ಪಿಎನ್‌ಬಿ ಹಗರಣ: ಭಾರತಕ್ಕೆ ಹಸ್ತಾಂತರ ಪ್ರಶ್ನಿಸಿ ಮೋದಿ ಸಲ್ಲಿಸಿದ್ದ ಮೇಲ್ಮನವಿ ವಜಾ ಮಾಡಿದ ಇಂಗ್ಲೆಂಡ್‌ ಹೈಕೋರ್ಟ್‌

ಹೊಸ ಮೇಲ್ಮನವಿಯೊಂದಿಗೆ ಹೈಕೋರ್ಟ್‌ನಲ್ಲಿ ಮೌಖಿಕ ವಿಚಾರಣೆ ಮೂಲಕ ತನ್ನ ಪ್ರಕರಣ ಮಂಡಿಸುವ ಅವಕಾಶ ಮಾತ್ರ ದೇಶಭ್ರಷ್ಟ ಉದ್ಯಮಿ ನೀರವ್‌ ಮೋದಿ ಪಾಲಿಗೆ ಉಳಿದಿದೆ.
Nirav Modi
Nirav Modi

ಪಂಜಾಬ್‌ ನ್ಯಾಷನಲ್‌ ಬ್ಯಾಂಕಿಗೆ ರೂ. 14,000 ಕೋಟಿ ವಂಚಿಸಿರುವ ಹಗರಣದ ಆರೋಪಿ ದೇಶಭ್ರಷ್ಟ ಉದ್ಯಮಿ ನೀರವ್‌ ಮೋದಿಯು ತನ್ನನ್ನು ಭಾರತಕ್ಕೆ ಹಸ್ತಾಂತರ ಮಾಡದಂತೆ ಸಲ್ಲಿಸಿದ್ದ ಮನವಿಯನ್ನು ಇಂಗ್ಲೆಂಡ್‌ ಮತ್ತು ವೇಲ್ಸ್‌ ಹೈಕೋರ್ಟ್‌ ಮಂಗಳವಾರ ವಜಾ ಮಾಡಿದೆ ಎಂದು ಪಿಟಿಐ ವರದಿ ಮಾಡಿದೆ. ಮೋದಿಯ ಮೇಲ್ಮನವಿ ಅವಕಾಶವನ್ನು ಲಿಖಿತವಾಗಿ ವಜಾ ಮಾಡಲಾಗಿದೆ ಎಂದು ಹೈಕೋರ್ಟ್‌ ಅಧಿಕಾರಿ ಖಾತರಿಪಡಿಸಿದ್ದಾರೆ.

ಹೀಗಾಗಿ, ಐದು ದಿನಗಳ ಒಳಗೆ ಹೈಕೋರ್ಟ್‌ನಲ್ಲಿ ಹೊಸ ಮೇಲ್ಮನವಿಯೊಂದಿಗೆ ಮೌಖಿಕ ವಿಚಾರಣೆ ಮೂಲಕ ತನ್ನ ಪ್ರಕರಣ ಮಂಡಿಸುವ ಅವಕಾಶ ಮಾತ್ರ ಮೋದಿಗೆ ಉಳಿದಿದೆ. ಈ ಸಂಬಂಧ ಮೇಲ್ಮನವಿ ಸಲ್ಲಿಸಿದ ಬಳಿಕ ವಿಸ್ತೃತ ವಿಚಾರಣೆ ನಡೆಸಬೇಕೆ ಎಂಬುದನ್ನು ನ್ಯಾಯಾಧೀಶರು ನಿರ್ಧರಿಸಲಿದ್ದಾರೆ.

ಪಿತೂರಿ, ವಂಚನೆ, ಅಕ್ರಮ ಹಣ ವರ್ಗಾವಣೆ ಮಾಡಿದ ಹಾಗೂ ತನ್ನ ಕಂಪೆನಿಯ ನಿರ್ದೇಶಕರಲ್ಲಿ ಒಬ್ಬರಾದ ಆಶೀಶ್‌ ಲಾಡ್‌ ಅವರಿಗೆ ಕೊಲೆ ಬೆದರಿಕೆ ಹಾಕಿದ ಸಂಬಂಧ ಮೋದಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಮೋದಿಯನ್ನು ಹಸ್ತಾಂತರಿಸುವಂತೆ ಕೋರಿ ಭಾರತ ಸರ್ಕಾರ 2018ರ ಜುಲೈ 27ರಂದು ಮೊದಲು ಮನವಿ ಸಲ್ಲಿಸಿತ್ತು. ಪಿಎನ್‌ಬಿ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ಮತ್ತು ಜಾರಿ ನಿರ್ದೇಶನಾಲಯದಲ್ಲಿ ಪ್ರತ್ಯೇಕವಾಗಿ ತನಿಖೆ ನಡೆಯುತ್ತಿದೆ.

ಪ್ರಸಕ್ತ ವರ್ಷದ ಫೆಬ್ರವರಿಯಲ್ಲಿ ಮೋದಿಯನ್ನು ಭಾರತಕ್ಕೆ ಹಸ್ತಾಂತರಿಸುವ ಮನವಿಗೆ ಇಂಗ್ಲೆಂಡ್‌ನ ವೆಸ್ಟ್‌ಮಿನಿಸ್ಟರ್‌ ಮ್ಯಾಜಿಸ್ಟ್ರೇಟ್‌ ಅಸ್ತು ಎಂದಿದ್ದರು. ಮೇಲ್ನೋಟಕ್ಕೆ ಮೋದಿ ಅಕ್ರಮ ಹಣ ವರ್ಗಾವಣೆಯಲ್ಲಿ ಭಾಗಿಯಾಗಿರುವ ಸಾಧ್ಯತೆ ಇದೆ ಎಂದು ನ್ಯಾಯಾಲಯ ಹೇಳಿತ್ತು.

Also Read
ಇ.ಡಿಯಿಂದ ಮಲ್ಯ, ಮೋದಿ, ಚೋಕ್ಸಿಯ ₹18 ಸಾವಿರ ಕೋಟಿ ಮೌಲ್ಯದ ಆಸ್ತಿ ವಶ: ಕೇಂದ್ರ, ಬ್ಯಾಂಕ್‌ಗಳಿಗೆ ಭಾಗಶಃ ವರ್ಗಾವಣೆ

“ಮೇಲ್ನೋಟಕ್ಕೆ ಪಿತೂರಿ ಪ್ರಕರಣ ಕಂಡು ಬಂದಿದ್ದು, ಜಾರಿ ನಿರ್ದೇಶನಾಲಯದ ವಿನಂತಿ ಮೇರೆಗೆ ಅವಲಂಬಿತವಾದ ಸಂಪೂರ್ಣ ಪುರಾವೆ ಮತ್ತು ಅದರ ಮೌಲ್ಯಮಾಪನವನ್ನು ರೂಪಿಸಲು ಹೋಗುವುದಿಲ್ಲ. ಎನ್‌ಡಿಎಂ (ನೀರವ್‌ ದೀಪಕ್‌ ಮೋದಿ) ಅವರನ್ನು ಪ್ರತಿನಿಧಿಸುವವರು ಇದನ್ನು ಒಪ್ಪಿಕೊಂಡಿದ್ದು, ಮೇಲ್ನೋಟಕ್ಕೆ ಅಕ್ರಮ ಹಣ ವರ್ಗಾವಣೆ ಪ್ರಕರಣ ಇದಾಗಿದೆ” ಎಂದು ಆದೇಶದಲ್ಲಿ ನ್ಯಾಯಾಲಯ ಹೇಳಿತ್ತು.

ಇದನ್ನು ಆಧರಿಸಿ ಇಂಗ್ಲೆಂಡ್‌ನ ಗೃಹ ಸಚಿವೆ ಪ್ರೀತಿ ಪಟೇಲ್‌ ಅವರು ಮೋದಿಯನ್ನು ಭಾರತಕ್ಕೆ ಹಸ್ತಾಂತರಿಸಲು ಅನುಮತಿಸಿದ್ದರು. 2019ರ ಮಾರ್ಚ್‌ನಲ್ಲಿ ಬಂಧನಕ್ಕೆ ಒಳಗಾಗಿರುವ ನೀರವ್‌ ಮೋದಿ ಲಂಡನ್‌ನ ವ್ಯಾಂಡ್ಸ್‌ವರ್ಥ್‌ ಜೈಲಿನಲ್ಲಿದ್ದಾರೆ.

Related Stories

No stories found.
Kannada Bar & Bench
kannada.barandbench.com