ವಕೀಲ ಕುಲದೀಪ್‌ ಮೇಲೆ ಪೊಲೀಸ್‌ ದೌರ್ಜನ್ಯ: ಕ್ರಮಕ್ಕೆ ಆಗ್ರಹಿಸಿ ಎಸ್‌ಪಿಗೆ ಮನವಿ ಸಲ್ಲಿಸಿದ ಮಂಗಳೂರು ವಕೀಲರ ಸಂಘ

ಅರ್ನೀಶ್‌ ಕುಮಾರ್‌ ವರ್ಸಸ್‌ ಬಿಹಾರ ರಾಜ್ಯ ಪ್ರಕರಣದಲ್ಲಿ ಉಲ್ಲೇಖಿಸಿರುವ ತತ್ವಗಳಿಗೆ ವಿರುದ್ಧವಾಗಿ ಕುಲದೀಪ್‌ ಅವರನ್ನು ಬಂಧಿಸಲಾಗಿದೆ ಎಂದು ಮ್ಯಾಜಿಸ್ಟ್ರೇಟ್‌ ನ್ಯಾಯಾಲಯ ಹೇಳಿದೆ ಎಂದು ಪತ್ರದಲ್ಲಿ ವಿವರಿಸಲಾಗಿದೆ.
ವಕೀಲ ಕುಲದೀಪ್‌ ಮೇಲೆ ಪೊಲೀಸ್‌ ದೌರ್ಜನ್ಯ: ಕ್ರಮಕ್ಕೆ ಆಗ್ರಹಿಸಿ ಎಸ್‌ಪಿಗೆ ಮನವಿ ಸಲ್ಲಿಸಿದ ಮಂಗಳೂರು ವಕೀಲರ ಸಂಘ

ಮಂಗಳೂರಿನ ಬೆಳ್ತಂಗಡಿ ತಾಲ್ಲೂಕಿನ ಪುಟ್ಟಿಲಾ ಗ್ರಾಮದ ವಕೀಲ ಕುಲದೀಪ್‌ ಅವರ ಮೇಲಿನ ಪೊಲೀಸ್‌ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ಬಂಟ್ವಾಳದ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯ ನಿರ್ದೇಶಿಸಿದೆ. ಹೀಗಾಗಿ, ತಕ್ಷಣ ಕ್ರಮಕೈಗೊಳ್ಳುವಂತೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗೆ ಮಂಗಳೂರು ವಕೀಲ ಸಂಘವು ಮಂಗಳವಾರ ಮನವಿ ಸಲ್ಲಿಸಿದೆ.

ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಕುಲದೀಪ್‌ ಅವರನ್ನು ಡಿಸೆಂಬರ್‌ 3ರಂದು ಬಂಟ್ವಾಳದ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು. ಅರ್ನೀಶ್‌ ಕುಮಾರ್‌ ವರ್ಸಸ್‌ ಬಿಹಾರ ರಾಜ್ಯ ಪ್ರಕರಣದಲ್ಲಿ ಉಲ್ಲೇಖಿಸಿರುವ ತತ್ವಗಳಿಗೆ ವಿರುದ್ಧವಾಗಿ ಕುಲದೀಪ್‌ ಅವರನ್ನು ಬಂಧಿಸಲಾಗಿದೆ ಎಂದು ಮ್ಯಾಜಿಸ್ಟ್ರೇಟ್‌ ನ್ಯಾಯಾಲಯ ಹೇಳಿದೆ ಎಂದು ಪತ್ರದಲ್ಲಿ ವಿವರಿಸಲಾಗಿದೆ.

ಮುಂದುವರಿದು, ಸುಪ್ರೀಂ ಕೋರ್ಟ್‌ ನಿರ್ದೇಶನಗಳನ್ನು ಉಲ್ಲಂಘಿಸಿರುವ ಅಧಿಕಾರಿಗಳ ವಿರುದ್ಧ ತನಿಖೆ ನಡೆಸುವಂತೆ ಹಿರಿಯ ಅಧಿಕಾರಿಗಳಿಗೆ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯ ಆದೇಶಿಸಿದೆ. ಈ ಹಿನ್ನೆಲೆಯಲ್ಲಿ ಪ್ರಮಾದ ಎಸಗಿರುವ ಪುಂಜಾಲಕಟ್ಟೆ ಪೊಲೀಸ್‌ ಠಾಣೆಯ ಅಧಿಕಾರಿಗಳನ್ನು ಅಮಾನತು ಮಾಡಿ, ಅವರ ವಿರುದ್ಧ ತನಿಖೆ ನಡೆಸಬೇಕು ಎಂದು ಕೋರಲಾಗಿದೆ.

ಪ್ರಕರಣದ ಹಿನ್ನೆಲೆ: 2022ರ ನವೆಂಬರ್‌ನಿಂದ ಕುಲದೀಪ್‌ ಅವರು ಮಂಗಳೂರಿನಲ್ಲಿ ವಕೀಲರಾಗಿ ಪ್ರಾಕ್ಟೀಸ್‌ ಮಾಡುತ್ತಿದ್ದು, ಬಂಟ್ವಾಳ ತಾಲ್ಲೂಕಿನ ದೇವಸ್ಯ ಮೂದೂರು ಗ್ರಾಮದಲ್ಲಿ ನೆರೆಹೊರೆಯಲ್ಲಿರುವ ಕೆ ವಸಂತಗೌಡ ಅವರೊಂದಿಗೆ ಆಸ್ತಿ ವಿವಾದ ಹೊಂದಿದ್ದರು. ಈ ಪ್ರಕರಣವು ಬಂಟ್ವಾಳದ ಜೆಎಂಎಫ್‌ಸಿ ನ್ಯಾಯಾಲಯದ ಸಿವಿಲ್‌ ನ್ಯಾಯಾಧೀಶರ ಮುಂದೆ ಬಾಕಿ ಇದೆ. 2022ರ ಡಿಸೆಂಬರ್‌ 2ರಂದು ಪುಂಜಾಲಕಟ್ಟೆ ಠಾಣೆಯ ಪಿಎಸ್‌ಐ ಸುತೇಶ್‌ ಅವರ ನೇತೃತ್ವದಲ್ಲಿ ನಾಲ್ವರು ಪೊಲೀಸರು ಕುಲದೀಪ್‌ ಮನೆಗೆ ನುಗ್ಗಿ, ಅವರನ್ನು ಹೊರಗೆ ಎಳೆದುತಂದಿದ್ದಲ್ಲದೇ ಪುಂಜಾಲಕಟ್ಟೆ ಠಾಣೆಗೆ ಕರೆದೊಯ್ದಿದ್ದರು. ಸಂಜೆ 4 ಗಂಟೆವರೆಗೆ ಅವರನ್ನು ಪೊಲೀಸರು ತಮ್ಮ ವಶದಲ್ಲಿ ಇಟ್ಟುಕೊಂಡಿದ್ದರು. ಈ ಸಂದರ್ಭದಲ್ಲಿ ಪೊಲೀಸರು ಅವರ ಮೇಲೆ ಹಲ್ಲೆ ನಡೆಸಿದ್ದರು. ಡಿಸೆಂಬರ್‌ 3ರಂದು ಬಂಟ್ವಾಳದ ಮ್ಯಾಜಿಸ್ಟ್ರೇಟ್‌ ಮುಂದೆ ಅವರನ್ನು ಹಾಜರುಪಡಿಸಲಾಗಿತ್ತು.

ನಾಳೆ ಪ್ರತಿಭಟನೆ: ವಕೀಲ ಕುಲದೀಪ್‌ ಅವರ ಮೇಲಿನ ಪೊಲೀಸ್‌ ದೌರ್ಜನ್ಯ ಖಂಡಿಸಿ, ಡಿಸೆಂಬರ್‌ 7ರಂದು ಬೆಳಿಗ್ಗೆ 10 ಗಂಟೆಯಿಂದ 10.50ರ ತನಕ ಮಂಗಳೂರು ನ್ಯಾಯಾಲಯದ ಆವರಣದಲ್ಲಿ ಮಂಗಳೂರು ವಕೀಲರ ಸಂಘದ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿದೆ.

Related Stories

No stories found.
Kannada Bar & Bench
kannada.barandbench.com