[ಪಿಎಂಎಲ್‌ಎ ತೀರ್ಪು] ನಾನು ತೀರ್ಪು ಬರೆದಿದ್ದರೆ ನನ್ನ ನಿಲುವು ಬೇರೆ ಇರುತ್ತಿತ್ತು: ನಿವೃತ್ತ ನ್ಯಾ. ನಾಗೇಶ್ವರ ರಾವ್‌

ಜನರ ಹಕ್ಕುಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ಯಾವುದೇ ಭರವಸೆ ಉಳಿದಿಲ್ಲ ಎಂದಿದ್ದ ಹಿರಿಯ ವಕೀಲ ಕಪಿಲ್‌ ಸಿಬಲ್‌ ಅವರ ನಿಲುವಿಗೆ ನ್ಯಾ. ರಾವ್ ಅಸಮ್ಮತಿ.
Justice L Nageswara Rao
Justice L Nageswara Rao
Published on

ಅಕ್ರಮ ಹಣ ವರ್ಗಾವಣೆ ಕಾಯಿದೆಯನ್ನು (ಪಿಎಂಎಲ್‌ಎ) ಈಚೆಗೆ ಸುಪ್ರೀಂ ಕೋರ್ಟ್‌ ಎತ್ತಿ ಹಿಡಿದಿರುವುದರಿಂದ ವೈಯಕ್ತಿಕ ಸ್ವಾತಂತ್ರ್ಯಕ್ಕೆ ಹಿನ್ನಡೆಯಾಗಿದೆ ಎಂದು ವ್ಯಾಖ್ಯಾನಿಸುತ್ತಿರುವ ನಡುವೆಯೇ ಎಲ್ಲವೂ ಮುಗಿದಿಲ್ಲ. ವೈಯಕ್ತಿಕ ಸ್ವಾತಂತ್ರ್ಯವನ್ನು ರಕ್ಷಿಸಿರುವ ಸುಪ್ರೀಂ ಕೋರ್ಟ್‌ನ ಇತರೆ ತೀರ್ಪುಗಳಿವೆ ಎಂದು ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಎಲ್‌ ನಾಗೇಶ್ವರ ರಾವ್‌ ಹೇಳಿದರು.

“ಜೀವನ ಮತ್ತು ಸ್ವಾತಂತ್ರ್ಯ: 75ನೇ ಸ್ವಾತಂತ್ಯೋತ್ಸವದಲ್ಲಿ ಭಾರತ” ವಿಷಯದ ಕುರಿತು ಸೋಮವಾರ ʼದಿ ಲೀಫ್‌ಲೆಟ್‌ʼ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

“ಮೊದಲಿಗೆ, ತೀರ್ಪು (ಪಿಎಂಎಲ್‌ಎ) ಬರೆದ ನ್ಯಾಯಮೂರ್ತಿಗಳನ್ನಾಗಲಿ ಅಥವಾ ತೀರ್ಪಿನ ಹಿಂದಿನ ತತ್ವವನ್ನಾಗಲಿ ನಾನು ವಿಮರ್ಶಿಸುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸುತ್ತೇನೆ. ಆದರೆ ಮುಕ್ತವಾಗಿ ಹೇಳುವುದೇನೆಂದರೆ, ನಾನೇ ಆಗಿದ್ದರೆ ಬೇರೆಯದೇ ನಿಲುವು ತಳೆಯುತ್ತಿದ್ದೆ… ಅದು (ತೀರ್ಪು) ಸರಿಯೇ ಅಥವಾ ತಪ್ಪೇ ಎಂಬ ವಿಚಾರಕ್ಕೆ ನಾನು ಹೋಗಬಯಸುವುದಿಲ್ಲ. ಆದರೆ, ನಾನು ತೀರ್ಪು ಬರೆದಿದ್ದರೆ ವೈಯಕ್ತಿಕವಾಗಿ ಬೇರೆಯದೇ ನಿಲುವು ತಾಳುತ್ತಿದ್ದೆ” ಎಂದರು.

“2021ರ ಡಿಸೆಂಬರ್‌ನಲ್ಲಿ ಹಾಲಿ ಸಿಜೆಐ ಅವರ ಮುಂದೆ ಪ್ರಕರಣವೊಂದು ಬಂದಿತ್ತು. ಪಿಎಂಎಲ್‌ಎ ಅಡಿ ಜಾರಿ ನಿರ್ದೇಶನಾಲಯವು ಅನಗತ್ಯವಾಗಿ ಜನರನ್ನು ಎಳೆದು ತರುತ್ತಿದೆ. ಇಲ್ಲಿ ಪ್ರಕ್ರಿಯೆಯೇ ಶಿಕ್ಷೆಯಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಪಿಎಂಎಲ್‌ಎ ಅಡಿ ಪ್ರಕರಣ ದಾಖಲಿಸುವಾಗ ಸಂಬಂಧಿತ ಪ್ರಾಧಿಕಾರ ಎಚ್ಚರಿಕೆಯಿಂದ ಇರಬೇಕು. ಏಕೆಂದರೆ ಅದರ ಪರಿಣಾಮವಾಗಿ ಆರೋಪಿಗಳು ಸುಲಭವಾಗಿ ಜಾಮೀನು ಪಡೆಯಲು ಆಗದು ಎಂದು ಸೂಚ್ಯವಾಗಿ ಹೇಳಿದ್ದರು” ಎಂದು ನ್ಯಾ. ರಾವ್‌ ಹೇಳಿದರು.

“ಸಮಸ್ಯೆಗಳಿಗೆ ಪರಿಹಾರ ದೊರಕಿಸಲು ಸುಪ್ರೀಂ ಕೋರ್ಟ್‌ ಸಕ್ರಿಯವಾಗಿದೆ… ವಿಚಾರಣೆ ನಡೆಯಲು ಅದಕ್ಕೇ ಆದ ಕಾಲ ಹಿಡಿಯುತ್ತದೆ. ನಾನು ನ್ಯಾಯಮೂರ್ತಿಯಾಗಿದ್ದ ಆರು ವರ್ಷಗಳ ಅವಧಿಯಲ್ಲಿ ಏಳು ವರ್ಷಗಳಿಗೂ ಕಡಿಮೆ ಅವಧಿಯ ಶಿಕ್ಷೆ ವಿಧಿಸುವ ಪ್ರಕರಣಗಳನ್ನು ಎದುರಿಸುತ್ತಿದ್ದ ಸಾಕಷ್ಟು ಜನರು ನಮ್ಮ ಮುಂದೆ ಬಂದಿದ್ದರು. 4-5 ವರ್ಷ ಕಳೆದಿದ್ದರೂ ಆರೋಪ ನಿಗದಿ ಮಾಡಿರಲಿಲ್ಲ, ವಿಚಾರಣೆಗೆ ಸಾಕಷ್ಟು ಸಮಯವಿಡಿಯುತ್ತದೆ. ಆದರೂ ಅವರು ಜೈಲಿನಲ್ಲಿದ್ದಾರೆ. ಸ್ವಾತಂತ್ರ್ಯದ ಪರಿಕಲ್ಪನೆ ನಿಜಕ್ಕೂ ಬದಲಾಗಿಲ್ಲ. ಸ್ವಾತಂತ್ರ್ಯವನ್ನು ರಕ್ಷಿಸಲು ಖಂಡಿತವಾಗಿಯೂ ನ್ಯಾಯಾಲಯವಿದೆ” ಎಂದು ಒತ್ತಿ ಹೇಳಿದರು.

ಜನರ ಹಕ್ಕುಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ಯಾವುದೇ ಭರವಸೆ ಉಳಿದಿಲ್ಲ ಎಂದಿದ್ದ ಹಿರಿಯ ವಕೀಲ ಕಪಿಲ್‌ ಸಿಬಲ್‌ ಅವರ ನಿಲುವಿಗೆ ನ್ಯಾ. ರಾವ್ ಅಸಮ್ಮತಿ ವ್ಯಕ್ತಪಡಿಸಿದರು. “ಸುಪ್ರೀಂ ಕೋರ್ಟ್‌ ಮೇಲೆ ಜನರು ವಿಶ್ವಾಸ ಕಳೆದುಕೊಂಡರೆ, ಕಾರ್ಯಾಂಗ ಕೈಗೊಳ್ಳುವ ನಿರ್ಧಾರಗಳು ಪರಿಶೀಲನೆಗೆ ಒಳಪಡುವುದಿಲ್ಲ. ಕೆಲವು ತೀರ್ಪುಗಳು ಕೆಲವರಿಗೆ ಇಷ್ಟವಾಗಲಿಲ್ಲ ಎಂದ ಮಾತ್ರಕ್ಕೆ ಅವರ ಪ್ರಕಾರದ ಅದು 21ನೇ ವಿಧಿ ಮತ್ತು ಮೂಲಭೂತ ಹಕ್ಕುಗಳಿಗೆ ಪೂರಕವಾಗಿಲ್ಲ ಎಂದ ಮಾತ್ರಕ್ಕೆ ಕಳೆದ 75 ವರ್ಷಗಳಿಂದ ಜನರ ಹಕ್ಕುಗಳನ್ನು ರಕ್ಷಿಸುತ್ತಿರುವ ಸಂಸ್ಥೆಯ ಮೇಲೆ ಭರವಸೆ ಕಳೆದುಕೊಳ್ಳಲಾಗದು” ಎಂದರು.

Kannada Bar & Bench
kannada.barandbench.com