ಪ್ರಧಾನ ಮಂತ್ರಿ ನಾಗರಿಕ ನೆರವು ಮತ್ತು ತುರ್ತು ಪರಿಸ್ಥಿತಿಗಳ ನಿಧಿಗೆ (PM CARES ನಿಧಿ) ದೇಣಿಗೆ ನೀಡಿದ ಮೊತ್ತವು ಭಾರತದ ಸಂಚಿತ ನಿಧಿಗೆ (ಕನ್ಸಾಲಿಡೇಟೆಡ್ ಫಂಡ್) ಹೋಗುವುದಿಲ್ಲ ಆದ್ದರಿಂದ ಇದು "ಭಾರತ ಸರ್ಕಾರದ ನಿಧಿಯಲ್ಲ" ಎಂದು ದೆಹಲಿ ಹೈಕೋರ್ಟ್‌ಗೆ ನಿಧಿಯ ಪರವಾಗಿ ಸಲ್ಲಿಸಿರುವ ಅಫಿಡವಿಟ್‌ನಲ್ಲಿ ತಿಳಿಸಲಾಗಿದೆ (ಸಮ್ಯಕ್ ಗಂಗ್ವಾಲ್ ಮತ್ತು ಕೇಂದ್ರ ಸರ್ಕಾರ ನಡುವಣ ಪ್ರಕರಣ).
ಪಿಎಂ ಕೇರ್ಸ್ ನಿಧಿ ಸಂವಿಧಾನದ 12 ನೇ ವಿಧಿಯಡಿ "ರಾಜ್ಯ"ದ ವರ್ಗಕ್ಕೆ ಒಳಪಟ್ಟಿದೆಯೇ ಎಂಬುದು ಸೇರಿದಂತೆ ಅದರ ಕಾನೂನು ಸ್ಥಾನಮಾನದ ಬಗ್ಗೆ ಸ್ಪಷ್ಟನೆ ಕೋರಿ ಸಮ್ಯಕ್ ಗಂಗ್ವಾಲ್ ದಾಖಲಿಸಿರುವ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಗೆ (ಪಿಐಎಲ್) ಉತ್ತರ ರೂಪದಲ್ಲಿ ಅಫಿಡವಿಟ್ ಸಲ್ಲಿಸಲಾಗಿದೆ.
ಪ್ರಸ್ತುತ ಪ್ರಧಾನಮಂತ್ರಿ ಕಚೇರಿಯಲ್ಲಿ ಉಪಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿರುವ ಪ್ರದೀಪ್ ಕುಮಾರ್ ಶ್ರೀವಾಸ್ತವ ಅವರು ಪಿಎಂ ಕೇರ್ಸ್ ನಿಧಿಯ ಪರವಾಗಿ ಅಫಿಡವಿಟ್ ಸಲ್ಲಿಸಿದ್ದಾರೆ.
ಭಾರತದ ಸಂವಿಧಾನದ 12 ನೇ ವಿಧಿಯ ಅರ್ಥದಲ್ಲಿ ಟ್ರಸ್ಟ್ 'ರಾಜ್ಯ'ವೇ ಅಗಿರಲಿ (ರಾಜ್ಯ ಎನ್ನುವ ವ್ಯಾಪಕ ಅರ್ಥದಡಿ ಬರುವುದು) ಅಥವಾ ಇತರ ಸಂಸ್ಥೆಯೇ ಅಗಿರಲಿ ಅಥವಾ ಮಾಹಿತಿ ಹಕ್ಕು ಕಾಯಿದೆಯ ಸೆಕ್ಷನ್ 2 [h] ನ ಅರ್ಥದಲ್ಲಿ 'ಸಾರ್ವಜನಿಕ ಸಂಸ್ಥೆ'ಯೇ ಆಗಿರಲಿ, ಅದೇನೇ ಇದ್ದರೂ ಸಾಮಾನ್ಯವಾಗಿ ಸೆಕ್ಷನ್ 8 [ಇ] ಮತ್ತು [ಜೆ] ನಲ್ಲಿರುವ ನಿಬಂಧನೆಗಳು ಹೇಳುವಂತೆ ನಿರ್ದಿಷ್ಟವಾಗಿ, ಮೂರನೇ ವ್ಯಕ್ತಿಯ ಮಾಹಿತಿ ಬಹಿರಂಗಪಡಿಸಲು ಅನುಮತಿ ಇಲ್ಲ ಎಂದು ಅಫಿಡವಿಟ್‌ನಲ್ಲಿ ತಿಳಿಸಲಾಗಿದೆ.
ಪಿಎಂ ಕೇರ್ಸ್ ಟ್ರಸ್ಟ್ ಗೌರವಾರ್ಥಕ ಸ್ವರೂಪ ಹೊಂದಿದ್ದು, ಸಂಪೂರ್ಣ ಪಾರದರ್ಶಕತೆಯಿಂದ ಕಾರ್ಯನಿರ್ವಹಿಸುತ್ತದೆ. ಸಿಎಜಿ ಸಂಸ್ಥೆಯ ಸಮಿತಿಯೊಂದು ನೇಮಿಸಿದ ಲೆಕ್ಕ ಪರಿಶೋಧಕರೊಬ್ಬರು ನಿಧಿಯ ಲೆಕ್ಕಪರಿಶೋಧನೆ ಮಾಡುತ್ತಾರೆ. ಪಾರದರ್ಶಕತೆ ಖಚಿತಪಡಿಸಿಕೊಳ್ಳಲು ತನ್ನ ಎಲ್ಲಾ ನಿರ್ಣಯಗಳನ್ನು ಜಾಲತಾಣದಲ್ಲಿ ಅಪ್‌ಲೋಡ್ ಮಾಡಲು ಯಾವುದೇ ಆಕ್ಷೇಪಣೆ ಇಲ್ಲ ಎಂದು ತಿಳಿಸಲಾಗಿದೆ.
ಟ್ರಸ್ಟ್ ಸ್ವೀಕರಿಸಿದ ಎಲ್ಲಾ ದೇಣಿಗೆಗಳನ್ನು ಆನ್‌ಲೈನ್ ಪಾವತಿ, ಚೆಕ್ ಮತ್ತು / ಅಥವಾ ಡಿಮ್ಯಾಂಡ್ ಡ್ರಾಫ್ಟ್‌ಗಳ ಮೂಲಕ ಸ್ವೀಕರಿಸಲಾಗಿದೆ. ಜೊತೆಗೆ ಸ್ವೀಕರಿಸಿದ ಮೊತ್ತವನ್ನು ಆಡಿಟ್ ಮಾಡಲಾಗಿದೆ ಎಂದು ನಮೂದಿಸಿದರೆ ಸಾಕು. ಆಡಿಟ್ ವರದಿ ಮತ್ತು ಟ್ರಸ್ಟ್ ನಿಧಿಯ ವೆಚ್ಚವನ್ನು ವೆಬ್‌ಸೈಟ್‌ನಲ್ಲಿ ಪ್ರದರ್ಶಿಸಲಾಗಿದೆ ಎಂದು ಅಫಿಡವಿಟ್‌ನಲ್ಲಿ ತಿಳಿಸಲಾಗಿದೆ.
ಆದರೆ ಅರ್ಜಿದಾರರು ಪ್ರತ್ಯುತ್ತರ ಅರ್ಜಿ ಸಲ್ಲಿಸಿದ್ದು ಕೇಂದ್ರ ಸರ್ಕಾರ ಸಲ್ಲಿಸಿರುವ ಅಫಿಡವಿಟ್ ನ್ಯಾಯಾಲಯವನ್ನು ತಪ್ಪು ದಾರಿಗೆ ಎಳೆಯುವ ಯತ್ನ ಎಂದು ಹೇಳಿದ್ದಾರೆ.
ಮುಂದುವರೆದು, ಪಿಎಂ ಕೇರ್ಸ್ ನಿಧಿ ಭಾರತ ಸರ್ಕಾರದ್ದಲ್ಲ ಎಂದು ಹೇಳುತ್ತಾ ಯಾವುದೇ ಪೂರಕ ದಾಖಲೆ ನೀಡದೆ ಅಸ್ಪಷ್ಟ ಮತ್ತು ತಪ್ಪು ಹೇಳಿಕೆಗಳನ್ನು ನೀಡಲಾಗಿದೆ. ಪಿಎಂ ಕೇರ್ಸ್ ನಿಧಿ ಸರ್ಕಾರಕ್ಕೆ ಸೇರಿದ್ದು ಎಂದು ಹೇಳುವ ಹಲವು ದಾಖಲೆಗಳನ್ನು ರಿಟ್ ಅರ್ಜಿ ಸಲ್ಲಿಸುವ ವೇಳೆ ಒದಗಿಸಲಾಗಿದೆ ಎನ್ನಲಾಗಿದೆ.
ಅಲ್ಲದೆ, ಪಿಎಂ ಕೇರ್ಸ್ ಟ್ರಸ್ಟ್ ಎನ್ನುವುದು ಸಂವಿಧಾನದ 12ನೇ ವಿಧಿಯಡಿ 'ರಾಜ್ಯ' ಎಂಬುದಾಗಿದ್ದು, ಅದರ ನಿಧಿಯು ಭಾರತ ಸರ್ಕಾರದ ನಿಧಿಯಾಗಿದೆ. ಟ್ರಸ್ಟ್‌ನ ನಿಧಿಯು ಭಾರತದ ಸಂಚಿತ ನಿಧಿಗೆ ಹೋಗುವುದಿಲ್ಲ ಎನ್ನುವ ಅಂಶವು 'ಟ್ರಸ್ಟ್' ಎನ್ನುವುದು 'ರಾಜ್ಯ' ಎನ್ನುವ ವ್ಯಾಪ್ತಿಗೆ ಬರುತ್ತದೆಯೇ ಇಲ್ಲವೇ ಎನ್ನುವುದನ್ನು ನಿರ್ಧರಿಸುವ ಅಂಶವಾಗುವುದಿಲ್ಲ ಎಂದು ಹೇಳಲಾಗಿದೆ.