಯಾಣದ ವಿವರಗಳನ್ನು ಅಧಿಕೃತವಾಗಿ ಪರಿಗಣಿಸಿದ್ದಾರೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು. ಅಲ್ಲದೆ ಯಾವುದೇ ವಿಚಾರಣೆ ನಡೆಸದೆ ರಾಜ್ಯದ ಪೊಲೀಸ್‌ ಹಾಗೂ ಇತರ ಅಧಿಕಾರಿಗಳಿಗೆ ಏಳು ಶೋಕಾಸ್‌ ನೋಟಿಸ್‌ಗಳನ್ನು ನೀಡಲಾಗಿದೆ. ತನಿಖೆ ಸ್ಥಗಿತಗೊಂಡಿರುವಾಗ ಈ ಶೋಕಾಸ್‌ ನೋಟಿಸ್‌ ಎಲ್ಲಿಂದ ಬಂತು? ಕೇಂದ್ರ ಸರ್ಕಾರದ ಸಮಿತಿಯಿಂದ ನ್ಯಾಯ ದೊರೆಯುವುದಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಅಧಿಕಾರಿಗಳು ನ್ಯಾಯಯುತ ತನಿಖೆಗೆ ಒಳಗಾಗುತ್ತಾರೆ ಎಂದು ಅನ್ನಿಸುವುದಿಲ್ಲ ಎಂದ ಪಟ್ವಾಲಿಯಾ, ಸ್ವತಂತ್ರ ತನಿಖೆಗೆ ನಿರ್ದೇಶನ ನೀಡುವಂತೆ ನ್ಯಾಯಾಲಯವನ್ನು ಒತ್ತಾಯಿಸಿದರು.

Also Read
[ಪಂಜಾಬ್‌ಗೆ ಪ್ರಧಾನಿ ಭೇಟಿ ವೇಳೆ ಭದ್ರತಾ ಲೋಪ] ಮೋದಿಯವರ ಪ್ರವಾಸ ದಾಖಲೆ ಸಂಗ್ರಹಿಸಿಡಲು ಸುಪ್ರೀಂ ಕೋರ್ಟ್‌ ನಿರ್ದೇಶನ

ಕೇಂದ್ರ ಸರ್ಕಾರದ ಪರ ವಾದ ಮಂಡಿಸಿದ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ “ಪ್ರತಿಭಟನಾ ಪ್ರದೇಶದಿಂದ 100 ಮೀ ದೂರದಲ್ಲಿರುವ ಸ್ಥಳಕ್ಕೆ ಪ್ರಧಾನಿ ಬೆಂಗಾವಲು ಪಡೆ ತಲುಪಿದೆ. (ಪ್ರಧಾನಿ ಭಧ್ರತೆಯ ಹೊಣೆ ಹೊತ್ತ) ಎಸ್‌ಪಿಜಿಯ ಬ್ಲೂಬುಕ್‌ ಪ್ರಕಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವುದು (ಎಸ್‌ಪಿಜಿ) ಅಧಿಕಾರಿಗಳ ಜವಾಬ್ದಾರಿಯಾಗಿದ್ದು ಕಡಿಮೆ ಅನಾನುಕೂಲತೆ ಇರುವ ರೀತಿಯಲ್ಲಿ ಅದಿಕಾರಿಗಳಿಗೆ ರಾಜ್ಯ ಸರ್ಕಾರ ನಿರ್ದೇಶನ ನೀಡಬೇಕಿತ್ತು. ಮೇಲ್ಸೇತುವೆಯ ಬಳಿ ಜನಸಂದಣಿ ಇದೆ ಎಂಬ ಬಗ್ಗೆ ಬೆಂಗಾವಲು ಪಡೆಗೆ ಯಾವುದೇ ಸೂಚನೆ ದೊರೆತಿರಲಿಲ್ಲ ಇದು ʼಸಂಪೂರ್ಣ ಗುಪ್ತಚರ ವೈಫಲ್ಯʼ. ಸರ್ಕಾರ ಪೊಲೀಸ್‌ ಅಧಿಕಾರಿಗಳನ್ನು ರಕ್ಷಿಸುತ್ತಿದೆ ಎಂಬುದು ಗಂಭೀರ ವಿಚಾರ. ಈ ಹಿನ್ನೆಲೆಯಲ್ಲಿ ಎಲ್ಲಿ ಲೋಪ ನಡೆದಿದೆ ಎಂಬುದನ್ನು ಕೇಂದ್ರ ಸರ್ಕಾರದ ಸಮಿತಿ ಪರಿಶೀಲಿಸಬೇಕಿದೆ ಎಂದರು.

ಕೇಂದ್ರ ಸತ್ಯಶೋಧನೆ ನಡೆಸುವ ಅಗತ್ಯವಿದೆಯೇ ಎಂದು ನ್ಯಾಯಾಲಯ ಪ್ರಶ್ನಿಸಿತು. "ಶೋಕಾಸ್ ನೋಟಿಸ್ ನೀಡಿ ಆ ಮೂಲಕ ಹೇಗೆ ಮುಂದುವರೆಯಬೇಕು ಎಂಬ ಬಗ್ಗೆ ನೀವು ನಿರ್ಧಾರ ಕೈಗೊಂಡಿದ್ದೀರಿ. ಹಾಗಿದ್ದಾಗ ನ್ಯಾಯಾಲಯ ಏಕೆ ವಿಚಾರಣೆ ನಡೆಸಬೇಕು?" ಎಂದು ಟೀಕಿಸಿತು.

ಇದಕ್ಕೆ ದನಿಗೂಡಿಸಿದ ನ್ಯಾ. ಸೂರ್ಯಕಾಂತ್ "ನಿಮ್ಮ ಶೋಕಾಸ್ ನೋಟಿಸ್ ಸ್ವಯಂ-ವಿರೋಧಾಭಾಸದಿಂದ ಕೂಡಿದೆ. ಸಮಿತಿ ರಚಿಸುವ ಮೂಲಕ, ನೀವು ಎಸ್‌ಪಿಜಿ ಕಾಯಿದೆಯ ಉಲ್ಲಂಘನೆಯಾಗಿದೆಯೇ ಎಂದು ತನಿಖೆ ಮಾಡಲು ಬಯಸುತ್ತೀರಿ. ಬಳಿಕ ರಾಜ್ಯ ಮುಖ್ಯ ಕಾರ್ಯದರ್ಶಿ (ಸಿಎಸ್) ಮತ್ತು ಪೊಲೀಸ್ ಮಹಾನಿರ್ದೇಶಕರನ್ನು (ಡಿಜಿ) ತಪ್ಪಿತಸ್ಥರೆಂದು ಪರಿಗಣಿಸುತ್ತೀರಿ. ಅವರನ್ನು ತಪ್ಪಿತಸ್ಥರು ಎಂದು ತೀರ್ಮಾನಿಸಿದ್ದು ಯಾರು?" ಎಂದು ಕೇಳಿದರು.

Also Read
ಪ್ರಧಾನಿ ಮೋದಿ ಭದ್ರತಾ ಲೋಪ: ತನಿಖೆ ಕೋರಿ ಸುಪ್ರೀಂನಲ್ಲಿ ಅರ್ಜಿ; ಅಧಿಕಾರಿಗಳ ಅಮಾನತಿಗೆ ಮನವಿ

ಪ್ರಕರಣದಲ್ಲಿ ರಾಜ್ಯ ಮುಖ್ಯ ಕಾರ್ಯದರ್ಶಿ ಮತ್ತು ಪೊಲೀಸ್ ಮಹಾನಿರ್ದೇಶಕರು ಕೂಡ ಪಕ್ಷಕಾರರು ಎಂಬುದನ್ನು ಗಮನಿಸಿದ ನ್ಯಾಯಾಲಯ “ರಾಜ್ಯ ಸರ್ಕಾರ ಮತ್ತು ಅರ್ಜಿದಾರರು ನ್ಯಾಯಯುತ ವಿಚಾರಣೆ ಬಯಸುತ್ತಿದ್ದು ನೀವು ಅಂತಹ ವಿಚಾರಣೆಯನ್ನು ವಿರೋಧಿಸಲಾಗದು. ಹಾಗಿದ್ದಾಗ ನೀವು ಈ ಆಡಳಿತಾತ್ಮಕ ಮತ್ತು ಸತ್ಯಶೋಧನೆಯ ವಿಚಾರಣೆ ನಡೆಸುತ್ತಿರುವುದು ಏಕೆ?" ಎಂದು ಪ್ರಶ್ನಿಸಿತು.

ನ್ಯಾ. ಕೊಹ್ಲಿ ಪ್ರತಿಕ್ರಿಯಿಸುತ್ತಾ “ನಮ್ಮ ಆದೇಶಕ್ಕಿಂತ ಮೊದಲು ಕೇಂದ್ರ ಸರ್ಕಾರ ಶೋಕಾಸ್‌ ನೋಟಿಸ್‌ ನೀಡಿದೆ. 24 ಗಂಟೆಗಳಲ್ಲಿ ಉತ್ತರಿಸುವಂತೆ ಅಧಿಕಾರಿಗಳಿಗೆ ಸೂಚಿಸುವುದನ್ನು ಕೇಂದ್ರ ಸರ್ಕಾರದಿಂದ ನಿರೀಕ್ಷಿಸಲಾಗದು ಎಂದರು. ಆಗ ಸಿಜೆಐ ರಮಣ “ನೀವು ರಾಜ್ಯ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಲು ಬಯಸಿದರೆ, ಈ ನ್ಯಾಯಾಲಯಕ್ಕೆ ಏನು ಉಳಿದಿದೆ?” ಎಂದು ಪ್ರಶ್ನಿಸಿದರು.

ಇದಕ್ಕೆ ಸಲಹೆಯೊಂದನ್ನು ನೀಡಿದ ಎಸ್‌ ಜಿ ಮೆಹ್ತಾ, “ಶೋಕಾಸ್‌ ನೋಟಿಸ್‌ ಅಂತಿಮ ಫಲಿತಾಂಶವನ್ನು ಬುಡಮೇಲು ಮಾಡುತ್ತದೆ ಎಂದು ನ್ಯಾಯಾಲಯ ಭಾವಿಸಿದರೆ ಕೇಂದ್ರ ಸರ್ಕಾರ ರಚಿಸಿರುವ ಸಮಿತಿ ಘಟನೆಯನ್ನು ಪರಿಶೀಲಿಸಿ ನ್ಯಾಯಾಲಯಕ್ಕೆ ವರದಿ ಮಾಡುತ್ತದೆ. ಅಲ್ಲಿಯವರೆಗೆ ಸಮಿತಿ ನೋಟಿಸ್‌ ಆಧರಿಸಿ ಕ್ರಮ ಕೈಗೊಳ್ಳುವುದಿಲ್ಲ. ಇದು ನ್ಯಾಯಯುತವಾದುದು ಎಂಬುದಾಗಿ ಭಾವಿಸಿವೆ” ಎಂದರು.

ಆಗ ಎ ಜಿ ಪಟ್ವಾಲಿಯಾ ಅವರು “ಗೃಹ ಸಚಿವಾಲಯದ ನೇತೃತ್ವದಲ್ಲಿ ಕೇಂದ್ರ ಸರ್ಕಾರದ ಸಮಿತಿ ರಚನೆಯಾಗಿದ್ದು ಸಂಪುಟ ಕಾರ್ಯದರ್ಶಿ, ಎಸ್‌ಪಿಜಿಯ ಇನ್ಸ್‌ಪೆಕ್ಟರ್ ಜನರಲ್ ಮತ್ತು ಗುಪ್ತಚರ ದಳದ ನಿರ್ದೇಶಕರನ್ನು ಅದು ಒಳಗೊಂಡಿದೆ ಎಂದು ಗಮನಸೆಳೆದರು. ಗೃಹ ಸಚಿವಾಲಯದ ಮುಖ್ಯಸ್ಥರು ಸಮಿತಿಯ ನೇತೃತ್ವ ವಹಿಸಿದ್ದು ಪಂಜಾಬ್‌ ಸರ್ಕಾರ ಮತ್ತು ಅಧಿಕಾರಿಗಳು ತಪ್ಪಿತಸ್ಥರು ಎಂಬ ಮೇಲ್ನೋಟದ ಅಭಿಪ್ರಾಯ ಅವರದ್ದಾಗಿದೆ ಎಂದು ಆಕ್ಷೇಪಿಸಿದರು.

ಈ ಹಂತದಲ್ಲಿ ತಮ್ಮ ನಡುವೆ ಸಂಕ್ಷಿಪ್ತ ಚರ್ಚೆ ನಡೆಸಿದ ನ್ಯಾಯಮೂರ್ತಿಗಳು ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಸ್ವತಂತ್ರ ತನಿಖೆ ನಡೆಸಲು ನಿರ್ಧರಿಸಿದರು. ಆರಂಭದಲ್ಲಿ, ರಾಷ್ಟ್ರೀಯ ತನಿಖಾ ಸಂಸ್ಥೆಯ (ಎನ್‌ಐಎ) ಮಹಾನಿರ್ದೇಶಕರು, ಪಂಜಾಬ್ ಪೋಲೀಸ್ ಇಲಾಖೆಯ ಗುಪ್ತಚರ ದಳದ ಹೆಚ್ಚುವರಿ ಮಹಾನಿರ್ದೇಶಕರು ಸಮಿತಿಯ ಉಳಿದ ಸದಸ್ಯರಾಗಿರುತ್ತಾರೆ ಎಂದು ನ್ಯಾಯಾಲಯ ಸೂಚಿಸಿತು. ಆದರೆ, ಭದ್ರತಾ ವ್ಯವಸ್ಥೆಯಲ್ಲಿ ಪಂಜಾಬ್‌ ಎಡಿಜಿ ಭಾಗಿಯಾಗಿದ್ದಾರೆ ಎಂದು ಎಸ್‌ಜಿ ಮೆಹ್ತಾ ವಿವರಿಸಿದರು. ಘಟನೆಗೆ ಸಂಬಂಧಿಸಿದಂತೆ ನಡೆಯುತ್ತಿರುವ ತನಿಖೆಗಳನ್ನು ಸದ್ಯಕ್ಕೆ ಸ್ಥಗಿತಗೊಳಿಸಲಾಗುವುದು ಎಂದು ಸ್ಪಷ್ಟಪಡಿಸಿದ ನ್ಯಾಯಾಲಯ, ಶೀಘ್ರದಲ್ಲೇ ವಿವರವಾದ ಆದೇಶ ನೀಡುವುದಾಗಿ ಹೇಳಿತು.

Related Stories

No stories found.
Kannada Bar & Bench
kannada.barandbench.com