ಮುರುಘಾ ಶರಣರ ವಿರುದ್ಧದ ಪೋಕ್ಸೊ ಪ್ರಕರಣ: ಒಂದು ವಾರ ವಿಚಾರಣೆ ಮುಂದೂಡಲು ವಿಚಾರಣಾಧೀನ ನ್ಯಾಯಾಲಯಕ್ಕೆ ಹೈಕೋರ್ಟ್‌ ಆದೇಶ

ಮಠದ ಭಕ್ತರು ದಾಖಲಿಸಿರುವ ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳು ಹಾಗೂ ಎರಡನೇ ಪೋಕ್ಸೊ ಪ್ರಕರಣದಲ್ಲಿನ ಸಾಕ್ಷಿಗಳು ಸಿಆರ್‌ಪಿಸಿ ಸೆಕ್ಷನ್‌ 164ರ ಅಡಿ ದಾಖಲಿಸಿರುವ ಹೇಳಿಕೆಗಳನ್ನು ಒದಗಿಸಲು ಅರ್ಜಿದಾರರ ಕೋರಿಕೆ.
Karnataka HC and Shivamurthy Muruga Sharanaru
Karnataka HC and Shivamurthy Muruga Sharanaru

ಚಿತ್ರದುರ್ಗದ ಶಿವಮೂರ್ತಿ ಮುರುಘಾ ಶರಣರ ವಿರುದ್ಧದ ಎರಡನೇ ಪೋಕ್ಸೊ ಪ್ರಕರಣವನ್ನು ಒಂದು ವಾರ ಮುಂದೂಡಲು ವಿಚಾರಣಾಧೀನ ನ್ಯಾಯಾಲಯಕ್ಕೆ ಕರ್ನಾಟಕ ಹೈಕೋರ್ಟ್‌ ಬುಧವಾರ ಆದೇಶಿಸಿದೆ.

ಮಠದ ಭಕ್ತರು ದಾಖಲಿಸಿರುವ ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳು ಹಾಗೂ ಎರಡನೇ ಪೋಕ್ಸೊ ಪ್ರಕರಣದಲ್ಲಿನ ಸಾಕ್ಷಿಗಳು ಸಿಆರ್‌ಪಿಸಿ ಸೆಕ್ಷನ್‌ 164ರ ಅಡಿ ದಾಖಲಿಸಿರುವ ಹೇಳಿಕೆಗಳನ್ನು ಒದಗಿಸಲು ತನಿಖಾಧಿಕಾರಿಗೆ ನಿರ್ದೇಶಿಸಬೇಕು ಎಂದು ಕೋರಿದ್ದ ಅರ್ಜಿಯನ್ನು ಚಿತ್ರದುರ್ಗದ ವಿಚಾರಣಾಧೀನ ನ್ಯಾಯಾಲಯವು 2023ರ ಏಪ್ರಿಲ್‌ 20ರಂದು ವಜಾ ಮಾಡಿತ್ತು. ಇದನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠವು ನಡೆಸಿತು.

“ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರದ ವಕೀಲರು ಸೂಚನೆ ಪಡೆಯುವವರೆಗೆ ಚಿತ್ರದುರ್ಗದ ವಿಚಾರಣಾಧೀನ ನ್ಯಾಯಾಲಯವು 21.06.2023ರವರೆಗೆ ವಿಚಾರಣಾ ಪ್ರಕ್ರಿಯೆಯನ್ನು ಮುಂದೂಡಬೇಕು. ಅಲ್ಲದೇ ಎರಡನೇ ಪೋಕ್ಸೊ ಪ್ರಕರಣದಲ್ಲಿಯೂ ಎರಡು ಆರೋಪ ಪಟ್ಟಿಗಳನ್ನು ಸಲ್ಲಿಸಲಾಗಿದೆ. ಇದನ್ನೂ ಹೈಕೋರ್ಟ್‌ನಲ್ಲಿ ಪ್ರಶ್ನಿಸಲಾಗಿದ್ದು, ಎರಡನ್ನೂ ಒಟ್ಟಿಗೆ ವಿಚಾರಣೆಗೆ ಪಟ್ಟಿ ಮಾಡಬೇಕು ” ಎಂದು ನ್ಯಾಯಾಲಯವು ಆದೇಶದಲ್ಲಿ ಉಲ್ಲೇಖಿಸಿದೆ.

ಅರ್ಜಿದಾರ ಮುರುಘಾ ಶರಣರನ್ನು ಪ್ರತಿನಿಧಿಸಿದ್ದ ವಕೀಲ ಕೆ ಬಿ ಕೆ ಸ್ವಾಮಿ ಅವರು “ಸದರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಜನವರಿಯಲ್ಲಿ ಆರೋಪ ಪಟ್ಟಿ ಸಲ್ಲಿಸಲಾಗಿದೆ. ವಿಚಾರಣಾಧೀನ ನ್ಯಾಯಾಲಯದ ಆದೇಶದಲ್ಲಿ ನೀಡಿರುವ ಕಾರಣವು ತಪ್ಪಿನಿಂದ ಕೂಡಿದೆ. ಆರೋಪಿಯು ತಮ್ಮನ್ನು ಸಮರ್ಥಿಸಿಕೊಳ್ಳಲು ಸಿಆರ್‌ಪಿಸಿ ಸೆಕ್ಷನ್‌ 227ರ ಅಡಿ ದಾಖಲೆಗಳ ಅಗತ್ಯತೆಯ ಬಗ್ಗೆ ಸುಪ್ರೀಂ ಕೋರ್ಟ್‌ ಹೇಳಿದೆ. ವಿಚಾರಣಾಧೀನ ನ್ಯಾಯಾಲಯದ ಆದೇಶ ಮತ್ತು ಕಾರಣಗಳು ಮೇಲ್ನೋಟಕ್ಕೆ ಸುಪ್ರೀಂ ಕೋರ್ಟ್‌ ಆದೇಶಕ್ಕೆ ವಿರುದ್ಧವಾಗಿವೆ” ಎಂದು ವಾದಿಸಿದ್ದರು.

ಎರಡನೇ ಪೋಕ್ಸೊ ಪ್ರಕರಣದಲ್ಲಿ ದೂರುದಾರೆಯಾಗಿರುವ ಮಠದ ದಾಸೋಹದಲ್ಲಿ ಅಡುಗೆ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದ ಮಹಿಳೆಯು ಮಠದ ಕೆಲವು ಭಕ್ತರು ದಾಖಲಿಸಿರುವ ಪ್ರಕರಣದಲ್ಲಿ ಆರೋಪಿಯಾಗಿದ್ದಾರೆ. ಮಠದ ಹಿಂದಿನ ಆಡಳಿತಾಧಿಕಾರಿ ಕೆ ಎಸ್‌ ಬಸವರಾಜನ್‌ ಮತ್ತು ಅವರ ಪತ್ನಿ ಸೌಂದರ್ಯ ಬಸವರಾಜನ್‌ ಅವರೂ ಈ ಪ್ರಕರಣದ ಇತರೆ ಆರೋಪಿಗಳಾಗಿದ್ದಾರೆ. ಈ ಪ್ರಕರಣದ ತನಿಖೆ ನಡೆಯುತ್ತಿದೆ. ಸದರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪ ಪಟ್ಟಿ ಸಲ್ಲಿಸುವವರೆಗೂ ದಾಖಲೆಗಳನ್ನು ಸಲ್ಲಿಸುವಂತೆ ನಿರ್ದೇಶಿಸಲಾಗದು ಎಂದು ಚಿತ್ರದುರ್ಗದ ವಿಚಾರಣಾಧೀನ ನ್ಯಾಯಾಲಯವು ಮುರುಘಾ ಶರಣರ ಅರ್ಜಿಯನ್ನು ವಜಾ ಮಾಡಿತ್ತು.

Also Read
ಪೋಕ್ಸೊ ಪ್ರಕರಣ: ಚಿತ್ರದುರ್ಗದ ಮುರುಘಾ ಶರಣರ ವಿರುದ್ಧದ ಸಾಕ್ಷ್ಯ ವಿಚಾರಣಾ ಪ್ರಕ್ರಿಯೆಗೆ ಹೈಕೋರ್ಟ್‌ ತಡೆ

ಮುರುಘಾ ಮಠದಲ್ಲಿ ಅಡುಗೆ ಸಹಾಯಕಿಯಾಗಿದ್ದ ಮಹಿಳೆಯು ತನ್ನ ಇಬ್ಬರು ಪುತ್ರಿಯರಿಗೆ ಮುರುಘಾ ಶರಣರು ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಮೈಸೂರಿನ ನಜರಾಬಾದ್‌ ಠಾಣೆಗೆ ದೂರು ನೀಡಿದ್ದರು. ಇದನ್ನು ಆಧರಿಸಿ ಸ್ವಾಮೀಜಿ ಮತ್ತು ಇತರರ ವಿರುದ್ಧ ಐಪಿಸಿ ಸೆಕ್ಷನ್‌ಗಳಾದ 376 (ಸಿ), 376 (2) (ಎನ್‌), 376 (ಎಬಿ), 376(3), 366, 366 (ಎ), 323, 114, 34, ಪೋಕ್ಸೊ ಕಾಯಿದೆಯ ಸೆಕ್ಷನ್‌ಗಳಾದ 5(ಎಲ್‌), 6, 7 ಮತ್ತು 17, ಧಾರ್ಮಿಕ ಸಂಸ್ಥೆಗಳ ದುರುಪಯೋಗ ನಿಯಂತ್ರಣ ಕಾಯಿದೆ ಸೆಕ್ಷನ್‌ಗಳಾದ 3(ಎಫ್) ಮತ್ತು 7 ಹಾಗೂ ಬಾಲ ನ್ಯಾಯ (ಮಕ್ಕಳ ಆರೈಕೆ ಮತ್ತು ರಕ್ಷಣೆ) ಕಾಯಿದೆ ಸೆಕ್ಷನ್‌ಗಳಾದ 75 ಮತ್ತು 77 ರ ಅಡಿ ಪ್ರಕರಣ ದಾಖಲಿಸಲಾಗಿತ್ತು. ಆ ನಂತರ ಈ ಪ್ರಕರಣವನ್ನು ಚಿತ್ರದುರ್ಗದ ಗ್ರಾಮಾಂತರ ಠಾಣೆಗೆ ವರ್ಗಾವಣೆ ಮಾಡಲಾಗಿತ್ತು. ಈಗ ಈ ಪ್ರಕರಣದ ವಿಚಾರಣೆಯನ್ನು ಮುಂದೂಡಲು ನ್ಯಾಯಾಲಯ ಆದೇಶಿಸಿದೆ.

Kannada Bar & Bench
kannada.barandbench.com