[ಪೋಕ್ಸೊ ಪ್ರಕರಣ] ಅಪರಾಧಿಯ ಶಿಕ್ಷೆಗೆ ಸಂತ್ರಸ್ತರ ತಿರಸ್ಕರಿಸಲಾಗದ ಸಾಕ್ಷಿಯೊಂದೇ ಸಾಕು: ಮದ್ರಾಸ್‌ ಹೈಕೋರ್ಟ್‌

“ಇಂಥ ಪ್ರಕರಣಗಳ ವಿಚಾರದಲ್ಲಿ ಯಾವುದೇ ಪ್ರತ್ಯಕ್ಷ ಸಾಕ್ಷಿ ಅಥವಾ ದೃಢೀಕರಿಸುವ ಸಾಕ್ಷಿಯನ್ನು ನಿರೀಕ್ಷಿಸಲಾಗದು” ಎಂದು ನ್ಯಾಯಾಲಯ ಹೇಳಿದೆ.
Sexual violence, Madras HC
Sexual violence, Madras HC

ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದ ಪ್ರಕರಣವೊಂದರಲ್ಲಿ ಇತ್ತೀಚೆಗೆ ಮದ್ರಾಸ್‌ ಹೈಕೋರ್ಟ್‌ 7-9ರ ವಯೋಮಾನದ ಸಂತ್ರಸ್ತ ಬಾಲಕಿಯ ಸಾಕ್ಷ್ಯದ ಆಧಾರದಲ್ಲಿ ದೋಷಿಯಾಗಿದ್ದ ವ್ಯಕ್ತಿಗೆ ವಿಧಿಸಲಾದ ಶಿಕ್ಷೆಯನ್ನು ಎತ್ತಿಹಿಡಿದಿದೆ.

ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯಿದೆ (ಪೋಕ್ಸೊ) 2012ರ ಅಡಿ ಅಪರಾಧವನ್ನು ದೃಢೀಕರಿಸಿರುವ ನ್ಯಾಯಮೂರ್ತಿ ಪಿ ವೇಲಮುರುಗನ್‌ ಅವರಿದ್ದ ಏಕಸದಸ್ಯ ಪೀಠವು ಇಂಥ ಪ್ರಕರಣಗಳಲ್ಲಿ ಪ್ರತ್ಯಕ್ಷ ಸಾಕ್ಷಿಯನ್ನು ನಿರೀಕ್ಷಿಸಲಾಗದು. ಘಟನೆ ನಂಬದಿರಲು ಪ್ರಬಲ ಸಾಕ್ಷಿ ಇಲ್ಲದ ಹೊರತು ಏಕಮಾತ್ರ ಸಾಕ್ಷಿಯನ್ನು ಪರಿಗಣಿಸಬಹುದು ಎಂದು ಪೀಠ ಹೇಳಿದೆ.

ಏಕಮಾತ್ರ ಸಾಕ್ಷಿಯು ಹೇಳುವ ವಿಚಾರಗಳು ನಂಬಲರ್ಹ, ವಿಶ್ವಾಸಾರ್ಹ, ಸತ್ಯಾಂಶಗಳಿಂದ ಕೂಡಿದ್ದರೆ ಶಿಕ್ಷೆ ವಿಧಿಸಬಹುದಾಗಿದೆ ಎಂದು ನ್ಯಾಯಾಲಯ ಹೇಳಿದೆ. ಪ್ರಸಕ್ತ ಪ್ರಕರಣದಲ್ಲಿ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಅಪರಾಧಿ/ಮೇಲ್ಮನವಿದಾರರನ್ನು ಸಂತ್ರಸ್ತ ಅಪ್ರಾಪ್ತ ಬಾಲಕಿಯು ಸ್ಪಷ್ಟವಾಗಿ ಗುರುತಿಸಿದ್ದಾಳೆ ಎಂದು ಪೀಠ ಹೇಳಿದೆ.

ಹೇಳಿಕೆಯು ಸ್ಪಷ್ಟವಾಗಿದೆ ಎಂದು ಹೇಳಿರುವ ನ್ಯಾಯಾಧೀಶರು ಸಂತ್ರಸ್ತೆಯ ಹೇಳಿಕೆಗೆ ಪ್ರಾಮುಖ್ಯತೆ ನೀಡಿ ಇತರೆ ಸಾಕ್ಷಿಯಲ್ಲಿನ ಕೆಲವು ವ್ಯತ್ಯಾಸಗಳನ್ನು ಕೈಬಿಟ್ಟಿದ್ದಾರೆ. “ಬಾಲಕಿಗೆ ಏಳು ವರ್ಷಗಳಾಗಿದ್ದು, ಯಾವುದು ಸರಿ, ಯಾವುದು ಸರಿಯಲ್ಲ ಎಂಬುದುಕೆ ಆಕೆಗೆ ತಿಳಿದಿದೆ. ಅಲ್ಲದೇ, ಯಾರು ಅಪರಾಧ ಎಸಗಿದ್ದಾರೆ ಎಂಬುದು ಆಕೆಗೆ ತಿಳಿದಿದೆ. ಮೇಲ್ಮನವಿದಾರರ ಹೆಸರನ್ನು ಹೇಳಿ, ಆತನನ್ನು ಆಕೆ ಗುರುತಿಸಿದ್ದಾಳೆ. ಇಂಥ ಪರಿಸ್ಥಿತಿಯಲ್ಲಿ ಪ್ರತ್ಯಕ್ಷ ಸಾಕ್ಷಿಯನ್ನು ನಿರೀಕ್ಷಿಸಲಾಗದು. ಅಲ್ಲದೇ, ದೃಢೀಕರಿಸಬಹುದಾದ ಸಾಕ್ಷ್ಯವನ್ನೂ ನಿರೀಕ್ಷಿಸಲಾಗದು” ಎಂದು ನ್ಯಾಯಾಲಯ ಹೇಳಿದೆ.

“ಮಕ್ಕಳ ಅಸಹಾಯಕತೆಯನ್ನು ದುರ್ಬಳಕೆ ಮಾಡಿಕೊಳ್ಳುವ ಅಪರಾಧಿಗಳು ಅವರ ಮುಗ್ಧತೆ, ಅನಕ್ಷರತೆಯ ಇಟ್ಟುಕೊಂಡು ಅವರಿಗೆ ಬೆದರಿಕೆ ಒಡ್ಡಿ ಅವರ ಮೇಲೆ ಅಪರಾಧ ಎಸಗುತ್ತಾರೆ. ಹೀಗಾಗಿ, ಘಟನೆ ನಡೆದ ತಕ್ಷಣ ಮಕ್ಕಳು ಪ್ರಕರಣವನ್ನು ಬಹಿರಂಗಪಡಿಸುವುದಿಲ್ಲ. ಆ ಆಘಾತದಿಂದ ಚೇತರಿಸಿಕೊಂಡ ಬಳಿಕ ಪೋಷಕರ ಬೆಂಬಲದ ನುಡಿಗಳಿಂದ ಪ್ರೇರೇಪಣೆ ಪಡೆದು ತಮ್ಮನ್ನು ಬಲವಾಗಿ ನಂಬುವವರ ಬಳಿ ಘಟನೆಯ ಬಗ್ಗೆ ಹೇಳಿಕೊಳ್ಳುತ್ತಾರೆ. ಹೀಗಾಗಿ, ಎಫ್‌ಐಆರ್‌ ದಾಖಲಿಸುವುದು ತಡವಾಗಿದ್ದು, ಅದನ್ನು ರವಾನಿಸುವುದು ತಡವಾಗಿದೆ. ಸಂತ್ರಸ್ತ ಬಾಲಕಿಯ ಜೊತೆ ಆಟವಾಡುತ್ತಿದ್ದ ಮತ್ತೊಂದು ಮಗುವನ್ನು ತನಿಖೆ ಒಳಪಡಿಸಲಾಗಿಲ್ಲ… ಇದು ಪ್ರಾಸಿಕ್ಯೂಷನ್‌ ಪ್ರಕರಣಕ್ಕೆ ಮಾರಕವಲ್ಲ. ಇದು ಪ್ರತಿಯೊಂದು ಪ್ರಕರಣದಲ್ಲಿ ವಾಸ್ತವ ಸಂಗತಿಗಳನ್ನು ಆಧರಿಸಿರುತ್ತದೆ” ಎಂದು ಪೀಠ ಹೇಳಿದೆ.

ಪ್ರಕರಣದ ಹಿನ್ನೆಲೆ: 2016ರಲ್ಲಿ ಪ್ರಕರಣ ನಡೆದಿದ್ದು, ಆ ಸಂದರ್ಭದಲ್ಲಿ ಬಾಲಕಿಗೆ 7-9 ವರ್ಷ ವಯಸ್ಸಾಗಿತ್ತು. ದೇವಸ್ಥಾನದ ಬಳಿ ಸಹೋದರನ ಜೊತೆ ಆಟವಾಡುತ್ತಿದ್ದ ಬಾಲಕಿಯು ಆಕಸ್ಮಿಕವಾಗಿ ನಾರಿಗೆ ಬೆಂಕಿ ಹಚ್ಚಿಬಿಟ್ಟಿದ್ದರು. ಏನಾಗುತ್ತಿದೆ ಎಂದು ಸಮೀಪದಿಂದ ವೀಕ್ಷಿಸುತ್ತಿದ್ದ ಅಪರಾಧಿಯು ಅಗ್ನಿ ನಂದಿಸಲು ಸಹಾಯ ಮಾಡುವುದಾಗಿ ಹೇಳಿದ್ದ.

ಆನಂತರ, ದೇವರ ವಿಗ್ರಹದ ಹಿಂಬದಿಗೆ ಆಕೆಯನ್ನು ಕೊಂಡೊಯ್ದು ಆಕೆಯ ಮೇಲೆ ಲೈಂಗಿಕ ದುಷ್ಕೃತ್ಯ ಎಸಗಿದ್ದಾನೆ. ಬಾಲಕಿಯನ್ನು ಬೆದರಿಸಿ, ಆಕೆಯ ಉಡುಪು ತೆಗೆದು, ಆಕೆಯ ಮೇಲೆ ಎರಗಿ, ಆಕೆಯನ್ನು ಬಿಗಿದಪ್ಪಿಕೊಂಡಿದ್ದು, ಆಕೆಯೂ ತನ್ನನ್ನು ಅಪ್ಪಿಕೊಳ್ಳುವಂತೆ ಮಾಡಿದ್ದಾನೆ. ಆನಂತರ ಘಟನೆಯನ್ನು ಯಾರಿಗೂ ಹೇಳದಂತೆ ಬೆದರಿಸಿದ್ದಾನೆ ಎಂದು ಪ್ರಾಸಿಕ್ಯೂಷನ್‌ ಪರ ವಕೀಲರು ವಾದಿಸಿದ್ದಾರೆ. ಆಕೆಯನ್ನು ಬಿಡುವ ವೇಳೆಗೆ ಬಟ್ಟೆಯೆಲ್ಲಾ ತೇವವಾಗಿತ್ತು ಎಂದು ಸಂತ್ರಸ್ತ ಬಾಲಕಿ ಹೇಳಿದ್ದಾಳೆ.

Also Read
[ಪೋಕ್ಸೊ ಖುಲಾಸೆಗಳು] ಬಾಂಬೆ ಹೈಕೋರ್ಟ್‌ ನ್ಯಾಯಮೂರ್ತಿ ಕಾಯಂಗೊಳಿಸುವ ಶಿಫಾರಸು ಹಿಂಪಡೆದ ಸುಪ್ರೀಂ ಕೋರ್ಟ್‌ ಕೊಲಿಜಿಯಂ

ಇದನ್ನು ಆಧರಿಸಿ ವಿಶೇಷ ನ್ಯಾಯಾಲಯವು ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ಗಳಾದ 366 (ಕಿಡ್ನ್ಯಾಪ್‌, ಅಪಹರಣ ಇತ್ಯಾದಿ) ಮತ್ತು 506 (ಕ್ರಿಮಿನಲ್‌ ಬೆದರಿಕೆಗೆ ಶಿಕ್ಷೆ) ಮತ್ತು ಪೋಕ್ಸೊ ಕಾಯಿದೆ ಅಡಿ ಮೇಲ್ಮನವಿದಾರನ್ನು ಅಪರಾಧಿ ಎಂದು ಘೋಷಿಸಿತ್ತು.

ವಿಶೇಷ ನ್ಯಾಯಾಲಯದ ತೀರ್ಪನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಲಾಗಿತ್ತು. ಮೇಲ್ಮನವಿಯನ್ನು ಹೈಕೋರ್ಟ್‌ ವಜಾ ಮಾಡಿದ್ದು, ಕೆಲವು ಮಹತ್ವದ ಅಂಶಗಳನ್ನು ಪಟ್ಟಿ ಮಾಡಿದೆ.

“ಮೇಲ್ಮನವಿದಾರ ಅಥವಾ ಸಂತ್ರಸ್ತೆಗೆ ಗಾಯವಾಗಿಲ್ಲ ಎಂದು ಹೇಳುವುದು ಪ್ರಾಸಿಕ್ಯೂಷನ್‌ ಅಥವಾ ಸಂತ್ರಸ್ತೆಯ ಸಾಕ್ಷಿಯನ್ನು ನಂಬದಿರುವುದಕ್ಕೆ ಕಾರಣವಲ್ಲ. ಈ ವಿಚಾರದಲ್ಲಿ ವೈದ್ಯರ ಅಭಿಪ್ರಾಯವು ಅಂತಿಮ ಸಾಕ್ಷ್ಯವಲ್ಲ. ವಿಭಿನ್ನ ನಿಲುವು ಕೈಗೊಳ್ಳಲು ಇದು ಸಹಾಯ ಮಾಡದು” ಎಂದು ಪೀಠ ಹೇಳಿದೆ.

Related Stories

No stories found.
Kannada Bar & Bench
kannada.barandbench.com