ವಿದ್ಯಾರ್ಥಿಗಳು ಕುಡಿಯುವ ನೀರಿಗೆ ವಿಷ: ಶ್ರೀರಾಮ ಸೇನೆಯ ಪದಾಧಿಕಾರಿ ಸೇರಿ ಮೂವರಿಗೆ ಆ.11ರವರೆಗೆ ನ್ಯಾಯಾಂಗ ಬಂಧನ

ಆರೋಪಿಗಳ ವಿರುದ್ಧ ಬಿಎನ್‌ಎಸ್‌ ಸೆಕ್ಷನ್‌ 125(a) (ಜನರ ಜೀವನಕ್ಕೆ ಎರವಾಗುವುದು ಅಥವಾ ವೈಯಕ್ತಿಕ ಸುರಕ್ಷತೆಗೆ ಧಕ್ಕೆ ಮಾಡುವುದು) ಮತ್ತು ಸೆಕ್ಷನ್‌ 110 (ದಂಡನೀಯ ನರಹತ್ಯೆ ಯತ್ನ) ಅಡಿ ಸವದತ್ತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
School Children
School Children
Published on

ಬೆಳಗಾವಿ ಜಿಲ್ಲೆಯ ಸವದತ್ತಿ ತಾಲ್ಲೂಕಿನ ಹೂಲಿಕಟ್ಟಿ ಗ್ರಾಮದ ಜನತಾ ಕಾಲೊನಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಸ್ಲಿಮ್‌ ಸಮುದಾಯದ ಮುಖ್ಯ ಶಿಕ್ಷಕರನ್ನು ವರ್ಗಾವಣೆ ಮಾಡಿಸಲು ವಿದ್ಯಾರ್ಥಿಗಳು ಕುಡಿಯಲು ಬಳಸುವ ನೀರಿನ ಟ್ಯಾಂಕ್‌ಗೆ ವಿಷ ಬೆರಿಸಿದ ಪ್ರಕರಣದಲ್ಲಿ ಶ್ರೀರಾಮ ಸೇನೆಯ ತಾಲ್ಲೂಕು ಘಟಕದ ಅಧ್ಯಕ್ಷ ಸಾಗರ ಪಾಟೀಲ್‌ ಸೇರಿ ಮೂವರನ್ನು ಸವದತ್ತಿಯ ನ್ಯಾಯಾಲಯವು ಆಗಸ್ಟ್‌ 11ರವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಿದೆ.

ಆರೋಪಿಗಳಾಗಿರುವ ಸಾಗರ ಪಾಟೀಲ್‌, ಆತನ ಸಂಬಂಧಿ ನಾಗನಗೌಡ ಮತ್ತು ಕೃಷ್ಣ ಮಾದರ ಅವರನ್ನು ಸವದತ್ತಿಯ ಹಿರಿಯ ಸಿವಿಲ್‌ ನ್ಯಾಯಾಧೀಶರಾದ ಸಿದ್ದರಾಮ ಅವರು ನ್ಯಾಯಾಂಗ ಬಂಧನಕ್ಕೆ ನೀಡಿದ್ದಾರೆ.

ಪ್ರಕರಣದ ಹಿನ್ನೆಲೆ: ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕಳೆದ 13 ವರ್ಷಗಳಿಂದ ಮುಖ್ಯ ಶಿಕ್ಷಕರಾಗಿ ಕೆಲಸ ಮಾಡುತ್ತಿರುವ ಸುಲೇಮಾನ್‌ ಗೋರಿನಾಯಕ್‌ ಅವರನ್ನು ವರ್ಗಾವಣೆ ಮಾಡಿಸುವ ಕುತಂತ್ರವನ್ನು ಶ್ರೀರಾಮ ಸೇನೆಯ ತಾಲ್ಲೂಕು ಘಟಕದ ಅಧ್ಯಕ್ಷ ಸಾಗರ ಪಾಟೀಲ್‌ ಹೂಡಿದ್ದರು ಎನ್ನುವ ಆರೋಪ ಕೇಳಿಬಂದಿದೆ. ಇದಕ್ಕಾಗಿ ಜುಲೈ 14ರಂದು ಬೆಳಿಗ್ಗೆ 7ರಿಂದ 10 ಗಂಟೆಯ ನಡುವೆ ಅದೇ ಶಾಲೆಯ ವಿದ್ಯಾರ್ಥಿಯೊಬ್ಬನಿಗೆ ತಿಂಡಿ-ತಿನಿಸು, ಹಣದ ಆಮಿಷವೊಡ್ಡಿ ಅವನ ನೆರವಿನಿಂದ ಶಾಲೆಯ ಆವರಣದಲ್ಲಿ ನಿರ್ಮಿಸಲಾಗಿರುವ, ವಿದ್ಯಾರ್ಥಿಗಳು ಕುಡಿಯಲು ಮತ್ತು ಅನ್ಯ ಚಟುವಟಿಕೆಗೆ ಬಳಸುವ ಟ್ಯಾಂಕ್‌ಗೆ ನಾಗನಗೌಡ ಮತ್ತು ಕೃಷ್ಣ ಅವರು ಮುನವಳ್ಳಿಯಿಂದ ತಂದಿದ್ದ ವಿಷ ಬೆರಿಸಿದ್ದರು ಎಂದು ಆರೋಪಿಸಲಾಗಿದೆ. ಟ್ಯಾಂಕ್‌ಗೆ ವಿಷ ಹಾಕಿದ್ದ ಬಾಲಕ ಬಾಟಲಿಯನ್ನು ಸಮೀಪದಲ್ಲಿ ಬಿಸಾಡಿದ್ದ ಎಂದು ತಿಳಿದು ಬಂದಿದೆ.

ಟ್ಯಾಂಕ್‌ನ ನೀರು ಕುಡಿಯಲು ಬಾಯಿಗೆ ಹಾಕಿಕೊಂಡಾಗ ವಾಸನೆ ಬಂದಿದ್ದರಿಂದ ಮಕ್ಕಳು ಅದನ್ನು ಉಗುಳಿದ್ದರು. ಘಟನೆಯಲ್ಲಿ ಆರು ವಿದ್ಯಾರ್ಥಿನಿಯರೂ ಸೇರಿ ಒಟ್ಟು ಹನ್ನೊಂದು ವಿದ್ಯಾರ್ಥಿಗಳು ಅಸ್ವಸ್ಥಗೊಂಡಿದ್ದರು. ಘಟನೆಯ ಸಂಬಂಧ ಸುಲೇಮಾನ್‌ ಗೋರಿನಾಯಕ್‌ ಅವರು ನೀಡಿದ ದೂರು ಆಧರಿಸಿ ಬಿಎನ್‌ಎಸ್‌ ಸೆಕ್ಷನ್‌ 125(ಎ) (ಜನರ ಜೀವನಕ್ಕೆ ಎರವಾಗುವುದು ಅಥವಾ ವೈಯಕ್ತಿಕ ಸುರಕ್ಷತೆಗೆ ಧಕ್ಕೆ ಮಾಡುವುದು) ಮತ್ತು ಸೆಕ್ಷನ್‌ 110 (ದಂಡನೀಯ ನರಹತ್ಯೆ ಯತ್ನ) ಅಡಿ ಪ್ರಕರಣ ದಾಖಲಿಸಿದ್ದಾರೆ.

ಕೃಷ್ಣ ಮಾದರ ಅನ್ಯ ಜಾತಿಯ ಯುವತಿಯನ್ನು ಪ್ರೀತಿಸುತ್ತಿದ್ದು, ಇದನ್ನು ಬಹಿರಂಗಪಡಿಸುವುದಾಗಿ ಬೆದರಿಕೆಯೊಡ್ಡಿ ಆತನನ್ನು ಕೃತ್ಯ ಎಸಗಲು ಸಾಗರ ಪಾಟೀಲ್‌ ಬಳಕೆ ಮಾಡಿದ್ದನು ಎಂದು ಸಹ ತಿಳಿದು ಬಂದಿದೆ.

Kannada Bar & Bench
kannada.barandbench.com