ತನಿಖೆ ನೆಪದಲ್ಲಿ ಚಿನ್ನಾಭರಣ ತಯಾರಕರ ಮೇಲೆ ದೌರ್ಜನ್ಯ ಎಸಗುತ್ತಿದ್ದ ಪೊಲೀಸರಿಗೆ ಈ ಹಿಂದೆ ಚಾಟಿ ಬೀಸಿದ್ದ ಕರ್ನಾಟಕ ಹೈಕೋರ್ಟ್ ಅದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ಪೊಲೀಸರನ್ನು ಗುರುವಾರ ತರಾಟೆಗೆ ತೆಗೆದುಕೊಂಡಿದೆ. ಪ್ರಕರಣ ವಿಳಂಬವಾಗುತ್ತಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ನ್ಯಾಯಾಲಯ ವ್ಯಾಪಾರಿಗಳನ್ನು ಶೋಷಿಸಬಾರದು ಅವರ ಕುಂದುಕೊರತೆಗಳನ್ನು ಆಲಿಸುವ ಸಂಬಂಧ ಕುಂದುಕೊರತೆ ಕೇಂದ್ರದ ರೀತಿಯ ವ್ಯವಸ್ಥೆಯೊಂದನ್ನು ರೂಪಿಸಬೇಕು ಎಂದು ಸೂಚಿಸಿದೆ.
ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಂಡ ನ್ಯಾಯಮೂರ್ತಿ ಜಿ ನರೇಂದರ್ ನೇತೃತ್ವದ ಕರ್ನಾಟಕ ಹೈಕೋರ್ಟ್ ಏಕಸದಸ್ಯ ಪೀಠ, ಕಳ್ಳತನದ ಪ್ರಕರಣಗಳ ತನಿಖೆಗೆ ಸಂಬಂಧಿಸಿದಂತೆ ನಿರ್ದಿಷ್ಟ ಇಲಾಖಾ ನಿರ್ದೇಶನಗಳನ್ನು ಹಾಗೂ ವಿಶೇಷ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಹಾಗೂ ಕಾನೂನಾತ್ಮಕವಾಗಿ ಪಾಲಿಸಬೇಕು ಎಂದು ರಾಜ್ಯ ಗೃಹ ಇಲಾಖೆ, ಪೊಲೀಸ್ ಮಹಾನಿರ್ದೇಶಕರು ಹಾಗೂ ಬೆಂಗಳೂರು ನಗರ ಪೊಲೀಸ್ ಕಮಿಷರ್ ಅವರಿಗೆ ನಿರ್ದೇಶನ ನೀಡಿದೆ.
ಅಂಥಹ ಪ್ರಕರಣಗಳು ಕಂಡುಬಂದಲ್ಲಿ ಅಥವಾ ಆ ರೀತಿಯ ಆರೋಪಗಳಿಗೆ ಸಂಬಂಧಪಟ್ಟ ದೂರುಗಳನ್ನು ಯಾರಾದರೂ ಸಲ್ಲಿಸಿದಲ್ಲಿ, ಅವುಗಳನ್ನು ಪ್ರತ್ಯೇಕವಾಗಿ ಪರಿಗಣಿಸಿ, ಸಂಬಂಧಪಟ್ಟ ಆರೋಪಗಳ ಹಾಗೂ ಅಧಿಕಾರಿಗಳ ಗಂಭೀರ ವಿಚಾರಣೆ ಮಾಡಬೇಕು. ಆರು ವಾರಗಳೊಳಗೆ ದೂರುಗಳನ್ನು ಕಾನೂನಾತ್ಮಕವಾಗಿ ಇತ್ಯರ್ಥಗೊಳಿಸಬೇಕು ಎಂದು ಸ್ಪಷ್ಟ ನಿರ್ದೇಶನ ನೀಡಿದ್ದು, ರಾಜ್ಯದ ಎಲ್ಲಾ ಜಿಲ್ಲೆಗಳ ಪೊಲೀಸ್ ಮುಖ್ಯಸ್ಥರಿಗೆ ಕೂಡ ಈ ನಿಟ್ಟಿನಲ್ಲಿ ಸೂಕ್ತ ನಿರ್ದೇಶನ ನೀಡಿದೆ.
ಚಿನ್ನ ಮತ್ತು ಬೆಳ್ಳಿ ಒಡವೆ ತಯಾರಕರು ಹಾಗು ವ್ಯಾಪಾರಸ್ಥರ ಮೇಲೆ ಪೊಲೀಸ್ ಇಲಾಖೆ ದೌರ್ಜನ್ಯ ಪ್ರಕರಣಗಳಿಗೆ ಸಂಬಂಧಿಸಿದಂತೆ ಬೆಂಗಳೂರಿನ ಹಲವಾರು ಚಿನ್ನ ಮತ್ತು ಬೆಳ್ಳಿಯ ಒಡವೆಗಳ ಉತ್ಪಾದಕರ ಹಾಗೂ ವ್ಯಾಪಾರಸ್ಥರ ಸಂಘಗಳು ಕಳೆದ ಫೆಬ್ರುವರಿಯಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದವು. ಅರ್ಜಿದಾರ ಸಂಘಗಳ ಪರವಾಗಿ ವಾದ ಮಂಡಿಸಿದ್ದ ಹಿರಿಯ ನ್ಯಾಯವಾದಿ ಸಂಕೇತ್ ಏಣಗಿ ಕಳ್ಳತನದ ಪ್ರಕರಣಗಳ ತನಿಖೆಯ ನೆಪವೊಡ್ಡಿ, ಪೊಲೀಸರು ಚಿನ್ನ ಮತ್ತು ಬೆಳ್ಳಿಯ ಒಡವೆಗಳ ವ್ಯಾಪಾರಸ್ಥರ ಅಂಗಡಿ ಮತ್ತು ಮಳಿಗೆಗಳ ಮೇಲೆ ಅನವಶ್ಯಕವಾಗಿ ಶೋಧ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದರು.
ಅಲ್ಲದೆ ದೂರಿನಲ್ಲಿ ನಮೂದಾಗಿರುವ ಕಳ್ಳತನದ ಪ್ರಮಾಣಕ್ಕಿಂತಲೂ ಹೆಚ್ಚಿನ ಚಿನ್ನಾಭರಣಗಳನ್ನು ಬಲವಂತವಾಗಿ ವಶಕ್ಕೆ ಪಡೆದು ಯಾವುದೇ ದಾಖಲಾತಿ ನೀಡದೆ ಸ್ಥಳ ಪರಿಶೀಲನಾ ವರದಿಯಲ್ಲಿಯೂ ಕೂಡ ಈ ಬಗ್ಗೆ ಸ್ಪಷ್ಟ ವಿವರಣೆ ನೀಡದೆ ಗೌಪ್ಯವಾಗಿಟ್ಟು, ಹಲವಾರು ಪೊಲೀಸ್ ಠಾಣೆಗಳ ಅಧಿಕಾರಿಗಳು ಸ್ವಂತ ಉಪಯೋಗಕ್ಕೆ ಆಭರಣಗಳನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ಹೈಕೋರ್ಟ್ ಗಮನಕ್ಕೆ ತರಲಾಗಿತ್ತು. ರಾಜ್ಯದ ಹಲವು ಪೊಲೀಸ್ ಠಾಣೆಗಳಲ್ಲಿ ಕೂಡ ಇದೇ ಪ್ರವೃತ್ತಿ ಹೆಚ್ಚುತ್ತಿದೆ ಎಂದು ತಿಳಿಸಲಾಗಿತ್ತು.