[ಪೊಲೀಸ್‌ ಸಿಬ್ಬಂದಿ ನೇಮಕಾತಿ] ರಾಜ್ಯ ಸರ್ಕಾರದ ಭರವಸೆ ಒಪ್ಪಿ, ಅರ್ಜಿ ವಿಲೇವಾರಿ ಮಾಡಿದ ಹೈಕೋರ್ಟ್‌

ಖಾಲಿ ಹುದ್ದೆಗಳ ನೇಮಕಾತಿಯ ಪ್ರತಿಯೊಂದು ಪ್ರಕ್ರಿಯೆ ಮತ್ತು ಅದರ ನಿಗದಿಯ ಅವಧಿಯ ವಿವರಗಳ ಬಗ್ಗೆ ಪೀಠಕ್ಕೆ ಮಾಹಿತಿ ನೀಡಿ, ನಿಗದಿತ ಕಾಲಮಿತಿಯೊಳಗೆ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲಾಗುವುದು ಎಂದು ತಿಳಿಸಿದ ಸರ್ಕಾರ.
Police and Karnataka HC
Police and Karnataka HC

ಖಾಲಿ ಇರುವ 1,142 ಪೊಲೀಸ್ ಸಬ್‌ ಇನ್ಸ್‌ಪೆಕ್ಟರ್ ಹಾಗೂ ನಾಲ್ಕು ಸಾವಿರ ಪೊಲೀಸ್ ಪೇದೆ ಹುದ್ದೆಗಳನ್ನು ನಿಗದಿತ ಕಾಲಮಿತಿಯೊಳಗೆ ಭರ್ತಿ ಮಾಡಲಾಗುವುದು ಎಂದು ಕರ್ನಾಟಕ ಹೈಕೋರ್ಟ್‌ಗೆ ರಾಜ್ಯ ಸರ್ಕಾರ ಮಂಗಳವಾರ ಭರವಸೆ ನೀಡಿತು. ಇದನ್ನು ದಾಖಲಿಸಿಕೊಂಡ ನ್ಯಾಯಾಲಯವು ಮನವಿಯನ್ನು ವಿಲೇವಾರಿ ಮಾಡಿತು.

ನ್ಯಾಯಾಲಯವು ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿದ್ದ ಸಾರ್ವಜನಿಕ ಹಿತಾಸಕ್ತಿ ಮನವಿಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಮತ್ತು ನ್ಯಾಯಮೂರ್ತಿ ಸಚಿನ್‌ ಶಂಕರ್‌ ಮಗದುಮ್‌ ನೇತೃತ್ವದ ವಿಭಾಗೀಯ ಪೀಠವು ವಿಚಾರಣೆ ನಡೆಸಿತು.

ಸರ್ಕಾರದ ಪರ ವಕೀಲರು ಅಫಿಡವಿಟ್‌ ಸಲ್ಲಿಸಿ “ಖಾಲಿ ಹುದ್ದೆಗಳ ನೇಮಕಾತಿಯ ಪ್ರತಿಯೊಂದು ಪ್ರಕ್ರಿಯೆ ಮತ್ತು ಅದರ ನಿಗದಿಯ ಅವಧಿಯ ವಿವರಗಳ ಬಗ್ಗೆ ಪೀಠಕ್ಕೆ ಮಾಹಿತಿ ನೀಡಿ, ನಿಗದಿತ ಕಾಲಮಿತಿಯೊಳಗೆ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲಾಗುವುದು” ಎಂದು ಭರವಸೆ ನೀಡಿದರು.

ಇದನ್ನು ದಾಖಲಿಸಿಕೊಂಡ ಪೀಠವು “ನಿಗದಿತ ಕಾಲಮಿತಿಯೊಳಗೆ ಖಾಲಿ ಹುದ್ದೆಗಳ ಭರ್ತಿ ಆಗಬೇಕು. ಈ ವಿಚಾರದಲ್ಲಿ ಸರ್ಕಾರದ ವತಿಯಿಂದ ಯಾವುದೇ ನಿರ್ಲಕ್ಷ್ಯ ಆಗದಂತೆ ನೋಡಿಕೊಳ್ಳಬೇಕು” ಎಂದು ನಿರ್ದೇಶಿಸಿ ಮನವಿಯನ್ನು ವಿಲೇವಾರಿ ಮಾಡಿತು.

Also Read
[ಪೊಲೀಸ್‌ ಸಿಬ್ಬಂದಿ ನೇಮಕಾತಿ] ಎರಡು ವರ್ಷಗಳಾದರೂ ನ್ಯಾಯಾಲಯದ ಆದೇಶ ಏಕೆ ಪಾಲಿಸಿಲ್ಲ? ಸರ್ಕಾರಕ್ಕೆ ಹೈಕೋರ್ಟ್‌ ತರಾಟೆ

ಕಳೆದ ವಿಚಾರಣೆ ವೇಳೆ ಖಾಲಿ ಹುದ್ದೆಗಳ ನೇಮಕಾತಿಗೆ ನಿರ್ದಿಷ್ಟ ಕಾಲಮಿತಿ ತಿಳಿಸುವಂತೆ ಆದೇಶಿಸಿದ್ದ ಪೀಠವು “ಸೆಪ್ಟೆಂಬರ್‌ 22ರ ಆದೇಶಕ್ಕೆ ಸಂಬಂಧಿಸಿದಂತೆ ಸರ್ಕಾರದ ಅನುಪಾಲನಾ ವರದಿ ಸ್ವೀಕರಿಸಲಾಗಿದ್ದು, ಬಹುತೇಕ ಆದೇಶವನ್ನು ಪಾಲಿಸಲಾಗಿದೆ. ಖಾಲಿ ಇರುವ 1,142 ಪಿಎಸ್‌ಐ ಮತ್ತು ನಾಲ್ಕು ಸಾವಿರಕ್ಕೂ ಅಧಿಕ ಪೇದೆ ಹುದ್ದೆಗಳನ್ನು ಮುಂದಿನ ವರ್ಷದ ಜುಲೈ ಒಳಗೆ ತುಂಬಲಾಗಿದೆ ಎಂದು ತಿಳಿಸಿದ್ದಾರೆ. ನೇಮಕಾತಿ ಪ್ರಕ್ರಿಯೆ ಆರಂಭವಾಗಿರುವಾಗ ಖಾಲಿ ಹುದ್ದೆಗಳನ್ನು ತುಂಬಲು ಅಷ್ಟು ಕಾಲಾವಕಾಶ ಏತಕ್ಕೆ? ಖಾಲಿ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಎಷ್ಟು ಕಾಲಮಿತಿಯೊಳಗೆ ನೇಮಕ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ ಎಂಬುದಕ್ಕೆ ಸಂಬಂಧಿಸಿದಂತೆ ಸಲಹೆ ಪಡೆಯುವಂತೆ ಸರ್ಕಾರಕ್ಕೆ ನಿರ್ದೇಶಿಸುತ್ತೇವೆ” ಎಂದು ಹೇಳಿತ್ತು.

Related Stories

No stories found.
Kannada Bar & Bench
kannada.barandbench.com