ಮುಸ್ಲಿಂ ವೈಯಕ್ತಿಕ ಕಾನೂನಿನ ಅಡಿ ಬಾಲಕಿಯು ಮೈನೆರೆದು, ವಯಸ್ಕಳಾದರೂ ಪೋಕ್ಸೊ ಅನ್ವಯ: ದೆಹಲಿ ಹೈಕೋರ್ಟ್‌

ಬಾಲಕಿಯು ಮೈನೆರೆದಿದ್ದು, ಮುಸ್ಲಿಂ ಕಾನೂನಿನ ಅಡಿ ಆಕೆಯು ವಯಸ್ಕಳಾಗಿದ್ದಾಳೆ ಎಂದು ವ್ಯಕ್ತಿಯೊಬ್ಬ ತಮ್ಮ ವಿರುದ್ಧ ಐಪಿಸಿ ವಿವಿಧ ಸೆಕ್ಷನ್‌ಗಳು ಮತ್ತು ಪೋಕ್ಸೊ ಅಡಿ ದಾಖಲಾಗಿದ್ದ ಎಫ್‌ಐಆರ್‌ ಅನ್ನು ಪ್ರಶ್ನಿಸಿದ್ದರು.
Justice Jasmeet Singh
Justice Jasmeet Singh

ತಾನು ಲೈಂಗಿಕ ಸಂಬಂಧ ಹೊಂದಿದ್ದೆ ಎಂದು ಆರೋಪಿಸಲಾಗಿರುವ ಬಾಲಕಿಯು ಮೈನೆರೆದಿದ್ದು, ಆಕೆಯು ಮುಸ್ಲಿಂ ವೈಯಕ್ತಿಕ ಕಾನೂನಿನ ಅಡಿ ವಯಸ್ಕಳಾಗಿದ್ದಾಳೆ. ಹೀಗಾಗಿ, ಪೋಕ್ಸೊ ಕಾಯಿದೆ ತನಗೆ ಅನ್ವಯಿಸದು ಎಂದು ವಾದಿಸಿದ್ದ ಆರೋಪಿಯ ವಾದವನ್ನು ಈಚೆಗೆ ದೆಹಲಿ ಹೈಕೋರ್ಟ್‌ ತಿರಸ್ಕರಿಸಿದೆ.

ಪೋಕ್ಸೊ ಕಾಯಿದೆಗೆ ಸಾಂಪ್ರದಾಯಿ ಕಾನೂನನು ಅನ್ವಯಿಸುವುದಿಲ್ಲ. ಲೈಂಗಿಕ ದೌರ್ಜನ್ಯದಿಂದ ಮಕ್ಕಳನ್ನು ರಕ್ಷಿಸಲು ಈ ಕಾನೂನನ್ನು ಜಾರಿಗೊಳಿಸಲಾಗಿದೆ ಎಂದು ನ್ಯಾಯಮೂರ್ತಿ ಜಸ್ಮೀತ್‌ ಸಿಂಗ್‌ ನೇತೃತ್ವದ ಏಕಸದಸ್ಯ ಪೀಠ ಹೇಳಿದೆ.

ಮಕ್ಕಳ ಎಳೆಯ ಪ್ರಾಯವನ್ನು ರಕ್ಷಿಸಿ, ಅವರ ಮೇಲಿನ ದೌರ್ಜನ್ಯ ಮತ್ತು ದುರ್ಬಳಕೆಯನ್ನು ತಪ್ಪಿಸಲು ಹಾಗೂ ಅವರ ಯೌವ್ವನವನ್ನು ಶೋಷಣೆಯಿಂದ ಪಾರು ಮಾಡುವುದು ಕಾನೂನಿನ ಉದ್ದೇಶ. ಹೀಗಾಗಿ, ಸಂತ್ರಸ್ತೆಯು ಮುಸ್ಲಿಂ ವೈಯಕ್ತಿಕ ಕಾನೂನಿನ ಅಡಿ ವಯಸ್ಕಳಾಗಿದ್ದು ಕಠಿಣವಾದ ಪೋಕ್ಸೊ ಕಾಯಿದೆ ಅನ್ವಯಿಸದು ಎಂಬ ಅರ್ಜಿದಾರರ ವಾದವನ್ನು ತಿರಸ್ಕರಿಸಲಾಗಿದೆ ಎಂದು ನ್ಯಾ. ಸಿಂಗ್‌ ಹೇಳಿದ್ದಾರೆ.

ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ಗಳಾದ 376 (ಅತ್ಯಾಚಾರ), 377 (ಅಸ್ವಾಭಾವಿಕ ಅಪರಾಧ), 506 (ಕ್ರಿಮಿನಲ್‌ ಬೆದರಿಕೆ) and 406 (ನಂಬಿಕೆ ದ್ರೋಹ) ಮತ್ತು ಪೋಕ್ಸೊ ಕಾಯಿದೆಯ ಸೆಕ್ಷನ್‌ 6ರ ಅಡಿ ಎಫ್‌ಐಆರ್‌ ದಾಖಲಿಸಿರುವುದನ್ನು ವಜಾ ಮಾಡುವಂತೆ ಕೋರಿ ಸಲ್ಲಿಸಲಾಗಿದ್ದ ಮನವಿಯ ವಿಚಾರಣೆಯನ್ನು ನ್ಯಾಯಾಲಯ ನಡೆಸಿತು.

ಬಾಲಕಿಯ ಮನೆಗೆ ತೆರೆಳಿದ್ದ ಆರೋಪಿಯು ಆಕೆಯನ್ನು ವಿವಾಹ ಮಾಡಿಕೊಡುವಂತೆ ಬಾಲಕಿಯ ಪೋಷಕರನ್ನು ಕೋರಿದ್ದ. ಬಾಲಕಿಯು 12ನೇ ತರಗತಿ ಪರೀಕ್ಷೆ ಮುಗಿದ ಬಳಿಕ ಆಕೆಯನ್ನು ವಿವಾಹ ಮಾಡಿಕೊಡವ ಷರತ್ತಿನೊಂದಿಗೆ ಪೋಷಕರು ಒಪ್ಪಿಕೊಂಡಿದ್ದರು. ಬಾಲಕಿಯ ಕುಟುಂಬಸ್ಥರು ಹಲವು ಉಡುಗೊರೆಯ ಜೊತೆಗೆ ₹10 ಲಕ್ಷ ರೂಪಾಯಿಯನ್ನು ಆರೋಪಿಗೆ ನೀಡಿದ್ದರು. ಆದರೆ, ಆರೋಪಿಯು 16 ವರ್ಷದ ಬಾಲಕಿಯ ಜೊತೆ ಲೈಂಗಿಕ ಸಂಪರ್ಕ ಸಾಧಿಸಿದ್ದ ಆನಂತರ ಆಕೆಯನ್ನು ವಿವಾಹವಾಗಲು ನಿರಾಕರಿಸಿದ್ದ ಎಂದು ಎಫ್‌ಐಆರ್‌ನಲ್ಲಿ ಆರೋಪಿಸಲಾಗಿದೆ.

Related Stories

No stories found.
Kannada Bar & Bench
kannada.barandbench.com