[ಪೋಕ್ಸೊ] ಸಂತ್ರಸ್ತೆಗೆ ಪರಿಣಾಮದ ಅರಿವಿತ್ತು, ಕಾಂಡೋಮ್ ಬಳಕೆಯಾಗಿತ್ತು: ಅತ್ಯಾಚಾರ ಆರೋಪಿಗೆ ಬಾಂಬೆ ಹೈಕೋರ್ಟ್ ಜಾಮೀನು
ಪೋಕ್ಸೊ ಕಾಯಿದೆಯಡಿಯಲ್ಲಿ ಅತ್ಯಾಚಾರ ಪ್ರಕರಣದ ಆರೋಪಿಯೊಬ್ಬನಿಗೆ ಇತ್ತೀಚೆಗೆ ಜಾಮೀನು ನೀಡಿರುವ ಬಾಂಬೆ ಹೈಕೋರ್ಟ್ 16 ವರ್ಷದ ಸಂತ್ರಸ್ತೆಗೆ ಕೃತ್ಯದ ಪರಿಣಾಮಗಳ ಬಗ್ಗೆ ತಿಳಿದಿತ್ತು ಹಾಗೂ ಆರೋಪಿ ಕಾಂಡೋಮ್ ಬಳಸಿದ್ದ ಎಂದು ಹೇಳಿದೆ.
ಸೆಪ್ಟೆಂಬರ್ 9, 2019 ರಂದು ಕೊಲ್ಲಾಪುರ ಪೊಲೀಸರು ಬಂಧಿಸಿದ್ದ ಆರೋಪಿಯ ಜಾಮೀನು ಅರ್ಜಿಯ ವಿಚಾರಣೆ ನ್ಯಾಯಮೂರ್ತಿ ಸಿ ವಿ ಭದಂಗ್ ಅವರಿದ್ದ ಏಕಸದಸ್ಯ ಪೀಠದಲ್ಲಿ ನಡೆಯಿತು.
ಸಂತ್ರಸ್ತೆ 18 ವರ್ಷಕ್ಕಿಂತ ಕಡಿಮೆ ವಯಸ್ಸಿನವಳಾಗಿದ್ದು ಪೋಕ್ಸೊ ಕಾಯಿದೆಯಡಿ ಅಪ್ರಾಪ್ತಳಾಗಿದ್ದರೂ ಆಕೆಗೆ 16.5 ವರ್ಷ ವಯಸ್ಸಾಗಿತ್ತು ಮತ್ತು ಕೃತ್ಯದ ಪರಿಣಾಮಗಳ ಬಗ್ಗೆ ಆಕೆಗೆ ತಿಳಿದಿತ್ತು ಎಂದು ನ್ಯಾಯಾಲಯ ಹೇಳಿದೆ.
"ಸಂತ್ರಸ್ತೆಗೆ 16 ವರ್ಷ 6 ತಿಂಗಳ ವಯಸ್ಸಾಗಿದ್ದು ಆಕೆಗೆ ಕೃತ್ಯದ ಸ್ವರೂಪ ಮತ್ತು ಪರಿಣಾಮಗಳ ಬಗ್ಗೆ ತಿಳಿದಿರುತ್ತದೆ ಎಂದು ಗಮನಿಸುವುದು ಅವಶ್ಯಕ. ಸಂತ್ರಸ್ತೆಯ ಜೊತೆ ದೈಹಿಕ ಸಂಬಂಧ ಹೊಂದಿದ ಸಂದರ್ಭದಲ್ಲಿ ಅರ್ಜಿದಾರ ಯಾವುದೇ ಬಲಪ್ರಯೋಗ ನಡೆಸಿದ ಅಥವಾ ಬಲಾತ್ಕಾರ ಎಸಗಿದ ಅಂಶಗಳು ಕಂಡುಬಂದಿಲ್ಲ ಎಂದು ಸೂಚಿಸುವ ಸಂದರ್ಭಗಳಿವೆ. ವೈದ್ಯಕೀಯ ವರದಿಯ ಷರತ್ತು 15 (ಎಫ್) ರ ಪ್ರಕಾರ ಅರ್ಜಿದಾರ ಸಂಬಂಧದ ಸಮಯದಲ್ಲಿ ರಕ್ಷಣೆಯನ್ನು (ಕಾಂಡೋಮ್) ಸಹ ಬಳಸಿದ್ದಾರೆ ಎಂದು ತೋರಿಸುತ್ತದೆ" ಎಂದು ಪೀಠ ವಿವರಿಸಿತು. ಈ ಹಿನ್ನೆಲೆಯಲ್ಲಿ ಅರ್ಜಿದಾರನಿಗೆ ನ್ಯಾಯಾಲಯ ಜಾಮೀನು ನೀಡಿತು.

