ಕೆರೆಗಳ ಪುನರುಜ್ಜೀವನ ನೀತಿಯು ಒತ್ತುವರಿಗೆ ಅನುಮತಿಯಾಗದು: ಹೈಕೋರ್ಟ್‌ ಕಳಕಳಿ

ಬಿಬಿಎಂಪಿ ಅಥವಾ ತಾಂತ್ರಿಕವಾಗಿ ಪರಿಣಿತಿ ಹೊಂದಿರುವ ನೋಂದಾಯಿತ ಟ್ರಸ್ಟ್‌ ಕೆರೆ ಪುನರುಜ್ಜೀವನ ಮಾಡಬೇಕು. ಸಾರ್ವಜನಿಕ ನಂಬಿಕೆ ತತ್ವದಡಿ ನೈಸರ್ಗಿಕ ಸಂಪತ್ತು ಸಂರಕ್ಷಿಸುವ ಉದ್ದೇಶದಿಂದ ವಾಣಿಜ್ಯೀಕರಣ ತಪ್ಪಿಸಬೇಕು ಎಂದು ವಾದಿಸಿದ ಅರ್ಜಿದಾರರು.
BBMP and Karnataka HC
BBMP and Karnataka HC
Published on

ಬೆಂಗಳೂರಿನ 183 ಕೆರೆಗಳ ಪುನರುಜ್ಜೀವನಕ್ಕೆ ಸಂಬಂಧಿಸಿದ ನೀತಿಯು ಒತ್ತುವರಿಗೆ ಅನುಮತಿಯಾಗಲು ಅವಕಾಶ ಕಲ್ಪಿಸಲಾಗದು ಎಂದು ಸೂಚ್ಯವಾಗಿ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಗೆ ಮಂಗಳವಾರ ಹೇಳಿರುವ ಕರ್ನಾಟಕ ಹೈಕೋರ್ಟ್‌, ಎಲ್ಲಾ ಕೆರೆಗಳ ಮೂಲ ವಿಸ್ತೀರ್ಣ, ಒತ್ತುವರಿಯಾಗಿರುವ ಮಾಹಿತಿಯನ್ನು ಸಲ್ಲಿಸಲು ನಿರ್ದೇಶಿಸಿದೆ.

ಬೆಂಗಳೂರಿನ ಸಿಟಿಜನ್‌ ಆಕ್ಷನ್‌ ಗ್ರೂಪ್‌ ಸೇರಿದಂತೆ ಇತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಎನ್‌ ವಿ ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆ ವಿ ಅರವಿಂದ್‌ ಅವರ ನೇತೃತ್ವದ ವಿಭಾಗೀಯ ಪೀಠವು ಸುದೀರ್ಘ ವಿಚಾರಣೆ ನಡೆಸಿತು.

ಸಿಟಿಜನ್‌ ಆಕ್ಷನ್‌ ಗ್ರೂಪ್‌ ಪ್ರತಿನಿಧಿಸಿದ್ದ ಹಿರಿಯ ವಕೀಲೆ ಜಯ್ನಾ ಕೊಠಾರಿ ಅವರು “ಕೆರೆಗಳನ್ನು ಪುನರುಜ್ಜೀವನಗೊಳಿಸುವ ಜವಾಬ್ದಾರಿಯನ್ನು ಖಾಸಗಿಯವರಿಗೆ ನೀಡಿದರೆ ಅವರು ಸಾರ್ವಜನಿಕರಿಗೆ ನಿರ್ಬಂಧ ವಿಧಿಸುತ್ತಾರೆ. ಅಲ್ಲಿ ಖಂಡಿತವಾಗಿಯೂ ವಾಣಿಜ್ಯ ಚಟುವಟಿಕೆಗಳು ನಡೆಯಲಿವೆ” ಎಂದು ಆಕ್ಷೇಪಿಸಿದರು.

“ನೋಂದಾಯಿತ ಸೊಸೈಟಿ, ವಸತಿ ಸಂಸ್ಥೆ ಅಥವಾ ಎನ್‌ಜಿಒಗಳ ಜೊತೆ ಕೆರೆ ಅಭಿವೃದ್ಧಿ ಸಂಬಂಧಿತ ಒಪ್ಪಂದ ಮಾಡಿಕೊಳ್ಳಬಹುದು. ಇದನ್ನು ವಾಣಿಜ್ಯ ಸಂಸ್ಥೆಯೊಂದಿಗೆ ಮಾಡಿಕೊಳ್ಳಬಾರದು. ಅನುದಾನ ಬೇಕಾದರೆ ಅವರಿಂದ ಪಡೆಯಬಹುದು. ಆದರೆ ಬಿಬಿಎಂಪಿ ಅಥವಾ ತಾಂತ್ರಿಕವಾಗಿ ಪರಿಣಿತಿ ಹೊಂದಿರುವ ನೋಂದಾಯಿತ ಟ್ರಸ್ಟ್‌ ಕೆರೆ ಪುನರುಜ್ಜೀವನ ಮಾಡಬೇಕು. ಸಾರ್ವಜನಿಕ ನಂಬಿಕೆ ತತ್ವದ ಅಡಿ ನೈಸರ್ಗಿಕ ಸಂಪತ್ತನ್ನು ಸಂರಕ್ಷಿಸುವ ಉದ್ದೇಶದಿಂದ ವಾಣಿಜ್ಯೀಕರಣ ತಪ್ಪಿಸಬೇಕು” ಎಂದರು.

“ಕೆಲವು ಕಡೆ ಸರ್ಕಾರವೇ ಕೆರೆಯ ಜಾಗ ಒತ್ತುವರಿ ಮಾಡಿದೆ. ಕೆರೆಗಳ ಒತ್ತುವರಿ ತೆರವು ಮಾಡುವುದೂ ಪುನರುಜ್ಜೀವನವಾಗಲಿದೆ. ನೀರಿ ಸಂಸ್ಥೆಯ ವರದಿಯಲ್ಲಿ ಯಾವೆಲ್ಲಾ ಕೆರೆಗಳನ್ನು ಯಾರು ಒತ್ತುವರಿ ಮಾಡಿದ್ದಾರೆ. ಅದರ ತೆರವು ಸಾಧ್ಯತೆಯ ಬಗ್ಗೆ ಉಲ್ಲೇಖಿಸಲಾಗಿದೆ. ಪ್ರತಿಯೊಂದು ಕೆರೆಯ ಒತ್ತುವರಿ, ಎಲ್ಲಿ ಏನೆಲ್ಲಾ ಪುನರುಜ್ಜೀವನ ಮಾಡಬೇಕು ಎಂಬುದಕ್ಕೆ ಬಿಬಿಎಂಪಿಯು ದಾಖಲೆ ನೀಡಬೇಕು. ಎಲ್ಲಾ ಕೆರೆಗಳನ್ನು ಪುನರುಜ್ಜೀವನಗೊಳಿಸಲು ಖಾಸಗಿಯವರೊಂದಿಗೆ ಒಪ್ಪಂದ ಮಾಡಿಕೊಳ್ಳುವುದು ಅದೊಂದು ದುರಂತವಾಗಲಿದೆ. ಕೆರೆ ಪುನರುಜ್ಜೀವನಗೊಳಿಸಲು ಬಂದವರು ಮತ್ತೆ ಮೂರು ನಾಲ್ಕು ಎಕರೆ ಒತ್ತುವರಿ ಮಾಡಬಹುದು. ಇದರ ಮೇಲೆ ಯಾರು ನಿಗಾ ಇಡುತ್ತಾರೆ? ಹೀಗಾಗಿ, ಮೊದಲಿಗೆ ಕೆರೆ ಒತ್ತುವರಿ ತೆರವಾಗಲಿ” ಎಂದರು.

ಬಿಬಿಎಂಪಿ ಪ್ರತಿನಿಧಿಸಿದ್ದ ಅಡ್ವೊಕೇಟ್‌ ಜನರಲ್‌ ಕೆ ಶಶಿಕಿರಣ್‌ ಶೆಟ್ಟಿ ಅವರು “ಕೆರೆಗಳ ಮಾಲೀಕತ್ವ ಯಾವಾಗಲೂ ಸರ್ಕಾರದ ಬಳಿಯೇ ಇರಲಿದೆ. ಬಿಬಿಎಂಪಿ ಅದರ ಕಸ್ಟಡಿ ಹೊಂದಿರಲಿದೆ. ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವ ಬೇಕಿದ್ದು, ಅವುಗಳ ಜಾರಿಯ ಪ್ರಶ್ನೆ ಮಾತ್ರ ನಮ್ಮ ಮುಂದಿದೆ. ಏಜೆನ್ಸಿಯ ಮೂಲಕ ಬಿಬಿಎಂಪಿಯು ಕೆರೆ ಪುನರುಜ್ಜೀವನಗೊಳಿಸಬೇಕು ಎಂಬುದು ಅರ್ಜಿದಾರರ ಕೋರಿಕೆಯಾಗಿದೆ. ಕಾರ್ಪೊರೇಟ್‌ ಅಥವಾ ಬೇರಾವುದೋ ಸಂಸ್ಥೆಯಿಂದ ಅನುದಾನ ಪಡೆದು ಅದನ್ನು ಮೂರನೇ ವ್ಯಕ್ತಿಗೆ ಪುನರುಜ್ಜೀವನಗೊಳಿಸಲು ನೀಡಬೇಕು ಎಂಬುದು ಅರ್ಜಿದಾರರ ಮನವಿಯಾಗಿದೆ” ಎಂದರು.

ಪತ್ರಿಕೆಗಳಲ್ಲಿ ಜಾಹೀರಾತು ನೀಡುವ ಮೂಲಕ ಯಾರು ಪಾರದರ್ಶಕ ನಡೆಯನ್ನು ಅನುಸರಿಸುತ್ತಾರೋ ಅವರು ಮುಂದೆ ಬರಬಹುದು. ಯಾರು ಎಲ್ಲಾ ನಿಬಂಧನೆಗಳನ್ನು ಪೂರೈಸುತ್ತಾರೋ ಅವರಿಗೆ ಕೆರೆಗಳ ಪುನರುಜ್ಜೀವನ ಜವಾಬ್ದಾರಿ ನೀಡಲಾಗುತ್ತದೆ. ಖಾಸಗಿಯವರು ಜವಾಬ್ದಾರಿ ತೆಗೆದುಕೊಂಡರೆ ಕೆರೆಗಳ ಮಾಲೀಕತ್ವ, ಕಸ್ಟಡಿ ಹೋಗಲಿದೆ, ವಾಣಿಜ್ಯೀಕರಣವಾಗುತ್ತದೆ ಎಂಬ ಭಯ ಬಿತ್ತಲಾಗುತ್ತಿದೆ. ಒಪ್ಪಂದದ ಪ್ರಕಾರ ಯಾವುದೇ ವಾಣಿಜ್ಯ ಚಟುವಟಿಕೆಗಳಲು ಇರುವುದಿಲ್ಲ. ಇದಕ್ಕೆ ನಿಷೇಧ ವಿಧಿಸಲಾಗಿದೆ” ಎಂದರು.

“ಕೆರೆಗಳ ಪುನರುಜ್ಜೀವನದ ವೇಳೆ ಖಾಸಗಿ ಸಂಸ್ಥೆಗಳು ಕೆರೆಗಳನ್ನು ಖಾಸಗಿ ಚಟುವಟಿಕೆಗಳಿಗೆ ಬಳಕೆ ಮಾಡಿದರೆ ಅದರ ಸಂಬಂಧ ದೂರು ದಾಖಲಿಸಲು ಬಿಬಿಎಂಪಿ ವೆಬ್‌ಸೈಟ್‌ನಲ್ಲಿ 1533 ಸಹಾಯವಾಣಿ ಸಂಖ್ಯೆ ನೀಡಲಾಗಿದೆ. ಒಪ್ಪಂದದ ಪ್ರಕಾರ ಅಥವಾ ನ್ಯಾಯಾಲಯಕ್ಕೆ ನೀಡಿರುವ ಮುಚ್ಚಳಿಕೆ ಉಲ್ಲಂಘಿಸಿದರೆ ಯಾರು ಬೇಕಾದರೂ ದೂರು ನೀಡಬಹುದು. ಸಮಿತಿ ರಚಿಸಲಾಗಿದ್ದು, ಸಹಾಯ ಅಪ್ಲಿಕೇಶನ್‌ ಸಹ ಇದೆ” ಎಂದರು.

Also Read
ಬೆಂಗಳೂರಿನ ಕೆರೆಗಳನ್ನು ಖಾಸಗಿಯವರಿಗೆ ಒಪ್ಪಿಸುವುದಿಲ್ಲ, ನೆರವು ಮಾತ್ರವೇ ಪಡೆಯಲಾಗುವುದು: ಸರ್ಕಾರದ ಸ್ಪಷ್ಟನೆ

“ಬಿಬಿಎಂಪಿ ಕಸ್ಟಡಿಯಲ್ಲಿ 183 ಕೆರೆಗಳಿದ್ದು, ಒಂದೊಂದರಲ್ಲೂ ಒಂದೊಂದು ಕೆಲಸ ಮಾಡಬೇಕಿದೆ. ಇದಕ್ಕೆ ಅದರದೇ ಸಮಯ ಮತ್ತು ಅನುದಾನ ಬೇಕಿದೆ. ಒತ್ತುವರಿಯಾಗಿರುವುದನ್ನು ತೆರವು ಮಾಡುವುದು ನಮ್ಮ ಕರ್ತವ್ಯ. ಇದರ ಮೇಲೆ ನ್ಯಾಯಾಲಯ ನಿಗಾ ಇಡಬಹುದು. ತಕ್ಷಣ ಒತ್ತುವರಿ ತೆರವು ಮಾಡಿಕೊಡಲು ಸಾಧ್ಯವಾಗದಿದ್ದಾಗ ಕೆರೆಗಳ ನಿರ್ವಹಣೆಗೆ ಸಮಸ್ಯೆಯಾಗುತ್ತದೆ. ಹೀಗಾಗಿ, ಕೆರೆಗಳ ಪುನರುಜ್ಜೀವನ ಮತ್ತು ಒತ್ತುವರಿ ತೆರವು ಏಕಕಾಲಕ್ಕೆ ಆಗಬೇಕು” ಎಂದರು.

ಅರ್ಜಿದಾರರ ಪರ ಮತ್ತೊಬ್ಬ ವಕೀಲ ಜಿ ಆರ್‌ ಮೋಹನ್ ಅವರು “ನೀರಿ ಸಂಸ್ಥೆಯು ವರದಿ ನೀಡಿದ್ದು, ಎಲ್ಲೆಲ್ಲಿ ಕೆರೆ ಒತ್ತುವರಿಯಾಗಿದೆ ಮತ್ತು ಬಫರ್‌ ಜೋನ್‌ ಎಲ್ಲಿ ಬರುತ್ತದೆ ಎಂಬುದನ್ನು ವಿವರಿಸಿದೆ. ಬಿಬಿಎಂಪಿ, ಕೆರೆ ಅಭಿವೃದ್ಧಿ ಪ್ರಾಧಿಕಾರ ಅಥವಾ ಸಂಬಂಧಿತ ಅಧಿಕಾರಿ ಮಾತ್ರ ಒತ್ತುವರಿ ತೆರವು ಮಾಡಬಹುದು. ಖಾಸಗಿಯವರು ಒತ್ತುವರಿ ತೆರವು ಮಾಡಲಾಗದು” ಎಂದರು.

ಆಗ ಪೀಠವು “ಬಿಬಿಎಂಪಿಯು ಕೆರೆಗಳ ಪಟ್ಟಿ ಮತ್ತು ಅವುಗಳ ವಿಸ್ತೀರ್ಣದ ಅಧಿಕೃತ ದಾಖಲೆ ಒದಗಿಸಬೇಕು. ಅದನ್ನು ಒಪ್ಪಂದದ ಪ್ರಕಾರ ಖಾಸಗಿಯವರಿಗೆ ನಿರ್ವಹಣೆಗೆ ನೀಡುವಾಗ ವ್ಯಾಪ್ತಿಯ ವಿಚಾರ ನಿಖರವಾಗಿರಬೇಕು. ಈ ವಿಚಾರದಲ್ಲಿ ದೋಷ ಕಂಡುಬಂದರೆ ದಂದ ವಿಧಿಸಬಹುದು. ಪುನರುಜ್ಜೀವನಗೊಳಿಸುವವರು ಗಡಿ ಗುರುತಿಸಬೇಕು. ಒಪ್ಪಂದದ ಪ್ರಕಾರ ಕೆರೆ ನೀಡುವಾಗ ಒತ್ತುವರಿಯಾಗಿದ್ದರೆ ಅದನ್ನು ತೆರವುಗೊಳಿಸಿ ನೀಡಬೇಕು. ಅದನ್ನು ಮಾಡದಿದ್ದರೆ ಕೆರೆ ಅಭಿವೃದ್ಧಿಪಡಿಸಲು ಬರುವ ಏಜೆನ್ಸಿ/ಸಂಸ್ಥೆಯೂ ಅದನ್ನು ಒತ್ತುವರಿ ಮಾಡಬಹುದು. ಕೆರೆಯ ಪುನರುಜ್ಜೀವನ ನೀತಿಯು ಒತ್ತುವರಿಗೆ ಅನುಮತಿಯಾಗಬಾರದು. ಎಲ್ಲೆಲ್ಲಿ ಸಾಧ್ಯವೋ ಅಲ್ಲಿ ತೆರವು ಮಾಡಿಸಿ, ಆ ಕೆರೆಯ ಅಭಿವೃದ್ಧಿಗೆ ಅನುಮತಿಸಬಹುದು” ಎಂದು ಹೇಳಿ, ವಿಚಾರಣೆಯನ್ನು ಡಿಸೆಂಬರ್‌ 3ಕ್ಕೆ ಮುಂದೂಡಿತು.

Kannada Bar & Bench
kannada.barandbench.com