ಪಿಎಂಎಲ್‌ಎ ತೀರ್ಪು: ಎರಡು ವಿಷಯಗಳ ಕುರಿತಂತೆ ಮರುಪರಿಶೀಲನೆ ಅಗತ್ಯವೆಂದ ಸುಪ್ರೀಂಕೋರ್ಟ್‌; ಕೇಂದ್ರಕ್ಕೆ ನೋಟಿಸ್

ನಾವು ಇದರ ಹಿಂದಿನ ಸರ್ಕಾರದ ಉದ್ದೇಶವನ್ನು ಅಲ್ಲಗಳೆಯುತ್ತಿಲ್ಲ. ಅದರೆ, ಇದರಲ್ಲಿ ಮೇಲ್ನೋಟಕ್ಕೇ ಸಮಸ್ಯೆಗಳಿವೆ. ರಿಟ್‌ ಅರ್ಜಿಯನ್ನು, ಪರಿಶೀಲನಾ ಅರ್ಜಿಯೊಟ್ಟಿಗೇ ಆಲಿಸಬೇಕು ಎಂದ ನ್ಯಾಯಾಲಯ.
Supreme Court, PMLA Judgement
Supreme Court, PMLA Judgement

ಅಕ್ರಮ ಹಣ ವರ್ಗಾವಣೆ ತಡೆ ಕಾಯಿದೆಯ (ಪಿಎಂಎಲ್‌ಎ) ಸಿಂಧುತ್ವವನ್ನು ಎತ್ತಿ ಹಿಡಿದಿರುವ ಸುಪ್ರೀಂ ಕೋರ್ಟ್‌ನ ಜುಲೈ 27ರ ತೀರ್ಪನ್ನು ಮರಿಪರಿಶೀಲಿಸಲು ಕೋರಿರುವ ಮನವಿಗೆ ಸಂಬಂಧಿಸಿದಂತೆ ಸರ್ವೋಚ್ಚ ನ್ಯಾಯಾಲಯವು ಎರಡು ನಿರ್ದಿಷ್ಟ ವಿಷಯಗಳಿಗೆ ಮಿತಿಗೊಳಿಸಿ ಕೇಂದ್ರ ಸರ್ಕಾರಕ್ಕೆ ನೋಟಿಸ್‌ ಜಾರಿ ಮಾಡಿದೆ [ಕಾರ್ತಿ ಚಿದಂಬರಂ ವರ್ಸಸ್‌ ಇಡಿ].

ಪ್ರಕರಣದ ವಿಚಾರಣೆ ನಡೆಸಿದ ಸಿಜೆಐ ಎನ್‌ ವಿ ರಮಣ ಅವರ ನೇತೃತ್ವದ ನ್ಯಾಯಮೂರ್ತಿಗಳಾದ ದಿನೇಶ್‌ ಮಾಹೇಶ್ವರಿ ಮತ್ತು ಸಿ ಟಿ ರವಿಕುಮಾರ್‌ ಅವರನ್ನು ಒಳಗೊಂಡ ಪೀಠವು ಪಿಎಂಎಲ್‌ಎಯು ಉತ್ತಮ ಚಿಂತನೆಯ ಕಾಯಿದೆಯಾಗಿದ್ದು, ಅಕ್ರಮ ಹಣ ವರ್ಗಾವಣೆಯು ಗಂಭೀರ ಅಪರಾಧವಾಗಿದೆ. ಆದರೆ, ತೀರ್ಪಿಗೆ ಸಂಬಂಧಿಸಿದ ಕೆಲ ವಿಷಯಗಳನ್ನು ಪರಿಶೀಲಿಸಬೇಕಿದೆ ಎಂದಿತು.

ಆರೋಪಿಗೆ ಜಾರಿ ಪ್ರಕರಣದ ಮಾಹಿತಿ ವರದಿಯ (ಇಸಿಐಆರ್‌) ಪ್ರತಿ ನೀಡದೆ ಇರುವುದು ಮತ್ತು ಮುಗ್ಧತೆಯನ್ನು ನಿರೂಪಿಸುವ ಹೊಣೆಯನ್ನು ಆರೋಪಿಗೇ ಹೊರಿಸಿರುವುದು ಈ ಎರಡು ಅಂಶಗಳನ್ನು ಪರಿಶೀಲಿಸಬೇಕಾಗಿರುವುದನ್ನು ನ್ಯಾಯಾಲಯವು ಒತ್ತಿ ಹೇಳಿತು.

ಅಕ್ರಮ ಹಣ ವರ್ಗಾವಣೆ ಅಥವಾ ಕಪ್ಪು ಹಣದ ತಡೆಯ ಕುರಿತು ನಮ್ಮ ಸಂಪೂರ್ಣ ಬೆಂಬಲವಿದೆ. ದೇಶವು ಅಂತಹ ಅಪರಾಧವನ್ನು ಸಹಿಸಲಾಗದು. ಇದರ ಉದ್ದೇಶ ಉತ್ತಮವಾಗಿದೆ. ಅದರೆ, ಇಸಿಐಆರ್ ನೀಡದೆ ಇರುವುದು ಮತ್ತು ಮುಗ್ಧತೆಯನ್ನು ನಿರೂಪಿಸುವ ಹೊಣೆಯನ್ನು ತಿರುವುಮುರುವಾಗಿಸಿರುವುದು ಈ ಎರಡು ಅಂಶಗಳನ್ನು ನಮ್ಮ ಪ್ರಕಾರ ಮರುಪರಿಗಣಿಸಬೇಕಿದೆ" ಎಂದು ಸಿಜೆಐ ಹೇಳಿದರು.

ಇದನ್ನು ಸಾಲಿಸಿಟರ್ ಜನರಲ್‌ ತುಷಾರ್ ಮೆಹ್ತಾ ಅವರು ಬಲವಾಗಿ ವಿರೋಧಿಸಿದರು. ಇವುಗಳು ಪ್ರತ್ಯೇಕವಾದ ನಿಯಮಗಳಲ್ಲ. ನಾವು ವಿಸ್ತೃತ ಜಾಗತಿಕ ಸ್ವರೂಪದ ಭಾಗವಾಗಿದ್ದೇವೆ. ಇದು ಅಂತಾರಾಷ್ಟ್ರೀಯ ಮತ್ತು ಸಾಂವಿಧಾನಿಕ ನಡಾವಳಿಗಳಿಗೆ ಅನುಸಾರವಾಗಿದೆ ಎಂದು ಹೇಳಿದರು.

ಇದಕ್ಕೆ ಸಿಜೆಐ ಅವರು, "ಇದು ಗಂಭೀರ ವಿಷಯ, ನಾವು ಇದರ ಹಿಂದಿನ ಸರ್ಕಾರದ ಉದ್ದೇಶವನ್ನು ಅಲ್ಲಗಳೆಯುತ್ತಿಲ್ಲ. ಅದರೆ, ಇದರಲ್ಲಿ ಮೇಲ್ನೋಟಕ್ಕೇ ಸಮಸ್ಯೆಗಳಿವೆ. ರಿಟ್‌ ಅರ್ಜಿಯನ್ನು, ಪರಿಶೀಲನಾ ಅರ್ಜಿಯೊಟ್ಟಿಗೇ ಆಲಿಸಬೇಕು. ನಾವು ನೋಟಿಸ್‌ ಜಾರಿ ಮಾಡುತ್ತೇವೆ," ಎಂದರು.

ಕೇಂದ್ರ ಸರ್ಕಾರಕ್ಕೆ ನೋಟಿಸ್‌ ಜಾರಿ ಮಾಡಿದ ಪೀಠವು ನಾಲ್ಕು ವಾರಗಳ ನಂತರ ಪ್ರಕರಣವನ್ನು ಪಟ್ಟಿ ಮಾಡಲು ಸೂಚಿಸಿತು. ಅಲ್ಲಿಯವರೆಗೆ ಆರೋಪಿತ ಅರ್ಜಿದಾರರಿಗೆ ಮಧ್ಯಂತರ ರಕ್ಷಣೆಯು ಮುಂದುವರಿಯಲಿದೆ ಎಂದಿತು.

Related Stories

No stories found.
Kannada Bar & Bench
kannada.barandbench.com