ಗೌಪ್ಯ ವಿಚಾರಣೆಯಲ್ಲಿ ಪೋಕ್ಸೊ ಪ್ರಕರಣಕ್ಕೆ ತಡೆ: ಯುವಕನ ಜೊತೆ ತೆರಳಲು ಯುವತಿಗೆ ಅನುಮತಿಸಿದ ಹೈಕೋರ್ಟ್‌

ಯುವತಿಯು ಮೇ 26ರಂದು ಅರ್ಜಿದಾರ ಯುವಕನೊಂದಿಗೆ ಧರ್ಮಸ್ಥಳದಲ್ಲಿ ವಿವಾಹವಾಗಿದ್ದು, 15.4.2006ರಂದು ಜನಿಸಿರುವ ತಾನು ವಯಸ್ಕಳಾಗಿದ್ದೇನೆ. ಸದ್ಯ ಅಂತಿಮ ವರ್ಷದ ಬಿ.ಕಾಂ ಓದುತ್ತಿದ್ದೇನೆ ಎಂದು ತಿಳಿಸಿದ್ದಾಳೆ ಎಂದು ಆದೇಶದಲ್ಲಿ ದಾಖಲಿಸಿರುವ ಪೀಠ.
Justice S R Krishna Kumar
Justice S R Krishna Kumar
Published on

ಪೋಕ್ಸೊ ಪ್ರಕರಣದಡಿ ಬಂಧಿತನಾಗಿದ್ದ ಯುವಕನನ್ನು ಸ್ವಇಚ್ಛೆಯಿಂದ ವಯಸ್ಕಳಾಗಿರುವ ತಾನು ವರಿಸಿದ್ದಾಗಿ ಯುವತಿಯು ಗೌಪ್ಯ ವಿಚಾರಣೆಯಲ್ಲಿ ಹೇಳಿಕೆ ನೀಡಿರುವುದನ್ನು ಗುರುವಾರ ಪರಿಗಣಿಸಿರುವ ಕರ್ನಾಟಕ ಹೈಕೋರ್ಟ್‌ ಯುವಕ-ಯುವತಿಯನ್ನು ಒಟ್ಟಾಗಿ ಬದುಕಲು ಅನುಮತಿಸಿದ್ದು, ಯುವಕನ ವಿರುದ್ಧದ ಪೋಕ್ಸೊ ಪ್ರಕರಣಕ್ಕೆ ತಡೆಯಾಜ್ಞೆ ನೀಡಿದೆ.

ಬೆಂಗಳೂರಿನ ನಿಮ್ಹಾನ್ಸ್‌ ಸಮೀಪದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಬಾಲಕಿಯರ ಬಾಲಮಂದಿರದಲ್ಲಿದ್ದ ಯುವತಿ ಮತ್ತು ಆಕೆಯ ಚಿಕ್ಕಪ್ಪ ಅವರನ್ನು ನೇರವಾಗಿ ಇಂದು ನ್ಯಾಯಮೂರ್ತಿ ಎಸ್‌ ಆರ್‌ ಕೃಷ್ಣ ಕುಮಾರ್‌ ಅವರ ಚೇಂಬರ್‌ಗೆ ಹಾಜರುಪಡಿಸಲಾಗಿತ್ತು.

ಸಂತ್ರಸ್ತ ಯುವತಿ ಮತ್ತು ದೂರುದಾರನಾದ ಆಕೆಯ ಚಿಕ್ಕಪ್ಪನೊಂದಿಗೆ ಸಮಾಲೋಚನೆ ನಡೆಸಿದ ಪೀಠಕ್ಕೆ ಯುವತಿಯು ಮೇ 26ರಂದು ಅರ್ಜಿದಾರ ಯುವಕನೊಂದಿಗೆ ಧರ್ಮಸ್ಥಳದಲ್ಲಿ ವಿವಾಹವಾಗಿದ್ದು, 15.4.2006ರಂದು ಜನಿಸಿರುವ ತಾನು ವಯಸ್ಕಳಾಗಿದ್ದೇನೆ. ಸದ್ಯ ಬೆಂಗಳೂರಿನ ಕಾಲೇಜೊಂದರಲ್ಲಿ ಅಂತಿಮ ವರ್ಷದ ಬಿ.ಕಾಂ ಓದುತ್ತಿದ್ದೇನೆ ಎಂದು ತಿಳಿಸಿದ್ದಾಳೆ. ಹೀಗಾಗಿ, ತಕ್ಷಣ ಆಕೆಯನ್ನು ಬಾಲಕಿಯರ ಬಾಲ ಮಂದಿರದಿಂದ ಬಿಡುಗಡೆ ಮಾಡಬೇಕು. ಆಕೆ ಇಚ್ಛಿಸಿದ ಹಾಸ್ಟೆಲ್‌ನಲ್ಲಿ ಉಳಿಯಬಹುದಾಗಿದೆ ಎಂದು ಪೀಠ ಆದೇಶಿಸಿದೆ.

ಅರ್ಜಿದಾರ ಯುವಕ ಅಥವಾ ದೂರುದಾರನಾದ ಆಕೆಯ ಚಿಕ್ಕಪ್ಪ ಸಂತ್ರಸ್ತೆಗೆ ಯಾವುದೇ ರೀತಿಯ ಹಾನಿ ಮಾಡುವಂತಿಲ್ಲ. ಮುಂದಿನ ವಿಚಾರಣೆವರೆಗೆ ಸಂತ್ರಸ್ತೆಯು ಬಳ್ಳಾರಿಗೆ ಭೇಟಿ ನೀಡುವಂತಿಲ್ಲ ಮತ್ತು ಸೆಪ್ಟೆಂಬರ್‌ 1ರಂದು ವಿಚಾರಣಾಧೀನ ನ್ಯಾಯಾಲಯದಲ್ಲಿ ಅರ್ಜಿದಾರ ಯುವಕ ಮತ್ತು ಸಂತ್ರಸ್ತೆ ಒಟ್ಟಾಗಿ ಭಾಗಿಯಾಗಬೇಕು ಎಂಬ ಷರತ್ತಿಗೆ ಒಳಪಟ್ಟು ಯುವಕನ ಜೊತೆ ಸಂತ್ರಸ್ತೆ ಹೊರಡಲು ಪೊಲೀಸರು ವ್ಯವಸ್ಥೆ ಮಾಡಬೇಕು ಎಂದು ನ್ಯಾಯಾಲಯ ನಿರ್ದೇಶಿಸಿದೆ.

ದೂರುದಾರನಾದ ಸಂತ್ರಸ್ತೆಯ ಚಿಕ್ಕಪ್ಪ ತನ್ನ ವಕೀಲರು ಮತ್ತು ಪೊಲೀಸರ ಸಮ್ಮುಖದಲ್ಲಿ ಸಂತ್ರಸ್ತೆಯನ್ನು ಭೇಟಿ ಮಾಡಬಹುದು ಎಂದಿರುವ ನ್ಯಾಯಾಲಯವು ಯುವಕ ಮತ್ತು ಯುವತಿಯನ್ನು ಸೆಪ್ಟೆಂಬರ್‌ 3ರಂದು ನಡೆಯುವ ವಿಚಾರಣೆಗೆ ಖುದ್ದು ಹಾಜರಾಗಲು ನಿರ್ದೇಶಿಸಿ, ವಿಚಾರಣೆ ಮುಂದೂಡಿದೆ.

ಪ್ರಕರಣದ ಹಿನ್ನೆಲೆ: ಅಪ್ರಾಪ್ತ ಯುವತಿಯನ್ನು ಅಪಹರಿಸಿದ ಆರೋಪದ ಮೇಲೆ 26 ವರ್ಷದ ಯುವಕನ ವಿರುದ್ಧ ಪೋಕ್ಸೊ ಪ್ರಕರಣ ದಾಖಲಿಸಿ ಬೆಂಗಳೂರಿನ ಯಲಹಂಕ ನ್ಯೂಟೌನ್‌ ಪೊಲೀಸರು ಆತನನ್ನು ಬಂಧಿಸಿದ್ದರು. ಯುವತಿ ಅಪ್ರಾಪ್ತೆಯಾಗಿರುವ ಹಿನ್ನೆಲೆಯಲ್ಲಿ ದೂರುದಾರನಾದ ಆಕೆಯ ಚಿಕ್ಕಪ್ಪನ ಜೊತೆ ತೆರಳಲು ನಿರಾಕರಿಸಿದ್ದರಿಂದ ಆಕೆಯನ್ನು ಬಾಲಕಿಯರ ಬಾಲಮಂದಿರಕ್ಕೆ ಕಳುಹಿಸಲಾಗಿತ್ತು. ಇಂದು ನ್ಯಾಯಾಲಯದ ನಿರ್ದೇಶನದಂತೆ ನಡೆದ ಗೌಪ್ಯ ವಿಚಾರಣೆಯಲ್ಲಿ ಯುವತಿಯು ತಾನು ವಯಸ್ಕಳಾಗಿದ್ದು, ಸ್ವಇಚ್ಛೆಯಿಂದ ಯುವಕನನ್ನು ವರಿಸಿದ್ದಾಗಿ ಆಕೆ ತಿಳಿಸಿದ್ದಳು. ಇದನ್ನು ಪರಿಗಣಿಸಿದ ನ್ಯಾಯಾಲಯವು ಆಕೆಯನ್ನು ಯುವಕನ ಜೊತೆ ಬದುಕಲು ಅನುಮತಿಸಿದೆ.

ಅರ್ಜಿದಾರ ಯುವಕನ ವಿರುದ್ಧ ಯಲಹಂಕ ನ್ಯೂಟೌನ್‌ ಪೊಲೀಸ್‌ ಠಾಣೆಯಲ್ಲಿ ಬಿಎನ್‌ಎಸ್‌ ಸೆಕ್ಷನ್‌ಗಳಾದ 137(2),64(2)(m) ಮತ್ತು ಪೋಕ್ಸೊ ಕಾಯಿದೆ ಸೆಕ್ಷನ್‌ಗಳಾದ 5(L) ಮತ್ತು 6ರ ಅಡಿ ಪ್ರಕರಣ ದಾಖಲಿಸಲಾಗಿದೆ. ಅರ್ಜಿದಾರ ಯುವಕನ ಪರವಾಗಿ ವಕೀಲ ರಜತ್‌ ವಕಾಲತ್ತು ವಹಿಸಿದ್ದು, ಹಿರಿಯ ವಕೀಲ ಎಚ್‌ ಎಸ್‌ ಚಂದ್ರಮೌಳಿ ವಾದಿಸಿದರು.

Kannada Bar & Bench
kannada.barandbench.com