[ಪೋಕ್ಸೊ ಪ್ರಕರಣ] ಸಾಕ್ಷಿ ದಾಖಲಿಸಲು ಸಂತ್ರಸ್ತೆ 2 ವರ್ಷಗಳಿಂದ ಕಾಯುವಂತೆ ಮಾಡಲಾಗಿದೆ: ಹೈಕೋರ್ಟ್‌ಗೆ ಸರ್ಕಾರದ ವಿವರಣೆ

ಬೆಂಗಳೂರಿನ ಸದಾಶಿವನಗರ ಠಾಣೆಯಲ್ಲಿ ಬಿಎಸ್‌ವೈ ವಿರುದ್ಧ ಪೋಕ್ಸೊ ಕಾಯಿದೆ ಸೆಕ್ಷನ್‌ 8 (ಲೈಂಗಿಕ ದೌರ್ಜನ್ಯ) ಮತ್ತು ಐಪಿಸಿ ಸೆಕ್ಷನ್‌ 354 (ಎ) ಅಡಿ (ಲೈಂಗಿಕ ಕಿರುಕುಳ) ಅಡಿ ಪ್ರಕರಣ ದಾಖಲಿಸಲಾಗಿದೆ.
ex CM B S Yediyurappa and Karnataka HC
ex CM B S Yediyurappa and Karnataka HC
Published on

“ಮಾಜಿ ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ ವಿರುದ್ಧದ ಪೋಕ್ಸೊ ಪ್ರಕರಣದಲ್ಲಿ ಸಂತ್ರಸ್ತೆಯಾಗಿರುವ ಬಾಲಕಿಯು ಸಾಕ್ಷಿ ನುಡಿಯಲು ಕಳೆದ ಎರಡು ವರ್ಷಗಳಿಂದ ಕಾಯುವಂತೆ ಮಾಡಲಾಗಿದೆ” ಎಂದು ರಾಜ್ಯ ಸರ್ಕಾರವು ಹೈಕೋರ್ಟ್‌ನಲ್ಲಿ ಬುಧವಾರ ಆಕ್ಷೇಪಿಸಿತು.

ಪೋಕ್ಸೊ ಪ್ರಕರಣದಲ್ಲಿ ವಿಚಾರಣಾಧೀನ ನ್ಯಾಯಾಲಯ ಸಂಜ್ಞೇ ಪರಿಗಣಿಸಿರುವುದನ್ನು ಪ್ರಶ್ನಿಸಿ ಬಿ ಎಸ್‌ ಯಡಿಯೂರಪ್ಪ ಅವರು ಎರಡನೇ ಬಾರಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ಐ ಅರುಣ್‌ ಅವರ ಏಕಸದಸ್ಯ ಪೀಠವು ನಡೆಸಿತು.

ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ವಿಶೇಷ ಸರ್ಕಾರಿ ಅಭಿಯೋಜಕ ಪ್ರೊ. ರವಿವರ್ಮ ಕುಮಾರ್‌ ಅವರು “ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ನೀಡಲಾಗಿದೆ. 2024ರ ಫೆಬ್ರವರಿ 2ರಂದು ಪ್ರಕರಣ ನಡೆದಿದ್ದು, ವಿಚಾರಣಾಧೀನ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಕೆ ಮಾಡಲಾಗಿದೆ. ವಿಚಾರಣಾಧೀನ ನ್ಯಾಯಾಲಯವು ಸಂಜ್ಞೇಯನ್ನೂ ಪರಿಗಣಿಸಿತ್ತು. ಇದನ್ನು ಬಿಎಸ್‌ವೈ ಪ್ರಶ್ನಿಸಿದ್ದು, ಹೈಕೋರ್ಟ್‌ನ ಸಮನ್ವಯ ಪೀಠವು ವಿಸ್ತೃತವಾಗಿ ಪ್ರಕರಣದ ಮೆರಿಟ್‌ ಒಳಗೊಂಡು ವಾದ ಆಲಿಸಿತ್ತು. ಮೆರಿಟ್‌ ಮೇಲೆ ಬಹುತೇಕ ಅಂಶಗಳನ್ನು ನ್ಯಾಯಾಲಯ ದಾಖಲಿಸಿದೆ. ಆದರೆ, ಸಂಜ್ಞೇ ಪರಿಗಣಿಸಿರುವ ವಿಚಾರಣಾಧೀನ ನ್ಯಾಯಾಲಯದ ಆದೇಶದಲ್ಲಿ ಲೋಪ ಉಲ್ಲೇಖಿಸಿ, ವಿವೇಚನೆ ಬಳಸಿ ಸಂಜ್ಞೇ ಪರಿಗಣಿಸುವಂತೆ ನಿರ್ದೇಶನ ನೀಡಿತ್ತು. ಆನಂತರ ವಿಚಾರಣಾಧೀನ ನ್ಯಾಯಾಲಯವು ಹೈಕೋರ್ಟ್‌ನ ಎಲ್ಲಾ ಅಂಶಗಳನ್ನು ಉಲ್ಲೇಖಿಸಿ ಪ್ರಕರಣವನ್ನು ಸಂಜ್ಞೇ ತೆಗೆದುಕೊಂಡಿದೆ. ಈಗ ಮತ್ತದೇ ವಿಚಾರಣಾಧೀನ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಲಾಗಿದೆ. ಇದಕ್ಕೆ ಮಧ್ಯಂತರ ತಡೆಯನ್ನೂ ಹೈಕೋರ್ಟ್‌ನಲ್ಲಿ ಪಡೆಯಲಾಗಿದೆ. ಹೀಗಾಗಿ, ತಡೆಯಾಜ್ಞೆ ಮುಂದುವರಿಸಬಾರದು” ಎಂದು ಮನವಿ ಮಾಡಿದರು.

“ಪೋಕ್ಸೊ ಪ್ರಕರಣದಲ್ಲಿ ಹೈಕೋರ್ಟ್‌ನ ಸಮನ್ವಯ ಪೀಠದ ನಿರ್ದೇಶನದ ಪ್ರಕಾರ ವಿಚಾರಣಾಧೀನ ನ್ಯಾಯಾಲಯ ಸಂಜ್ಞೇ ಪರಿಗಣಿಸಿದೆಯೇ ಎಂಬ ಪ್ರಶ್ನೆ ಮಾತ್ರ ನಿರ್ಧಾರವಾಗಬೇಕಿದೆ” ಎಂದರು.

ಬಿ ಎಸ್‌ ಯಡಿಯೂರಪ್ಪ ಪರ ವಕೀಲೆಯು ವಿಚಾರಣೆಯನ್ನು ಒಂದು ವಾರ ಮುಂದೂಡುವಂತೆ ಕೋರಿದರು. ಇದಕ್ಕೆ ತೀವ್ರ ಆಕ್ಷೇಪವನ್ನು ಪ್ರಾಸಿಕ್ಯೂಷನ್‌ ವ್ಯಕ್ತಪಡಿಸಿತು. ಹೀಗಾಗಿ, ಕೊನೆಯ ಬಾರಿಗೆ ಆಗಸ್ಟ್‌ 23ಕ್ಕೆ ವಿಚಾರಣೆ ಮುಂದೂಡಲಾಗುತ್ತಿದೆ ಎಂದು ನ್ಯಾಯಾಲಯ ತಿಳಿಸಿತು.

ದೂರಿನ ಸಾರಾಂಶ: ಸಂತ್ರಸ್ತೆಯ ತಾಯಿ ನೀಡಿದ್ದ ದೂರಿನ ಅನ್ವಯ ಸಂತ್ರಸ್ತೆಯ ಮೇಲೆ ಈ ಹಿಂದೆ ಅತ್ಯಾಚಾರವಾಗಿದ್ದು, ಈ ಸಂಬಂಧ ವಿಶೇಷ ತನಿಖಾ ದಳ ರಚಿಸಲು ರಾಜ್ಯ ಸರ್ಕಾರದ ಮೇಲೆ ಒತ್ತಡ ತರುವ ಮೂಲಕ ನೆರವಾಗುವಂತೆ ಕೋರಲು ಸಂತ್ರಸ್ತೆ ಮತ್ತು ಆಕೆಯ ತಾಯಿ ಯಡಿಯೂರಪ್ಪ ಅವರನ್ನು 2024ರ ಫೆಬ್ರವರಿ 2ರಂದು ಅವರ ನಿವಾಸದಲ್ಲಿ ಭೇಟಿ ಮಾಡಿದ್ದರು ಎನ್ನಲಾಗಿದೆ.

ಈ ಸಂದರ್ಭದಲ್ಲಿ ಯಡಿಯೂರಪ್ಪ ಅವರು ನಮ್ಮ ಜೊತೆ ಒಂಭತ್ತು ನಿಮಿಷ ಮಾತನಾಡಿ, ನಮಗೆ ಟೀ ಕುಡಿಸಿದರು. ಆನಂತರ ನನ್ನ ಮಗಳನ್ನು ಕೊಠಡಿಗೆ ಕರೆದೊಯ್ದು ಚಿಲಕ ಹಾಕಿಕೊಂಡಿದ್ದರು. ಈ ವೇಳೆ ಆಕೆಯ ಬಲಭಾಗದ ಸ್ತನವನ್ನು ಸ್ಪರ್ಶಿಸಿ ಲೈಂಗಿಕ ದೌರ್ಜನ್ಯವೆಸಗಿದ್ದರು. ಆಕೆ ಹೊರಹೋಗಲು ಬಾಗಿಲು ತೆರೆಯುವಂತೆ ಒತ್ತಾಯಿಸಿದ್ದಳು. ಆನಂತರ ಯಡಿಯೂರಪ್ಪ ಅವರೇ ಬಾಗಿಲು ತೆರೆದಿದ್ದು, ತಕ್ಷಣ ಓಡಿ ಬಂದ ನನ್ನ ಪುತ್ರಿ ಘಟನೆಯನ್ನು ವಿವರಿಸಿದಳು ಎಂದು ದೂರಲಾಗಿತ್ತು.

Also Read
ಮಾಜಿ ಸಿಎಂ ಯಡಿಯೂರಪ್ಪ ವಿರುದ್ಧದ ಪ್ರಕರಣಕ್ಕೆ ಹೈಕೋರ್ಟ್‌ ತಡೆಯಾಜ್ಞೆ; ಖುದ್ದು ಹಾಜರಾತಿಯಿಂದ ವಿನಾಯಿತಿ

ಘಟನೆಯ ಬಗ್ಗೆ ಯಡಿಯೂರಪ್ಪ ಅವರು ಈ ವಿಚಾರವನ್ನು ಹೊರೆಗೆ ಬಾಯಿ ಬಿಡದಂತೆ ತಡೆಯಲು ತುಂಬಾ ಪ್ರಯತ್ನಿಸಿದ್ದಾರೆ ಎಂದು ಸಂತ್ರಸ್ತೆಯ ತಾಯಿ ಸದಾಶಿವನಗರ ಠಾಣೆಗೆ ದೂರು ನೀಡಿದ್ದರು. ಇದನ್ನು ಆಧರಿಸಿ ಪೊಲೀಸರು ಪೋಕ್ಸೊ ಕಾಯಿದೆ ಸೆಕ್ಷನ್‌ 8 (ಲೈಂಗಿಕ ದೌರ್ಜನ್ಯ) ಮತ್ತು ಐಪಿಸಿ ಸೆಕ್ಷನ್‌ 354 (ಎ) ಅಡಿ (ಲೈಂಗಿಕ ಕಿರುಕುಳ) ಯಡಿಯೂರಪ್ಪ ವಿರುದ್ಧ ಎಫ್‌ಐಆರ್‌ ದಾಖಲಿಸಿದ್ದರು.

ಆನಂತರ ಪ್ರಕರಣದ ತನಿಖೆ ನಡೆಸಿ, ಸಿಐಡಿಯು ಆರೋಪ ಪಟ್ಟಿ ಸಲ್ಲಿಸಿತ್ತು. ವಿಚಾರಣಾಧೀನ ನ್ಯಾಯಾಲಯವು ಇದರ ಸಂಜ್ಞೇಯ ಪರಿಗಣಿಸಿತ್ತು. ಇದನ್ನು ಹೈಕೋರ್ಟ್‌ ವಜಾ ಮಾಡಿ, ಹೊಸದಾಗಿ ಸಂಜ್ಞೇಯ ಪರಿಗಣಿಸಲು ಆದೇಶಿಸಿತ್ತು. ಈಗ ಮತ್ತೆ ಸಂಜ್ಞೇ ಪರಿಗಣಿಸಿರುವ ವಿಚಾರಣಾಧೀನ ನ್ಯಾಯಾಲಯದ ಆದೇಶವನ್ನು ಯಡಿಯೂರಪ್ಪ ಪ್ರಶ್ನಿಸಿದ್ದಾರೆ.

Kannada Bar & Bench
kannada.barandbench.com