
ಮನೆ ಖರೀದಿದಾರರೊಂದಿಗಿನ ಗುತ್ತಿಗೆ ಕರಾರು ಉಲ್ಲಂಘನೆ ಹಾಗೂ ಅಕ್ರಮ ಆರೋಪದ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯವು ಉದ್ಯಮಿ ವಾಸುದೇವನ್ ಸತ್ಯಮೂರ್ತಿ ಅವರಿಗೆ ಜಾರಿ ಮಾಡಿದ್ದ ನೋಟಿಸ್ ಹಾಗೂ ಎಲ್ಲಾ ಪ್ರಕ್ರಿಯೆಗೆ ಕರ್ನಾಟಕ ಹೈಕೋರ್ಟ್ ಈಚೆಗೆ ತಡೆ ನೀಡಿದೆ.
ಅಕ್ರಮ ಹಣ ವರ್ಗಾವಣೆ ಕಾಯಿದೆ ಸೆಕ್ಷನ್‌ಗಳಾದ 50 (2) ಮತ್ತು (3) ರ ಅಡಿ ಜಾರಿ ನಿರ್ದೇಶನಾಲಯವು ನೀಡಿರುವ ನೋಟಿಸ್ ಪ್ರಶ್ನಿಸಿ ಓಜೋನ್ ಅರ್ಬನಾ ಇನ್ಪ್ರಾ ಡೆವಲಪರ್ಸ್ ಪ್ರೈವೇಟ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕರಾದ ವಾಸುದೇವನ್ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಎಸ್ ರಾಚಯ್ಯ ಅವರ ನೇತೃತ್ವದ ರಜಾಕಾಲೀನ ಪೀಠವು ನಡೆಸಿತು.
2021ರ ಡಿಸೆಂಬರ್ 21ರಂದು ಗುತ್ತಿಗೆ ಲೋಪಕ್ಕೆ ಸಂಬಂಧಿಸಿದಂತೆ ಮನೆ ಖರೀದಿದಾರೊಬ್ಬರು ವಾಸುದೇನ್ ವಿರುದ್ಧ ಕೋಡಿಗೆಹಳ್ಳಿ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದಕ್ಕೆ ಹೈಕೋರ್ಟ್ ತಡೆ ನೀಡಿತ್ತು. ಈ ಮಧ್ಯೆ, ಮತ್ತೊಬ್ಬ ಮನೆ ಖರೀದಿದಾರರು ಏಪ್ರಿಲ್ 6ರಂದು ಕೆಪಿಐಡಿ ಕಾಯಿದೆ ಅಡಿ ಖಾಸಗಿ ದೂರು ದಾಖಲಿಸಿದ್ದರು. ಇದರ ಬೆನ್ನಿಗೇ ಹಲಸೂರು ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು. ಇದಕ್ಕೂ ಜುಲೈ 20ರಂದು ಹೈಕೋರ್ಟ್ ತಡೆ ನೀಡಿತ್ತು. ಇದಲ್ಲದೆ, ಜುಲೈ 19ರಂದು ಖರೀದಿದಾರರೊಬ್ಬರು ಕಂಪೆನಿ ಮತ್ತು ಅದರ ಮಾಲೀಕರ ವಿರುದ್ಧ ಖಾಸಗಿ ದೂರು ದಾಖಲಿಸಿದ್ದರು. ಇದಕ್ಕೆ ಅಕ್ಟೋಬರ್ 21ರಂದು ಹೈಕೋರ್ಟ್ ತಡೆ ನೀಡಿದೆ.
ಮೇಲಿನ ಪ್ರಕರಣಗಳನ್ನು ಹೊರತುಪಡಿಸಿ ಯಾವುದೇ ಕ್ರಿಮಿನಲ್ ಪ್ರಕರಣವಿಲ್ಲ. ಹೈಕೋರ್ಟ್ ಎಲ್ಲಾ ಪ್ರಕರಣಗಳಿಗೆ ತಡೆ ನೀಡಿದ್ದರೂ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಅವುಗಳನ್ನು ವಿಧೇಯ ಅಪರಾಧಗಳು (ವಿಸ್ತೃತ ಅಪರಾಧವೊಂದರ ಭಾಗ) ಎಂದು ಪರಿಗಣಿಸಿ, ಅರ್ಜಿದಾರರು ಮತ್ತು ಅವರ ಕಂಪೆನಿ ಅಧಿಕಾರಿಗಳನ್ನು ವಿಚಾರಣೆಯ ನೆಪದಲ್ಲಿ ಬಂಧಿಸಲು ಪ್ರಯತ್ನಿಸುತ್ತಿದ್ದಾರೆ. ಹೀಗಾಗಿ ನ್ಯಾಯಾಲಯದ ಮೆಟ್ಟಿಲೇರಿರುವುದಾಗಿ ಅರ್ಜಿಯಲ್ಲಿ ತಿಳಿಸಲಾಗಿದೆ.
ಅರ್ಜಿದಾರರ ಪರವಾಗಿ ಹಿರಿಯ ವಕೀಲ ಎಂ ಎಸ್ ಶ್ಯಾಮಸುಂದರ್ ಮತ್ತು ವಕೀಲೆ ಡಾ. ಪಿ ಎಲ್ ವಂದನಾ ವಾದಿಸಿದರು. ಜಾರಿ ನಿರ್ದೇಶನಾಲಯವನ್ನು ವಕೀಲ ಉನ್ನಿಕೃಷ್ಣ ಪ್ರತಿನಿಧಿಸಿದ್ದರು.