ಲೈಂಗಿಕ ಕಾರ್ಯಕರ್ತರನ್ನು ಪೊಲೀಸರು ದೈಹಿಕವಾಗಿ ಅಥವಾ ಮೌಖಿಕವಾಗಿ ಹೀಗಳೆಯದೆ ಗೌರವದಿಂದ ಕಾಣಬೇಕು: ಸುಪ್ರೀಂ ಕೋರ್ಟ್‌

ವೇಶ್ಯಾವಾಟಿಕೆ ಅಡ್ಡೆಗಳ ಮೇಲಿನ ದಾಳಿ ಅಥವಾ ವಿಮೋಚನೆ ಕಾರ್ಯಾಚರಣೆಯ ವೇಳೆ ಲೈಂಗಿಕ ಕಾರ್ಯಕರ್ತರ ಗುರುತು ಬಹಿರಂಗಪಡಿಸದಂತೆ ಮಾಧ್ಯಮಗಳಿಗೆ ಎಚ್ಚರವಹಿಸಲು ಪ್ರೆಸ್‌ ಕೌನ್ಸಿಲ್‌ ಆಫ್‌ ಇಂಡಿಯಾಕ್ಕೆ ನಿರ್ದೇಶಿಸಿದ ನ್ಯಾಯಾಲಯ.
Supreme Court
Supreme Court

ಸಂವಿಧಾನದಲ್ಲಿ ಖಾತರಿಪಡಿಸಿರುವ ಎಲ್ಲಾ ಮೂಲಭೂತ ಮಾನವ ಹಕ್ಕುಗಳು, ಮತ್ತಿತರೆ ಹಕ್ಕುಗಳು ಲೈಂಗಿಕ ಕಾರ್ಯಕರ್ತರಿಗೂ ಅನ್ವಯಿಸುತ್ತವೆ. ಲೈಂಗಿಕ ಕಾರ್ಯಕರ್ತರನ್ನು ಪೊಲೀಸರು ದೈಹಿಕವಾಗಿ ಅಥವಾ ಮೌಖಿಕವಾಗಿ ಹೀಗಳೆಯುವಂತಿಲ್ಲ ಎಂದು ಸುಪ್ರೀಂ ಕೋರ್ಟ್‌ ಕಳೆದ ವಾರ ಪುನರುಚ್ಚರಿಸಿದೆ (ಬುದ್ದದೇವ್‌ ಕರ್ಮಾಸ್ಕರ್‌ ವರ್ಸಸ್‌ ಪಶ್ಚಿಮ ಬಂಗಾಳ ರಾಜ್ಯ ಮತ್ತು ಇತರರು).

ಲೈಂಗಿಕ ಕಾರ್ಯಕರ್ತರ ಪುನರ್ವಸತಿ ಮತ್ತು ಹಕ್ಕುಗಳಿಗೆ ಸಂಬಂಧಿಸಿದಂತೆ ಸಲ್ಲಿಸಿದ್ದ ಮನವಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎಲ್‌ ನಾಗೇಶ್ವರ ರಾವ್‌, ಬಿ ಆರ್‌ ಗವಾಯಿ ಮತ್ತು ಎ ಎಸ್‌ ಬೋಪಣ್ಣ ಅವರಿದ್ದ ತ್ರಿಸದಸ್ಯ ಪೀಠವು ಈ ಆದೇಶ ಮಾಡಿದೆ. ಲೈಂಗಿಕ ಕಾರ್ಯಕರ್ತರ ಪರಿಸ್ಥಿತಿ ಮತ್ತು ಅವರು ಘನತೆಯಿಂದ ಬದುಕುವುದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ 2011ರಲ್ಲಿ ರಚಿಸಿದ ಸಮಿತಿಯ ಶಿಫಾರಸ್ಸುಗಳನ್ನು ಆಧರಿಸಿ ಸರ್ವೋಚ್ಚ ನ್ಯಾಯಾಲಯವು ಆದೇಶ ಮಾಡಿದೆ.

“ಲೈಂಗಿಕ ಕಾರ್ಯಕರ್ತರಿಗೂ ದೇಶದ ಇತರೆ ಪ್ರಜೆಗಳಿಗೆ ಸಂವಿಧಾನದಲ್ಲಿ ಕಲ್ಪಿಸಿರುವ ಹಕ್ಕುಗಳು ಅನ್ವಯಿಸಲಿದ್ದು, ಪೊಲೀಸರು ಸೇರಿದಂತೆ ಎಲ್ಲಾ ಸಂಸ್ಥೆಗಳಿಗೆ ಲೈಂಗಿಕ ಕಾರ್ಯಕರ್ತರ ಹಕ್ಕುಗಳ ಕುರಿತು ಅರಿವು ಮೂಡಿಸಬೇಕಿದೆ. ಪೊಲೀಸರು ಎಲ್ಲಾ ಲೈಂಗಿಕ ಕಾರ್ಯಕರ್ತರನ್ನು ಘನತೆಯಿಂದ ಕಾಣಬೇಕೆ ವಿನಾ ಅವರನ್ನು ಹಿಂಸೆಗೆ ಒಳಪಡಿಸಿ ಅಥವಾ ಯಾವುದೇ ಲೈಂಗಿಕ ಚಟುವಟಿಕೆಗೆ ಒತ್ತಾಯಿಸಿ, ದೈಹಿಕವಾಗಿ ಅಥವಾ ಮೌಖಿಕವಾಗಿ ನಿಂದಿಸುವಂತಿಲ್ಲ” ಎಂದು ಆದೇಶದಲ್ಲಿ ಹೇಳಿದೆ.

ಸಿಆರ್‌ಪಿಸಿ ಸೆಕ್ಷನ್‌ 357ಸಿ ಅನ್ವಯ ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಯಾವುದೇ ಲೈಂಗಿಕ ಕಾರ್ಯಕರ್ತೆಗೆ ತಕ್ಷಣದ ವೈದ್ಯಕೀಯ ನೆರವು ಸೇರಿದಂತೆ ಲೈಂಗಿಕ ದೌರ್ಜನ್ಯದ ಸಂತ್ರಸ್ತರಿಗೆ ನೀಡುವ ಲಭ್ಯವಿರುವ ಎಲ್ಲಾ ಸೌಲಭ್ಯಗಳನ್ನು ಒದಗಿಸಬೇಕು ಎಂದು ನ್ಯಾಯಾಲಯ ಹೇಳಿದೆ.

ವೇಶ್ಯಾವಾಟಿಕೆ ಅಡ್ಡೆಗಳ ಮೇಲಿನ ಕಾರ್ಯಾಚರಣೆ/ರಕ್ಷಣೆ/ಬಂಧನ/ದಾಳಿಯ ಸಂದರ್ಭದಲ್ಲಿ ಲೈಂಗಿಕ ಕಾರ್ಯಕರ್ತರ ಗುರುತು ಬಹಿರಂಗಪಡಿಸದಂತೆ ಮಾಧ್ಯಮಗಳಿಗೆ ಎಚ್ಚರಿಸುವಂತೆ ಪ್ರೆಸ್‌ ಕೌನ್ಸಿಲ್‌ ಆಫ್‌ ಇಂಡಿಯಾಕ್ಕೆ ನ್ಯಾಯಾಲಯ ಇದೇ ವೇಳೆ ನಿರ್ದೇಶಿತು. ವಿಶೇಷವಾಗಿ ಟಿವಿಗಳಲ್ಲಿ ಲೈಂಗಿಕ ಕಾರ್ಯಕರ್ತರ ಫೋಟೊಗಳನ್ನು ಬಿತ್ತರಿಸಿದಂತೆ ಸೂಚಿಸಿದೆ.

Related Stories

No stories found.
Kannada Bar & Bench
kannada.barandbench.com