ಪೊಲೀಸ್ ನೇಮಕಾತಿ: ತೃತೀಯ ಲಿಂಗಿಗಳಿಗೆ ಪುರುಷರ ದೈಹಿಕ ಅರ್ಹತಾ ಮಾನದಂಡ ಹೇರಿಕೆ ಪ್ರಶ್ನಿಸಿ ಹೈಕೋರ್ಟ್‌ಗೆ

ಕರ್ನಾಟಕ ರಾಜ್ಯ ಮೀಸಲು ಪೊಲೀಸ್ (ಕೆಎಸ್‌ಆರ್‌ಪಿ) ಸೇರಿದಂತೆ ಕೆಲವು ಪೊಲೀಸ್ ಪಡೆಗಳ ನೇಮಕಾತಿಯಿಂದ ತೃತೀಯ ಲಿಂಗಿಗಳನ್ನು ಹೊರಗಿಟ್ಟಿರುವುದನ್ನು ಪ್ರಶ್ನಿಸಿ ಇದೇ ಅರ್ಜಿದಾರರಿಂದ ಮತ್ತೊಂದು ಅರ್ಜಿ ಸಲ್ಲಿಕೆ.
Karnataka HC and LGBT
Karnataka HC and LGBT
Published on: 

ಕರ್ನಾಟಕದ ಪೊಲೀಸ್ ನೇಮಕಾತಿಯಲ್ಲಿ ತೃತೀಯ ಲಿಂಗಿಗಳ ಅಭ್ಯರ್ಥಿಗಳಿಗೆ ಸೂಕ್ತ ದೈಹಿಕ ಮಾನದಂಡ ಹಾಗೂ ದೈಹಿಕ ಸಾಮರ್ಥ್ಯ ಪರೀಕ್ಷೆಯಲ್ಲಿ ಅಗತ್ಯ ವಿನಾಯಿತಿ ಕಲ್ಪಿಸದಿರುವುದು ಮತ್ತು ಕೆಲವು ಪೊಲೀಸ್ ಪಡೆಗಳ ನೇಮಕಾತಿಯಿಂದ ಅವರನ್ನು ಹೊರಗಿಟ್ಟಿರುವುದನ್ನು ಪ್ರಶ್ನಿಸಿ ಏಳು ಮಂದಿ ತೃತೀಯ ಲಿಂಗಿ ಅಭ್ಯರ್ಥಿಗಳು ಕರ್ನಾಟಕ ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ.

ರಾಜ್ಯದ ವಿವಿಧ ಜಿಲ್ಲೆಗಳ ವಿಕಾಶ್ ಜೆ, ಜಗದೀಶ್ ಉದಯ್ ಬೋಡ್ಕಿ, ಗಿರೀಶ್ ಸಿಎಂ, ದಿಲೀಪ್ ಕೆ, ಶಿವರಾಜ್ ಎಂ ನಾಯ್ಕೋಡಿ, ಶಶಿಕುಮಾರ್ ಮತ್ತು ದೇವಿಂದ್ರಪ್ಪ ಅವರು ಕರ್ನಾಟಕ ಸರ್ಕಾರ ಹಾಗೂ ಪೊಲೀಸ್ ನೇಮಕಾತಿ ಪ್ರಾಧಿಕಾರಗಳನ್ನು ಪ್ರತಿವಾದಿಗಳಾಗಿಸಿದ್ದಾರೆ.

ಕರ್ನಾಟಕ ನಾಗರಿಕ ಸೇವೆಗಳ (ಸಾಮಾನ್ಯ ನೇಮಕಾತಿ) ನಿಯಮಗಳು, 1977ರ ನಿಯಮ 9(1D)ರ ಅಡಿಯಲ್ಲಿ ತೃತೀಯ ಲಿಂಗಿಗಳಿಗೆ ಕಲ್ಪಿಸಿರುವ ಶೇ.1ರಷ್ಟು ಸಮತಲ ಮೀಸಲಾತಿಯ ಅನುಷ್ಠಾನ ಮತ್ತು ಪೊಲೀಸ್ ನೇಮಕಾತಿಯಲ್ಲಿ ಅನ್ವಯಿಸಲಾಗುತ್ತಿರುವ ದೈಹಿಕ ಅರ್ಹತಾ ಮಾನದಂಡಗಳನ್ನು ಅರ್ಜಿದಾರರು ಎರಡು ಪ್ರತ್ಯೇಕ ಅರ್ಜಿಗಳಲ್ಲಿ ಪ್ರಶ್ನಿಸಿದ್ದಾರೆ.

2022ರ ಸೆಪ್ಟೆಂಬರ್ 12ರಂದು ಹೊರಡಿಸಲಾದ ಸಶಸ್ತ್ರ ಪೊಲೀಸ್ ಕಾನ್‌ಸ್ಟೆಬಲ್‌ಗಳ ನೇಮಕಾತಿ ಅಧಿಸೂಚನೆಯನ್ನು ಪ್ರಶ್ನಿಸಿರುವ ಮೊದಲ ಅರ್ಜಿಯಲ್ಲಿ, ತೃತೀಯ ಲಿಂಗಿಗಳ ಅಭ್ಯರ್ಥಿಗಳನ್ನು ಪ್ರತ್ಯೇಕವಾಗಿ ‘ಪುರುಷ ತೃತೀಯ ಲಿಂಗಿಗಳು’ ಎಂಬ ವರ್ಗದಡಿ ಪರಿಗಣಿಸಿ, ಸಿಸ್‌ಜೆಂಡರ್ (ಜನನ ಲಿಂಗತ್ವ -ಜನನದ ಸಮಯದ ಲಿಂಗಕ್ಕೆ ಅನುಗುಣವಾದ ಲಿಂಗ ಗುರುತು ಹೊಂದಿರುವ ವ್ಯಕ್ತಿಗಳು) ಪುರುಷ ಅಭ್ಯರ್ಥಿಗಳಿಗೆ ನಿಗದಿಪಡಿಸಿದ ದೈಹಿಕ ಮಾನದಂಡಗಳನ್ನೇ ಅನ್ವಯಿಸಿರುವುದನ್ನು ಪ್ರಶ್ನಿಸಲಾಗಿದೆ.

ಅರ್ಜಿದಾರರು ‘ಪುರುಷ ತೃತೀಯ ಲಿಂಗಿಗಳು’ ಎಂಬ ವರ್ಗದಡಿ ಅರ್ಜಿ ಸಲ್ಲಿಸಿ ಲಿಖಿತ ಪರೀಕ್ಷೆಯಲ್ಲಿ ಪಾಲ್ಗೊಂಡಿದ್ದರು. ಅವರು ಲಿಖಿತ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರೂ, ನಂತರದ ದೈಹಿಕ ಮಾನದಂಡ ಮತ್ತು ದೈಹಿಕ ಸಹಿಷ್ಣುತೆ ಪರೀಕ್ಷೆಗಳಲ್ಲಿ ಅನರ್ಹಗೊಳಿಸಲಾಯಿತು ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

ತೃತೀಯ ಲಿಂಗಿಗಳಿಗೆ ಪ್ರತ್ಯೇಕ ‘ಪುರುಷ ತೃತೀಯ ಲಿಂಗಿಗಳು’ ಎಂಬ ವರ್ಗವನ್ನು ಸೃಷ್ಟಿಸುವ ಬದಲು, ನೇಮಕಾತಿ ಅರ್ಜಿಗಳಲ್ಲಿ ‘ಇತರೆ’ ಎಂಬ ವರ್ಗವನ್ನು ಒದಗಿಸಿ, ಅದರ ಮೂಲಕ ಸಮತಲ ಮೀಸಲಾತಿಯ ಪ್ರಯೋಜನ ಪಡೆಯಲು ಅವಕಾಶ ಕಲ್ಪಿಸಬೇಕು ಎಂದು ಅರ್ಜಿದಾರರು ವಾದಿಸಿದ್ದಾರೆ.

2021ರಲ್ಲಿ ತಿದ್ದುಪಡಿ ಮಾಡಲಾದ ಕರ್ನಾಟಕ ನಾಗರಿಕ ಸೇವೆಗಳ (ಸಾಮಾನ್ಯ ನೇಮಕಾತಿ) ನಿಯಮಗಳು, 1977ರ ನಿಯಮ 9(1D) ಅನ್ನು ಅರ್ಜಿದಾರರು ಉಲ್ಲೇಖಿಸಿದ್ದಾರೆ. ಈ ನಿಯಮದಡಿ ಸಾಮಾನ್ಯ ಮೆರಿಟ್, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಇತರೆ ಹಿಂದುಳಿದ ವರ್ಗಗಳ ವಿಭಾಗಗಳಲ್ಲಿ ತೃತೀಯ ಲಿಂಗಿಗಳಿಗೆ ಶೇ.1ರಷ್ಟು ಸಮತಲ ಮೀಸಲಾತಿ ಕಲ್ಪಿಸಲಾಗಿದೆ. ಅಲ್ಲದೆ, ನೇಮಕಾತಿ ಅರ್ಜಿಗಳಲ್ಲಿ ‘ಇತರೆ’ ಎಂಬ ಪ್ರತ್ಯೇಕ ವರ್ಗವನ್ನೂ ಒದಗಿಸಲಾಗಿದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.

ಈ ಸಂಬಂಧ ಅರ್ಜಿದಾರರು ಸಲ್ಲಿಸಿದ್ದ ಅರ್ಜಿಗಳನ್ನು ಕರ್ನಾಟಕ ರಾಜ್ಯ ಆಡಳಿತಾತ್ಮಕ ನ್ಯಾಯಮಂಡಳಿಯು 2026ರ ಜೂನ್ 2ರಂದು ವಜಾಗೊಳಿಸಿತ್ತು. ತೃತೀಯ ಲಿಂಗಿಗಳ ಸಮುದಾಯಕ್ಕೆ ಸೇರಿದವರು ಎಂಬ ಕಾರಣಕ್ಕೆ ನೇಮಕಾತಿಗೆ ನಿಗದಿಪಡಿಸಿದ ದೈಹಿಕ ಮಾನದಂಡಗಳಲ್ಲಿ ವಿನಾಯಿತಿ ನೀಡಲಾಗದು ಎಂದು ನ್ಯಾಯಮಂಡಳಿ ಹೇಳಿತ್ತು.

ನ್ಯಾಯಮಂಡಳಿಯ ಆದೇಶವನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಿರುವ ಅರ್ಜಿದಾರರು, ತೃತೀಯ ಲಿಂಗಿಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಿದ ಮಾತ್ರಕ್ಕೆ ಮೀಸಲಾತಿಯ ಉದ್ದೇಶ ಈಡೇರಿದಂತಾಗುವುದಿಲ್ಲ ಎಂದು ವಾದಿಸಿದ್ದಾರೆ. ಸಿಸ್‌ಜೆಂಡರ್ ಪುರುಷ ಅಭ್ಯರ್ಥಿಗಳಿಗೆ ರೂಪಿಸಲಾದ ದೈಹಿಕ ಮಾನದಂಡಗಳನ್ನೇ ಯಾವುದೇ ಸೂಕ್ತ ಪರಿಶೀಲನೆ ಅಥವಾ ಅಗತ್ಯ ಸಡಿಲಿಕೆ ಇಲ್ಲದೆ ಅನ್ವಯಿಸುವುದರಿಂದ ಮೀಸಲಾತಿಯ ಪ್ರಯೋಜನ ಅರ್ಥಹೀನವಾಗುತ್ತದೆ ಎಂಬುದು ಅವರ ವಾದವಾಗಿದೆ.

ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಗಳು 1,600 ಮೀಟರ್ ಓಟವನ್ನು ಆರು ನಿಮಿಷ 30 ಸೆಕೆಂಡ್‌ಗಳಲ್ಲಿ ಪೂರ್ಣಗೊಳಿಸಬೇಕು. ಇದರ ಜೊತೆಗೆ ಉದ್ದ ಜಿಗಿತ ಅಥವಾ ಎತ್ತರ ಜಿಗಿತ ಹಾಗೂ ಶಾಟ್‌ಪುಟ್‌ ಸ್ಪರ್ಧೆಗಳಲ್ಲಿಯೂ ಅರ್ಹತೆ ಪಡೆಯಬೇಕು ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.

ಸೂಕ್ತ ದೈಹಿಕ ಮಾನದಂಡಗಳು ಹಾಗೂ ಅಗತ್ಯ ಸೌಲಭ್ಯಗಳ ಕೊರತೆಯಿಂದಾಗಿ ಲಿಖಿತ ಪರೀಕ್ಷೆಯಲ್ಲಿ ಉತ್ತೀರ್ಣರಾದರೂ ತಾವು ಅನರ್ಹರಾಗುವಂತಾಯಿತು ಎಂದು ಅರ್ಜಿದಾರರು ಹೇಳಿದ್ದಾರೆ. ತೃತೀಯ ಲಿಂಗಿಗಳ ಅಭ್ಯರ್ಥಿಗಳಿಗೆ ಸೂಕ್ತ ದೈಹಿಕ ಅರ್ಹತಾ ಮಾನದಂಡಗಳನ್ನು ರೂಪಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದ್ದಾರೆ.

ಇದೇ ಅರ್ಜಿದಾರರು ಸಲ್ಲಿಸಿರುವ ಮತ್ತೊಂದು ಅರ್ಜಿಯಲ್ಲಿ, ತೃತೀಯ ಲಿಂಗಿಗಳನ್ನು ಕೆಲವು ಪೊಲೀಸ್ ಪಡೆಗಳ ನೇಮಕಾತಿಯಿಂದ ಹೊರಗಿಟ್ಟಿರುವ ರಾಜ್ಯ ಸರ್ಕಾರದ ನಿರ್ದೇಶನವನ್ನು ಪ್ರಶ್ನಿಸಲಾಗಿದೆ.

2025ರ ಅಕ್ಟೋಬರ್ 10ರಂದು ಹೊರಡಿಸಲಾದ ಸರ್ಕಾರದ ನಿರ್ದೇಶನದ ಮೂಲಕ ಕರ್ನಾಟಕ ರಾಜ್ಯ ಮೀಸಲು ಪೊಲೀಸ್ (ಕೆಎಸ್‌ಆರ್‌ಪಿ), ಭಾರತೀಯ ಮೀಸಲು ಬೆಟಾಲಿಯನ್ (ಐಆರ್‌ಬಿ), ಕರ್ನಾಟಕ ಸಶಸ್ತ್ರ ಮೀಸಲು ಪೊಲೀಸ್ (ಕೆಎಆರ್‌ಪಿ) ಮತ್ತು ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಪಡೆ (ಕೆಎಸ್‌ಐಎಸ್‌ಎಫ್‌) ನೇಮಕಾತಿಯಿಂದ ತೃತೀಯ ಲಿಂಗಿಗಳನ್ನು ಹೊರಗಿಡಲಾಗಿದೆ ಎಂದು ಅರ್ಜಿಯಲ್ಲಿ ಆಕ್ಷೇಪಿಸಲಾಗಿದೆ.

ಇದರ ಜೊತೆಗೆ, 2026ರ ಜೂನ್ 19ರಂದು ಹಾಗೂ ಅದೇ ವರ್ಷದ ಜುಲೈನಲ್ಲಿ ಹೊರಡಿಸಲಾದ ನೇಮಕಾತಿ ಅಧಿಸೂಚನೆಗಳನ್ನೂ ಪ್ರಶ್ನಿಸಲಾಗಿದೆ. ಈ ಅಧಿಸೂಚನೆಗಳಲ್ಲಿ ಸಂಬಂಧಿತ ವರ್ಗಗಳಡಿ ತೃತೀಯ ಲಿಂಗಿಗಳ ಅಭ್ಯರ್ಥಿಗಳ ನೇಮಕಾತಿಗೆ ಅವಕಾಶ ಕಲ್ಪಿಸಿಲ್ಲ ಎಂಬುದು ಅರ್ಜಿದಾರರ ಆರೋಪವಾಗಿದೆ.

1977ರ ನಿಯಮಗಳ ಅಡಿಯಲ್ಲಿ ತೃತೀಯ ಲಿಂಗಿಗಳಿಗೆ ಮೀಸಲಾತಿ ಕಲ್ಪಿಸಿರುವಾಗ, ಮತ್ತೊಂದೆಡೆ ಅವರನ್ನು ಸಂಪೂರ್ಣ ಪೊಲೀಸ್ ಪಡೆಗಳ ನೇಮಕಾತಿಯಿಂದ ಹೊರಗಿಡುವ ಮೂಲಕ ಸರ್ಕಾರವು ಮೀಸಲಾತಿಯ ಉದ್ದೇಶವನ್ನೇ ವಿಫಲಗೊಳಿಸುತ್ತಿದೆ ಎಂದು ಅರ್ಜಿದಾರರು ಆಕ್ಷೇಪಿಸಿದ್ದಾರೆ.

ನೇಮಕಾತಿಯಲ್ಲಿ ಮೀಸಲಾತಿ ಕಲ್ಪಿಸುವುದಾಗಿ ಹೇಳುತ್ತಲೇ, ತೃತೀಯ ಲಿಂಗಿಗಳ ಅಭ್ಯರ್ಥಿಗಳು ಆಯ್ಕೆ ಪ್ರಕ್ರಿಯೆಯಲ್ಲಿ ಪರಿಣಾಮಕಾರಿಯಾಗಿ ಭಾಗವಹಿಸಲು ಸಾಧ್ಯವಾಗದಂತಹ ಷರತ್ತುಗಳನ್ನು ವಿಧಿಸುವುದು ಸಮಂಜಸವಲ್ಲ ಎಂಬುದು ಅರ್ಜಿದಾರರ ವಾದವಾಗಿದೆ.

ತೃತೀಯ ಲಿಂಗಿಗಳಿಗೆ ಸಾರ್ವಜನಿಕ ಉದ್ಯೋಗದಲ್ಲಿ ಕಲ್ಪಿಸಿರುವ ಮೀಸಲಾತಿಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವುದು ಮತ್ತು ಸಮವಸ್ತ್ರಧಾರಿ ಪಡೆಗಳ ನೇಮಕಾತಿಯಲ್ಲಿ ದೈಹಿಕ ಅರ್ಹತಾ ಮಾನದಂಡಗಳನ್ನು ಹೇಗೆ ಅನ್ವಯಿಸಬೇಕು ಎಂಬ ಮಹತ್ವದ ಪ್ರಶ್ನೆಗಳನ್ನು ಈ ಎರಡೂ ಅರ್ಜಿಗಳು ಎತ್ತಿವೆ.

Kannada Bar & Bench
kannada.barandbench.com